ದೇವರ’ ಹೆಸರಲ್ಲಿ ಸಮಾಜ ಒಡೆಯಬೇಡಿ ಚಿನ್ಮಯಗಿರಿ ಶ್ರೀಗಳ ಹಿತೋಪದೇಶ
`ದೇವರ’ ಹೆಸರಲ್ಲಿ ಸಮಾಜ ಒಡೆಯಬೇಡಿ -ಚಿನ್ಮಯಗಿರಿ ಶ್ರೀಗಳ ಹಿತೋಪದೇಶ
ಕಲಬುರಗಿ : `ದೇವರ’ನ್ನು ಜಾತಿ-ಧರ್ಮದ ಬೇಲಿಯೊಳಗೆ ಬಂಧಿಸಬೇಡಿ ಮತ್ತು ಅವನ ಹೆಸರಿನಲ್ಲಿ ಸಮಾಜವನ್ನು ಒಡೆಯಬೇಡಿ ಎಂದು ಹಿತೋಪದೇಶ ಮಾಡಿದವರು ಚಿನ್ಮಯಗಿರಿಯ ಶ್ರೀ ಗುರು ಮಹಾಂತೇಶ್ವರ ಮಠದ ಒಡೆಯರಾದ ಪೂಜ್ಯಶ್ರೀ ಷ.ಬ್ರ. ವೀರಮಹಾಂತೇಶ್ವರ ಶಿವಾಚಾರ್ಯರು.
ಅವರು ತಾಲೂಕಿನ ಸುಕ್ಷೇತ್ರ ಕಡಣಿಯಲ್ಲಿ ಶ್ರೀ ಶಂಕರಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡ ಲಚ್ಚಾಣದ ಶ್ರೀ ಸಿದ್ಧಲಿಂಗ ಮಹಾರಾಜ್’ರ ಪುರಾಣ ಕಾರ್ಯಕ್ರಮದ ಮೊದಲ ದಿನದಂದು ಭಕ್ತರನ್ನು ಉದ್ಧೇಶಿಸಿ ಮಾತನಾಡುತ್ತಾ, ಮನುಷ್ಯ ಮತ್ತು ದೇವರ ನಡುವಿನ ಸಂಬAಧ, ಜಾತಿ, ಧರ್ಮಗಳ ಜೊತೆ ಹೋಲಿಕೆ ಮಾಡುವುದು ಸಲ್ಲದು ಎಂದಿರುವ ಅವರು, ಜಾತಿವಾದಿಗಳ ವಿಚಾರಗಳಿಗೆ ಮರಳಾಗಬೇಡಿ ಎಂದು ಸಲಹೆ ನೀಡಿದರು.
ನಿಮ್ಮ ಮಕ್ಕಳನ್ನು ಪುಸ್ತಕದ ಹುಳುಗಳನ್ನಾಗಿ ಮಾಡಬೇಡಿ. ವಿಜ್ಞಾನದಷ್ಟೇ ಅಧ್ಯಾತ್ಮ ಬದುಕಿಗೆ ಅವಶ್ಯವಾಗಿದೆ. ಇಷ್ಟಲಿಂಗ ಪೂಜೆ, ಅಷ್ಟಾವರಣಗಳಲ್ಲಿ ವಿಜ್ಞಾನ ಅಡಗಿದೆ. ಬಸವಣ್ಣನವರ ಸಪ್ತ ಸೂತ್ರಗಳು ಅಂತರಂಗದ ಶುದ್ಧಿ ಮಾಡುತ್ತವೆ. ಉನ್ನತ ಶಿಕ್ಷಣ ನೀಡುವುದು ಎಷ್ಟು ಮುಖ್ಯವೋ, ಅಷ್ಟೇ ಎಳೆತನದಲ್ಲಿ ಸಂಸ್ಕಾರ, ಸಂಸ್ಕೃತಿ ನೀಡುವುದು ಮುಖ್ಯವಾಗಿದೆ. ಸಂಸ್ಕಾರಧಾರೆಯೆರೆಯಬೇಕಾದರೆ, ಪುರಾಣ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆ ತನ್ನಿ ಎಂದು ಕರೆ ಕೊಟ್ಟರು.
ಜನ್ಮಧಾತರಿಗೆ ಚೆನ್ನಾಗಿ ನೋಡಿಕೊಳ್ಳುವವರು ಹೆಚ್ಚಾಗಿ ರೈತರು. ಉನ್ನತ ಶಿಕ್ಷಣ ಪಡೆದು, ದೊಡ್ಡ ಹುದ್ದೆಯಲ್ಲಿರುವವರು ಹೆತ್ತವರನ್ನು ವೃದ್ಧಾಶ್ರಮಕ್ಕೆ ತಳ್ಳುತ್ತಿದ್ದಾರೆ. ಈ ವ್ಯವಸ್ಥೆಗೆ ಪುರಾಣ ಪ್ರವಚನದಂತಹ ಧಾರ್ಮಿಕ ಕಾರ್ಯಕ್ರಮಗಳಿಂದ ಯುವಜನಾಂಗ ವಿಮುಖರಾಗುತ್ತಿರುವುದೇ ಕಾರಣ ಎಂದು ವಿವರಿಸಿದರು.
ಪುರಾಣ ಕಾರ್ಯಕ್ರಮವನ್ನು ಕಲಬುರಗಿ ದಕ್ಷಿಣ ವಿಧಾನಸಭಾ ಮತಕ್ಷೇತ್ರ ಶಾಸಕ ಅಲ್ಲಮ್‌ಪ್ರಭು ಪಾಟೀಲರ ಪುತ್ರ, ಕಾಂಗ್ರೆಸ್ ಯುವ ಮುಖಂಡ ಶರಣಗೌಡ ಪಾಟೀಲರು ಜ್ಯೋತಿ ಬೆಳಗುವ ಮೂಲಕ ಚಾಲನೆ ಮಾಡಿದರು. ವೇದಿಕೆ ಮೇಲೆ ಜೋಗೂರಿನ ಗುರುಲಿಂಗಯ್ಯ ಸ್ವಾಮಿ ಗಣಾಚಾರಿ, ಕಡಣಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮಲ್ಲೇಶಪ್ಪ ಇಸರಿ, ನಿರ್ದೇಶಕರುಗಳಾದ ಭೀಮಶಾ ಪಾಟೀಲ, ಗುಂಡೇರಾಯ ಈಶ್ವರಪ್ಪ ಕರಿಕಲ್, ಅಶೋಕ ಹದರಿ, ಶ್ಯಾಮರಾವ ಸೋನಾರ, ರಾಜಶೇಖರ ಕಡ್ಲಾ, ತೇಜಿರಾಯ ಆಲಗೂಢ, ಸೇರಿದಂತೆ ಅನೇಕರು ಅತಿಥಿಗಳಾಗಿ ಆಗಮಿಸಿದರು. ನ್ಯಾಯವಾದಿ ದೇವೆಂದ್ರ ಎಕಲೂರ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.
ಖ್ಯಾತ ಗವಾಯಿಗಳಾದ ಸಂತೋಷ ಹರಸೂರಮಠ ಅವರ ಸಂಗೀತ ಕಾರ್ಯಕ್ರಮಕ್ಕೆ ಸುರೇಶ ಆಳಂದ ತಬಲಾ ಸಾಥ್ ನೀಡಿದರು. ಚನ್ನಬಸಪ್ಪ ದ್ಯಾವಪಗೋಳ ಪುರಾಣಕ್ಕೆ ಬಸವಣ್ಣನಾಗಿ ಉಪಸ್ಥಿತರಿದ್ದರು
.
