ವಿಧಾನಸಭೆಯಲ್ಲಿ ಗಮನ ಸೆಳೆದ ಸುನಿಲ್ ಕುಮಾರ್, ರಾಜೇಶ್ ನಾಯಕ್, ಬೇಳೂರು,ಗುರ್ಮೆ,ಕೋಟ್ಯಾನ್ ಗೆ ಹೋರಾಟ ಸಮಿತಿ ಅಭಿನಂದನೆ
ನಾರಾಯಣ ಗುರು ನಿಗಮಕ್ಕೆ ಬಜೆಟ್ ನಲ್ಲಿ ಅನುದಾನ ನೀಡದ ಸರಕಾರದ ಕ್ರಮಕ್ಕೆ ತೀವ್ರ ಅಸಮಾಧಾನ
ವಿಧಾನಸಭೆಯಲ್ಲಿ ಗಮನ ಸೆಳೆದ ಸುನಿಲ್ ಕುಮಾರ್, ರಾಜೇಶ್ ನಾಯಕ್, ಬೇಳೂರು,ಗುರ್ಮೆ,ಕೋಟ್ಯಾನ್ ಗೆ ಹೋರಾಟ ಸಮಿತಿ ಅಭಿನಂದನೆ
ಕಲಬುರಗಿ : ಕಾಂಗ್ರೆಸ್ ಸರ್ಕಾರವು ನಾಲ್ಕನೇ ಬಾರಿ ಮಂಡಿಸಿದ ಬಜೆಟ್ ನಲ್ಲೂ ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ನಿಗಮಕ್ಕೆ ಅನುದಾನ ಘೋಷಿಸದೆ ಸಮುದಾಯವನ್ನು ಕಡೆಗಣಿಸಿರುವ ಬಗ್ಗೆ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯು ತೀವ್ರವಾಗಿ ಆಕ್ರೋಶ ಮತ್ತು ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಗಮನಸೆಳೆದ ಪಕ್ಷಾತೀತ ಶಾಸಕರಿಗೆ ಅಭಿನಂದನೆ ಸಲ್ಲಿಸಿದೆ.
ಕಾಂಗ್ರೆಸ್ ಸರಕಾರ ಬಂದು ಮೂರು ವರ್ಷದಲ್ಲಿ ನಾಲ್ಕನೇ ಬಜೆಟ್ ಮಂಡಿಸಿದರೂ ನೂತನವಾಗಿ ರಚನೆ ಮಾಡಿದ ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ನಿಗಮಕ್ಕೆ ಅನುದಾನ ಬಿಡುಗಡೆ ಮಾಡದಿರುವುದು ಅತ್ಯಂತ ಖೇದಕರ. ಈ ಬಾರಿ ರಾಜ್ಯದ ಈಡಿಗ ಮತ್ತು 26 ಪಂಗಡಗಳ ನಿರೀಕ್ಷೆಯನ್ನು ಹುಸಿ ಮಾಡಿದೆ. ಈ ಬಗ್ಗೆ ನಡೆಸಿದ ಹೋರಾಟವನ್ನು ಸರಕಾರವು ಕಡೆಗಣಿಸಿ ಸಮುದಾಯದ ಜನರಿಗೆ ದ್ರೋಹ ಎಸಗಿದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಈಡಿಗ ನಿಗಮ ರಚನೆಯಾಗಿ ನೂತನ ಅಧ್ಯಕ್ಷರನ್ನು ನೇಮಕ ಮಾಡಿದ್ದರೂ ನಾರಾಯಣ ಗುರು ಅಭಿವೃದ್ಧಿ ಕೋಶಕ್ಕೆ ಮೀಸಲಿಟ್ಟಿದ್ದ 10 ಕೋಟಿ ರೂಪಾಯಿ ಹಣವನ್ನು ಮಾತ್ರ ವರ್ಗಾವಣೆ ಮಾಡಲಾಗುವುದು ಎಂದು ಸರಕಾರ ನೀಡಿರುವ ಹೇಳಿಕೆ ಈ ಸಮಾಜಕ್ಕೆ ಮಾಡಿದ ಅಗೌರವ. ಕನಿಷ್ಠ 500 ಕೋಟಿ ರೂ ಅನುದಾನ ಒದಗಿಸುವಂತೆ ಒತ್ತಾಯಿಸಿ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸಿ ಇತ್ತೀಚೆಗೆ ನಾರಾಯಣ ಗುರು ಶಕ್ತಿ ಪೀಠದ ಡಾ. ಪ್ರಣವಾನಂದ ಶ್ರೀಗಳ ನೇತೃತ್ವದಲ್ಲಿ ಕಲಬುರಗಿಯ ಚಿತ್ತಾಪುರದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೆ 42 ದಿನಗಳ ಕಾಲ 708 ಕೀ . ಮೀ ಪಾದಯಾತ್ರೆ ಮಾಡಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಶಿವರಾಜ್ ತಂಗಡಗಿಯವರ ಮೂಲಕ ಸರಕಾರಕ್ಕೆ ಬೇಡಿಕೆಗಳನ್ನು ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ನೀಡದಿರುವುದು ರಾಜ್ಯದ 12 ಜಿಲ್ಲೆಗಳಲ್ಲಿ ಅತ್ಯಧಿಕ ಜನಸಂಖ್ಯೆ ಹೊಂದಿದ ಸಮುದಾಯವನ್ನು ತೀವ್ರವಾಗಿ ಕಡೆಗಣಿಸಿದಂತಾಗಿದೆ. ಸಮಾಜದ ಹಿರಿಯ ಮುಖಂಡರಾದ ಮಾಲಿಕಯ್ಯ ಗುತ್ತೇದಾರ್ ಮತ್ತು ಎಚ್ ಆರ್ ಶ್ರೀನಾಥ್ ದಣಿ ಗಳು ಮುಖ್ಯಮಂತ್ರಿ ಅವರ ಜೊತೆ ನೇರವಾಗಿ ಮಾತನಾಡಿ ಚರ್ಚೆ ಮಾಡಿದ್ದರೂ ಬಜೆಟ್ಟಿನಲ್ಲಿ ಯಾವುದೇ ಘೋಷಣೆಗಳಿಲ್ಲದೆ ಇರುವುದು ಸರಕಾರದ ನಿರ್ಲಕ್ಷಕ್ಕೆ ಉದಾಹರಣೆಯಾಗಿದೆ. ಸಮುದಾಯಕ್ಕಾಗಿ ರಚನೆ ಮಾಡಿದ ನಿಗಮಕ್ಕೆ ಅನುದಾನ ಬಿಡುಗಡೆ ಮಾಡುವಲ್ಲಿ ಯಾವುದೇ ರಾಜಕೀಯ ಪಕ್ಷಪಾತ ಧೋರಣೆ ಮಾಡದೆ ರಾಜ್ಯದ ಹಿಂದುಳಿದ ಸಮುದಾಯದ ನಾಲ್ಕನೇ ಅತಿ ದೊಡ್ಡ ಪಂಗಡದ ಬೇಡಿಕೆಯನ್ನು ಈಡೇರಿಸಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಹಿಂದುಳಿದ ಖಾತೆಯ ಸಚಿವರು ತಕ್ಷಣ 500 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿ ಸಮುದಾಯದ ಇತರ ಕೆಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ ಗುತ್ತೇದಾರ್, ಉಪಾಧ್ಯಕ್ಷರಾದ ಮಹಾದೇವ ಗುತ್ತೇದಾರ್,
ಕುಪೇಂದ್ರ ಗುತ್ತೇದಾರ್ ನಾಗೂರ್,ಅಶೋಕ್ ಗುತ್ತೇದಾರ್ ಬಡದಾಳ, ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕಡೇಚೂರ್, ಡಾ.