ವಿವೇಕದಿಂದ ವ್ಯಕ್ತಿತ್ವ ನಿರ್ಮಾಣ-ಧರಿಸುವ ವಸ್ತ್ರಗಳಿಂದಲ್ಲ: ಶಿವರಾಜ ಅಂಡಗಿ

ವಿವೇಕದಿಂದ ವ್ಯಕ್ತಿತ್ವ ನಿರ್ಮಾಣ-ಧರಿಸುವ ವಸ್ತ್ರಗಳಿಂದಲ್ಲ: ಶಿವರಾಜ ಅಂಡಗಿ

 ವಿವೇಕದಿಂದ ವ್ಯಕ್ತಿತ್ವ ನಿರ್ಮಾಣ-ಧರಿಸುವ ವಸ್ತ್ರಗಳಿಂದಲ್ಲ: ಶಿವರಾಜ ಅಂಡಗಿ

ಕುಸನೂರ: ಮನುಷ್ಯನು ತಾನು ಧರಿಸುವ ವಸ್ತ್ರಗಳಿಂದ  ವ್ಯಕ್ತಿತ್ವ ನಿರ್ಮಾಣವಾಗುವುದಿಲ್ಲ; ಒಳ್ಳೆಯ ವಿವೇಕ, ಚಿಂತನೆ ಮತ್ತು ಮೌಲ್ಯಗಳಿಂದಲೇ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಹೇಳಿದರು.

ಕುಸನೂರ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಶಿವಬಸವ ಸಂಸ್ಕೃತಿಕ ಸಂಘದ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಆಯೋಜಿಸಿದ್ದ “ರಾಷ್ಟ್ರೀಯ ಯುವ ದಿನಾಚರಣೆ” ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರ ಆಶಯದಂತೆ ವಿದ್ಯಾರ್ಥಿಗಳು ಕೇವಲ ಸಿಗುವ ಅವಕಾಶಗಳ ಮೇಲೆ ಅವಲಂಬಿತರಾಗದೆ, ದಿನನಿತ್ಯ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಂಡು ಜ್ಞಾನವಂತ, ಬುದ್ಧಿವಂತಿಕೆ ಮತ್ತು ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡಾಗ ಮಾತ್ರ ಸಾರ್ಥಕ ಬದುಕು ಎಂದು ಸಲಹೆ ನೀಡಿದರು 

ಅಮೇರಿಕಾದಲ್ಲಿ ಸ್ವಾಮಿ ವಿವೇಕಾನಂದರು ಕೇಸರಿ ವಸ್ತ್ರ ಧರಿಸಿ ಓಡಾಡುತ್ತಿದ್ದಾಗ ವಿದೇಶಿಯರು ಅವರನ್ನು ಕೀಟಲೆ ಮಾಡಿದರು “ ಉತ್ತಮ ಬಟ್ಟೆಯಿಂದ ವ್ಯಕ್ತಿತ್ವ ಅಳೆಯಬೇಡಿ, ಮನುಷ್ಯನಲ್ಲಿರುವ ವಿಚಾರಗಳಿಂದ ವ್ಯಕ್ತಿತ್ವ ಅರಿಯಬೇಕು, ಎಂದು ನೀಡಿದ ಉತ್ತರ ವಿದೇಶಿಯರನ್ನು ಅಚ್ಚರಿಗೊಳಿಸಿತ್ತು. ಅಂಥ ಮಹಾನ್ ವ್ಯಕ್ತಿತ್ವವೇ ಸ್ವಾಮಿ ವಿವೇಕಾನಂದರು. ಕಡಿಮೆ ಅವಧಿಯಲ್ಲಿ ಇಡೀ ವಿಶ್ವಕ್ಕೆ ದೇಶಪ್ರೇಮ, ಸನಾತನ ಸಂಸ್ಕೃತಿ ಹಾಗೂ ಯುವಜನತೆಗೆ ಆದರ್ಶ ನೀಡಿದವರು ಎಂದು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸಿದ್ದಣ್ಣ ಹೊಸಮನಿ ಪ್ರಭಾತ ಫೇರಿಗೆ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರಮೇಳಾ ತ್ರಿಮುಖ ವಹಿಸಿದ್ದರು. ಶಿವುಪುತ್ರ ಮುಗುಳನಾಗಾಂವ ಗುತ್ತೇದಾರ ಮಾತನಾಡಿದರು.

ಅತಿಥಿಗಳಾಗಿ ಕುಸನೂರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ಗುರುಮಿಟಕಲ್, ಸದಸ್ಯ ರಮೇಶ ತೇಗ್ಗಿನಮನಿ, ಜನಪದ ಕಲಾವಿದ ಸಂಜು ಬರಗಾಲಿ ಹಾಗೂ ಶಿವಬಸವ ಸಂಸ್ಕೃತಿಕ ಸಂಘದ ಕಾರ್ಯದರ್ಶಿ ವಿಶ್ವನಾಥ ತೊಟ್ಟನಳ್ಳಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ವಿದ್ಯಾರ್ಥಿಗಳಿಗೆ ಅತಿಥಿಗಳು ಸ್ವಾಮಿ ವಿವೇಕಾನಂದರ ಪುಸ್ತಕಗಳನ್ನು ನೀಡಿ ಪ್ರೋತ್ಸಾಹಿಸಿದರು. ಶಾಲೆಯ ಶಿಕ್ಷಕರಾದ ಅರುಧಂತಿ ದೇವಣಿ, ಶಕುಂತಲಾ ಪ್ಯಾಟಿ, ವಿನಯಕುಮಾರ ಉಪಳಾಂಕರ್, ಗೀತಾಂಜಲಿ ಕುಲಕರ್ಣಿ, ಅಮೀನ ರೆಡ್ಡಿ, ಜಗನ್ನಾಥ ಸಮಗೊಂಡ, ಶಿವಾನಂದ ತೊಟ್ಟನಳ್ಳಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.