ಮುತ್ಸದ್ದಿ ಪತ್ರಕರ್ತ - ಸಾಹಿತಿ ವಾದಿರಾಜ ವ್ಯಾಸಮುದ್ರ
ಮುತ್ಸದ್ದಿ ಪತ್ರಕರ್ತ - ಸಾಹಿತಿ ವಾದಿರಾಜ ವ್ಯಾಸಮುದ್ರ
ಮಕ್ಕಳನ್ನು ಸದ್ಗುಣ ಸಂಪನ್ನರಾಗಿ ಬೆಳೆಸಿದ ತಾಯಿ-ತಂದೆಗಳು ಇಂದಿಗೂ ನಮಗೆ ಆದರ್ಶವಾಗಿ ನಿಲ್ಲುತ್ತಾರೆ.ಅಂತಹ ಆದರ್ಶ ಕುಟುಂಬದ ರುವಾರಿಗಳು ಶ್ರೀ ಯದುರಾಯ ಮತ್ತು ಶ್ರೀಮತಿ ಪದ್ಮಾವತಿ ವ್ಯಾಸಮುದ್ರ ದಂಪತಿಗಳು.
ಬಡತನ ಹಾಸು ಹೊಕ್ಕಾಗಿದ್ದರು, ಮನ ಮಾತ್ರ ಸಿರಿವಂತಿಕೆಯ ಆಗರವಾಗಿತ್ತು. ಇಂತಹ ಮೃದು ಮನದ ತೂಗುಯ್ಯಾಲೆಯಲ್ಲಿ ಆಡಿ ಬೆಳೆದವರು ಹಿಂದಿನ ವಿಜಯವಾಣಿ ಪತ್ರಿಕೆಯ ಸಂಪಾದಕರಾಗಿ ಪತ್ರಿಕಾ ರಂಗದಲ್ಲಿ ನಕ್ಷತ್ರದಂತೆ ಮಿನುಗಿದ ಧೃವತಾರೆ ಶ್ರೀ ವಾದಿರಾಜ ವ್ಯಾಸಮುದ್ರ ರವರು.ಅವರ ಜೀವನ ಮತ್ತು ಸಾಧನೆ ಅವಲೋಕನ ಮಾಡುವುದೆಂದರೆ ಕಷ್ಟದಾಯಕವಾದದ್ದು.
ವಾದಿರಾಜ ವ್ಯಾಸಮುದ್ರ ಅವರ ತಂದೆಯವರಾದ ಶ್ರೀ ಯದುರಾಯರು ಪ್ರಾಥಮಿಕ ಶಾಲಾ ಶಿಕ್ಷಕರು ಅವರ ಧರ್ಮಪತ್ನಿ ಶ್ರೀಮತಿ ಪದ್ಮಾವತಿ ಯವರು ಆದರ್ಶ ಗೃಹಿಣಿ. ಈ ದಂಪತಿಗಳಿಗೆ ಐದು ಜನ ಮಕ್ಕಳು ಅವರಲ್ಲಿ ಇಬ್ಬರು ಗಂಡು ಮಕ್ಕಳು ಮೂರು ಜನ ಹೆಣ್ಣು ಮಕ್ಕಳು ಹೀಗೆ ಐದು ಜನ ಮಕ್ಕಳಿಂದ ಕೂಡಿದ ಆದರ್ಶಮಯ ಬದುಕು.
ಇದಲ್ಲದೆ ಶ್ರೀ ಯದುರಾಯ ವ್ಯಾಸಮುದ್ರ ಅವರಿಗೆ ಅವರ ಸಂಗಡ ಅವರ ಇಬ್ಬರು ಸಹೋದರರು, ಅಜ್ಜ, ಅಜ್ಜಿ ಹೀಗೆ ತುಂಬು ಕುಟುಂಬ. ಮನೆಯಲ್ಲಿ ಕುಳಿತು ಉಣ್ಣುವ ಹನ್ನೊಂದು ಜನರಲ್ಲಿ ಶ್ರೀ ಯದುರಾಯರ ಸಂಬಳ ಯಾವುದಕ್ಕೂ ಸರಿ ಹೊಂದುತ್ತಿರಲಿಲ್ಲ.
