ಪ್ರಭಾಕರ ಜೋಶಿ

ಪ್ರಭಾಕರ ಜೋಶಿ

ಪ್ರತಿಭೆಯ ಪ್ರಭೆ  : ಪ್ರಭಾಕರ ಜೋಶಿ      

ಪ್ರಭಾಕರ ಜೋಶಿ ಇವರು ಕಲಬುರಗಿ ಜಿಲ್ಲೆಯ ಸೇಡಮ್ ತಾಲೂಕಿನ ಚಂದಾಪುರ ಗ್ರಾಮದಲ್ಲಿ ತಾಯಿ ವನಿತಾ. ತಂದೆ ವೆಂಕಟೇಶ ಜೋಶಿ. ಇವರ ಉದರದಲ್ಲಿ 28 ಎಪ್ರಿಲ್ 1965 ರಂದು ಜನಿಸಿದರು. 

 ಹೆಗ್ಗೋಡಿನ ನೀನಾಸಂ ರಂಗ ಶಿಕ್ಷಣ ಕೇಂದ್ರದಿಂದ ಪದವಿ ಪಡೆದ ಕಲಬುರಗಿ ಜಿಲ್ಲೆಯ ಪ್ರಥಮ ವ್ಯಕ್ತಿ ಇವರು ಸಾಹಿತ್ಯ, ಪತ್ರಿಕೋದ್ಯಮ, ಪುಸ್ತಕ ಪ್ರಕಾಶನ, ಸಂಘಟನೆ ಹೀಗೆ ಅನೇಕ ಕ್ಷೇತ್ರಗಳಲ್ಲಿ ಕೃಷಿ ಕೈಗೊಂಡಿದ್ದಾರೆ.

    ನವರಂಗ ನಾಟ್ಯ ನಿಕೇತನ ಸಂಸ್ಥೆಯನ್ನು 1989 ರಲ್ಲಿ ಸ್ಥಾಪಿಸಿ,45 ರಂಗ ತರಬೇತಿ ಶಿಬಿರಗಳು, 24 ನಾಟಕಗಳ ನಿರ್ದೇಶನ,

12 ಮಕ್ಕಳ ರಂಗ ತರಬೇತಿ ಶಿಬಿರಗಳ ನಿರ್ದೇಶನ ಮಾಡಿ ನಾಡಿನ ಅನೇಕ ರಂಗ ಸಂಸ್ಥೆಗಳ ನಾಟಕ ಪ್ರದರ್ಶನದ ಆಯೋಜನೆ ಮಾಡಿದ್ದಾರೆ.ಇವರು ಕಲಬುರಗಿ ಆಕಾಶವಾಣಿಯ ಗ್ರೇಡ್ ಕಲಾವಿದರಾಗಿದ್ದಾರೆ.

         ಕರ್ನಾಟಕ ನಾಟಕ ಅಕಾಡೆಮಿ ಪ್ರಕಟಿಸಿದ ಕನ್ನಡದ ಪ್ರಮುಖ ನೂರು ಮಕ್ಕಳ ನಾಟಕಗಳ ಸಂಕಲನದಲ್ಲಿ ಇವರ ಎರಡು ನಾಟಕಗಳು ಸ್ಥಾನ ಪಡೆದಿವೆ. 

 ಒಂಬತ್ತು ನಾಟಕಗಳ ಸಂಕಲನವನ್ನು ಬೆಂಗಳೂರಿನ ಸಾಹಿತ್ಯ ಚಂದನ ಸಂಸ್ಥೆ ಪ್ರಕಟಿಸಿದೆ.ನಾಟಕಗಳ ಕುರಿತು ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಎಂಫಿಲ್ ಪದವಿ ಪ್ರದಾನ ಮಾಡಲಾಗಿದೆ. ಇವರ ಬದುಕು ಬರಹ ಕುರಿತು ಡಾ.ಭಾಗ್ಯಜ್ಯೋತಿ ರಚಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಗುಲ್ಬರ್ಗ ವಿಶ್ವವಿದ್ಯಾಲಯ ಪಿ.ಎಚ್. ಡಿ.ಪ್ರದಾನ ಮಾಡಿದೆ.ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಕವಿರಾಜಮಾರ್ಗ ಮತ್ತು ನಾಟ್ಯಶಾಸ್ತ್ರ ಕುರಿತು ವಿಶೇಷ ಪ್ರಬಂಧ ಮಂಡಿಸಿದ್ದಾರೆ. 

