ಚಕೋರ |ಗೊರೂರು ರಾಮಸ್ವಾಮಿ ಕುರಿತು ಉಪನ್ಯಾಸ

ಚಕೋರ |ಗೊರೂರು ರಾಮಸ್ವಾಮಿ ಕುರಿತು ಉಪನ್ಯಾಸ
ಚಕೋರ |ಗೊರೂರು ರಾಮಸ್ವಾಮಿ ಕುರಿತು ಉಪನ್ಯಾಸ

ದಿನಾಂಕ ೩೦-೦೯-೨೦೧೫ ಭಾಲ್ಕಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡ ಚಕೋರ ಕಾರ್ಯಕ್ರಮದಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಬದುಕು ಬರಹ ಕುರಿತ ವಿಶೇಷ ಉಪನ್ಯಾಸ ಕಾರ್ಯವನ್ನು ಹಮ್ಮಿಕೊಂಡಿದ್ದರು.

ಉದ್ಘಾಟಕರಾದ ಅಶೋಕ ರಾಜೋಳೆ ಅವರು ಮಾತನಾಡಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ (ಜುಲೈ ೪, ೧೯೦೪ - ಸೆಪ್ಟೆಂಬರ್ ೨೮, ೧೯೯೧) ತಮ್ಮ ಪ್ರಬಂಧ ಲೇಖನಗಳಿಂದ ಕನ್ನಡ ಸಾಹಿತ್ಯದಲ್ಲಿ ಛಾಪು ಮೂಡಿಸಿದವರು. ಆರ್.ಕೆ.ನಾರಾಯಣ್ ಓದುಗರಿಗೆ ಮಾಲ್ಗುಡಿಯನ್ನು ಪರಿಚಯಿಸುವುದಕ್ಕೆ ಮುನ್ನವೇ ತಮ್ಮ ಕೃತಿಗಳ ಮೂಲಕ ರಾಮಸ್ವಾಮಿ ಅಯ್ಯಂಗಾರ್ ರವರು ಗೊರೂರು ಗ್ರಾಮವನ್ನು ಪರಿಚಯಿಸಿದ್ದರು. ಕಾವ್ಯನಾಮ - ಸೀತಾತನಯ. ಸ್ವಾತಂತ್ರ್ಯ ಚಳುವಳಿ, ಮೈಸೂರಿನಲ್ಲಿ ಪ್ರಜಾ ಸರ್ಕಾರಕ್ಕಾಗಿ ಚಳುವಳಿ, ಕರ್ನಾಟಕ ಏಕೀಕರಣ ಚಳುವಳಿಗಳಲ್ಲಿ ಹೋರಾಡಿ ಹರಿಜನೋದ್ಧಾರ ಮತ್ತು ಗ್ರಾಮೊದ್ಧಾರಕ್ಕಾಗಿ ಶ್ರಮಿಸಿದ ಅವರೊಬ್ಬ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ತಮ್ಮ ಹಾಸ್ಯ, ಕಾದಂಬರಿಕಾರ ಮತ್ತು ಗಾಂಧಿವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಹೆಸರುವಾಸಿಯಾದ ಜನಪ್ರಿಯ ಬರಹಗಾರರಾಗಿದ್ದಾರೆ ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ಆರತಿ ಪಾತ್ರೆಯವರು ಮಾತನಾಡುತ ರಾಮಸ್ವಾಮಿ ಅಯ್ಯಂಗಾರ್ ಅವರು ಜುಲೈ 4, 1904 ರಂದು ಹಾಸನದ ಗೊರೂರಿನಲ್ಲಿ ಶ್ರೀನಿವಾಸ ಅಯ್ಯಂಗಾರ್ ಮತ್ತು ಲಕ್ಷ್ಮಮ್ಮ ದಂಪತಿಗೆ ಜನಿಸಿದರು. ಹುಟ್ಟೂರಾದ ಗೊರೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಹಾಸನದಲ್ಲಿ ಪ್ರೌಢಶಾಲೆ ಸೇರಿದರು. ಚಿಕ್ಕ ವಯಸ್ಸಿನಲ್ಲಿ, ಅವರು ಹೈಸ್ಕೂಲ್‌ನಲ್ಲಿ ಓದುತ್ತಿದ್ದಾಗ ಅವರ ಗಮನವು ಭಾರತೀಯ ಸ್ವಾತಂತ್ರ್ಯ ಚಳವಳಿಯತ್ತ ಹೊರಳಿತು. ಹಾಗಾಗಿ ಅವರ ಓದು ಮಧ್ಯೆ ನಿಂತುಹೋಯಿತು. ಅವರು ಗಾಂಧೀಜಿಯಿಂದ ಹೆಚ್ಚು ಪ್ರಭಾವಿತರಾದರು ಮತ್ತು ಗುಜರಾತ್‌ನ ಗಾಂಧಿಪೀಠದಲ್ಲಿ ತಮ್ಮ ಅಧ್ಯಯನವನ್ನು ಮುಂದುವರೆಸಿದರು.

