ಭೂಮಿಗೆ ರಸಾಯನಿಕಗೊಬ್ಬರ ಬಳಸಬೇಡಿ: ನೀಲಂ ಪಟೇಲ್
ಭೂಮಿಗೆ ರಸಾಯನಿಕಗೊಬ್ಬರ ಬಳಸಬೇಡಿ: ನೀಲಂ ಪಟೇಲ್
ಕಮಲನಗರ: ಇತ್ತೀಚಿನ ದಿನಗಳಲ್ಲಿ ಜಮೀನುಗಳಿಗೆ ಅತೀ ಹೆಚ್ಚು ರಸಾಯನಿಕಗೊಬ್ಬರ ಬಳಸುವ ಮೂಲಕ ಕೃಷಿ ಭೂಮಿ ತನ್ನ ಸತ್ವವನ್ನು ಕಳೆದುಕೊಂಡು ವಿಷಪೂರಿತವಾಗಿದ್ದು, ಬೆಳೆ ಬೆಳೆಯಲು ಸೂಕ್ತವಾಗಿಲ್ಲ ಎಂದು ನೀತಿ ಆಯೋಗದ ಮುಖ್ಯ ಸಲಹೆಗಾರ್ತಿ ನೀಲಂ ಪಟೇಲ್ ಹೇಳಿದರು.
ಗುಜರಾತಿನ ಭೂಜ ಪಟ್ಟಣದಲ್ಲಿ ಈಚೆಗೆ ತಾಲೂಕಿನ ಡೋಣಗಾಂವ ಗ್ರಾಮದ ಪ್ರಗತಿಪರ ರೈತ ಬಾಬುರಾವ ಸೋಮುರೆ ಅವರು ಎರಡು ದಿನಗಳ ರಾಷ್ಟ್ರೀಯ ಮಟ್ಟದ ನ್ಯಾಚುರಲ್ ಫಾರ್ಮಿಂಗ್ ಕಾರ್ಯಾಗಾರದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಸಾವಯವ ಕೃಷಿ ಪದ್ಧತಿಯಿಂದ ಮಾತ್ರ ಮಣ್ಣಿನ ಆರೋಗ್ಯ ಸಂರಕ್ಷಿಸಲು ಸಾಧ್ಯ. ಹಾಗಾಗಿ ಸಾವಯವ ಕೃಷಿಗೆ ರಾಜ್ಯದ ವಿವಿಧೆಡೆ ಸರ್ಕಾರ ಸೇರಿದಂತೆ ಎಲ್ಲರೂ ಪ್ರೋತ್ಸಾಹಿಸಬೇಕು. ಸಾವಯವ ಕೃಷಿ ಪದ್ಧತಿಯಿಂದ ತಕ್ಷಣಕ್ಕೆ ಲಾಭ ಸಿಗದಿದ್ದರೂ ಕೂಡ ಕ್ರಮೇಣ ನಿರಂತರ ಲಾಭಕ್ಕೇನೂ ಕೊರತೆ ಇಲ್ಲ ಎಂದರು.
ಭಾರತದಲ್ಲಿ ಮಠಾಧೀಶರು, ಸಾಧು-ಸಂತರು ಮನುಕುಲದ ಒಳಿತಿಗಾಗಿ ಶ್ರಮಿಸುತ್ತಿದ್ದು. ಇದರಿಂದ ನಮ್ಮ ದೇಶದಲ್ಲಿ ನೆಮ್ಮದಿಯ ಬದುಕು ಕಂಡುಕೊಂಡಿದ್ದೇವೆ. ಈಗ ಒಂದೇ ಧರ್ಮದವರು ಹೊಡೆದಾಡುವ ಕಾಲ ಬಂದಿದೆ. ಇದಕ್ಕೆ ಇತರೆ ದೇಶಗಳಲ್ಲಿ ನಡೆಯುತ್ತಿರುವ ಯುದ್ಧಗಳೇ ಸಾಕ್ಷಿ ಎಂದರು.
ನ್ಯಾಚುರಲ್ ಫಾಮಿರ್ಂಗ್‍ನ ಐದು ಪ್ರಮುಖ ತತ್ವಗಳನ್ನು ವಿವರವಾಗಿ ತಿಳಿಸಲಾಯಿತು. ಅದರಲ್ಲಿ ಬೀಜಾಮೃತ, ಜೀವಾಮೃತ, ಮಲ್ಚಿಂಗ್ (ಆವರಣೆ), ವಾಫ್ಸಾ ಮತ್ತು ಸ್ವಾಭಾವಿಕ ಕೀಟ ನಿಯಂತ್ರಣ ಬ್ರಹ್ಮಾಸ್ತ್ರ ಇತ್ಯಾದಿ... ತತ್ವಗಳು ಒಳಗೊಂಡಿವೆ. ದೇಶಿ ಹಸುವಿನ ಆಧಾರಿತ ಕೃಷಿ, ಉತ್ಪಾದನಾ ವೆಚ್ಚದಲ್ಲಿ ಕಡಿತ, ಮಣ್ಣಿನ ಸಸ್ಯೋತ್ಪಾದಕತೆ ಹೆಚ್ಚಿಸುವುದು ಹಾಗೂ ರಾಸಾಯನಿಕರಹಿತ ಆಹಾರ ಉತ್ಪಾದನೆ ಜೊತೆಗೆ ಮುಂದಿನ ದಿನಗಳಲ್ಲಿ ಶಾಶ್ವತ ಕೃಷಿ ಮತ್ತು ಆತ್ಮನಿರ್ಭರ ಭಾರತದ ದಿಸೆಯಲ್ಲಿ ನ್ಯಾಚುರಲ್ ಫಾಮಿರ್ಂಗ್ ಮಹತ್ವದ ಪಾತ್ರ ವಹಿಸಲಿದೆ ಎಂದು ತಜ್ಞರು ತಿಳಿಸಿದರು.
ಈ ಕಾರ್ಯಾಗಾರದಲ್ಲಿ ಕಮಲನಗರ ಕೃಷಿ ಅಧಿಕಾರಿ ಶತ್ರುಘ್ನ ಮಾರ್ಗದರ್ಶನದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಗ್ರಾಮೀಣ ಕೃಷಿ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ಅಧ್ಯಕ್ಷ ಬಾಬುರಾವ್ ಸೋಮೂರೆ ಪಾಲ್ಗೊಂಡಿದ್ದರು.
ದೇಶದ ಇತರೆ ರಾಜ್ಯದಿಂದ ಕಾರ್ಯಗಾರದಲ್ಲಿ ಪಾಲ್ಗೊಂಡ ರೈತರೊಂದಿಗೆ ಕೂಡ ನಿರಂತರ ಸಂವಾದ ನಡೆಸಿದರು.
ರಾಷ್ಟ್ರೀಯ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವಿಕೆಯಿಂದ ಗೌರವ ಹೆಚ್ಚಿಸಿದ್ದಲ್ಲದೇ ಪ್ರೇರಣೆ ಪಡೆದಿದ್ದೇನೆ. ತಾಲ್ಲೂಕಿನ ರೈತರಿಗೆ ಶೀಘ್ರದಲ್ಲೇ ಮಾರ್ಗದರ್ಶನ ಶಿಬಿರ, ಪ್ರಾತ್ಯಕ್ಷಿಕೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಸ್ವಂತ ಖರ್ಚಿನಲ್ಲಿಯೇ ಆಯೋಜಿಸಲಾಗುವುದು.
- ಬಾಬುರಾವ ಸೋಮೂರೆ, ಡೋಣಗಾಂವ್(ಎಂ) ಪ್ರಗತಿಪರ ರೈತರು.