      6 ಕವನ ಸಂಕಲನಗಳು. ಎರಡು ಕಥಾ ಸಂಕಲನಗಳು. ಒಂದು ಕಾದಂಬರಿ. 11 ನಾಟಕಗಳು. ಎರಡು ಅಂಕಣ ಬರಹಗಳ ಕೃತಿಗಳು, ಮೂರು ವ್ಯಕ್ತಿಚಿತ್ರಣಗಳ ಕೃತಿಗಳು, ನಾಲ್ಕು ಅಭಿನಂದನಾ ಗ್ರಂಥಗಳ ಸಂಪಾದನೆ.ಏಳು ಸಂಕೀರ್ಣ ಕೃತಿಗಳು ಹಾಗೂ ಹನ್ನೆರಡು ಸ್ಮರಣ ಸಂಚಿಕೆಗಳನ್ನು ಪ್ರಕಟಿಸಿದ್ದಾರೆ.ಅನೇಕ ಸಾಹಿತ್ಯ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿ. 2013ರಲ್ಲಿ ಸೇಡಮ್ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದಾರೆ.2016ರಲ್ಲಿ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು.

      1986 ರಲ್ಲಿ ಪ್ರತಿಕೋದ್ಯಮ ಪ್ರವೇಶ.

ಬೆಂಗಳೂರಿನ ಪ್ರಿಯಾಂಕ ಪತ್ರಿಕೆಯಲ್ಲಿ ವರದಿಗಾರರಾಗಿ ಕಾರ್ಯನಿರ್ವಹಣೆ.

ವಾಹಿನಿ ವಾರ್ತೆಗಳು ಮಾಸಿಕ, ಪಾಕ್ಷಿಕ, ವಾರಪತ್ರಿಕೆ ಹಾಗೂ ದೈನಿಕ ಸ್ಥಾಪನೆ, 

ಕ್ರಾಂತಿ ದಿನಪತ್ರಿಕೆ, ವಿಜಯ ಕರ್ನಾಟಕ, ಉಷಾಕಿರಣ, ಕನ್ನಡಪ್ರಭ, ಉದಯವಾಣಿ ಹಾಗೂ ವಿಜಯವಾಣಿ ದಿನ ಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

ಸೇಡಂ ಪ್ರೆಸ್ ಕ್ಲಬ್ ಸ್ಥಾಪಕ ಅಧ್ಯಕ್ಷರಾಗಿ ಸೇವೆ,ಸೇಡಂ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಎರಡು ಅವಧಿಗೆ ಸೇವೆ,ಯುವ ಪತ್ರಿಕೋದ್ಯಮ ಆಸಕ್ತರಿಗಾಗಿ ವಾಸವಿ ಮಾಧ್ಯಮ ಕೇಂದ್ರ ಸ್ಥಾಪಿಸಿ, ಆ ಮೂಲಕ ಅನೇಕರಿಗೆ ಕೊರಿಯರ್ ಕೋಚಿಂಗ್ ಸರ್ಟಿಫಿಕೇಟ್ ಕೋರ್ಸ್ ರೂಪಿಸಿದ್ದಾರೆ.

ಪತ್ರಕರ್ತರಾಗುವುದು ಹೇಗೆ ? 

ದೂರದರ್ಶನ ಎಂಬ ಮಾಧ್ಯಮ ಸಾಹಿತ್ಯದ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ.

       ನಾಡಿನ ಬೇರೆ ಬೇರೆ ಲೇಖಕರ ವಿವಿಧ ಸಾಹಿತ್ಯ ಪ್ರಕಾರಗಳ 120ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. 

ಸಂಸ್ಕೃತಿ ಪ್ರಕಾಶನ ದಿಂದ ಸಾಹಿತ್ಯ ಕಮ್ಮಟಗಳನ್ನು ಆಯೋಜಿಸಿದ್ದಾರೆ. 

 ಸಂಸ್ಕೃತಿ ಪ್ರಕಾಶನದಿಂದ "ಸಂಸ್ಕೃತಿ ಸಮ್ಮಾನ್" ಪ್ರಶಸ್ತಿ ಸ್ಥಾಪಿಸಿ ಹೆಸರಾಂತ ಸಾಹಿತಿಗಳಾದ ಡಾ. ಎಸ್. ಎಲ್. ಭೈರಪ್ಪ, ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಮತ್ತು ಡಾ.ವಾಸುದೇವ ಅಗ್ನಿಹೋತ್ರಿ ಅವರಿಗೆ ನೀಡಿ ಗೌರವಿಸಿದ್ದಾರೆ. ಗಡಿನಾಡು ಕನ್ನಡಾಭಿವೃದ್ದಿ ಸಂಘ ಸ್ಥಾಪಿಸಿ ಆ ಮೂಲಕ ಜಿಲ್ಲೆಯ ವಿವಿಧ ಭಾಗದ ಗಡಿಗ್ರಾಮಗಳಲ್ಲಿಕನ್ನಡಿಗರ ಬದುಕು, ಭಾಷೆ, ಸಾಹಿತ್ಯದ ಅಭಿವೃದ್ಧಿಗೆ ವಿಶೇಷ ಸಮ್ಮೇಳನಗಳನ್ನು ಆಯೋಜಿಸಿದ್ದಾರೆ.

