ದೇಶದ ಶಿಕ್ಷಣ ಭಾರತೀಕರಣಗೊಳ್ಳಬೇಕಿದೆ
ದೇಶದ ಶಿಕ್ಷಣ ಭಾರತೀಕರಣಗೊಳ್ಳಬೇಕಿದೆ
ಕಲಬುರ್ಗಿ:ದೇಶದ ಶಿಕ್ಷಣ ವ್ಯವಸ್ಥೆಯು ಭಾರತೀಕರಣಗೊಳ್ಳಬೇಕಿದೆ. ತಪ್ಪು ದಾರಿಯಲ್ಲಿ ಬಹಳ ದೂರ ಸಾಗಿರುವ ನಾವು, ಪಥ ಬದಲಿಸಬೇಕಿದೆ’ ಎಂದು ಭಾರತೀಯ ಶಿಕ್ಷಣ ಮಂಡಲದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಶಂಕರಾನಂದ ಜಿ. ಅವರು ಅಭಿಪ್ರಾಯಪಟ್ಟರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸೀರಿ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಭಾರತೀಯ ಶಿಕ್ಷಣ ಮಂಡಲದಿಂದ ಪ್ರಾಂತ ಮಟ್ಟದ ಶಿಕ್ಷಕರ ಚಿಂತನಾ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಬೆಳಗ್ಗೆ ಹತ್ತರಿಂದ ಸಂಜೆ ಐದರ ನಡುವೆ ನಡೆಯುವ ಪಾಠಪ್ರವಚನವೇ ಶಿಕ್ಷಣವಲ್ಲ. ಅದು ಈ ವ್ಯಾಪ್ತಿಯನ್ನು ಮೀರಿದ ಒಂದು ಪ್ರಕ್ರಿಯೆ. ಬದುಕುವುದಕ್ಕೆ ಇಂಗ್ಲಿಷ್ ಅನಿವಾರ್ಯ ಎಂಬ ತಪ್ಪುಕಲ್ಪನೆಯನ್ನು ಇಡೀ ಸಮಾಜಲ್ಲಿ ಬಿತ್ತಲಾಗಿದೆ. ಈ ಭ್ರಮೆಯಿಂದ ಹೊರಬರುವ ಅಗತ್ಯವಿದೆ. ವ್ಯವಹಾರಕ್ಕೆ ಇಂಗ್ಲಿಷ್ ಬೇಕು. ಆದರೆ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ನಡೆಯಬೇಕು. ಇದನ್ನು ಪ್ರತಿಪಾದಿಸುವ ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನ ಆಗಬೇಕಿದೆ ಎಂದರು.
ಭಾರತೀಯ ಶಿಕ್ಷಣ ಮಂಡಳವು ಇದೆ ದಿಸೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು 1969 ರಲ್ಲಿ ರಾಮನವಮಿಯ ದಿನದಂದೆ ಭಾರತೀಯ ಶಿಕ್ಷಣ ಮಂಡಳವು ಜನಿಸಿತು. ಶಿಕ್ಷಣ ಕ್ಷೇತ್ರದಲ್ಲಿ ರಾಮತ್ವ ಅಳವಡಿಸಿಕೊಳ್ಳಬೇಕು ಅಂದರೆ ರಾಷ್ಟ್ರೀಯ ಪುನರುತ್ಥಾನ ವಾಗಬೇಕು ಎಂಬ ಉದ್ದೇಶದಿಂದ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಇದು ಸಮಗ್ರ ಭಾರತೀಯ ದೃಷ್ಟಿಕೋನದ ಆಧಾರದ ಮೇಲೆ ರಾಷ್ಟ್ರೀಯ ಶಿಕ್ಷಣ ನೀತಿ, ಪಠ್ಯಕ್ರಮ, ವ್ಯವಸ್ಥೆ ಮತ್ತು ವಿಧಾನಗಳನ್ನು ವಿಕಸಿಸುವ ಗುರಿಯನ್ನು ಹೊಂದಿದೆ. ದೇಶದ ಎಲ್ಲಾ ಭಾಗಗಳಲ್ಲಿ ಹಲವಾರು ಶೈಕ್ಷಣಿಕ, ಬೌದ್ಧಿಕ ಮತ್ತು ಪ್ರಾಯೋಗಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಈ ಮೂಲಕ ರಾಷ್ಟ್ರದ ಒಟ್ಟಾರೆ ಅಭಿವೃದ್ಧಿಯತ್ತ ಗಮನವನ್ನು ಕೇಂದ್ರೀಕರಿಸಿದೆ ಎಂದು ಹೇಳಿದರು.
