ಜೀವನದಾಟ
ಜೀವನದಾಟ
ನೋವಿನಾ ಮಡುವಿನೋಳು
ಸುಖದ ಮೀನೊಂದು ಆಗಾಗ ಸುಳಿಸುಳಿದು
ನಗುವಿನಲೆಯಲಿ ತೇಲಬಯಸಿ
ಮಿಂಚುತ್ತ ಮಿನುಗುತ್ತ ಹೊರಳುತ್ತ
ವಿದಿಯಾಟದ ಸಂಚು ಗೊತ್ತಿಲ್ಲದೆ
ಸೋಲದ ರೆಕ್ಕೆ ಬಿಚ್ಚಿ ಈಜುತಲೇ ಇದೆಯಲ್ಲ//
ಜೀವನದಿ ಇದೆಯಲ್ಲ ಬೇವಿನೊಂದಿಗೆ ಬೆಲ್ಲ
ಕಷ್ಟ ಇರದವರಾರೂ ಇಲ್ಲಿಲ್ಲ
ಸುಖವೆಂಬುದು ಬೆಳಗೊ ಹಗಲಲ್ಲ ಇರುಳಲ್ಲ
ಹುಡುಕಿದರೆ ಅಲೆದರೆ ಸಿಗದಲ್ಲ
ತೃಪ್ತ ಮನದಲಿ ಸಂತೃಪ್ತ ಜೀವದಲಿ
ಮಂಜುಹನಿಯಂದದಿ ಮಿನುಗುವುದಾಗಾಗ
ಆರದ ಮುನ್ನ ಕರಗದಾ ಮುನ್ನ
ಆಲ್ಹಾದಿಸು ಅದರೊಳಗಿನ ಸುಖವನೊಮ್ಮೆ//
ಭಾವಬಿತ್ತಿಯಲಿ ಒತ್ತರಿಸೊ ಆಸೆಗಳು
ಬತ್ತಿ ಹೂತು ಹೋಗದ ಮುನ್ನ
ಇದ್ದದರಲೆ ಸುಖವನಗೆದು ಜಿಗಿ ಜಿಗಿದು
ಇರುವಂತೆ ಇದ್ದರೆನೇ ಎಲ್ಲಾ ಚೆನ್ನ
ಬಣ್ಣ ಬಣ್ಣದ ಬದುಕು ಕರಗದೆ ಇರದಲ್ಲ
ಮೋಡ ಕರಗಿ ಮಳೆ ಸುರಿಯದೆ ಏನಿಲ್ಲ//
ಕಲ್ಲೊಗೆದರೆ ಮರ ಹಣ್ಣು ಕೊಡುವಂತೆ
ನೆಲ ಅಗೆದರೆ ಚಿನ್ನ ದೊರೆವಂತೆ
ಕಷ್ಟದೊಳಗೆ ಅಡಗಿಹುದು ಎಲ್ಲ ಸುಖ
ಅನುಭವಿಸುವ ಮನವಿದ್ದರೆ ಎಲ್ಲಾ ಸೊಗಸು
ಇಲದಿರೆ ಬರೀ ಇರಿಸು ಮುರಿಸು
ಅಲ್ಲಲ್ಲಿ ವಿರಮಿಸು ಮನವ ಹಗುರಾಗಿಸು
ಹೂವೂಳಗಿನ ಮಧುವ ದುಂಬಿ ಹೀರುವಂತೆ
ಬಾಳೊಳಗಿನ ಸವಿಯ ಹೆಕ್ಕಿ ಹೀರು/
ಹುಟ್ಟು ಸಾವಿನ ಜೀವನವಿದು
ಅರಿವಿನೋಳು ಅಡಗಿಹುದು ಇದರ ಗುಟ್ಟು
ಹೋಗುವವರೆ ಎಲ್ಲ ಈ ಜಗವ ಬಿಟ್ಟು
ಕೇಡು ಸಂಕಷ್ಟ ನೋವನೆಲ್ಲ ಮೆಟ್ಟು
ಬಾಳಿಬಿಡು ಮನವನಿಟ್ಟು
ಕೇಳರಾರೂ ನಿನ್ನ ಒಡಲ ಸಿಟ್ಟು
ಬಡವನ ಕೋಪ ದವಡೆಗೆ ಮೂಲ
ತೀರಿಸಲೇ ಬೇಕು ಪಾಪದಾ ಸಾಲ//
ಡಾ ಅನ್ನಪೂರ್ಣ ಹಿರೇಮಠ