ನಾಡು-ನುಡಿಯ ಸೇವೆ ಸಲ್ಲಿಸಿದವರಿಗೆ 'ಗಡಿ ನುಡಿ ಗೌರವ ಪ್ರಶಸ್ತಿ' ನೀಡಿದ್ದಾರೆ. 

ರಾಜ್ಯದ ಪ್ರತಿಷ್ಠಿತ 'ಅಮ್ಮ ಪ್ರಶಸ್ತಿ' ಯ ಸ್ಥಾಪನೆಯ ಮೊದಲ ದಶಕದ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ.  

ಧಾರವಾಡ ರಂಗಾಯಣದ ಕಲಾವಿದರ ಆಯ್ಕೆ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಗುರುಮಠಕಲ್ ನ ಪ್ರಯೋಗ ಪ್ರತಿಷ್ಠಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 

ಕನ್ನಡದ ಖ್ಯಾತ ನಾಟಕಕಾರರ ಅನೇಕ ನಾಟಕಗಳನ್ನು ನಿರ್ದೇಶಿಸಿದ್ದಾರೆ.    ರಂಗಭೂಮಿ ಸೇವೆಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ.

ಕಾವ್ಯಕ್ಕೆ ಡಿವಿಜಿ ಪ್ರಶಸ್ತಿ.ನಾಟಕಕ್ಕೆ ಕೈಲಾಸಂ ಪ್ರಶಸ್ತಿ. ಅಂಕಣ ಸಾಹಿತ್ಯಕ್ಕೆ ಅಕ್ಷರ ಲೋಕದ ನಕ್ಷತ್ರ ಪ್ರಶಸ್ತಿ. ಪತ್ರಿಕೋದ್ಯಮಕ್ಕೆ ವಿಶ್ವ ಬಸವಾಂಬೆ ಪ್ರಶಸ್ತಿ. ಸಂಕೀರ್ಣ ಸಾಹಿತ್ಯಕ್ಕೆ ಲೋಹಿಯಾ ಪ್ರಶಸ್ತಿ. ಅಭಿನಂದನಾ ಗ್ರಂಥಕ್ಕೆ ವಿಶ್ವೇಶ್ವರಯ್ಯ ಪ್ರಶಸ್ತಿ. ನಂದಾದೀಪ ಪ್ರಶಸ್ತಿ. ಲೇಖನ ಸಾಹಿತ್ಯಕ್ಕೆ ಚೈತನ್ಯ ಪ್ರಭ ಪ್ರಶಸ್ತಿ. ಸಮಗ್ರ ಸಾಹಿತ್ಯಕ್ಕೆ ಫಲವಿದು ಬಾಳ್ದುದಕೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ. 

ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ರಚಿಸಿದ ಎಲ್ಲ ಪ್ರಕಾರಗಳಿಗೂ ಪ್ರಶಸ್ತಿ ಪಡೆದಿರುವುದು ವಿಶೇಷ.ಇವರು ಸ್ಥಾಪಿಸಿದ ಸಂಸ್ಕೃತಿ ಪ್ರಕಾಶನಕ್ಕೆ ಗುಲ್ಬರ್ಗ ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಕರ್ನಾಟಕ ಸರ್ಕಾರದ ರಂಗಾಯಣದ ನಿರ್ದೇಶಕರಾಗಿಸೇವೆ ಸಲ್ಲಿಸಿದ್ದಾರೆ.

ಭಾರತ ಸರ್ಕಾರದ ರಾಷ್ಟ್ರೀಯ ನಾಟಕ ಶಾಲೆ ನವದೆಹಲಿಯ ದಕ್ಷಿಣ ಭಾರತದ ಕೇಂದ್ರದ ಕಲಾವಿದರ ಆಯ್ಕೆ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ 

      ನೃಪತುಂಗ ಅಧ್ಯಯನ ಸಂಸ್ಥೆ ಸೇಡಂನ ಅಧ್ಯಕ್ಷರಾಗಿದ್ದಾರೆ,ಸೇಡಂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಯಾಗಿ ಸೇವೆ ಸಲ್ಲಿಸಿದ್ದಾರೆ,ರಾಜ್ಯದ ವಿವಿಧ ಸಂಘ ಸಂಸ್ಥೆಗಳ ಜೊತೆಗೆ ನಿಕಟ ಸಂಬಂಧವಿಟ್ಟುಕೊಂಡಿದ್ದಾರೆ,ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರದ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. 

-ಲೇಖಕರು ಸಿದ್ದರಾಮ ರಾಜಮಾನೆ 

    ನೀನಾಸಂ ಪದವಿದರರು, ರಂಗ ನಿರ್ದೇಶಕರು ಕಲಬುರಗಿ