ಸಾಹಿತ್ಯ, ಮಾಧ್ಯಮ ಮತ್ತು ಸಮಾಜಸೇವೆಯ ತ್ರಿವೇಣಿ ಸಂಗಮ: ಡಾ. ಪೆರ್ಲರ ಕಥಾನಕ

ಸಾಹಿತ್ಯ, ಮಾಧ್ಯಮ ಮತ್ತು ಸಮಾಜಸೇವೆಯ ತ್ರಿವೇಣಿ ಸಂಗಮ: ಡಾ. ಪೆರ್ಲರ ಕಥಾನಕ

ಸಾಹಿತ್ಯ, ಮಾಧ್ಯಮ ಮತ್ತು ಸಮಾಜಸೇವೆಯ ತ್ರಿವೇಣಿ ಸಂಗಮ: ಡಾ. ಪೆರ್ಲರ ಕಥಾನಕ

ಲೇಖನ: ಶರಣಗೌಡ ಪಾಟೀಲ್ ಪಾಳಾ

ಮಾನವ ಮನಸ್ಸಿಗೆ ಮರುಳು ಬೀಳಿಸುವ ಶಬ್ದದ ಸಪ್ತಸ್ವರಗಳನ್ನು ನುಡಿಸುವ ಮೂಲಕ ಸಾವಿರಾರು ಹೃದಯಗಳಿಗೆ ಸ್ಪರ್ಶ ನೀಡಿದ ವ್ಯಕ್ತಿ ಡಾ. ಸದಾನಂದ ಪೆರ್ಲ. ಅವರು ತಮ್ಮ ವಿಶಿಷ್ಟ ಶೈಲಿಯ ಮೂಲಕ ಸಾಹಿತ್ಯ, ಮಾಧ್ಯಮ ಮತ್ತು ಸಮಾಜಸೇವೆ ಈ ಮೂರು ಕ್ಷೇತ್ರಗಳ ಸಂಯೋಜಿತ ಸಾಧಕನಾಗಿ ಬೆಳಗಿದ್ದಾರೆ. ಕರಾವಳಿಯ ಗಡಿನಾಡಿನಲ್ಲಿ ಹುಟ್ಟಿ, ಕಲಬುರ್ಗಿಯ ಬಿಸಿಲು, ಭಾವನೆ, ಸೇವೆಗೆ ಸೇತುವೆಯಾದ ಅವರ ಜೀವನವೊಂದು ಮಾದರಿ.

ಮಾಧ್ಯಮ ಸೇವೆಯ ಮಹೋತ್ಸವ

ಆಕಾಶವಾಣಿಯ ವೃತ್ತಿ ಸೇವೆಯಲ್ಲಿ 24 ವರ್ಷಗಳ ಕಾಲ ಕಾರ್ಯಕ್ರಮ ವಿಭಾಗದ ಪ್ರಮುಖ ಸ್ಥಾನವನ್ನು ನಿರ್ವಹಿಸಿರುವ ಅವರು, ಧ್ವನಿಯ ಲೋಕದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆಯ ಹೊಸ ಪ್ರಮಾಣಿತಗಳನ್ನು ಸ್ಥಾಪಿಸಿದರು. ಅವರ ಮಾತುಗಳಲ್ಲಿ ಕೇವಲ ನುಡಿಗಳು ಅಲ್ಲ, ಬದ್ಧತೆಯ ಮಂತ್ರಗಳು ಅರಳುತ್ತವೆ . ಮಾಧ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿದ ಅವರು ಪತ್ರಿಕೋದ್ಯಮ ಲೋಕವನ್ನು ಪ್ರವೇಶಿಸಿದವರು. ಕಾಸರಗೋಡಿನಲ್ಲಿ ಸಂಜೆದನಿಕ ಪ್ರತಿ ಸೂರ್ಯ ಪತ್ರಿಕೆಯ ವರದಿಗಾರ, ಸಹಸಂಪಾದಕ ನಾಗಿ ಪತ್ರಿಕಾ ರಂಗಕ್ಕೆ ಕಾಲಿಟ್ಟ ನಂತರ ಬೆಂಗಳೂರಿನಲ್ಲಿ "ಸಂಯುಕ್ತ ಕರ್ನಾಟಕ" ಪತ್ರಿಕೆಯಲ್ಲಿ ಉಪಸಂಪಾದಕ ಮತ್ತು ವರದಿಗಾರನಾಗಿ ಕಾರ್ಯನಿರ್ವಹಿಸಿದರು. ಪೆರ್ಲ, ಪತ್ರಿಕೋದ್ಯಮ ಕ್ಷೇತ್ರದಲ್ಲೂ ತಾವು ವೃತ್ತಿ ನೈಪುಣ್ಯತೆ ತೋರಿಸಿ ವರದಿ ವಿಶೇಷ ಲೇಖನ ಬರೆದು ಸಹಿ ಎನಿಸಿಕೊಂಡರು.