ಆದರೂ ಈ ತಾಯಿ-ತಂದೆಗಳು ಧೈರ್ಯ ಬಿಡಲಿಲ್ಲ ಕಾರಣ ಎಲ್ಲರನ್ನು ಸಾಕಿ ಸಲಹಿ ತಂದೆ ಮೇಲಿದ್ದ ಭಾರವನ್ನು ಭಗವಂತನ ಮೇಲೆ ಭಾರ ಹಾಕಿ ಸಂಸಾರ ಸರಿದೂಗಿಸುತ್ತ ಬಂದವರು ವ್ಯಾಸಮುದ್ರ ದಂಪತಿಗಳು.
ಈ ನಡುವೆ ಶ್ರೀ ಯದುರಾಯರು ಸಾಲ-ಶೂಲದಿಂದ ಸಂಕಟಕ್ಕೆ ಸಿಕ್ಕಿಕೊಂಡರು. ಅತ್ಯಂತ ಸರಳ, ಸಜ್ಜನ, ಸಾತ್ವಿಕರಾದ ಇವರನ್ನು ಊರ ಜನರು ತುಂಬ ಪ್ರೀತಿ,ಆದರ ಜೊತೆಗೆ ಗೌರವದಿಂದ ಕಾಣುತ್ತಿದ್ದರು. ಬಡತನವಿದ್ದರು ಅದನ್ನು ತೊರಗೊಡದಂತೆ ಅತ್ಯಂತ ಧನ್ಯತಾ ಭಾವದಿಂದ ಕುಟುಂಬದ ಸೊಬಗನ್ನು ಕಾಪಾಡಿಕೊಂಡು ಬಂದವರು. ಈ ದಂಪತಿಗಳು ಅವರ ಬಡತನ ಎಷ್ಟು ದಿನ ಮುಚ್ಚಿಡಲು ಸಾಧ್ಯ,ಮಕ್ಕಳ ಹಸಿದ ಹೊಟ್ಟೆ ಅದನ್ನು ಹೊರ ಜಗತ್ತಿಗೆ ಗೋಚರಿಸುವಂತೆ ಮಾಡುತ್ತಿತ್ತು.
ಆ ವೇಳೆಗೆ ಶ್ರೀ ಯದುರಾಯ ವ್ಯಾಸಮುದ್ರರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯ ಹಂಗರಗಿ ಗ್ರಾಮದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಅದೇ ಶಾಲೆಯಲ್ಲಿ ಬಾಲಕ ವಾದಿರಾಜ ವ್ಯಾಸಮುದ್ರ ಅವರ ಪ್ರಾಥಮಿಕ ಶಿಕ್ಷಣ ಪ್ರಾರಂಭವಾಯಿತು. ವಾದಿರಾಜರ ಚಿಕ್ಕಪ್ಪನವರ ಓದು ಮುಗಿಯಿತು. ಅವರು ನೌಕರಿ ಮಾಡಲೆಂದು ನೌಕರಿ ಅರಸುತ್ತಾ ಹೊರಟು ಹೋದರು.
ಇನ್ನೊಬ್ಬ ಚಿಕ್ಕಪ್ಪ ಕುಟುಂಬದ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದರು.
ಇವರ ದೊಡ್ಡಮ್ಮಳಿಗೆ ಅಂದರೆ ತಾಯಿಯ ಅಕ್ಕಳಿಗೆ ಮಕ್ಕಳಿರಲಿಲ್ಲ, ಆ ಕೊರತೆ ನೀಗಿಸಿಕೊಳ್ಳಲು ವಾದಿರಾಜರ ಸಹೋದರ ಮತ್ತು ಕೊನೆಯ ಸಹೋದರಿಯನ್ನು ಕರೆದುಕೊಂಡು ಹೋಗಿ ತಮ್ಮ ಹತ್ತಿರವೇ ಇಟ್ಟುಕೊಂಡು ಅವರಿಗೆ ಶಿಕ್ಷಣ ಕೊಡಿಸಲು ಆರಂಭಿಸಿದರು.
ಇದರಿಂದಾಗಿ ಕುಟುಂಬದ ಭಾರ ಸ್ವಲ್ಪ ಕಡಿಮೆಯಾದರೂ, ಸಾಲ ಶೂಲ ದಿನ ದಿನಕ್ಕೂ ಹೆಚ್ಚುತ್ತಲಿತ್ತು. ಅಷ್ಟರಲ್ಲಿ ವ್ಯಾಸಮುದ್ರ ಅವರು ಹಂಗರಗಿ ಗ್ರಾಮದಲ್ಲಿ ನಾಲ್ಕನೆಯ ತರಗತಿ ಮುಗಿಸಿ ಐದನೆಯ ತರಗತಿಯನ್ನು ಪೂರೈಸಲು ಮೊಸರಿಗೆ ಹೆಸರಾದ ಕೊಲ್ಲಾಪೂರ ಶಾಲೆಗೆ ಸೇರಿಸಿದರು.
