ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಸಿಪಿಐ ಪ್ರತಿಭಟನೆ

ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಸಿಪಿಐ ಪ್ರತಿಭಟನೆ

ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಸಿಪಿಐ ಪ್ರತಿಭಟನೆ

ಕಲಬುರಗಿ: ಮನೆ ಬಳಕೆಯ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್‌ಗೆ 60 ರೂ. ಹಾಗೂ ವಾಣಿಜ್ಯ ಸಿಲಿಂಡರ್‌ಗೆ 114 ರೂ. ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಕಲಬುರಗಿ ಜಿಲ್ಲಾ ಮಂಡಳಿ ಪ್ರತಿಭಟನೆ ನಡೆಸಿ ಕಲಬುರಗಿ ಜಿಲ್ಲಾಧಿಕಾರಿಗಳವರಿಗೆ ಮನವಿ ಪತ್ರ ಸಲ್ಲಿಸಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಈಗಾಗಲೇ ಹಣದುಬ್ಬರ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಳ ಮಾಡಿರುವುದು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಮತ್ತಷ್ಟು ಹೊರೆ ತಂದಿದೆ ಎಂದು ಆರೋಪಿಸಿದರು. ಈ ಬೆಲೆ ಏರಿಕೆಯಿಂದ ಜನರ ಜೀವನ ನಿರ್ವಹಣೆಯ ವೆಚ್ಚ ಇನ್ನಷ್ಟು ದುಬಾರಿಯಾಗಲಿದೆ ಎಂದು ಅವರು ಹೇಳಿದರು.

ಬೆಲೆ ಏರಿಕೆಯ ಹೊರೆ ಕಡಿಮೆ ಮಾಡಲು ಕೇಂದ್ರ ಸರ್ಕಾರ ಸಿಲಿಂಡರ್‌ಗಳಿಗೆ ನೀಡುವ ಸಬ್ಸಿಡಿಯನ್ನು ಹೆಚ್ಚಿಸಿ ಜನಸಾಮಾನ್ಯರಿಗೆ ನೆರವಾಗಬೇಕು ಎಂದು ಸಿಪಿಐ ಒತ್ತಾಯಿಸಿತು.

ಇದೇ ವೇಳೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಬೆಲೆ ಏರಿಕೆಯ ಹೊರೆ ಹೊರಲು ಜನತೆ ತಯಾರಿರಬೇಕು ಎಂದು ನೀಡಿದ ಹೇಳಿಕೆಯನ್ನು ಸಿಪಿಐ ತೀವ್ರವಾಗಿ ಖಂಡಿಸಿದ್ದು, ಇದು ಬಂಡವಾಳಶಾಹಿಗಳ ಪರ ನಿಲುವು ತೋರಿಸುತ್ತದೆ ಎಂದು ಆರೋಪಿಸಿದರು.

ಸಿಲಿಂಡರ್ ಬೆಲೆ ಏರಿಕೆಯನ್ನು ತಕ್ಷಣ ಹಿಂತೆಗೆದುಕೊಳ್ಳುವ ಮೂಲಕ ಜನಸಾಮಾನ್ಯರ ನೆರವಿಗೆ ಬರಬೇಕೆಂದು ಸಿಪಿಐ ಕಲಬುರಗಿ ಜಿಲ್ಲಾ ಮಂಡಳಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

ಈ ವೇಳೆ ಪ್ರಭುದೇವ ಯಳಸಂಗಿ, ಮೌಲಾ ಮುಲ್ಲಾ, ಪದ್ಮಾವತಿ ಮಾಲಿ ಪಾಟೀಲ, ಹಣಮಂತರಾಯ ಅಟ್ಟೂರ, ಸಾಜೀದ ಅಹ್ಮದ್, ಶಿವಲಿಂಗಮ್ಮ ಲೆಂಗಟಕರ್, ಲಕ್ಷ್ಮೀ ದೊಡ್ಡಮನಿ, ತಿಪ್ಪಣ್ಣ ಯಂದೂರೆ, ಮಹ್ಮದ್ ಹುಸೇನ್, ಶರಣಮ್ಮ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.