ಕಿನ್ನರಿ ಬ್ರಹ್ಮಯ್ಯ ಶರಣ

ಕಿನ್ನರಿ ಬ್ರಹ್ಮಯ್ಯ ಶರಣ
ಆಕಾರವೆಂಬೆನೆ ನಿರಾಕಾರವಾಗಿದೆ
ನಿರಾಕಾರವೆಂಬೆನೆ ಅತ್ತತ್ತ ತೋರುತ್ತದೆ.
ತನ್ನನಳಿದು ನಿಜವುಳಿದ ಮಹಾಲಿಂಗ ತ್ರಿಪುರಾಂತಕನ ನಿಲವ ಕಂಡು ಒಳಕೊಂಡ
ಮರುಳಶಂಕರದೇವರ ಮೂರ್ತಿಯ ನಿಮ್ಮಿಂದ ಕಂಡು ಬದುಕಿದೆನು ಕಾಣಾ ಸಂಗನಬಸವಣ್ಣಾ.
ಕಿನ್ನರಿ ಬ್ರಹ್ಮಯ್ಯ
ವಚನ ಅನುಸಂಧಾನ
ಅಪ್ಪ ಬಸವಾದಿ ಶರಣರ ಚರಿತ್ರೆಯನ್ನ ವ್ಯವಸ್ಥಿತ ರೂಪದಲ್ಲಿ ಬರೆದಿಡಲಾಗಿಲ್ಲ ಎನ್ನುವುದು ತಿಳಿದ ಸಂಗತಿಯೇ ಆಗಿರುತ್ತದೆ. ಶೂನ್ಯ ಸಂಪಾದನೆಕಾ ರರು ವಚನಾಧಾರದ ಮೇಲೆ ತಮ್ಮದೇ ಆಗಿರುವ ಗ್ರಹಿಕೆಯ ದಾರದಲ್ಲಿ ಪೋಣಿಸಿ ವಚನದಲ್ಲಿರುವ ಹಲವಾರು ಸಂದರ್ಭಗಳನ್ನು ಸಂಭಾಷಣೆಗಳಲ್ಲಿ ರೂಪಿಸಿ ಕೊಟ್ಟಿರುವ ಪರಿಭಾವನೆಗಳನ್ನೇ ಚರಿತ್ರೆ ಎನ್ನುವ ನಿಲುವಿನಲ್ಲಿ ನಿಂತಿದ್ದೇವೆ. ಅಂತಹುದೇ ಒಂದು ಪ್ರಮುಖ ಸಂದರ್ಭದ ವಿಚಾರವನ್ನ ಇಲ್ಲಿ ಈ ಮೇಲಿನ ಕಿನ್ನರಿ ಬ್ರಹ್ಮಯ್ಯಶರಣರ ವಚನವು ಗರ್ಭೀಕರಿಸಿಕೊಂಡಿದೆ. ಅದನ್ನು ಅನುಸಂಧಾನ ಮಾಡುವ ಮೂಲಕ ಪರಿಶೀಲಿಸಿ ನೋಡೋಣ.
ಆಕಾರವೆಂಬೆನೆ ನಿರಾಕಾರವಾಗಿದೆ
ನಿರಾಕಾರವೆಂಬೆನೆ ಅತ್ತತ್ತ ತೋರುತ್ತದೆ.
ಪ್ರಸ್ತುತ ವಚನದ ಪ್ರಾರಂಭದಲ್ಲಿನ ಈ ಎರಡು ಸಾಲುಗಳನ್ನು ಓದಿದಾಗ ಅನಿಸುವುದು ಏನಂದ್ರೆ,
ಶರಣರ ನಿರಾಕಾರ ನಿರಂಜನ ನಿರ್ಗುಣ ಅಗಮ್ಯ ಅಗೋಚರ ಅಪ್ರತಿಮವಾದ ಬಯಲು ತತ್ವದ ಸಾಕಾರ ರೂಪದ ಕುರುಹು ಆಗಿರುವ ಇಷ್ಟಲಿಂಗ ಕುರಿತಂತೆ ಈ ಸಾಲುಗಳು ಹೇಳುತ್ತಿರುವಂತೆ ಇಲ್ಲಿ ನಮ್ಮ ಗ್ರಹಿಕೆಗೆ ಬರುತ್ತದೆ. ಯಾಕೆಂದ್ರೆ ಆಕಾರದ ರೂಪದಲ್ಲಿರುವ ಇಷ್ಟಲಿಂಗವು ಈ ಆಕಾರವಷ್ಟೇ ಇದರ ಪರಿವಲಯ ಎಂದು ಹೇಳಹೋದ್ರೆ, ಅದು ನಮ್ಮ ಪರಿಭಾವನೆಯ ವಲಯವನ್ನೇ ವಿಸ್ತರಿಸಿ ಅಸೀಮಗೊಳಿಸಿ ನಿರಾಕಾರವಾಗಿದೆ! ಸರಿ ಅದು ನಿರಾಕಾರವೇ ಎಂದು ಭಾವಿಸಿದರೆ ಅದೇ ಅತ್ತತ್ತ ತೋರುತ್ತದೆ!! ಎಂದು ವಚನಕಾರ ಆಶ್ಚರ್ಯದ ಭಾವವನ್ನ ತೋರಿಸಿದ್ದಾರೆ. ಒಟ್ಟಾರೆಯಾಗಿ ಇದು ವಚನದ ಮುನ್ನುಡಿಯಂತಿದೆ ಎನಿಸುತ್ತದೆ.