ಕೊಲ್ಲಾಪೂರಕ್ಕೆ ಬಂದರೂ ಆ ಸವಿ ಇವರು ಒಂದು ದಿನವೂ ಸವಿಲಿಲ್ಲ ತಾಯಿ-ತಂದೆ, ಅಣ್ಣ- ಅಕ್ಕಂದಿರ ಜೊತೆಯಲ್ಲಿ ಗುಗ್ಗೂರಿ ಮತ್ತು ಅಂಬಲಿ ಸವಿದು ಶಾಲೆ ಕಲಿತರು.
ಕೊಲ್ಲಾಪೂರ ಶಾಲೆಯಲ್ಲಿ ಉಪ್ಪಾಶಪ್ಪ ಮೇಷ್ಟ್ರು ತುಂಬಾ ಶಿಸ್ತಿನ ಸಿಪಾಯಿಯಾಗಿದ್ದರು. ಶಾಲಾ ಮಕ್ಕಳು ಮನೆ ಪಾಠ ಮಾಡಿಕೊಂಡು ಬರದಿದ್ದರೆ ತುಂಬಾ ಕೋಪ ಮಾಡಿಕೊಳ್ಳುತ್ತಿದ್ದರು.
ಒಂದು ದಿನ ವಾದಿರಾಜ ವ್ಯಾಸಮುದ್ರ ಅವರು ಗುರುಗಳು ಹೇಳಿದ ಪಾಠ ಒಪ್ಪಿಸಿರಲಿಲ್ಲ. ಆಗ ಸಿಟ್ಟಿಗೆದ್ದ ಮೇಷ್ಟ್ರು ಹಿಂದೆ-ಮುಂದೆ ನೋಡದೇ ಬೆತ್ತದಿಂದ ಬಾಸುಂಡಿ ಬರುವ ಹಾಗೆ ಕೈಗೆ ಬಾರಿಸಿದರು ಬಾಲಕ ವಾದಿರಾಜರಿಗೆ ವಿಪರೀತ ನೋವಾಯಿತು. ಮನೆಗೆ ಬಂದು ತಂದೆಯವರಿಗೆ ಕೈ ತೋರಿಸಿ ಉಪಾಶಪ್ಪ ಮೇಷ್ಟ್ರು ಹೊಡೆದಿದ್ದಾರೆ ಎಂದು ಹೇಳಿದರು. ತಂದೆ ಯದುರಾಯರು
ಮಗನ ಕಪಾಳಕ್ಕೆ ಎರಡು ಬಾರಿಸಿದರು. ಶಾಲೆಯಲ್ಲಿ ನಡೆದಿದ್ದನ್ನು ಮನೆಯಲ್ಲಿ ಬಂದು ಹೇಳುವಂತಿಲ್ಲ. ನೀನು ಮಾಡಿದ ತಪ್ಪಿಗೆ ಅವರು ಹೊಡೆದಿರಬಹುದು. ನಿನ್ನ ತಪ್ಪು ಮುಚ್ಚಿಟ್ಟುಕೊಂಡು ಅವರು ಹೊಡೆದ ಸುದ್ದಿ ಹೇಳುತ್ತಿರುವಿ ಎಂದು ಗದರಿಸಿದರು. ಆಗ ವಾದಿರಾಜ ರವರಿಗೆ ತಮ್ಮ ತಪ್ಪಿಗೆ ಬಿದ್ದ ಪೆಟ್ಟುಗಳಿವು ಎಂಬುದು ಅರಿವಿಗೆ ಬಂತು.
ಆನಂತರ ಇವರು ತುಂಬಾ ಆಸಕ್ತಿಯಿಂದ ಅಭ್ಯಾಸ ಮಾಡಿ ಐದನೇ ಆರನೇ ಮತ್ತು ಏಳನೆಯ ಬೋರ್ಡ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತಿರ್ಣರಾದರು.