ಭಾರತೀಯ ಶಿಕ್ಷಣ ಮಂಡಳವು
'ರಾಷ್ಟ್ರೀಯ ಪುನರುತ್ಥಾನದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವದ ಬೆಳವಣಿಗೆಯಾಗಿರಬೇಕು. ಭಾರತೀಯ ಸಂಸ್ಕೃತಿಯು ವಿದ್ಯಾರ್ಥಿಗಳ ವ್ಯಕ್ತಿತ್ವದಲ್ಲಿ ಪ್ರತಿಬಿಂಬಿತವಾಗಬೇಕು. ಶಿಕ್ಷಣ ಕ್ಷೇತ್ರದ ಪಾಲುದಾರರಾದ ಶಿಕ್ಷಕರು, ಶಿಕ್ಷಣ ಸಂಸ್ಥೆಗಳು ಮತ್ತು ಪೋಷಕರು ಈ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಉದಾತ್ತ ಗುರಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ʼಬೋಧನೆʼಗಿಂತಲೂ ಕಲಿಕೆಗೆ ಹೆಚ್ಚಿನ ಮಹತ್ವ. ಇದರ ಪ್ರಕಾರ ಯಾವುದನ್ನೂ ಹೊಸತಾಗಿ ಕಲಿಸಲಾಗದು, ಕಲಿಕಾರ್ಥಿ ತನ್ನ ಶ್ರದ್ಧೆಯಿಂದ ಕಲಿತುಕೊಳ್ಳಬಲ್ಲ ಅಷ್ಟೇ. ನಮ್ಮ ಶಿಕ್ಷಣ ಮಾಹಿತಿ, ವ್ಯಾಖ್ಯಾನ, ವಿಮರ್ಶೆಯ ಹಂತವನ್ನು ದಾಟಿ ಸೌಂದರ್ಯಶಾಸ್ತ್ರದ ಹಂತದವರೆಗೆ ವಿಸ್ತರಿಸಿಕೊಂಡಿದೆ. ಆತ್ಮನಿರ್ಭರತೆಯನ್ನು ಸಾಧಿಸುವುದೇ ಶಿಕ್ಷಣದ ಉದ್ದೇಶ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತ್ರ ಭಾಷೆ ಸ್ಥಳಿಯ ಭಾಷೆಗೆ ಮಹತ್ವ ನೀಡಲಾಗಿದೆ ಆದರೆ ಇಂದು ನಾವು ಜಾರ್ಜ್ ಬರ್ನಾಡ್ ಶಾ ಅವೈಜ್ಞಾನಿಕ ಭಾಷೆ ಎಂದ ಇಂಗ್ಲಿಷ್ ಅನ್ನು ಇಂದು ನಾವೆಲ್ಲರೂ ಅಪ್ಪಿಕೊಂಡಿದ್ದೇವೆ.ಹೀಗಾಗಿ ಮಕ್ಕಳ ಮನಸ್ಸಿಗೆ ಮುಟ್ಟುತ್ತಿಲ್ಲ ಎಂದು ಅಭಿಪ್ರಾಯಪಟ್ಟರು. ವ್ಯವಹಾರ ಭಾಷೆಯಾಗಿ ಮಾತ್ರ ಇಂಗ್ಲಿಷ್ ಇರಬೇಕು ಎಂದು ಹೇಳಿದರು. ಸದ್ಯದ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿ ಕೇಂದ್ರಿತವಾಗಿದ್ದು, ಕಲಿಯುವುದರಲ್ಲಿ ಹಾಗೂ ಕಲಿಸುವುದರಲ್ಲಿ ಯಾರಿಗೂ ಆಸಕ್ತಿ ಇಲ್ಲವಾಗಿದೆ. ಇದರಿಂದಾಗಿಯೇ, ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚಾಗಿದೆ’ ಎಂದು ಹೇಳಿದರು.