ಸಾಹಿತ್ಯ ಸೇವೆಯ ಪ್ರಜ್ವಲನೆ

ಸಾಹಿತ್ಯ ಎನ್ನುವುದು ಅವರ ಮನಸ್ಸಿನ ದ್ವಾರವಾಗಿ ಹಾದು ಹೋಗುವ ಮಾರ್ಗ. ಸಾಮಾಜಿಕ ನೈತಿಕತೆ, ಭಾಷಾ ಹಕ್ಕುಗಳು, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳ ಸಂಕೀರ್ಣತೆಯನ್ನು ಅವರು ತಮ್ಮ ಸಾಹಿತಿಕ ಬರಹಗಳು ಹಾಗೂ ಕೃತಿಗಳ ಮೂಲಕ ಪ್ರಜ್ಞಾಪೂರ್ಣವಾಗಿ ಅನಾವರಣ ಮಾಡಿದ್ದಾರೆ. ವಾಗ್ ವೈಖರಿಯ ವಾಗ್ಮಿಯಾಗಿ ನಿರರ್ಗಳವಾಗಿ ಅತ್ಯಂತ ಸ್ಪಷ್ಟ ಮತ್ತು ನಿಖರವಾಗಿ ಭಾಷಾ ಶುದ್ದಿಯಿಂದ ಸಹೃದಯರ ಮನ ಮುಟ್ಟುವವರು.

      ಕಾಸರಗೋಡಿನ ಕನ್ನಡ ಹೋರಾಟ – ಭಾಷಾ ಹಕ್ಕುಗಳ ದೃಷ್ಟಿಕೋನದಿಂದ ಮೆರುಗಾಗಿಸಿದ ಅಖಂಡ ದಾಖಲಾತಿಯಾಗಿದೆ.

ಶರಣ ಹೆಂಡದ ಮಾರಯ್ಯ, ಒಂದಿಷ್ಟು ಮಾತು, ಮಧ್ಯಮ ಮಾರ್ಗ, ಹರ್ಷದ ಅತಿಥಿ , ಅನನ್ಯ ಮಹಾದೇವ ನಾರಾಯಣ ಗುರು ಮುಂತಾದ ಕೃತಿಗಳು ಸಮಾಜದ ಒಳಗೆ ಪ್ರತ್ಯಕ್ಷವಾಗದ ಆದರೆ ಪ್ರಭಾವಶಾಲಿಯಾದ ಪರಿಣಾಮವನ್ನುಂಟು ಮಾಡುವ ಸಾಹಿತ್ಯದ ಲಾಲಿತ್ಯದಿಂದ ಚಿತ್ರಿಸುತ್ತವೆ.

ಅನನ್ಯ ಮಹಾದೇವ (ಸಂಪಾದಿತ ಕೃತಿ), ನಾರಾಯಣ ಗುರು – ಇವು ಅವರ ವಿಶ್ಲೇಷಕ ದೃಷ್ಟಿಕೋಣದ ದೀಪ್ತಿಯಾಗಿದೆ.

ಯಾದಗಿರಿಯಿಂದ ಪ್ರಕಟವಾಗುವ "ಕರ್ನಾಟಕ ಭಾಗ್ಯ" ಪತ್ರಿಕೆಯಲ್ಲಿ ಅವರು ಬರೆಯುವ "ಅಕ್ಷರ ಯಾನ" ಅಂಕಣವು ವೈಚಾರಿಕ ಚಿಂತನೆಗೆ ನೂತನ ಕಿರಣ ಹರಡಿದ್ದು, ಪ್ರಾದೇಶಿಕ ಪತ್ರಿಕೋದ್ಯಮದ ಅಂ ತಃಸತ್ವದ ಮಟ್ಟವನ್ನು ಹೆಚ್ಚಿಸಲು ಶ್ರೇಷ್ಠ ಪ್ರಯತ್ನವಾಗಿದೆ.

ಸಮಾಜ ಮತ್ತು ಸಾಂಸ್ಕೃತಿಕ ಸೇವೆಯ ಶಕ್ತಿಕೇಂದ್ರ

ಡಾ. ಪೆರ್ಲ ಅವರು 60 ವರ್ಷಗಳನ್ನು ಕಂಡ ದಕ್ಷಿಣ ಕನ್ನಡ ಸಂಘದ ಸಾರಥ್ಯ ವಹಿಸಿದವರು. ಇದು ಪ್ರಮುಖ ಸಾಂಸ್ಕೃತಿಕ ಸೇವಾ ಸಂಸ್ಥೆಯಾಗಿದ್ದು ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಶರಣರ ನಾಡು ಮತ್ತು ಕರಾವಳಿಯ ನಾಡಿನ ನಡುವಿನ ಸಾಂಸ್ಕೃತಿಕ ಸೇತುಬಂಧ ಏರ್ಪಡಿಸಿದವರು, ಈ ಭಾಗದ ಜನತೆಗೆ ಅನನ್ಯ ಸೇವೆ ಸಲ್ಲಿಸಿದ್ದಾರೆ.