ನಂತರ ಬೆಂಗಳೂರಿನ ಖಾದಿಯ ಅಖಿಲ ಭಾರತ ಚರಕ ಸಂಘದ ಜವಾಬ್ದಾರಿಯನ್ನು ವಹಿಸಿಕೊಂಡು ಎಲ್ಲ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು ಎಂದು ಹೇಳಿದರು.

ಆಶಯ ನುಡಿಯನ್ನು ನುಡಿದ ಡಾ ನಾಗಮ್ಮ ಹೆಚ್ ಅವರು ಬೆಂಗಳೂರಿನ ಗುರುಕುಲ ಆಶ್ರಮ ಸೇರಿ ಹರಿಜನ ಸಮುದಾಯದ ಜನರ ಉನ್ನತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು ಎಂದು ಹೇಳಿದರು.

ಡಾ ಹೇಮಾವತಿ ಪಾಟೀಲ ಅವರು ಮಾತನಾಡುತ್ತಾ ಮೊದಲಿನಿಂದಲೂ ಗೊರೂರು ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದರು. ಮದ್ರಾಸಿನ ಲೋಕಮಿತ್ರ ಪತ್ರಿಕೆ ಮತ್ತು ಆಂಧ್ರಪ್ರದೇಶದ ಭಾರತಿ ಪತ್ರಿಕೆಗೆ ಕನ್ನಡ ಪ್ರಚಾರವನ್ನು ಬರೆಯುತ್ತಿದ್ದರು ಎಂದು ಹೇಳಿದರು. ಉಪಸ್ಥತರಾದ ಡಾ ಮಕ್ತುಂಬಿ ಎಂ ಅವರು ಇದೇ ಸಮಯದಲ್ಲಿ ಅವರು ಬ್ರಿಟಿಷರ ವಿರುದ್ಧ ಗಾಂಧೀಜಿ ಕರೆ ನೀಡಿದ್ದ ಚಲೇಜಾವೋ ಚಳವಳಿಯಲ್ಲಿ ಭಾಗವಹಿಸಿದ್ದರು. ಈ ಆಂದೋಲನದಲ್ಲಿ ಭಾಗವಹಿಸಿದ್ದಕ್ಕಾಗಿ ಗೊರೂರು ಕೂಡ ಕೆಲಕಾಲ ಜೈಲಿನಲ್ಲಿ ಕಳೆದರು.

ಇವೆಲ್ಲದರ ನಡುವೆಯೇ ಹುಟ್ಟೂರಾದ ಗೊರೂರಿಗೆ ಬಂದು ಮೈಸೂರು ಗ್ರಾಮ ಸೇವಾ ಸಂಘ ಎಂಬ ಸಮಾಜವನ್ನು ಸ್ಥಾಪಿಸಿ ಹರಿಜನರ ಉನ್ನತಿ, ಖಾದಿ ಅಭಿಯಾನ, ವಯಸ್ಕ ಶಿಕ್ಷಣ, ಗ್ರಾಮೋದ್ಯೋಗ ಅಭಿವೃದ್ಧಿಯಂತಹ ಹಲವಾರು ಸಾಮಾಜಿಕ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡರು. “ಬರಹಗಾರ ಎನ್ನುವುದಕ್ಕಿಂತ ಹೆಚ್ಚಾಗಿ ನಾನೊಬ್ಬ ಸಾಮಾನ್ಯ” ಎಂದು ಹೇಳುವ ಮೂಲಕ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಸಾಹಿತ್ಯ ಮತ್ತು ಸಾಮಾಜಿಕ ಬೆಳವಣಿಗೆ ಎರಡರಲ್ಲೂ ಮರೆಯಲಾಗದ ಛಾಪು ಮೂಡಿಸಿದ್ದಾರೆ. ಕರ್ನಾಟಕ ಏಕೀಕರಣ ಚಳವಳಿಯಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದರು.

