ವಚನ ಪರಂಪರೆಯ ಮಾನವೀಯ ಮೌಲ್ಯಗಳನ್ನು ಒತ್ತಿಹೇಳಿದ-ಲಿಂಗಣ್ಣ ಗೋನಾಳರ ಕೃತಿ

ವಚನ ಪರಂಪರೆಯ ಮಾನವೀಯ ಮೌಲ್ಯಗಳನ್ನು ಒತ್ತಿಹೇಳಿದ-ಲಿಂಗಣ್ಣ ಗೋನಾಳರ ಕೃತಿ

ವಚನ ಪರಂಪರೆಯ ಮಾನವೀಯ ಮೌಲ್ಯಗಳನ್ನು ಒತ್ತಿಹೇಳಿದ-ಲಿಂಗಣ್ಣ ಗೋನಾಳರ ಕೃತಿ

ಕಲಬುರಗಿ: ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ಆಶ್ರಯದಲ್ಲಿ “ವಚನ ಸಾಹಿತ್ಯ ಸಾಂಸ್ಕೃತಿಕ ಅನುಸಂಧಾನ” ಎಂಬ ಸಾಹಿತ್ಯಕೃತಿಯ ಕುರಿತು ವಿಶ್ಲೇಷಣಾತ್ಮಕ ವಿಮರ್ಶೆ ಕಾರ್ಯಕ್ರಮವು ವಿಜೃಂಭಣೆಯಿಂದ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತ್ಯಪ್ರೇಮಿ ಅಪ್ಪಾರಾವ ಅಕ್ಕೊಣಿ ವಹಿಸಿದ್ದರು.

ಈ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ತಿನ ಗೌರವಾನ್ವಿತ ಸದಸ್ಯರಾದ ಲಿಂಗಣ್ಣ ಗೋನಾಳ ಅವರು ರಚಿಸಿದ ವಚನ ಸಾಹಿತ್ಯ ಸಾಂಸ್ಕೃತಿಕ ಅನುಸಂಧಾನ ಪುಸ್ತಕದ ಕುರಿತು ಆಳವಾದ ಚರ್ಚೆ ನಡೆಯಿತು.

ವಿಮರ್ಶಕರಾದ ಸಾಹಿತಿ ಜನಾರ್ದಿ ಅವರು ಮಾತನಾಡಿ, “ಈ ಕೃತಿಯಲ್ಲಿ ವಚನ ಪರಂಪರೆಯು ಮಾನವೀಯ ಮೌಲ್ಯಗಳನ್ನು ಹೇಗೆ ಅಳವಡಿಸಿಕೊಂಡಿದೆ, ಸಮಾಜ ನಿರ್ಮಾಣದ ಅಂತರಾಳದಲ್ಲಿ ಶರಣರ ಚಿಂತನೆಗಳು ಎಷ್ಟು ಪ್ರಬಲವಾಗಿವೆ ಎಂಬುದನ್ನು ಲಿಂಗಣ್ಣ ಗೋನಾಳ ಅವರು ಸಂಶೋಧನಾ ದೃಷ್ಟಿಯಿಂದ ವಿಶ್ಲೇಷಿಸಿದ್ದಾರೆ” ಎಂದು ಪ್ರಶಂಸಿಸಿದರು.

ವಚನ ಸಾಹಿತ್ಯ — “ಈ ಪುಸ್ತಕದಲ್ಲಿ ವಚನಸಾಹಿತ್ಯದ ಮೂಲವಾದ ದೇವರು ಸರ್ವರಲ್ಲಿ ಇರುವರು ಎಂಬ ತತ್ತ್ವವನ್ನು ಜನಭಾಷೆಯಲ್ಲಿಯೇ ಸರಳವಾಗಿ ತಲುಪಿಸುವ ಪ್ರಯತ್ನ ಕಂಡುಬರುತ್ತದೆ. ಬುದ್ಧನ ಪಂಚಶೀಲ ಮತ್ತು ಶರಣರ ಪಂಚಆಚಾರ — ಈ ಎರಡೂ ಧಾರ್ಮಿಕ ಮಾರ್ಗಗಳು ಮಾನವೀಯ ಮೌಲ್ಯಗಳನ್ನೇ ಒತ್ತಿಹೇಳುತ್ತವೆ” ಎಂದರು.

“ಬಸವೇಶ್ವರರ ಶರಣರು ಕಾಯಕವೇ ಕೈಲಾಸ ಎಂಬ ಜೀವನದ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡರು. ಶುದ್ಧ ಕಾಯಕ ಮತ್ತು ಸತ್ಯದ ಜೀವನದಿಂದ ಸಮಾಜದ ಅಂತರಂಗವನ್ನು ಶುದ್ಧಗೊಳಿಸಲು ಪ್ರಯತ್ನಿಸಿದರು. ಈ ವಿಚಾರವನ್ನು ಲೇಖಕರು ಸುಂದರವಾಗಿ ನಿರೂಪಿಸಿದ್ದಾರೆ” ಎಂದು ಅಭಿಪ್ರಾಯಪಟ್ಟರು.

ಸಾಹಿತಿ ಗೋನಾಳ ಅವರು ತಮ್ಮ ಪುಸ್ತಕದಲ್ಲಿ ಬರೆದ ವಿಚಾರ, ಮೌಲ್ಯಗಳ ಕುರಿತು  ವಿವರಿಸಿದರು.

ಕಾರ್ಯಕ್ರಮದಲ್ಲಿ ವಿಜಯಕುಮಾರ ಪರುತೆ,ಎಸ್. ಎಲ್. ಪಾಟೀಲ,ರೇವಣಸಿದ್ದಪ್ಪ ದುಕಾನ,ಮಲ್ಲಿನಾಥ ತಳವಾರ,ರೇವಣಸಿದ್ದಯ್ಯ ನರನಾಳ,ಕಲ್ಯಾಣರಾವ ಪಾಟೀಲ,ಜಿ.ಎಸ್. ತುಮಕುರಕರ್ ,ಡಾ. ಗವಿಸಿದ್ಧ ಪಾಟೀಲ,ರಾಜಕುಮಾರ ಮಾಳಿಗೆ,ಸಿದ್ದರಾಮಯ್ಯ ಮಠ, ಶರಣಗೌಡ ಪಾಟೀಲ ಪಾಳಾ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂತ್ಯದಲ್ಲಿ ಅತಿಥಿಗಳು ಪುಸ್ತಕದ ಮಹತ್ವ, ಅದರ ಸಂಶೋಧನಾ ಹಿನ್ನೆಲೆ ಮತ್ತು ವಚನ ಪರಂಪರೆಯ ಸಾಮಾಜಿಕ ಪ್ರಸ್ತುತತೆಯ ಬಗ್ಗೆ ಉಪನ್ಯಾಸ ನೀಡಿದರು.