ತನ್ನನಳಿದು ನಿಜವುಳಿದ ಮಹಾಲಿಂಗ ತ್ರಿಪುರಾಂತಕನ ನಿಲವ ಕಂಡು ಒಳಕೊಂಡ
ಮರುಳಶಂಕರದೇವರ ಮೂರ್ತಿಯ ನಿಮ್ಮಿಂದ ಕಂಡು ಬದುಕಿದೆನು ಕಾಣಾ ಸಂಗನಬಸವಣ್ಣಾ.
ವಚನದ ಈ ಸಾಲುಗಳು; ವಚನ ಪ್ರಾರಂಭದ ಆ ಮೇಲಿನ ಎರಡು ಸಾಲಲ್ಲಿನ ಅನಿರ್ದಿಷ್ಟಭಾವದ ಗ್ರಹಿಕೆಗೆ ಸ್ಪಷ್ಟತೆಯನ್ನು ನೀಡುವ ಮೂಲಕವಾಗಿ ಶರಣರ ಚರಿತ್ರೆಯ ಒಂದು ನಿರ್ದಿಷ್ಟ ಸಂದರ್ಭದ ಕುರಿತು ಮಾತನಾಡುತ್ತವೆ. ಅದೇನಂದರೆ, ಮಹಾ ಮನೆಯಲ್ಲಿ ಹನ್ನೆರಡು ವರ್ಷಗಳ ಕಾಲ ಯಾರ ಗಮನಕ್ಕೂ ಬಾರದಂತೆ ಅನಾಮಿಕ ನೆಲೆಯಲ್ಲೇ ಗುಪ್ತಭಕ್ತಿಯಲ್ಲಿದ್ದು ಅನನ್ಯವಾದಂಥ ಸಾಧನೆಯ ಮಾಡಿದ ಮರುಳ ಶಂಕರ ದೇವರು ಮಾತ್ರ ತಮ್ಮ ತನುತ್ರಯದ ಮಲಗಳನ್ನು ಕಳೆದುಕೊಂಡು ಪರಿ ಶುದ್ಧವಾಗಿ ಮಹಾಲಿಂಗ ತ್ರಿಪುರಾಂತಕನ ನಿಲುವ ಕಂಡುಂಡು ಮಹಾಲಿಂಗ ಮೂರ್ತಿಯೇ ಆದಂಥ ಮರುಳ ಶಂಕರ ದೇವರ ಮೂರ್ತಿಯ ಕಂಡದ್ದು ಅಪ್ಪ ಬಸವಣ್ಣನವರ ಕೃಪೆಯಿಂದ ಎಂದು ಇಲ್ಲಿ ಕಿನ್ನರಿ ಬ್ರಹ್ಮಯ್ಯ ಶರಣರು ಹೇಳುವ ಮೂಲಕ ಶರಣರ ಚರಿತ್ರೆಯ ಒಂದು ಪ್ರಮುಖ ಸಂದರ್ಭ ವನ್ನ ಈ ವಚನದಲ್ಲಿ ಇಷ್ಟಲಿಂಗ ಮತ್ತು ಚಿನ್ಮಯ ಲಿಂಗದ ಹೋಲಿಕೆ ಮಾಡಿ ಮರುಳಶಂಕರ ದೇವ ಸಾಧಿಸಿದ ಔನ್ನತ್ಯವನ್ನು ಚಿತ್ರಿಸಿದ್ದು ಇಂಥ ಶರಣ ದರ್ಶನ ಪಡೆಯುವ ಭಾಗ್ಯ ಅಪ್ಪ ಬಸವಣ್ಣನವರ
ಕೃಪೆ ಎಂದು ತಮ್ಮ ಧನ್ಯತಾಭಾವವನ್ನು ಕಿನ್ನರಿ ಬ್ರಹ್ಮಯ್ಯ ಶರಣರು ಇಲ್ಲಿ ಈ ವಚನದ ವಿಷಯ ದಲ್ಲಿ ಇಂಬಿಟ್ಟು ತೋರಿಸಿದ್ದಾರೆ.
ಅಳಗುಂಡಿ ಅಂದಾನಯ್ಯ