ಅದೇ ಓಟದಲ್ಲಿ ಚೆನ್ನಾಗಿ ಅಭ್ಯಾಸ ಮಾಡಿ 1978-79 ರಲ್ಲಿ ವಿಜಾಪೂರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕೊಲ್ಲಾಪುರ ಪ್ರೌಢಶಾಲೆಯಲ್ಲಿ ಓದಿ 10 ನೇ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸಾದರು.
ಹಂಗರಗಿ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಇವರ ತಂದೆಗೆ ಆ ಊರು ಬೇಸರವೆನಿಸಿತು. ಬಡತನ ಬೆನ್ನುಬಿಡದಂತಾಗಿದೆ. ಕಷ್ಟಗಳು ಹೆಚ್ಚುತ್ತಿವೆ ಎನಿಸಿತು.. ಕೈಗೆ ಬರುತಿದ್ದ ಸಂಬಳ ಸಾಲದಂತಾಯಿತು. ಸಂಬಳ ಬಂದ ದಿನ ತಂದವರ ಸಾಲ ಕೊಟ್ಟು ಬರಿಗೈಲಿ ಕುಡುವಂತಾಯಿತು. ಅದರಿಂದ ಬೇರೆ ಕಡೆ ಹೋಗುವುದಕ್ಕೆ ನಿರ್ಧರಿಸಿದರು.
ಆಗ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಮರಕಮ್‌ದಿನ್ನಿ ಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕರು ವಿಜಾಪೂರ ಜಿಲ್ಲೆಗೆ ಬಂದರು . ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕ ಮರಕಮ್ ದಿನ್ನಿ ಪ್ರಾಥಮಿಕ ಶಾಲೆಗೆ ಬಂದು ಹಾಜರಾದರು ಶ್ರೀ ಯದುರಾಯರು.
ದೊಡ್ಡಮ್ಮನ ಹತ್ತಿರವಿದ್ದು ಇವರ ಅಣ್ಣನ ತಂದೆಯ ಕಡೆಗೆ ಬಂದರು. ಎಲ್ಲರೂ ಕೂಡಿ ರಾಯಚೂರಿನಲ್ಲಿ ಮನೆ ಮಾಡಿ ಒಂದೇ ಕಡೆ ವಾಸಿಸತೊಡಗಿದರು
ಎಲ್ಲರೂ ಕುಳಿತುಕೊಂಡರೆ ಊಟ ಉಪಚಾರಕ್ಕೆ ಸಾಧ್ಯವಿಲ್ಲ ಎಂದು ಇವರ ಅಣ್ಣ 'ರಾಯಚೂರು ವಾಣಿ' ಪತ್ರಿಕೆಯಲ್ಲಿ ಕಾಂಪೊಜರ್ ಆಗಿ ಕಾರ್ಯನಿರತರಾದದರು. ಒಂದು ದಿನ ಅಣ್ಣನನ್ನು ಕಾಣಲು 'ರಾಯಚೂರು ವಾಣಿ' ಕಾರ್ಯಾಲಯಕ್ಕೆ ವಾದಿರಾಜ ವ್ಯಾಸಮುದ್ರ ಅವರು ಹೋಗಿದ್ದರು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣನರಾದ ವಾರ್ತೆ ಕೇಳಿ ಪತ್ರಿಕೆಯ ಮಾಲೀಕರಾದ ಶ್ರೀ ಕುಲಕರ್ಣಿ ಯವರು ವಾದಿರಾಜ ವ್ಯಾಸಮುದ್ರ ಅವರನ್ನು ಕರೆದು ಕೆಲಸಕೊಟ್ಟರು.
ನಿಷ್ಠೆ, ಪ್ರಾಮಾಣಿಕತೆ, ಚತುರತೆಯಿಂದ ಸತತ ಉದ್ಯೋಗದಲ್ಲಿದ್ದ ವ್ಯಾಸಮುದ್ರ ಅವರ ಸೇವೆ ನೋಡಿ ಪತ್ರಿಕೆಯ ಮಾಲೀಕರಾದ ಶ್ರೀ ಕುಲಕರ್ಣಿ ಯವರು ವಾದಿರಾಜ ಅವರಿಗೆ ತಿಂಗಳಿಗೆ 150 ರೂ. ಸಂಬಳ ಕೊಡತೊಡಗಿದರು.