ವಿಶಿಷ್ಟ ಸಾಧನೆಗಳು:

ಸಮುದಾಯ ಬಾನುಲಿಯ ಕುರಿತು ವಿಶೇಷ ಅಧ್ಯಯನ ಮಾಡಿ, ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಉಪನ್ಯಾಸಗಳ ಮೂಲಕ ತಮ್ಮ ವಿಶ್ಲೇಷಣಾ ಶಕ್ತಿ ಪ್ರದರ್ಶಿಸಿದ್ದಾರೆ.

ಮಾಧ್ಯಮ ಮತ್ತು ಸಾಹಿತ್ಯ ಸಂಬಂಧಿತ ಹಲವಾರು ಪ್ರಬಂಧಗಳನ್ನು ಮಂಡಿಸಿ, ವೈಚಾರಿಕ ವಲಯವನ್ನು ಬೆಳೆಸಿದ್ದಾರೆ.

     ಸುಮಾರು 2500ಕ್ಕೂ ಅಧಿಕ ಲೇಖನಗಳನ್ನು ಬರೆದು ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿ, ತಮ್ಮ ಅಂಕಣ ಬರಹದ ಶಕ್ತಿಯನ್ನು ಸಮರ್ಥವಾಗಿ ಬಳಕೆ ಮಾಡಿದ್ದಾರೆ.

ಪ್ರಶಸ್ತಿ ಮುಡಿಗೆ

2013ರ ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಶಸ್ತಿಗೆ ಭಾಜನರಾದವರು. ಡಿ ದೇವರಾಜ ಅರಸು ಮತ್ತು ಬಂಗಾರಪ್ಪ ಪ್ರತಿಷ್ಠಾನದ ಪ್ರಶಸ್ತಿ ಹಾರಕೂಡದ ಚೆನ್ನರತ್ನ ಪ್ರಶಸ್ತಿ ಕರ್ನಾಟಕ ತುಳು ಅಕಾಡೆಮಿಯ ಮಾಧ್ಯಮ ಗೌರವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

    ಕಲಬುರಗಿಯ ಚೇಂಬರ್ ಆಫ್ ಕಾಮರ್ಸ್ ಜೊತೆ ಕೈಜೋಡಿಸಿ ವಿವಿಧ ನಗರಾಭಿವೃದ್ಧಿ ಯೋಜನೆಗಳಲ್ಲಿ ಪಾಲ್ಗೊಂಡಿದ್ದಾರೆ.

ಪ್ರಾದೇಶಿಕ ಅಭಿವೃದ್ಧಿಗೆ ವಿಶೇಷ ಕಾಳಜಿ:

ಕಲಬುರಗಿ–ಬೆಂಗಳೂರು ನಡುವೆ ನಿತ್ಯ ವಿಮಾನ ಸೇವೆ ಆರಂಭವಾಗಬೇಕು ಹಾಗೂ ಮುಂಬೈ, ದೆಹಲಿ, ಮಂಗಳೂರು ಸೇರಿದಂತೆ ಇತರೆ ಮಹತ್ವದ ನಗರಗಳೊಂದಿಗೆ ನೇರ ವಿಮಾನ ಸಂಪರ್ಕ ಕಲ್ಪಿಸಬೇಕು ಎಂಬ ಘನ ದೃಷ್ಟಿಕೋನವನ್ನು ಇಟ್ಟುಕೊಂಡು, ಡಾ. ಸದಾನಂದ ಪೆರ್ಲ ಅವರು ಮಾಜಿ ಸಂಸದ ಡಾ. ಉಮೇಶ್ ಜಾಧವ್ ಅವರ ಜೊತೆಗೂಡಿ ಸತತವಾಗಿ ಕೇಂದ್ರ ಸಚಿವರು ಹಾಗೂ ದೆಹಲಿಯ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಬದ್ಧತೆಯಿಂದ ಕೆಲಸ ನಿರ್ವಹಿಸಿದ್ದಾರೆ. ಇದು ಈ ಭಾಗದ ಉನ್ನತ ಭವಿಷ್ಯಕ್ಕಾಗಿ ಅವರ ಶ್ರದ್ಧೆಯ ಸಂಕೇತವಾಗಿದೆ. 