‘ಶಿಕ್ಷಣ ವ್ಯವಸ್ಥೆ ಭಾರತೀಕರಣಗೊಳ್ಳಬೇಕಾದರೆ ನೀತಿ, ಬದ್ಧತೆ, ಪಠ್ಯಕ್ರಮ ಹಾಗೂ ಮೌಲ್ಯಾಂಕನದಲ್ಲಿ ಬದಲಾವಣೆಗೊಂಡು ಆಧ್ಯಾತ್ಮಿಕರಣವಾಗಬೇಕಿದೆ. ಶಿಕ್ಷಣ ಇರುವುದು ನೌಕರಿಗಲ್ಲ, ಮುಕ್ತಿಗಾಗಿ ಎಂಬ ಅರಿವು ಮೂಡಬೇಕಿದೆ. ವೇದಗಳು, ಉಪನಿಷತ್, ದರ್ಶನಗಳು, ಪುರಾಣ, ರಾಮಾಯಣ ಹಾಗೂ ಮಹಾಭಾರತ ಪಠ್ಯಕ್ರಮದಲ್ಲಿ ಅಳವಡಿಕೆಯಾಗಬೇಕಿದೆ’ ಎಂದರು
ಮನೆ ಸರಿಯಾದರೆ ಮಕ್ಕಳು ಸರಿಯಾಗ್ತಾರೆ ಮಕ್ಕಳು ಸರಿಯಾದರೆ ಶಾಲೆ ಸರಿಯಾಗುತ್ತದೆ ಆಗ ರಾಷ್ಟ್ರ ಪುನರ್ ನಿರ್ಮಾಣವಾಗುತ್ತದೆ.ಇದರಲ್ಲಿ ತಾಯಿ ಪಾತ್ರ ಬಹಳ ಮುಖ್ಯವಾಗಿದೆ. ಮನೆಯಲ್ಲಿ ಸರಿಯಾದ ಸಂಸ್ಕಾರ ಸಿಕ್ಕಾಗ ಮಾತ್ರ ಶಾಲೆಯು ಸುಧಾರಣೆಯಾಗುತ್ತದೆ ದೇಶವು ಸುಧಾರಣೆಯಾಗುತ್ತದೆ ಎಂದು ಹೇಳಿದರು ಯಾವ ರೀತಿ ತಾಯಿಗೆ ನಿವೃತ್ತಿ ಯಿಲ್ಲವೋ ಅದೇ ರೀತಿ ಶಿಕ್ಷಕನಾದವನಿಗೆ ನಿವೃತ್ತಿ ಇಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ ರಾಜೇಂದ್ರ ಕೊಂಡಾ ಮಾತನಾಡಿದರು
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ವಿಶೇಷ ಅಧಿಕಾರಿ ಹಾಗೂ ಭಾರತೀಯ ಶಿಕ್ಷಣ ಮಂಡಳದ ಉನ್ನತ ಶಿಕ್ಷಣ ಗತಿ ವಿಧಿ ಪ್ರಮುಖರಾದ ಡಾ ಪರಮೇಶ ಬಿರಾದಾರ , ಭಾರತೀಯ ಶಿಕ್ಷಣ ಮಂಡಳ ಪ್ರಾಂತ ಅಧ್ಯಕ್ಷರಾದ ಡಾ ಬಸವರಾಜ ಅನಾಮಿ, ಜಿಲ್ಲಾ ಉಪಾಧ್ಯಕ್ಷ ಶಿವಾನಂದ ಖಜೂರಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು
ಕಾಲೇಜಿನ ಉಪ ಪ್ರಾಚಾರ್ಯರಾದ ಡಾ ವೀಣಾ ಹೊನಗುಂಟಿಕರ್ ಪ್ರಾರ್ಥಿಸಿದರು ಜಿಲ್ಲಾ ಕಾರ್ಯದರ್ಶಿ ಶಿವಶರಣ ಉದನೂರ ಸ್ವಾಗತಿಸಿದರು ಮಲ್ಲಯ್ಯ ಹೀರಾತ ಕಾರ್ಯಕ್ರಮ ನಿರೂಪಿಸಿದರು ಶರಬಯ್ಯ ಉದನೂರ ವಂದಿಸಿದರು