ಕಮಲನಗರ-ಬೀದರ ಎನ್‌ಎಚ್ ಟೋಲ್ ಕೆಲಸ ತಕ್ಷಣ ನಿಲ್ಲಿಸಿ: ಶಾಸಕ ಪ್ರಭು ಚವ್ಹಾಣ

ಕಮಲನಗರ-ಬೀದರ ಎನ್‌ಎಚ್ ಟೋಲ್ ಕೆಲಸ ತಕ್ಷಣ ನಿಲ್ಲಿಸಿ: ಶಾಸಕ ಪ್ರಭು ಚವ್ಹಾಣ

ಕಮಲನಗರ-ಬೀದರ ಎನ್‌ಎಚ್ ಟೋಲ್ ಕೆಲಸ ತಕ್ಷಣ ನಿಲ್ಲಿಸಿ: ಶಾಸಕ ಪ್ರಭು ಚವ್ಹಾಣ

ಕಮಲನಗರ-ಬೀದರ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್-50) ಕಾಮಗಾರಿ ಅವೈಜ್ಞಾನಿಕವಾಗಿದ್ದು, ಇನ್ನೂ ಅಪೂರ್ಣ ಹಂತದಲ್ಲಿರುವಾಗಲೇ ಟೋಲ್ ಸಂಗ್ರಹಕ್ಕೆ ತಯಾರಿ ನಡೆಸಲಾಗುತ್ತಿದೆ. ಇದನ್ನು ತಕ್ಷಣವೇ ನಿಲ್ಲಿಸಬೇಕೆಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಆಗ್ರಹಿಸಿದ್ದಾರೆ. 

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನನ್ನ ಮತಕ್ಷೇತ್ರ ಒಳಗೊಂಡು ಇಡೀ ಜಿಲ್ಲೆಯ ಜನತೆಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಸಾಕಷ್ಟು ಪ್ರಯತ್ನಪಟ್ಟು ರಾಷ್ಟ್ರೀಯ ಹೆದ್ದಾರಿ ಮಂಜೂರು ಮಾಡಿಸಿದ್ದೇನೆ. 257 ಕೋಟಿ ವೆಚ್ಚದ ಕಾಮಗಾರಿಯನ್ನು ಗುಜರಾತಿನ ಪಟೇಲ್ ಇನ್ಫ್ರಾಸ್ಟ್ರಕ್ಟರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಮಾಡಿದ್ದು, ಈ ಕಾಮಗಾರಿಯ ಬಗ್ಗೆ ಸಾಕಷ್ಟು ದೂರುಗಳಿವೆ ಎಂದಿದ್ದಾರೆ.

ರಸ್ತೆಯುದ್ದಕ್ಕೂ ತಗ್ಗು-ಗುಂಡಿಗಳು ಮತ್ತು ದೊಡ್ಡ-ದೊಡ್ಡ ಬಿರುಕುಗಳಿವೆ. ದುರಸ್ತಿ ಕೆಲಸ ನಿರಂತರವಾಗಿ ನಡೆಯುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಒಂದು ಕಡೆ ಸರಿಪಡಿಸಿದರೆ ಮತ್ತೊಂದು ಕಡೆ ಬಿರುಕುಗಳು ಮೂಡುತ್ತಿವೆ. ರಸ್ತೆ ಅವೈಜ್ಞಾನಿಕವಾಗಿದ್ದು, ಪ್ರತಿದಿನ ಒಂದೊಲ್ಲೊಂದು ಅಪಘಾತಗಳು ಸಂಭವಿಸುತ್ತಿವೆ. ಇಲ್ಲಿವರೆಗೆ ನೂರಾರು ಜನ ಪ್ರಾಣ ಕಳೆದುಕೊಂಡು ಅನೇಕರು ವಿಕಲಚೇತನರಾಗಿದ್ದಾರೆ. ಸಾವಿರಾರು ಜನ ಗಾಯಗೊಂಡಿದ್ದಾರೆ. ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ. ಈ ಬಗ್ಗೆ ವಿವಿಧ ಪತ್ರಿಕೆಗಳು, ಸುದ್ದಿವಾಹಿನಿಗಳಲ್ಲಿ ವರದಿಯಾಗಿದೆ‌ ಎಂದಿದ್ದಾರೆ.