ತ್ರಿವೇಣಿ ಸಂಗಮದ ಸೇವೆ

ಡಾ. ಸದಾನಂದ ಪೆರ್ಲ ಅವರ ಜೀವನ, ಕಾರ್ಯ, ಬರಹ, ಧ್ವನಿ ಮತ್ತು ಸೇವೆ – ಇವು ಎಲ್ಲವೂ ಒಟ್ಟಾಗಿ ಅವರದು ಕೇವಲ ವ್ಯಕ್ತಿ ಪರಿಚಯವಲ್ಲ, ಕರ್ನಾಟಕದ ಸಾಹಿತ್ಯ-ಮಾಧ್ಯಮ ಸಾಮಾಜಿಕ ಸೇವೆ ದಿಗಂತದಲ್ಲಿ ಪ್ರಜ್ವಲಿಸಿದ ದೀಪದಂತೆ. ಅವರು ನಡೆಸುತ್ತಿರುವ ಜೀವನಪಥ, ಮುಂದಿನ ತಲೆಮಾರಿಗೆ ಮಾರ್ಗದರ್ಶನದ ದೀಪವನ್ನೇ ಹಚ್ಚುತ್ತದೆ. ತ್ರಿವೇಣಿ ಸಂಗಮದ ಅನುಭವವನ್ನು ತಂದುಕೊಡುವ ವ್ಯಕ್ತಿತ್ವ.

