ಹಾವಿನಾಳ ಕಲ್ಲಯ್ಯ

ಹಾವಿನಾಳ ಕಲ್ಲಯ್ಯ ಶರಣ
ಅರ್ಥವೆಂಬುದೆ ಪಾಪ,
ಬೇರೆ ಪಾಪವಿಲ್ಲ ಕಂಡನಯ್ಯಾ.
ಪರಿಣಾಮವೆಂಬುದೆ ಪುಣ್ಯ,
ಬೇರೆ ಪುಣ್ಯವಿಲ್ಲ ಕಂಡಯ್ಯಾ.
ಪಾಪ ಪುಣ್ಯಗಳನತಿಗಳೆದ ಉಳುಮೆ, ಶಿವಯೋಗ. ಮಹಾಲಿಂಗ ಕಲ್ಲೇಶ್ವರನು ಬಲ್ಲ ಸಿದ್ಧರಾಮನ ಪರಿಯ
**
*ಹಾವಿನಾಳ ಕಲ್ಲಯ್ಯ*
** *ವಚನ ಅನುಸಂಧಾನ*
ಶರಣರ ಸರ್ವಸಮಾನತೆಯ ಜೀವದಯಾಪರದ ವ್ಯವಸ್ಥೆಯಲ್ಲಿ; ಪಾಪಪುಣ್ಯ ಮೇಲುಕೀಳು, ಶ್ರೇಷ್ಠ
ಕನಿಷ್ಠ ಎನ್ನುವ ತರತಮದ ಶ್ರೇಣೀಕೃತ ಮನಸ್ಥಿತಿ ಭಾವಕ್ಕೆ ಮತ್ತು ಅಂತಹ ಭಾಷೆಗೆ ಶರಣರಲ್ಲಿ ಎಳ್ಳಿನಿತು ಆಸ್ಪದವಿಲ್ಲಾ.ಯಾಕಂದ್ರೆ ಅಲ್ಲಿರೂದು ಅರಿವು ಎನ್ನುವ ಕಟ್ಟೆಚ್ಚರದ ನಂದಾದೀಪ. ಅಲ್ಲಿ ಅದು ಸದಾಕಾಲಕೂ ಬೆಳಗುತ್ತಲೇ ಇರುತ್ತದೆ. ತನ್ಮೂಲಕ ಅದು ಶರಣರ ಎಲ್ಲಾ ಆಚರಣೆಯನ್ನ ನಿರ್ದೇಶಿಸುತ್ತಲೇ ಇರುತ್ತದೆ. ಪ್ರಜ್ಞಾವಂತಿಕೆಯ ಈ ಕಾರಣದಿಂದಾಗಿ ಶರಣರ ನಡೆ ನುಡಿ(ವಚನ) ಗಳಲ್ಲಿ ಸತ್ಯವು ಆರದ ಬೆಂಕಿಯ ಬೆಳಕಿನಂತೆ ನಿಗಿ ನಿಗಿಸಿ ತೊಳಗಿ ಬೆಳಗುತ್ತಿರುತ್ತದೆ. ಈ ಮೇಲಿರುವ ವಚನದಲ್ಲಿ ವಚನಕಾರ ಶರಣರಾದ ಹಾವಿನಾಳ ಕಲ್ಲಯ್ಯನವರು ಪಾಪ ಮತ್ತು ಪುಣ್ಯ ಎಂದೆನ್ನುವ ಪದಗಳನ್ನು ಬಳಸಿ ತಮ್ಮ ವಚನದ ಆಶಯವನ್ನ ಇಂಬಿಟ್ಟಿರುವರು. ಅದನ್ನು ಒಳಹೊಕ್ಕು ನೋಡಿ ವಿವರವಾಗಿ ಅರಿಯಲು ಅನುಸಂಧಾನ ಮಾಡಿ ನೋಡೋಣ.
*ಅರ್ಥವೆಂಬುದೆ ಪಾಪ,*
*ಬೇರೆ ಪಾಪವಿಲ್ಲ ಕಂಡನಯ್ಯಾ.*
*ಪರಿಣಾಮವೆಂಬುದೆ ಪುಣ್ಯ,*
*ಬೇರೆ ಪುಣ್ಯವಿಲ್ಲ #ಕಂಡಯ್ಯಾ.*
ಇಲ್ಲಿ ಅರ್ಥ ಎಂದರೆ, ಹಣವು ಎಂದಾಗುತ್ತದೆ. ಹಾಗೆಯೇ ಶಬ್ದದ/ಪದದ ಅರ್ಥ ಎನ್ನುವುದೂ ಆಗುತ್ತದೆ. ಹಾಗೆನೇ ಯಾವುದೇ ವ್ಯಕ್ತಿ ವಸ್ತುಗಳ ಶಬ್ದ ಸ್ಪರ್ಶ ರೂಪ ರಸ ಗಂಧಗಳೆಂದು ಆಗುತ್ತದೆ.