ಶ್ರೀ ವಾದಿರಾಜ ವ್ಯಾಸಮುದ್ರ ಅವರ ಕೆಲಸಗಳು ಗುರುತಿಸಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ವರದಿಗಾರ - ಉಪ ಸಂಪಾದಕ ಎಂದು ಆಯ್ಕೆಯಾದರು. ಹೀಗೆ ಆಯ್ಕೆ ಪತ್ರ ಕೈ ಸೇರಿದಾಗ ವಾದಿರಾಜ ವ್ಯಾಸಮುದ್ರ ಅವರಿಗೆ ತುಂಬ ಸಂತಸವಾಯಿತು.
ತಮಗೆ ಕರೆದು ಕೆಲಸ ಕೊಟ್ಟ 'ರಾಯಚೂರು ವಾಣಿ' ಪತ್ರಿಕೆಯ ಮಾಲಿಕರಾದ ಕುಲಕರ್ಣಿ ಅವರಿಗೆ ಹೇಳದೆ ಹೋದರೆ ದೊಡ್ಡ ತಪ್ಪಾಗುತ್ತದೆ ಎಂದು ಕುಲಕರ್ಣಿ ಅವರ ಹತ್ತಿರ ಬಂದು'ಸಂಯುಕ್ತ ಕರ್ನಾಟಕ' ದಿನಪತ್ರಿಕೆಗೆ ನೇಮಕವಾದ ವಿಷಯ ತಿಳಿಸಿದರು.
ಆಗ ಕುಲಕರ್ಣಿ ಅವರು ಸಂತಸ ಪಟ್ಟು ಸರಿ ನನ್ನ ಪತ್ರಿಕೆಯಲ್ಲಿ ಕೆಲಸ ಮಾಡಿದವರು ರಾಜ್ಯ ಮಟ್ಟದ ಪತ್ರಿಕೆಯಲ್ಲಿ ಸೇವೆ ಸಲ್ಲಿಸುವ ಅರ್ಹತೆ ಹೊಂದಿರುತ್ತಾರೆ ಎನ್ನುವುದನ್ನು ನೀನೂ ಸಹ ಸಾಬೀತು ಪಡಿಸಿದೆ ಎಂದು ಬೆನ್ನು ತಟ್ಟಿ ಹರಿಸಿ ಹಾರೈಸಿದರು. ನೀನು ಇನ್ನು ಎತ್ತರಕ್ಕೆ ಬೆಳೆಯಬೇಕು ಎಂದು ಹೇಳಿ ಸಿಹಿ ಹಂಚಿ ಅವರನ್ನು ಬಿಳ್ಕೊಟ್ಟರು.
ಅಂದು ಅವರು ಹೃದಯ ತುಂಬಿ ಹರಸಿ ಹಾರೈಸಿದಂತೆ 'ನಾನು ಹಂತ ಹಂತವಾಗಿ ಮೇಲೇರುತ್ತಾ ಬಂದೆ ಎಂದು ಹೇಳುತ್ತಾರೆ ಹಿರಿಯ ಮುತ್ಸದ್ದಿ ಪತ್ರಕರ್ತ ವ್ಯಾದಿರಾಜ ವ್ಯಾಸಮುದ್ರ ಅವರು.
'ವಿಜಯವಾಣಿ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.
ಶ್ರೀಯುತ ವಾದಿರಾಜ ವ್ಯಾಸಮುದ್ರ ಅವರ ಸೇವೆಯನ್ನು ಹುಡುಕಿಕೊಂಡು ಅನೇಕ ಪ್ರಶಸ್ತಿ, ಪುರಸ್ಕಾರಗಳು, ಬಹುಮಾನಗಳು ಸಂದಿವೆ ಎಂದು ಹೇಳಲು ಹರ್ಷ ವಾಗುತ್ತದೆ.
'ಕರ್ನಾಟಕ ಮಾಧ್ಯಮ ಪ್ರಶಸ್ತಿ' ಸೇರಿದಂತೆ ಅನೇಕ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ ಮಠ ಮಾನ್ಯಗಳಿಂದ ದೊರೆತ ಸನ್ಮಾನಕ್ಕೆ ಲೆಕ್ಕವೇ ಇಲ್ಲ.
ಪತ್ರಿಕಾ ರಂಗದ ಸೇವೆ ಮೊಟಕುಗೊಳಿಸಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದಾರೆ.
ಲೇಖಕರು:-ಶರಣಗೌಡ ಪಾಟೀಲ್ ಪಾಳಾ