ಕೃತಿಗಳು :ಪ್ರಬಂಧಗಳು, ಕಥೆಗಳು, ಕಾದಂಬರಿಗಳು, ಪ್ರವಾಸ ಕಥನ, ಅನುವಾದ, ಹಾಸ್ಯ ಬರಹಗಳಲ್ಲಿ ಗೊರೂರರ ಕೊಡುಗೆಗಳನ್ನು ಕಾಣಬಹುದು.ಹೇಮಾವತಿ, ಊರ್ವಶಿ, ಮೆರವಣಿಗೆ, ಪುನರ್ಜನ್ಮ, ಇವು ಗೊರೂರರ ಕೆಲವು ಕಾದಂಬರಿಗಳು. ಅವರ ಕಥೆ “ಭೂತಯ್ಯನ ಮಗ ಅಯ್ಯು”, ಕನ್ನಡ ಚಲನಚಿತ್ರವಾಗಿ ಮಾಡಲ್ಪಟ್ಟಿತು ಮತ್ತು ಅದು ತೆರೆಯ ಮೇಲೆ ದೊಡ್ಡ ಯಶಸ್ಸನ್ನು ಕಂಡಿತು. ಗೊರೂರು ತಮ್ಮ ಬರಹಗಳಲ್ಲಿ ಹಳ್ಳಿಯ ಬದುಕಿನ ಸೊಗಸನ್ನು ಸುಂದರವಾಗಿ ಚಿತ್ರಿಸಿದ್ದಾರೆ. “ನಮ್ಮ ಊರಿನ ರಸಿಕರು”, “ಹೇಮಾವತಿಯ ತೀರದಲ್ಲಿ”, “ಹಳ್ಳಿಯ ಚಿತ್ರಗಳು”, “ಬೆಸ್ತರ ಕರಿಯ”, “ಗರುಡಗಂಬದ ದಾಸಯ್ಯ”, “ಶಿವರಾತ್ರಿ”, “ವೈಯಾರಿ”, “ಗೋಪುರದ ಬಾಗಿಲು”, ಇವು ಗೊರೂರರ ಕೆಲವು ಪ್ರಮುಖ ಕೃತಿಗಳು.

ಪ್ರಶಸ್ತಿಗಳು :1947 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅವರ ಅವಿಸ್ಮರಣೀಯ ಸಾಧನೆಗಳು ಮತ್ತು ಕೊಡುಗೆಗಳನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಿತು. 1980 ರಲ್ಲಿ, ಅವರ ಅದ್ಭುತ ವಿಡಂಬನಾತ್ಮಕ ಪ್ರವಾಸ ಕಥನ “ಅಮೆರಿಕದಲ್ಲಿ ಗೊರೂರು” ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಂದುಕೊಟ್ಟಿತು. ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. 1982ರಲ್ಲಿ ಶಿರಸಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನೂ ಗೊರೂರು ವಹಿಸಿದ್ದರು ಎಂದು ನುಡಿದರು.

ಮುಖ್ಯ ಅತಿಥಿಗಳಾದ ನಾಗಭೂಷಣ ಮಾಮಡಿಯವರು ಮಾತನಾಡಾತ ಸೆಪ್ಟೆಂಬರ್ 28, 1991 ರಂದು, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ತಮ್ಮ 87 ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾದರು. ಅವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಎಲ್ಲಾ ಕೊಡುಗೆಗಳಿಗಾಗಿ ಕರ್ನಾಟಕದ ಜನರು ಅವರಿಗೆ ಋಣಿಗಳು ಮತ್ತು ಕೃತಜ್ಞರಾಗಿರಬೇಕು ಎಂದು ಹೇಳಿದರು.

ನಿರೂಪಣೆ ಡಾ ಮೀನಾಕ್ಷಿಯವರು ನಡೆಸಿಕೊಟ್ಟರು ಡಾ ಜಯಶ್ರೀ ಯವರು ಸ್ವಾಗತಿಸಿದರು. ಡಾ ಸಂಪತಕೂಮಾರಿಯವರು ವಂದಿಸಿದರು.