     ಕೇರಳದ ಗಡಿನಾಡು ಕಾಸರಗೋಡಿನ ಪೆರ್ಲ ಜನ್ಮ ಭೂಮಿಯಾದರೂ ಕರ್ಮಭೂಮಿ ಯಾದದ್ದು ಕರ್ನಾಟಕದ ಮಣ್ಣು.ಕಲಬುರಗಿಯಲ್ಲಿ. ಕಾಸರಗೋಡಿನ ಸಂಜೆ ದೈನಿಕ "ಪ್ರತಿ ಸೂರ್ಯ" ಪತ್ರಿಕೆ ಮೂಲಕ ಮಾಧ್ಯಮ ಲೋಕಕ್ಕೆ ಪ್ರವೇಶಿಸಿದರು. ಬಳಿಕ ಬೆಂಗಳೂರಿನಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಉಪಸಂಪಾದಕ, ವರದಿಗಾರನಾಗಿ ಕಾರ್ಯನಿರ್ವಹಿಸಿ ಆನಂತರ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಪ್ರಸಾರ ಭಾರತೀಯ ಆಕಾಶವಾಣಿಯ ಕೇಂದ್ರದಲ್ಲಿ ಪ್ರಸಾರ ನಿರ್ವಾಹಕ ಹುದ್ದೆಗೆ ಕಲಬುರ್ಗಿಯಲ್ಲಿ 1994 ರಲ್ಲಿ ಸೇರ್ಪಡೆಗೊಂಡರು. ನಂತರ ಭಡ್ತಿ ಹೊಂದಿ ಕಾರ್ಯಕ್ರಮ ನಿರ್ವಹಣಾಧಿಕಾರಿಯ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸಿ ಹಿಂದುಳಿದ ಪ್ರದೇಶವೆಂಬ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಾನುಲಿಯ ಮೂಲಕ ವಿಧಾಯಕ ಕೆಲಸಗಳನ್ನು ಮಾಡಿ ಜನಧ್ವನಿಯಾಗಿ ಆಕಾಶವಾಣಿಯನ್ನು ಎದ್ದು ನಿಲ್ಲುವಂತೆ ಮಾಡಿದ್ದು ಅವರ ಸಾಧನೆಯ ಹೆಜ್ಜೆ ಗುರುತುಗಳು. ಸ್ವಲ್ಪ ಕಾಲ ಆಕಾಶವಾಣಿ ಕೇಂದ್ರದ ಪ್ರಭಾರಿ ನಿರ್ದೇಶಕರ ಹುದ್ದೆಯನ್ನು ಕೂಡಾ ನಿರ್ವಹಿಸಿ ಆಡಳಿತ ಮತ್ತು ಕಾರ್ಯಕ್ರಮದಲ್ಲಿ ಶಿಸ್ತು, ಬದ್ಧತೆ, ವೈಶಿಷ್ಟ್ಯತೆಯನ್ನು ತಂದುಕೊಟ್ಟು ಆಕಾಶವಾಣಿಗೆ ಮೆರುಗು ಹೆಚ್ಚಿಸಿದವರು. ಆಕಾಶವಾಣಿ ಎಂದರೆ ಪೆರ್ಲ, ಪೆರ್ಲ ಎಂದರೆ ಆಕಾಶವಾಣಿ ಎನ್ನುವಷ್ಟರ ಮಟ್ಟಿಗೆ ಭಾವನಾತ್ಮಕ ಮತ್ತು ಅವಿನಾಭಾವ ಸಂಬಂಧ ಇಟ್ಟುಕೊಂಡವರು. ಸರಕಾರಿ ಹುದ್ದೆಗೆ ಗೌರವ ತಂದುಕೊಟ್ಟ ಒಬ್ಬ ನಿಸ್ಪೃಹ, ದಕ್ಷ ಮತ್ತು ಭವಿಷ್ಯದ ಚಿಂತಕ ಎಂಬ ಹೆಗ್ಗಳಿಕೆಯನ್ನು ಗುರುತಿಸಿಕೊಂಡವರು. ಮಾಧ್ಯಮಯಾನವಾಗಲಿ ಸಾಹಿತ್ಯ ಯಾನವಾಗಲಿ, ಸಮಾಜಮುಖಿಯಾನವಾಗಲಿ ಎಲ್ಲದರಲ್ಲೂ ಸಹಿ ಎನಿಸಿಕೊಂಡು ಆನಂದದ ಹೆಜ್ಜೆಗಳನ್ನು ಮೂಡಿಸಿದವರು. ಸ್ನೇಹ ಪರ ಜೀವಿಯಾಗಿ ಅಜಾತಶತ್ರುವಾಗಿ ಎಲ್ಲರೊಳಗೊಂದಾಗು ಎನ್ನುವಂತೆ ಜೀವನದಲ್ಲಿ ಹೆಜ್ಜೆ ಇಟ್ಟವರು. ಪ್ರಖರ ಅಧ್ಯಯನ ಸಂಶೋಧನಕಾರರಾಗಿ, ಸ್ಪಷ್ಟ ನಿಲುವು ಹೊಂದಿದ ಪೆರ್ಲ ಅವರ ನಡೆ ಮಾದರಿ ಎನ್ನುವಂತಿದೆ. "ಸೇವೆಗಾಗಿ ಬಾಳು" ಎಂಬುದು ಅವರ ಮೂಲ ಮಂತ್ರ. ಸಕಲರಿಗೂ ಪ್ರೀತಿಯ ಧಾರೆಯನ್ನು ಹಂಚಿ ವ್ಯಕ್ತಿತ್ವಕ್ಕೆ ಮೆರುಗು ತಂದವರು.ಪೆರ್ಲ ಎನ್ನುವ ಊರಿಗೆ ಮತ್ತು ಅವರು ಸೇವೆ ಸಲ್ಲಿಸಿದ ಸಂಸ್ಥೆಗೆ ಗೌರವ ಹಿರಿಮೆಯನ್ನು ತಂದುಕೊಟ್ಟ ಅಪೂರ್ವ ವ್ಯಕ್ತಿತ್ವ. ನಾಡಿನ ತುಂಬೆಲ್ಲ ಪೆರ್ಲ ಎನ್ನುವ ಹೆಸರು ಇಂದು ಜನಜನಿತವಾಗಿದೆ. ಮಾಧ್ಯಮ, ಸಾಹಿತ್ಯ, ಸಮಾಜ ಸೇವೆ ಈ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಎತ್ತರದ ವ್ಯಕ್ತಿತ್ವವನ್ನು ಹೊಂದಿರುವುದು ಹೆಮ್ಮೆಯ ಸಂಗತಿ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು 20 ವರ್ಷಗಳ ಕಾಲ ಆಕಾಶವಾಣಿಯಲ್ಲಿ ನಿರಂತರ ಸೇವೆಯ ಮೂಲಕ ಮನ ಮನಕ್ಕೂ, ಮನೆಮನೆಗೂ ಪೆರ್ಲ ಎಂಬ ಹೆಸರು ಚಿರಪರಿಚಿತವಾಗಿದೆ. ಸದ್ಯ ಕಲಬುರಗಿ ದೂರದರ್ಶನ ಚಂದನ ವಾಹಿನಿಯ ಮೂಲಕ ಈ ಭಾಗದ ಪ್ರತಿಭಾವಂತರಿಗೆ ಮತ್ತು ಕಲೆ, ಸಂಸ್ಕೃತಿ, ಸಾಹಿತ್ಯ ರಂಗಕ್ಕೆ ಕಾರ್ಯಕ್ರಮಗಳಲ್ಲಿ ಆದ್ಯತೆ ನೀಡಿ ವಿಶೇಷ ನಿರೂಪಕರಾಗಿ ಸೇವೆ ಮುಂದುವರಿಸುತ್ತಿರುವುದು ವಿಶೇಷವಾಗಿದೆ. ಜಾತಿ, ಮತ, ಪಂಥ, ಪಕ್ಷ ಪಂಗಡಗಳೆಂಬ ಭೇದವಿಲ್ಲದೆ ಎಲ್ಲರ ಜೊತೆ ಬೇರೆಯುವ ವಿಶಿಷ್ಟ ವ್ಯಕ್ತಿತ್ವದ ಪೆರ್ಲ ಮಾಧ್ಯಮ ಸಾಹಿತ್ಯ ಸಮಾಜ ತ್ರಿವೇಣಿ ಸಂಗಮಗಳ ಸಂಗಮವಾಗಿ ಇಂದು ಎತ್ತರದ ಸ್ಥಾನದ ಪಡೆದಿರುತ್ತಾರೆ. ಸರಕಾರಿ ಹುದ್ದೆಯಿಂದ ನಿವೃತ್ತರಾದರೂ ಅವರ ಸೇವೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗಲೂ ಲಭಿಸುತ್ತಿರುವುದು ಈ ಭಾಗದ ಮೇಲಿನ ಪ್ರೀತಿ ಮತ್ತು ವಿಶ್ವಾಸದ ದ್ಯೋತಕವೆಂದೆ ಹೇಳಬೇಕು.

