ಸೃಜನಶೀಲತೆ ಮತ್ತು ಬೌದ್ಧಿಕ ವಿಕಾಸಕ್ಕೆ ವಸ್ತು ಪ್ರದರ್ಶನ ಪ್ರೇರಣೆ : ಡಾ.ಸದಾನಂದ ಪೆರ್ಲ
ಸೃಜನಶೀಲತೆ ಮತ್ತು ಬೌದ್ಧಿಕ ವಿಕಾಸಕ್ಕೆ ವಸ್ತು ಪ್ರದರ್ಶನ ಪ್ರೇರಣೆ : ಡಾ.ಸದಾನಂದ ಪೆರ್ಲ
ಶ್ರೀ ಸಂಗಪ್ಪ ಶೆಟ್ಟಿ ಸ್ಮಾರಕ ಶಾಲೆಯಲ್ಲಿ "ಭಾರತೀಯ ಜ್ಞಾನ ವಿಕಾಸ ಮಹೋತ್ಸವ " ವಸ್ತು ಪ್ರದರ್ಶನ ಸಮಾರೋಪ ಕಾರ್ಯಕ್ರಮ
ಕಲಬುರಗಿ: ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಬೌದ್ಧಿಕ ವಿಕಾಸಕ್ಕೆ ವಸ್ತು ಪ್ರದರ್ಶನಗಳು ಪ್ರೇರಣೆಯಾಗಲಿದೆ ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಹೇಳಿದರು.
ಕಲಬುರಗಿ ಆಳಂದ ರಸ್ತೆಯಲ್ಲಿರುವ ಶ್ರೀ ಸಂಗಪ್ಪ ಶೆಟ್ಟಿ ಸ್ಮಾರಕ ಶಾಲೆಯಲ್ಲಿ ಜ.22ರಂದು ವಿದ್ಯಾರ್ಥಿಗಳ "ಭಾರತೀಯ ಜ್ಞಾನ ವಿಕಾಸ ಮಹೋತ್ಸವ " ವಸ್ತು ಪ್ರದರ್ಶನ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿ ವಿದ್ಯಾರ್ಥಿಗಳನ್ನು ಕೇವಲ ಅಂಕ ಸೃಷ್ಟಿಯ ಯಂತ್ರಗಳನ್ನಾಗಿಸದೆ ಸೃಜನಶೀಲತೆ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸುವ ಚಟುವಟಿಕೆಗಳಲ್ಲಿ ಪಠ್ಯಕ್ಕೆ ಪೂರಕವಾಗುವ ವಸ್ತುಪ್ರದರ್ಶನ ಏರ್ಪಡಿಸುವುದು ಸೂಕ್ತ ಪ್ರತಿಭೆಗಳನ್ನು ಮತ್ತು ಸೃಜನಶೀಲತೆಯನ್ನು ಹೆಚ್ಚಿಸುವ ಪ್ರಯತ್ನವಾಗಿದೆ.ಕೇವಲ ಸರ್ಟಿಫಿಕೇಟ್ ಪಡೆಯುವ ವಿದ್ಯಾರ್ಥಿಗಳನ್ನಾಗಿಸದೆ ಪಾಲಕರು ತಮ್ಮ ಮಕ್ಕಳನ್ನು ಬಹುಮುಖ ಆಯಾಮಗಳಲ್ಲಿ ಬೆಳೆಸಿ ಉತ್ತಮ ರಾಷ್ಟ್ರ ಪ್ರಜೆಯಾಗುವ ಇಂತಹ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಡಾ.ಪೆರ್ಲ ಹೇಳಿದರು.