ಸದಾನಂದ ಪೆರ್ಲ, ರಾಜೇಶ್ ಡಿ ಗುತ್ತೇದಾರ್, ಅಂಬಯ್ಯ ಗುತ್ತೇದಾರ್ ಇಬ್ರಾಹಿಂಪುರ್, ಸುರೇಶ್ ಗುತ್ತೇದಾರ್ ಮಟ್ಟೂರ್, ಇ. ತಿಮ್ಮಪ್ಪ ಗಂಗಾವತಿ, ಮಲ್ಲಿಕಾರ್ಜುನ ಕುಕ್ಕುಂದಿ, ಮಹೇಶ್ ಗುತ್ತೇದಾರ ಹೊಳಕುಂದ, ಪ್ರವೀಣ್ ಜತ್ತನ್, ಸುರೇಶ್ ಗುತ್ತೇದಾರ್ ಕರದಾಳ, ಬಿ.ಎಂ ರಾವೂರು, ಜಂಟಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ವಿಧಾನಸಭೆಯಲ್ಲಿ ಶಾಸಕರ ಪಕ್ಷಾತೀತ ಧ್ವನಿಗೆ ಮೆಚ್ಚುಗೆ
ವಿಧಾನಸಭೆಯ ಪ್ರಶ್ನೋತ್ತರ ವೇಳೆ ಮಾ. 11ರಂದು ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯಕ್ ವಿಷಯ ಪ್ರಸ್ತಾಪಿಸಿ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಪ್ರತ್ಯೇಕ ಅನುದಾನ ಬಿಡುಗಡೆ ಆಗಿಲ್ಲ. ನಿಗಮದ ರಚನೆಯ ಉದ್ದೇಶವಾದರೂ ಏನು ಎಂದು ಸರಕಾರವನ್ನು ಪ್ರಶ್ನಿಸಿದಾಗ ಸಚಿವ ತಂಗಡಗಿಯವರು ನಾರಾಯಣ ಗುರು ಅಭಿವೃದ್ಧಿ ಕೋಶದ ಹತ್ತು ಕೋಟಿ ನೀಡುವುದಾಗಿ ಉತ್ತರಿಸಿದ್ದರು. ಈ ವೇಳೆ ಮಧ್ಯ ಪ್ರವೇಶಿಸಿದ ಬಿಜೆಪಿಯ ಸುನಿಲ್ ಕುಮಾರ್ ಕನಿಷ್ಠ 50 ಕೋಟಿ ನಿಗಮಕ್ಕೆ ಇಡಬೇಕು ಎಂದು ಒತ್ತಾಯಿಸಿದರು ಈ ನಡುವೆ ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಲಿಂಗಾಯತ ನಿಗಮ ಗಳಿಗೆಲ್ಲ 200 ರಿಂದ 300 ಕೋಟಿ ಕೊಡುತ್ತೀರಿ. ನಮ್ಮ ಸಮುದಾಯಕ್ಕೆ 100 ಕೋಟಿ ಯಾಕೆ ಕೊಡುವುದಿಲ್ಲ? ಎಂದು ಖಾರವಾಗಿ ಪ್ರಶ್ನಿಸಿದರು. ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ 26 ಪಂಗಡಗಳಲ್ಲಿರುವ ಹಿಂದುಳಿದ ಜನ ಸಮುದಾಯಕ್ಕೆ ಸರಕಾರ ಸ್ಪಂದಿಸದಿರುವುದು ದುಃಖಕರ. ಬಿಲ್ಲವರ ಬೆಂಬಲದಿಂದ ಕರಾವಳಿಯ ಶಾಸಕರು ವಿಧಾನಸಭೆಗೆ ಬರುವಂತಾಗಿದೆ. ಅವರ ಋಣ ನಮ್ಮ ಮೇಲೆ ಇದೆ. ನಿಗಮಕ್ಕೆ ಅನುದಾನ ಘೋಷಣೆ, ಕುಲಕಸುಬು ಸೇಂದಿಯನ್ನು ಮಹಾರಾಷ್ಟ್ರ, ತೆಲಂಗಾಣ, ಕೇರಳದ ರಾಜ್ಯಗಳಲ್ಲಿರುವಂತೆ ಮುಂದುವರಿಸಲು ಅವಕಾಶ ನೀಡುವುದು, ಕುಲಕಸುಬು ಕಳೆದುಕೊಂಡು ಇದೀಗ ಕಲ್ಯಾಣ ಕರ್ನಾಟಕ ಭಾಗದಿಂದ 1,25,000 ಕ್ಕೂ ಸಂತ್ರಸ್ಥರಾಗಿ ಹೆಚ್ಚಿನ ಜನ ಮಹಾರಾಷ್ಟ್ರ ಗೋವಾ ಹೈದರಾಬಾದ್ ಬೆಂಗಳೂರಿಗೆ ವಲಸೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಅದಕ್ಕಾಗಿ ಸರಕಾರ ತಕ್ಷಣ ನಿಗಮಕ್ಕೆ ಹಣ ಬಿಡುಗಡೆ ಮಾಡಿ ಈ ಸಮುದಾಯದ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು. ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್ ಮಾತನಾಡಿ ಬಿಲ್ಲವರು ಮತ್ತು ಈಡಿಗರ ಕಲ್ಯಾಣದ ದೃಷ್ಟಿಯಿಂದ ರಚನೆ ಮಾಡಿದ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಿ ಸರಕಾರ ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದರು. ಹಿಂದುಳಿದ ಸಮುದಾಯದ ಬಗ್ಗೆ ಶಾಸಕರು ಪಕ್ಷಾತೀತವಾಗಿ ಪಟ್ಟು ಹಿಡಿದು ಸರ್ಕಾರದ ಮೇಲೆ ಒತ್ತಡ ಹಾಕಿರುವುದಕ್ಕೆ ಹೋರಾಟ ಸಮಿತಿಯು ಎಲ್ಲಾ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಿಮಗೆ ಅನುದಾನ ಬೇಡವೇ? ಸ್ಪೀಕರ್ ಗೆ ಪ್ರಶ್ನಿಸಿದ ಸುನಿಲ್
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಸಚಿವ ತಂಗಡಗಿ ಮತ್ತು ವಿಧಾನಸಭೆಯ ಉಪನಾಯಕರಾದ ಸುನಿಲ್ ಮಧ್ಯೆ ಬಿಸಿ ಬಿಸಿ ವಾಗ್ವಾದ ನಡೆಯುತ್ತಿದ್ದಾಗ ಸುನಿಲ್ ಕುಮಾರ್ ಸ್ಪೀಕರ್ ಯುಟಿ ಖಾದರ್ ಅವರಿಗೆ ನೇರವಾಗಿ ಅನುದಾನ ನಿಮಗೆ ಬೇಡವೇ? ಎಂದು ಪ್ರಶ್ನಿಸಿದರು. ಸ್ಪೀಕರ್ ನಯವಾಗಿ ಬೇಕು ಎಂದು ಹೇಳಿದಾಗ ಹಾಗಾದರೆ ಮಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ನಾರಾಯಣ ಗುರು - ಗಾಂಧಿ ಸಂಗಮದ ಶತಮಾನೋತ್ಸವ ಕಾರ್ಯಕ್ರಮ ಸಂದರ್ಭದಲ್ಲಿ ತಾವು ತೋರಿಸಿದ ಉತ್ಸಾಹ ಮತ್ತು ನಾರಾಯಣ ಗುರು, ನಾರಾಯಣ ಗುರು ಎಂದು ಅಲ್ಲಿ ಉಲ್ಲೇಖಿಸಿ ಗೌರವ ಸೂಚಿಸಿದ್ದೀರಿ. ಆ ಕಾರ್ಯಕ್ರಮಕ್ಕೆ ಮಾಡಿದ ವೆಚ್ಚದಷ್ಟು ನಿಗಮಕ್ಕೆ ಕೊಡದಿರುವುದು ಸರಿಯೇ? ತಾವು ಸಚಿವರಿಗೆ ಹೇಳಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ಹಿಂದುಳಿದ ವರ್ಗಗಳ ಸಚಿವರನ್ನು ಒತ್ತಾಯಿಸಬೇಕು ಎಂದು ಮನವಿ ಮಾಡಿದರು.