ತುಳು ಭಾಷೆಗೆ ಕೊಡುಗೆ

ಡಾ. ಪೆರ್ಲ ಅವರ ಮಾತೃಭಾಷೆ ತುಳು. ಮಂಗಳೂರು ಆಕಾಶವಾಣಿಗೆ ವರ್ಗಾವಣೆ ಹೊಂದಿದ ಮೇಲೆ ಅಲ್ಲಿನ ತುಳು ವಿಭಾಗಕ್ಕೆ ಒಂದು ಹೊಸ ಸ್ಪರ್ಶವನ್ನು ನೀಡಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ತುಳು ಭಾಷಾ ಬೆಳವಣಿಗೆಗೆ ವಿಶೇಷ ಕೊಡುಗೆ ಸಲ್ಲಿಸಿದ್ದಾರೆ. *ಗಾಂಪಣ್ಣನ ತಿರ್ಗಾಟ* ಎಂಬ ವಿಶೇಷ ಸರಣಿಯ ಮೂಲಕ ತುಳುನಾಡು ಮತ್ತು ಕರಾವಳಿಯ ಸಾಂಸ್ಕೃತಿಕ ವೈವಿಧ್ಯವನ್ನು ಬಾನುಲಿಯ ಮೂಲಕ ಬಿತ್ತರಿಸಿ ಪ್ರಸಾರಕ್ಕೆ ದೊಡ್ಡ ಕೊಡುಗೆಯನ್ನು ಸಲ್ಲಿಸಿದಂತಾಗಿದೆ. ಮಂಗಳೂರು ಆಕಾಶವಾಣಿಯ ತುಳು ವಿಭಾಗಕ್ಕೆ ಸುವರ್ಣ ಯುಗ ಎಂದು ಹೇಳುವಷ್ಟು ತುಳು ಕಾರ್ಯಕ್ರಮಗಳನ್ನು ವೈಶಿಷ್ಟ್ಯ ಪೂರ್ಣವಾಗಿ ಬಿತ್ತರಿಸಿರುವುದು ಇವರ ಪ್ರತಿಭಾವಂತ ಮನಸ್ಸಿನ ರೂಪವಾಗಿದೆ. ಮಕ್ಕಳು, ಯುವಕರು ಹಿರಿಯ ನಾಗರಿಕರು, ಸಾಂಸ್ಕೃತಿಕ ಲೋಕದಲ್ಲಿ ಇರುವವರು ಎಲ್ಲರನ್ನು ಒಗ್ಗೂಡಿಸಿರುವುದು ವಿಶೇಷವಾದಂತದ್ದು.

       ಸಿರಿ ದೊಂಪ, ಜವ್ವನೆರೆಕಲ, ಸ್ವರ ಮಂಟಮೆ, ಚಾವಡಿ ಮದಿಪು ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ವಿಶೇಷವಾಗಿ ಬಿತ್ತರಗೊಳಿಸಿರುವುದು ಮಂಗಳೂರು ಆಕಾಶವಾಣಿಗೆ ಹೆಮ್ಮೆ ತಂದಿದೆ. ಕನ್ನಡ ಮತ್ತು ತುಳು ಕೃತಿಗಳನ್ನು ಹಾಗೂ ಸಿನಿಮಾ ಹಾಡುಗಳನ್ನು 

