ವಿವೇಚನಾಶೀಲ ಪತ್ರಕರ್ತ ದೇವಯ್ಯ ಗುತ್ತೇದಾರ್
ವಿವೇಚನಾಶೀಲ ಪತ್ರಕರ್ತ ದೇವಯ್ಯ ಗುತ್ತೇದಾರ
ದೇವಯ್ಯ ಗುತ್ತೇದಾರ್ ಅವರು ಕನ್ನಡ ನಾಡಿನ ಅಗ್ರಗಣ್ಯ ಪತ್ರಕರ್ತರಲ್ಲೊಬ್ಬರಾಗಿದ್ದು, ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲ್ಲೂಕಿನ ಭೈರಾಮಡಗಿ ಎಂಬಲ್ಲಿ 1977ರಲ್ಲಿ ದಸ್ತಯ್ಯ ಗುತ್ತೇದಾರ್ ಮತ್ತು ಶಾರದಾಬಾಯಿ ಗುತ್ತೇದಾರ್ ರವರ ಪುತ್ರನಾಗಿ ಜನಿಸಿದರು. ಸುಧಾ ಎಂಬ ಸುಸಂಸ್ಕೃತ ಕನ್ಯೆಯೊಂದಿಗೆ ವಿವಾಹವಾದ ಇವರಿಗೆ ಸಮೀಕ್ಷಾ ಮತ್ತು ಸ್ಕಂದ ಎಂಬ ಇಬ್ಬರು ಮಕ್ಕಳಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಪೂರ್ಣಗೊಳಿಸಿ ಕಾಲೇಜು ಶಿಕ್ಷಣವನ್ನು ಆಳಂದ ಪಟ್ಟಣದ ಸರಕಾರಿ ಪಿಯು ಕಾಲೇಜಿನಲ್ಲಿ ಪೂರೈಸಿದರು. ಪದವಿ ಶಿಕ್ಷಣವನ್ನು ಕಲಬುರಗಿಯ ಪ್ರತಿಷ್ಠಿತ ಶ್ರೀ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಿಂದ ಪಡೆದು, ಬಿ.ಎಡ್ ಶಿಕ್ಷಣವನ್ನು ಬೈಲಹೊಂಗಲದ ಕಿತ್ತೂರು ರಾಣಿ ಚೆನ್ನಮ್ಮ ಶಿಕ್ಷ ಣ ಸಂಸ್ಥೆಯಲ್ಲಿ ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ಪೂರ್ಣಗೊಳಿಸಿದರು.
ನಂತರ ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಎ. ಪತ್ರಿಕೋದ್ಯಮ ಪದವಿ ಪಡೆದುಕೊಂಡರು.
ದೇವಯ್ಯ ಗುತ್ತೇದಾರ್ ರವರು, ಬಿ. ಎ., ಬಿ.ಎಡ್. ಪದವಿ ಪಡೆದ ನಂತರ ಶಿಕ್ಷಕ ವೃತ್ತಿಗೆ ಹೋಗದೆ, ಪತ್ರಿಕೋದ್ಯಮ ಕ್ಷೇತ್ರವನ್ನು ಆಯ್ದುಕೊಂಡರು.
2002 ರಲ್ಲಿ ‘ಕ್ರಾಂತಿ’ ಪತ್ರಿಕೆಯಿಂದ ವೃತ್ತಿ ಜೀವನ ಆರಂಭಿಸಿ, ಬಳಿಕ ‘ಉಷಾಕಿರಣ’, ‘ಪ್ರಜಾವಾಣಿ’ ಪತ್ರಿಕೆಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ, 2013 ರಿಂದ 'ವಿಜಯ ಕರ್ನಾಟಕ' ಪತ್ರಿಕೆಯಲ್ಲಿ ಮುಖ್ಯ ವರದಿಗಾರರಾಗಿ ಪ್ರಸ್ತುತ 2017 ರಿಂದ ಕಲಬುರಗಿ ಆವೃತ್ತಿಯ ಸ್ಥಾನಿಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪತ್ರಿಕೋದ್ಯಮದಲ್ಲಿ ಉತ್ತಮ ಹೆಸರು ಮಾಡಿರುವ ಇವರು ಕಳೆದ 23 ವರ್ಷಗಳಿಂದ ಪತ್ರಿಕಾ ರಂಗದ ಜೊತೆಗೆ ಸಾಮಾಜಿಕ ಸೇವೆಯಲ್ಲಿಯೂ ಸಹ ತೊಡಗಿಸಿಕೊಂಡಿದ್ದಾರೆ.
ಪತ್ರಿಕೆಗಳ ತನಿಖಾ ವರದಿ, ಸಂಪಾದಕೀಯ ಲೇಖನಗಳು, ವಿಶೇಷ ವರದಿ, ವಿಜಯ ನೆಕ್ಸ್ಟ್ ಪತ್ರಿಕೆಯ ಇವರ ಅಂಕಣಗಳು ಓದುಗರನ್ನು ಮಂತ್ರ ಮುಗ್ಧ ರನ್ನಾಗಿಸಿವೆ.
