ವೈಷ್ಣವಿ ನಗರದಲ್ಲಿ 77ನೇ ಗಣರಾಜ್ಯೋತ್ಸವ ಸಂಭ್ರಮ

ವೈಷ್ಣವಿ ನಗರದಲ್ಲಿ 77ನೇ ಗಣರಾಜ್ಯೋತ್ಸವ ಸಂಭ್ರಮ

ವೈಷ್ಣವಿ ನಗರದಲ್ಲಿ 77ನೇ ಗಣರಾಜ್ಯೋತ್ಸವ ಸಂಭ್ರಮ

ಕಲಬುರಗಿ: ಮಹಾನಗರದ ವೈಷ್ಣವಿ ನಗರದಲ್ಲಿರುವ ಶ್ರೀ ಬಾಬುರಾವ ಮಾರುತಿ ವಾಕೊಡೆ ಅಂತರರಾಷ್ಟ್ರೀಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ 77ನೇ ಭಾರತ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನ್ಯಾಯವಾದಿ ಜೆ.ಎಸ್. ವಿನೋದಕುಮಾರ ಜೆನವೇರಿ ಅವರು ಭಾಗವಹಿಸಿದ್ದರು.

ಬೆಳಗ್ಗೆ 8.15ಕ್ಕೆ ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮಾ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ 8.30ಕ್ಕೆ ರಾಷ್ಟ್ರಧ್ವಜಾರೋಹಣ ನೆರವೇರಿಸಲಾಯಿತು.

ನಂತರ ಶಾಲಾ ಮಕ್ಕಳಿಂದ ನಾಲ್ಕು ಘಟಕಗಳ ಮೂಲಕ ಶಿಸ್ತುಬದ್ಧವಾಗಿ ಪಥಸಂಚಲನ ಜರುಗಿದ್ದು, ಮುಖ್ಯ ಅತಿಥಿಗಳ ಅನುಮೋದನೆಯೊಂದಿಗೆ ಪಥಸಂಚಲನಕ್ಕೆ ಚಾಲನೆ ನೀಡಲಾಯಿತು. ಪಥಸಂಚಲನ ಅತ್ಯಂತ ಸುವ್ಯವಸ್ಥಿತವಾಗಿ ಹಾಗೂ ಆಕರ್ಷಕವಾಗಿ ನಡೆಯಿತು.

ಮೂರು ವಿದ್ಯಾರ್ಥಿಗಳು ತ್ರಿಭಾಷೆಯಲ್ಲಿ ಗಣರಾಜ್ಯೋತ್ಸವದ ಮಹತ್ವದ ಕುರಿತು ಭಾಷಣ ಮಾಡಿದರು. ಬಳಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ, ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ನಡೆಯಿತು. ಅಲ್ಲದೆ ಒಂದು ತಿಂಗಳ ಹಿಂದೆ ಶಾಲೆಯಲ್ಲಿ ಆರಂಭಿಸಿದ್ದ ವಿಶೇಷ ಶೂಟಿಂಗ್ ಪ್ರದರ್ಶನ ಹಾಗೂ ಕರಾಟೆ ಪ್ರದರ್ಶನಗಳು ನಡೆಯುವ ಮೂಲಕ ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ಕಾರ್ಯ ಕೈಗೊಳ್ಳಲಾಯಿತು.

ವಿವಿಧ ಕ್ರೀಡೆ ಮತ್ತು ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಮುಖ್ಯ ಅತಿಥಿಯಾಗಿ ಮಾತನಾಡಿದ ನ್ಯಾಯವಾದಿ ಜೆ.ಎಸ್. ವಿನೋದಕುಮಾರ ಅವರು, ಸಂವಿಧಾನ ಜಾರಿಗೆ ಬಂದ ದಿನವೇ ಸ್ವತಂತ್ರ ಭಾರತದ ನಿಜವಾದ ಜನ್ಮದಿನವಾಗಿದ್ದು, ಸಮಾನತೆ ಕಾಪಾಡಲು ಸಂವಿಧಾನಕ್ಕೆ ಇದುವರೆಗೆ 108 ಬಾರಿ ತಿದ್ದುಪಡಿ ಮಾಡಲಾಗಿದೆ. ಆದರೂ ಎಲ್ಲರಿಗೂ ಸಮಾನ ನ್ಯಾಯ ದೊರಕುವಲ್ಲಿ ಇನ್ನೂ ಹೋರಾಟ ಅಗತ್ಯವಿದ್ದು, ಭಾವಿ ಪ್ರಜೆಗಳಿಗಾಗಿ ನ್ಯಾಯಯುತ ಹೋರಾಟ ನಡೆಸಬೇಕಿದೆ ಎಂದು ಹೇಳಿದರು. ಜೊತೆಗೆ ಶಿಕ್ಷಣ ಸಂಸ್ಥೆಯ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಶ್ರೀ ವಿಕಾಸ ವಾಕೊಡೆ, ಮುಖ್ಯ ಶಿಕ್ಷಕಿ ಶ್ರೀಮತಿ ಸುಚೇತಾ ಹೊನ್ನಳ್ಳಿ ಉಪಸ್ಥಿತರಿದ್ದರು. ಶಾಲಾ ವ್ಯವಸ್ಥಾಪಕ ಬಸವರಾಜ, ಶಿಕ್ಷಕ ವೃಂದ, ಸಿಬ್ಬಂದಿ ವರ್ಗ, ಪಾಲಕರು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.