*ಸ್ವರ ಮಂಟಮೆ* ಕಾರ್ಯಕ್ರಮದ ಮೂಲಕ ಬಿಡುಗಡೆ ಮಾಡಿ ಸಾಹಿತ್ಯ ಮತ್ತು ಸಿನಿಮ ರಂಗವನ್ನು ಬಾನುಲಿಯ ಜೊತೆ ಜೋಡಣೆ ಮಾಡಿದ್ದು ಇವರ ಇನ್ನೊಂದು ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮವಾಗಿದೆ. ಸ್ವರದಲ್ಲೇ ವೇದಿಕೆ ಸಭಾ ಕಾರ್ಯಕ್ರಮ ಅಪೂರ್ವ ಪ್ರಯೋಗವಾಗಿದೆ. ಮಂಗಳೂರು ಆಕಾಶವಾಣಿಯಲ್ಲಿ ಮೊಟ್ಟ ಮೊದಲ ಬಾರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳನ್ನು ಹಾಗೂ ಕುದ್ರೋಳಿ ಕೊಲ್ಲೂರು, ಧರ್ಮಸ್ಥಳ ಮುಂತಾದ ಜಾತ್ರೋತ್ಸವಗಳ ಹಾಗೂ ಕರಾವಳಿ ಉತ್ಸವ, ಆಳ್ವಾಸ್ ನುಡಿಸಿರಿ, ಕರ್ಣಾ ಟಕ ಬ್ಯಾಂಕ್ ಸಂಸ್ಥಾಪನಾ ದಿನ ಹೀಗೆ ನೇರ ಪ್ರಸಾರದ ಮೂಲಕ ಮನೆ ಮನೆಗೆ ಮುಟ್ಟಿರುವುದು ಇವರ ಸಾಧನೆಯ ಹೆಜ್ಜೆಗಳಲ್ಲಿ ಗುರುತಿಸಬಹುದಾದದ್ದು.

ಕೌಟುಂಬಿಕ ಹಿನ್ನಲೆ

ಕೇರಳದ ನಾಡು ಕಾಸರಗೋಡು ಜಿಲ್ಲೆಯ ಪೆರ್ಲ ಸಮೀಪದ ಬಜಕೂಡ್ಲು ಎಂಬಲ್ಲಿ ದಿ. ಮಾನಪ್ಪ ಪೂಜಾರಿ ಮತ್ತು ದಿ. ರಾಧಮ್ಮ ಅವರ ಮೊದಲ ಮಗನಾಗಿ 1963 ಮೇ 30ರಂದು ಜನಿಸಿದರು. ತೀರಾ ಬಡತನದ ಕುಟುಂಬದ ಬಿಲ್ಲವ (ಈಡಿಗ) ಸಮುದಾಯದ ಪ್ರತಿಭಾವಂತ ವ್ಯಕ್ತಿಯಾಗಿ ವ್ಯಕ್ತಿತ್ವ ಅರಳಲು ಅವರಿಗೆ ಬಾಲ್ಯ ಶಿಕ್ಷಣ ಹಾಗೂ ಪರಿಸರ ತುಂಬಾ ಪ್ರೇರಣೆ ನೀಡಿತು. ಯಕ್ಷಗಾನದ ತವರು ಭೂಮಿ ಕುಂಬಳೆಯ ಪಾರ್ತಿಸುಬ್ಬನ ನಾಡಿನಿಂದ ಯಕ್ಷಗಾನ ಸಾಹಿತ್ಯದ ಅಭಿರುಚಿಯನ್ನು ತಮ್ಮ ವಿದ್ವತ್ತಿಗೆ ಬಳಸಿಕೊಂಡರು. ಪೆರ್ಲದ ಯಕ್ಷಗಾನದ ದಿಗ್ಗಜ, ಪೆರ್ಲ ಪಂಡಿತರೆಂದೇ ಖ್ಯಾತಿ ಪಡೆದ ದಿ.ಪೆರ್ಲ ಕೃಷ್ಣ ಭಟ್, ಯಕ್ಷಗಾನದ ಭಾಗವತರಾದ ದಿ. ಬಲಿಪ ನಾರಾಯಣ ಭಾಗವತರು, ಶ್ರೇಣಿ ಗೋಪಾಲಕೃಷ್ಣ ಭಟ್ ಮುಂತಾದ ಕಲಾವಿದರ ಪ್ರೇರಣೆ ಯಿಂದ ವ್ಯಕ್ತಿತ್ವವನ್ನು ಸಾಂಸ್ಕೃತಿಕವಾಗಿ ಅರಳಿಸುವಂತೆ ಬೆಳೆದರು. ಬ್ರಹ್ಮಶ್ರೀ ನಾರಾಯಣ ಗುರುಗಳ ಕಟ್ಟಾ ತತ್ವ ಪಾಲಕರಾದ ಡಾ. ಪೆರ್ಲ ಅವರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಸ್ನಾತಕೋತ್ತರ ಪದವಿಯ ನಂತರ ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಇನ್ ಜರ್ನಲಿಸಮ್ ಮುಗಿಸಿ ನಂತರ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಪಿ ಎಚ್ ಡಿ ಪದವಿ ಪಡೆದರು.