ವಚನಾಶಯದ ಮಿತಿಯಲ್ಲಿ ಹೇಳುವುದಾದರೆ, ತಾತ್ವಿಕ ವಿಚಾರವಾಗಲಿ ಅಥವಾ ವ್ಯವಹಾರಿಕದ ವಿಷಯ ವಿಚಾರವೇ ಆಗಿರಲಿ ಅದರ ಬಗ್ಗೆ ಅರ್ಥ ಆಯಿತೆಂದುಕೊಂಡು ಸುಮ್ಮನೆ ತಮ್ಮಷ್ಟಕ್ಕೆತಾವು ಉಳಿದು ಬಿಟ್ಟರೆ ಫಲವೇನು? ಒಳ್ಳೆಯದಾದ್ದನ್ನು ಮಾಡಬೇಕು ಎಂಬುದು ಅರ್ಥ ಆದರೆ ಸಾಲದು, ಅದರಂತೆ ತಾನು ನಡೆಯಬೇಕು. ಹಾಗೊಂದು ವೇಳೆ ನಡೆಯದಿದ್ದರೆ ಅದುವೇ ಪಾಪ ಎನಿಸುತ್ತದೆ. ಆದರೆ ಅದೇ ಒಳ್ಳೆಯದನ್ನು ಅರ್ಥ ಮಾಡಿಕೊಂಡು ಒಳ್ಳೆಯದನ್ನು ಮಾಡಿದ್ರೆ ಅದರ
ಆ ಪರಿಣಾಮವೇ ಪುಣ್ಯ ಎನಿಸುತ್ತದೆ. ಇದಕ್ಕಿಂತ ಬೇರೆ ಪುಣ್ಯವಿಲ್ಲ ಎನ್ನುವೀ ಮಾತಿನ ತಾತ್ಪರ್ಯ ಏನೆಂದರೆ, ಅರ್ಥ ಮಾಡಿಕೊಂಡು ಸುಮ್ಮನಿದ್ದರೆ ಪಾಪ. ಅರ್ಥ ಮಾಡಿಕೊಂಡದ್ದನ್ನು ಕಾರ್ಯಗತ ಮಾಡಿದರೆ ಆ ಪರಿಣಾಮದಲ್ಲಿ ಪುಣ್ಯ ಇರುತ್ತದೆ ಎನ್ನುವ ಅರಿವು ಆಚರಣೆ ತತ್ವವನ್ನು ಹೇಳಿದ್ದಾರೆ.
*ಪಾಪ ಪುಣ್ಯಗಳನತಿಗಳೆದ ಉಳುಮೆ,* *ಶಿವಯೋಗ.* *ಮಹಾಲಿಂಗ ಕಲ್ಲೇಶ್ವರನು*
*ಬಲ್ಲ ಸಿದ್ಧರಾಮನ #ಪರಿಯ.*
ಸಾಮಾನ್ಯ ಜನರ ಪಾಪ ಪುಣ್ಯದ ಪರಿಕಲ್ಪನೆಯ ಅಂಗವಾಗಿ ದೇವರು ದೇವಸ್ಥಾನ, ದಾನ ಧರ್ಮ, ಕೊಲ್ಲು ಕಾಯಿ, ನೈತಿಕ ಅನೈತಿಕ ಎನ್ನುವುಗಳೆಲ್ಲಾ
ವ್ಯಕ್ತಿಯೊಳಗೆ ಭಯ ಭಕ್ತಿಯ ಹುಟ್ಟಿಸಿ ಹೈರಾಣ ಮಾಡಿ ಬಿಡುತ್ತವೆ. ಅದಕ್ಕಾಗಿ ಕಷ್ಟಪಟ್ಟು ಗುಡಿ ಗುಂಡಾರಗಳನ್ನ ನಿರ್ಮಿಸಿ ಪೂಜೆ ಪುನಸ್ಕಾರಗಳ
ಯಾಗ ಯಾತ್ರೆಗಳನ್ನು ಮಾಡುವ ಮೂಲಕವಾಗಿ ಆಯಸ್ಸನ್ನು ವ್ಯರ್ಥವಾಗಿ ಪೋಲು ಮಾಡುವುದು ತಪ್ಪು ಎನ್ನುವುದು ಶರಣರ ನಿಲುವು ಆಗಿರುತ್ತದೆ. ಸೊನ್ನಲಿಗೆಯ ಸಿದ್ದರಾಮಯ್ಯ ಮೊದಲು ಇಂಥಾ ಪಾಪ ಪುಣ್ಯದ ಉಳುಮೆಯನ್ನವರು ಮೊದಲಿಗೆ ಬಲು ಜೋರು ನಡೆಸಿದ್ದರೇ! ವ್ಯೋಮಕಾಯರು ಅನುಪಮ ಜ್ಞಾನಿಗಳು ಆದಂತಹ ಅಲ್ಲಮಪ್ರಭು ಅವರನ್ನು ಕಲ್ಯಾಣಕ್ಕೆ ಕರೆತಂದು ಇಷ್ಟಲಿಂಗವನ್ನ ಅವರಿಗೆ ಕರುಣಿಸಿದಂದೆ ಅಪ್ಪಬಸವಾದಿ ಶರಣ್ರು ಶಿವಯೋಗ ಸಾಧನೆಯನ್ನು ಮಾಡಿ ಕಲ್ಯಾಣವನ್ನ ಭೂಕೈಲಾಸ ಸದೃಶವನ್ನಾಗಿಸಿದ್ದನ್ನು ಇಲ್ಲಿ ಪ್ರಸ್ತುತ ವಚನದಲ್ಲಿ ಅವರು ತೋರಿಸಿದ್ದನ್ನು ಹಾವಿನಾಳ ಕಲ್ಲಯ್ಯ ಶರಣ ತಮ್ಮ ಈ ವಚನದಲ್ಲಿ ಇಂಬಿಟ್ಟು ತೋರಿಸಿದ್ದಾರೆ.
ಅಳಗುಂಡಿ ಅಂದಾನಯ್ಯ*