ಜ. 19 ರಿಂದ ಪ್ರಾರಂಭಗೊಂಡ ವಿದ್ಯಾರ್ಥಿಗಳ ವಿಶೇಷ ಪ್ರತಿಭಾ ಸಾಮರ್ಥ್ಯವನ್ನು ಬೆಳಕಿಗೆ ತರುವ "ಭಾರತೀಯ ಜ್ಞಾನ ವಿಕಾಸ ಮಹೋತ್ಸವ" ವಸ್ತು ಪ್ರದರ್ಶನಗಳು ನೋಡುಗರಲ್ಲಿ ಕುತೂಹಲ ಸೃಷ್ಟಿಸಿದೆ. ಸುಮಾರು 50ಕ್ಕೂ ಹೆಚ್ಚು ಪ್ರಾತ್ಯಕ್ಷಿಕೆಗಳು ಕನ್ನಡ ಸಾಹಿತ್ಯ ವೈಜ್ಞಾನಿಕ ಕ್ಷೇತ್ರದ ವಿಸ್ಮಯ, ಗಣಿತ ಕ್ಷೇತ್ರದ ಕೌತುಕ ,ಪರಿಸರ ಸಂರಕ್ಷಣೆ,ಆರೋಗ್ಯ ಸಂರಕ್ಷಣೆ,ರೊಬೋಟಿಕ್ ತಂತ್ರಜ್ಞಾನ, ನೀರಿನ ಸದ್ಬಳಕೆ, ವಿರಾಸತ್ ಕಲಬುರಗಿಯಿಂದ ವಿಕಾಸ ಕಲಬುರಗಿ ನಡೆ, ಮಂಗನಿಂದ ಮಾನವ ಆವಿಷ್ಕಾರ, ಪರಿಸರದ ಬದುಕು, ಪಾರಂಪರಿಕ ಬದುಕು ಮುಂತಾದ ಪ್ರಾತ್ಯಕ್ಷಿಕೆಗಳನ್ನು ಒಂದನೇ ತರಗತಿಯಿಂದ ಹತ್ತನೇ ತರಗತಿಯ ವರೆಗಿನ ಸುಮಾರು 900 ವಿದ್ಯಾರ್ಥಿಗಳನ್ನು ಹೊಂದಿದ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ್ದರು. ಮಾತ್ರವಲ್ಲದೆ ಪ್ರಾತ್ಯಕ್ಷಿಕೆಗಳ ಬಗ್ಗೆ ಸಾರ್ವಜನಿಕರಿಗೆ ವಿವರಣೆ ನೀಡಿ ಜಾಗೃತಿ ಮೂಡಿಸಿದರು. ಕಲಬುರಗಿ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ.ಚಂದ್ರಕಾಂತ ಕೆಳಮನಿಯವರು ವಸ್ತು ಪ್ರದರ್ಶನವನ್ನು ಉದ್ಘಾಟಿಸಿದ್ದರು. ಶ್ರೀ ಸಂಗಪ್ಪ ಶೆಟ್ಟಿ ಸ್ಮಾರಕ ಶಾಲೆಯ ಅಧ್ಯಕ್ಷರಾದ ನ್ಯಾಯವಾದಿ ಗಿರಿಜಾಶಂಕರ್ ಶೆಟ್ಟಿ ಹಾಗೂ ಕೋಶಾಧಿಕಾರಿ ಸುಜಾತಾ ಶೆಟ್ಟಿ ಅಮೂಲ್ಯ ಸಂಗಪ್ಪ ಶೆಟ್ಟಿ, ಸವಿತಾ ಗುತ್ತೇದಾರ್ ಮುಂತಾದವರು ವಿದ್ಯಾರ್ಥಿ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ವಿಶೇಷವಾಗಿ ವಸ್ತು ಪ್ರದರ್ಶನವನ್ನು ಆಯೋಜಿಸಿದ್ದರು.
ಶಾಲೆಯ ನಿರ್ದೇಶಕ ಹಾಗೂ ಉದ್ಯಮಿಗಳಾದ ಸಂಗಪ್ಪ ಶೆಟ್ಟಿ ಸ್ವಾಗತಿಸಿದರು. ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಾನಂದ ದೋಶೆಟ್ಟಿ ಹಾಗೂ ಸಂಯೋಜಕರಾದ ಶ್ರೀಮತಿ ಪದ್ಮಿನಿ ಉಪಸ್ಥಿತರಿದ್ದರು.