ಮಹೋನ್ನತ ಮಹಾಪ್ರಬಂಧ

ಕಾಸರಗೋಡಿನ ಮಣ್ಣಿಗೆ ಕೊಡುಗೆಯನ್ನು ನೀಡಬೇಕು ಎಂಬ ಏಕೈಕ ಕಾರಣದಿಂದ ಡಾ. ಪೆರ್ಲ ಅವರು ಕಾಸರಗೋಡಿನ ಕನ್ನಡದ ಹೋರಾಟ ಮತ್ತು ಅಲ್ಲಿನ ಸಾಂಸ್ಕೃತಿಕ ಸಿರಿವಂತಿಕೆಯನ್ನು ದಾಖಲು ಮಾಡಲು ಮಹಾಜನ ವರದಿಯ ಹಿನ್ನೆಲೆಯಲ್ಲಿ ಪಿಹೆಚ್ ಡಿ ಮಹಾ ಪ್ರಬಂಧ ಸಿದ್ಧಪಡಿಸಲು ನಿರ್ಧರಿಸಿದರು.

ನಾಡೋಜ ಡಾ.ಕಯ್ಯಾರ ಕಿಂಞಣ್ಣ ರೈಯವರನ್ನು ಪ್ರಾತಿನಿಧಿಕವಾಗಿ ಇಟ್ಟುಕೊಂಡು ಕಯ್ಯಾರರ ಸಾಹಿತ್ಯ ಮತ್ತು ಕಾಸರಗೋಡಿನ ಹೋರಾಟ ಎಂಬ ಮಹಾ ಪ್ರಬಂಧವನ್ನು ಮಂಡಿಸಿ ಪಿಹೆಚ್ ಡಿ ಪದವಿ ಪಡೆದಿದ್ದು ವಿಶೇಷ. ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆಯವರ ಅಮೃತ ಹಸ್ತದಿಂದ ಪಿಹೆಚ್ ಡಿ ಪದವಿ ಪಡೆದದ್ದು ಇವರ ಹೆಗ್ಗಳಿಕೆ. ಇದೀಗ ಈ ಮಹಾಪ್ರಬಂಧವು ಕಾಸರಗೋಡಿನ ಕನ್ನಡ ಹೋರಾಟದ ಬಗ್ಗೆ ಒಂದು ಆಕರ ಗ್ರಂಥವಾಗಿ ಎಲ್ಲರಿಗೂ ಮಾರ್ಗದರ್ಶಿಯಾಗಿದೆ.

ಆದರ್ಶ ಕುಟುಂಬ

ಡಾ. ಪೆರ್ಲ ಅವರು ಗಡಿನಾಡು ಮತ್ತು ಕರಾವಳಿಯವರು. ಆದರೆ ಅವರ ವೈವಾಹಿಕ ಸಂಬಂಧ ನಡೆದಿರುವುದು ಶರಣರ ಭೂಮಿಯಿಂದ. ಮೂಲತಃ ಸುರಪುರದವರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಕಿರಿಯ ಲೇಖಕರಾದ ಮಹಾದೇವಪ್ಪ ಕಡೇ ಚೂರ್ ಅವರ ಏಕೈಕ ಸುಪುತ್ರಿ, ಹಿರಿಯ ಆಯ್ಕೆ ಶ್ರೇಣಿಯ ಕೆಎಎಸ್ ಅಧಿಕಾರಿ ಶ್ರೀಮತಿ ಪ್ರಮೀಳಾ ಎಂ.ಕೆ ಪೆರ್ಲರ ಧರ್ಮ ಪತ್ನಿ. ಪ್ರಸ್ತುತ ಗುಲ್ಬರ್ಗ ವೈದ್ಯಕೀಯ ಕಾಲೇಜಿನ ಆಡಳಿತ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಇಬ್ಬರು ಸುಪುತ್ರರು. ಶ್ರೇಯಾಂಕ ಪೆರ್ಲ ಅಮೆಜಾನ್ ಕಂಪನಿಯಲ್ಲಿ ಉದ್ಯೋಗಿ. ಎರಡನೆಯವ ಪ್ರಾಂಜಲ್ ಪೆರ್ಲ ಮಂಗಳೂರು ಎ.ಜೆ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಎರಡನೇ ವರ್ಷದ ವಿದ್ಯಾರ್ಥಿ. ಇವರದು ಆದರ್ಶ ಕುಟುಂಬವಾಗಿದೆ.

ಸಾಹಿತ್ಯ ಮಾಧ್ಯಮ ಹಾಗೂ ಸಮಾಜಸೇವೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡ ಕ್ರಿಯಾಶೀಲ ಸರಳ ಸಜ್ಜನಿಕೆಯ ಡಾ. ಪೆರ್ಲ ಅವರ ತ್ರಿವೇಣಿ ಸಂಗಮದ ಯಾನ ನಿತ್ಯ ನಿರಂತರವಾಗಲಿ