ರಸ್ತೆಗೆ ಕಳಪೆ ಗುಣಮಟ್ಟದ ಸಿಮೆಂಟ್, ಕಬ್ಬಿಣ, ಕಾಂಕ್ರಿಟ್ ಹಾಗೂ ಮತ್ತಿತರೆ ಸಾಮಗ್ರಿಗಳನ್ನು ಬಳಕೆ ಮಾಡಲಾಗಿದೆ. ಕ್ಯೂರಿಂಗ್ ಸರಿಯಾಗಿ ಮಾಡಿಲ್ಲ. ಹಾಗಾಗಿ ರಸ್ತೆ ಕಿತ್ತು ಹೋಗುತ್ತಿದೆ. ಡಿವೈಡರ್‌ಗಳು, ಪಾದಚಾರಿ ಮಾರ್ಗ, ವಿದ್ಯುತ್ ದೀಪಗಳು, ಸಂಚಾರಿ ಚಿಹ್ನೆಗಳು ಮತ್ತು ಬ್ಲಿಂಕರ್ಸ್ ಮತ್ತಿತರೆ ಅವಶ್ಯಕತೆಗಳನ್ನು ಅಳವಡಿಸಿಲ್ಲ. ರಸ್ತೆಯನ್ನು ಸಮತಟ್ಟಾಗಿಯೂ ಮಾಡಿಲ್ಲ. ಹಾಗಾಗಿ ಹಿರಿಯ ನಾಗರಿಕರು, ರೋಗಿಗಳು ಆಸ್ಪತ್ರೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಈ ಹೆದ್ದಾರಿಯಲ್ಲಿ ಓಡಾಡುವುದಕ್ಕೂ ಭಯಪಡುವಂತಾಗಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿಕೊಂಡು ಹಣ ಲೂಟಿ ಮಾಡಿದ್ದಾರೆ. ಈ ಕಾಮಗಾರಿ ಮಾಡಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮವಾಗಬೇಕು. ರಸ್ತೆಯನ್ನು ಪುನಃ ನಿರ್ಮಿಸಬೇಕು ಎಂದು ಜನತೆ ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಕಾಮಗಾರಿಯ ಬಗ್ಗೆ ಕೇಂದ್ರ ಸರ್ಕಾರ, ಮುಖ್ಯಮಂತ್ರಿಗಳು, ಸಚಿವರು ಸೇರಿದಂತೆ ಸಂಬಂಧಪಟ್ಟ ಎಲ್ಲರ ಗಮನಕ್ಕೆ ತಂದಿದ್ದೇನೆ. ವಿಧಾನಸಭಾ ಅಧಿವೇಶನದಲ್ಲಿಯೂ ಧ್ವನಿ ಎತ್ತಿದ್ದೇನೆ. ಅಲ್ಲಿ ಮಾತು ಕೊಟ್ಟಂತೆ ಲೋಕೋಪಯೋಗಿ ಸಚಿವರು ರಸ್ತೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ರಸ್ತೆ ಕಳಪೆಯಾಗಿರುವುದು ನಿಜವೆಂದು ಖುದ್ದಾಗಿ ಒಪ್ಪಿಕೊಂಡಿದ್ದಾರೆ. ಆದರೆ ಇಲ್ಲಿವರೆಗೆ ಯಾವುದೇ ಕ್ರಮವಾಗಿಲ್ಲ ಎಂದಿದ್ದಾರೆ.

ಹೆದ್ದಾರಿ ಸರಿಯಾಗಿ ಇದ್ದರೆ ಮಾತ್ರ ಟೋಲ್‌ ಸಂಗ್ರಹಿಸಬೇಕೆಂಬ ನಿಯಮಗಳಿವೆ. ಆದರೆ ಇಲ್ಲಿ ರಸ್ತೆ ಇನ್ನೂ ಅಪೂರ್ಣ ಹಂತದಲ್ಲೇ ಇದೆ. ದುರಸ್ತಿ ಕೆಲಸಗಳು ಕಾಮಗಾರಿ ಆರಂಭದಿಂದ‌ ಇಲ್ಲಿವರೆಗೆ ನಿರಂತರವಾಗಿ ನಡೆಯುತ್ತಿದೆ. ಆಗಿರುವ ಕೆಲಸವೂ ಅವೈಜ್ಞಾನಿಕ ಮತ್ತು ಅಪೂರ್ಣವಾಗಿದೆ. ದುರಸ್ತಿಯಿಂದ ರಸ್ತೆ ಸರಿಪಡಿಸುವುದು ಅಸಾಧ್ಯ. ಸಾರ್ವಜನಿಕರ ಬಳಕೆಗೆ ಯೋಗ್ಯವಾಗಿಲ್ಲ. ಹಾಗಾಗಿ ಈ ರಸ್ತೆಯನ್ನು ಮರು ನಿರ್ಮಾಣ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಅಲ್ಲಿವರೆಗೆ ಟೋಲ್ ಸಂಗ್ರಹ ಮಾಡಬಾರದು. ಟೋಲ್ ಕೆಲಸ ಕೂಡಲೇ ನಿಲ್ಲಿಸಬೇಕು. ಇಲ್ಲವಾದಲ್ಲಿ ಜನಾಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಶಾಸಕರು ತಿಳಿಸಿದ್ದಾರೆ.