ಇದಲ್ಲದೆ ಸಮಾಜಮುಖಿ ಲೇಖನ, ಕಲಬುರ್ಗಿಯಲ್ಲಿ ಅಚ್ಚುಕಟ್ಟಾಗಿ ವಿಕ ಸೂಪರ್‌ಸ್ಟಾರ್ ರೈತ ಕಾರ್ಯಕ್ರಮ ಆಯೋಜಿಸುವ ಮುಖೇನ ಜನಮಾನಸವನ್ನು ತಲುಪಿದ್ದಾರೆ.
ಪಿ ಎಸ್ ಐ ನೇಮಕಾತಿ ಹಗರಣ, ಕೆಇಎ ಪರಿಕ್ಷಾ ಅಕ್ರಮ, ಅಂಚೆ ನೇಮಕಾತಿ ಅಕ್ರಮ, ಕುಡಾ ನಿವೇಶನ ಹಂಚಿಕೆ ಹಗರಣ, ಎಂಆರ್‌ಎಂಸಿ ಭೂ ಕಬಳಿಕೆ ಬಯಲಿಗೆ ಎಳೆದಿರುವುದು ಇವರ ಸಾಮಾಜಿಕ ಬದ್ಧತೆಯ ಪ್ರತೀಕ ಎನ್ನಬಹುದು.
ಕಲ್ಯಾಣ ಕರ್ನಾಟಕದ ಪ್ರಮುಖ ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆಯುವಲ್ಲಿ ಇವರ ವರದಿಗಳು ಪೂರಕವಾಗಿವೆ ಎಂದರೆ ಅತಿಶಯೋಕ್ತಿ ಎನಿಸದು.
ಇತ್ತೀಚೆಗೆ ಕಲಬುರ್ಗಿಯಲ್ಲಿನಡೆದ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವಯ್ಯ ಗುತ್ತೇದಾರ ರವರ ವರದಿಗಳಿಗೆ ಸ್ಪಂದಿಸಿದ್ದು ಸ್ವತಃ ದೇವಯ್ಯ ಗುತ್ತೇದಾರ್ ಅವರಿಗೆ ತೃಪ್ತಿ ತಂದಿರಬಹುದು. ಇಂತಹ ಅನೇಕ ಸಾಮಾಜಿಕ ಚಿಂತನೆಯುಳ್ಳ ವರದಿಗಳ ಮೂಲಕ ಪತ್ರಿಕಾ ರಂಗದಲ್ಲಿ ರಾಜ್ಯ ಮಟ್ಟದಲ್ಲಿ ಹೆಸರು ಮಾಡುತ್ತಿರುವುದು, ರಾಜ್ಯ ಹಾಗೂ ವಿಶೇಷವಾಗಿ ಕಲ್ಯಾಣ ಕರ್ನಾಟಕದ ಪ್ರತಿಭಾವಂತ ಪತ್ರಕರ್ತರಿಗೆ ಹೆಮ್ಮೆಯ ಸಂಗತಿಯಾಗಿದೆ.
ದೇವಯ್ಯ ಗುತ್ತೇದಾರ್ ಅವರ ಪತ್ರಿಕಾ ರಂಗದ ಸೇವೆಯನ್ನು ಪರಿಗಣಿಸಿ,ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರತಿಷ್ಠಿತ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಶಂಕರ ದುಬೆ ಅತ್ಯುತ್ತಮ ಪತ್ರಕರ್ತ ಪ್ರಶಸ್ತಿ, ಲಿಂಗಾಯತ ಮಹಾಸಭಾದ ಕಾಯಕ ರತ್ನ ಪ್ರಶಸ್ತಿ, ಪಾಳಾದ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನ ಕಲ್ಯಾಣ ಟ್ರಸ್ಟ್ ಕೊಡಮಾಡುವ 'ಗೌಡ' ಗೌರವ ಪ್ರಶಸ್ತಿ, ವೀರ ಸೋಮೇಶ್ವರ ಸೇವಾ ಸಂಸ್ಥೆಯ ವೀರ ಸೋಮೇಶ್ವರ ಪ್ರಶಸ್ತಿ,
ಬಬಲಾದ ಶ್ರೀಮಠದ ಶ್ರೀಗುರು ಚನ್ನವೀರೇಶ್ವರ ಪ್ರಶಸ್ತಿ, ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ ದಿ. ವಿ ಎನ್ ಕಾಗಲಕರ್ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಇವರ ಪ್ರಾಮಾಣಿಕ ಸೇವೆಗೆ ಸಂದಿರುವುದು ಗಮನಾರ್ಹವಾಗಿದೆ.
ದೇವಯ್ಯ ಗುತ್ತೇದಾರ್ ಅವರು ಒಬ್ಬ ಕ್ರಿಯಾಶೀಲ ಪತ್ರಕರ್ತರಾಗಿ, ಕವಿಗಳಾಗಿ, ಸಂಘಟಕರಾಗಿ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿರುವ ಹಿರಿಮೆ ಹೊಂದಿದ್ದಾರೆ.
ಈ ಭಾಗದ ಭರವಸೆಯ ಪತ್ರಕರ್ತರಾಗಿರುವ ಇವರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಮೌಲಿಕ ಲೇಖನಗಳು, ಅಂಕಣಗಳು, ಸ್ವಾರಸ್ಯಕರ ಸುದ್ದಿಗಳು ಪ್ರಕಟಗೊಂಡು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆಯಲಿ ಎಂದು ಶುಭ ಹಾರೈಸೋಣ.
-ಪ್ರೊ.ಯಶವಂತರಾಯ ಅಷ್ಠಗಿ