ಅಮ್ಮ (ಕವನ)
ಅಮ್ಮ (ಕವನ)
ನವಮಾಸ ಗರ್ಭದಲ್ಲಿ ನನ್ನನ್ನು ಪೋಷಿಸಿ
ತನ್ನ ಸರ್ವಸ್ವ ನನಗಾಗಿ ಕಾದಿರಿಸಿ
ನನ್ನ ಕಂಡಾಗ ತನ್ನ ನೋವನ್ನೆಲ್ಲ ಮರೆತು
ಆನಂದಿಸಿದೆ ನನ್ನೊಂದಿಗೆ ಬೆರೆತು
ನಾನೇನು ಕೇಳದೆ ನೀ ಎಲ್ಲವನು ನೀಡಿರುವೆ
ನಿನ್ನ ಬಣ್ಣಿಸಲು ಶಬ್ದಗಳಿಂದ ಸಾಧ್ಯವೇ
ನನ್ನ ಭವಿಷ್ಯವನು ನೀನೇ ರೂಪಿಸಿರುವೆ
ನಿನ್ನ ಶ್ರಮದಿಂದ ಇಷ್ಟು ಬೆಳೆದು ನಿಂತಿರುವೆ
ಬಾಲ್ಯದ ದಿನಗಳಲ್ಲಿ ಅಮ್ಮನಾಗಿ ಗದರಿದಾಗ
ನಾ ನಿನ್ನ ಮೇಲೆ ಮುನಿಸಿದ್ದೆ ಆಗ
ನಾ ಅಮ್ಮನಾಗಿ ಅರಿತಿರುವೆ ಈಗ
ಅರಿತುಕೊಂಡೆನು ನಿನ್ನ ಪ್ರೀತಿಯನು ಬೇಗ
ಮುಕ್ಕೋಟಿ ದೇವತೆಗಿಂತ ಅಮ್ಮನೇ ಹೆಚ್ಚು
ಅಂದು ಮಾಡಿದ್ದಲ್ಲ ನನ್ನ ತಪ್ಪಿನ ಹುಚ್ಚು
ಮಕ್ಕಳಿಗೆ ಅಮ್ಮನ ಪ್ರೀತಿಯೇ ಎಲ್ಲಾ
ತಿಳಿಯಿತು ಸಾಟಿ ನಿನಗೆ ಬೇರೆ ಇಲ್ಲ
ವಿಜಯಲಕ್ಷ್ಮಿ ಸಿಂಗೋಡಿ
ಕವಿಗಳು, ಕಲಬುರ್ಗಿ