ಮಡಿವಾಳ ಮಾಚಿದೇವ

ಮಡಿವಾಳ ಮಾಚಿದೇವ

ಇರುಳು ಹಗಲೆಂದರಿಯದ ಅಂಧಕನ 

ಕೈಯಲ್ಲಿ ಕೈದೀವಿಗೆ ಇರ್ದಡೇನು, 

ಪಥವ ನೋಡಿ ನಡೆಯಬಲ್ಲನೆ ?

ಗುರುಚರಪರವನರಿಯದ ದುರಾಚಾರಿಯ ಕೈಯಲ್ಲಿ ಲಿಂಗವಿರ್ದಡೇನು, ಅವ ಸತ್ಯ ಸದಾಚಾರವನುಳ್ಳ ಭಕ್ತಿವಂತರಿಗೆ ಸರಿಯಹನೆ ?

ಅವನು ಶಿವಭಕ್ತನಾಗಿ ಕೆಟ್ಟುಹೋದ

ತೆರನೆಂತೆಂದಡೆ: ಭಕ್ತರ ಗೃಹದಲ್ಲಿ ತುಡುಗ 

ತಿಂದ ನಾಯಿ, ಮರಳಿ ಮತ್ತೆ ಹೊಲಸಿಂಗೆರಗಿದ ತೆರನಾಯಿತೆಂದ ಕಲಿದೇವಯ್ಯ

    *ಮಡಿವಾಳ ಮಾಚಿದೇವಯ್ಯ*

     *ವಚನ ಅನುಸಂಧಾನ*

'ಇಷ್ಟಲಿಂಗ' ಜನಕ ಅಪ್ಪ ಬಸವಣ್ಣನವರೆಂಬುದು ಈಗ ನಿಜ ಲಿಂಗಾಯತ ಜನಮಾನಸದಲ್ಲಿ ಗಟ್ಟಿ ಯಾಗಿ ಬೆಳೆದು ನಿಂತಿದೆ. ಈ ಮಾತು ಯಾಕೆಂದ್ರೆ ಇಂದಿನ ವೈಜ್ಞಾನಿಕ ಆಧುನಿಕ ಯುಗದ ದಂದುಗ ದಲ್ಲಿರುವ ಅನೇಕ ಅನ್ಯರನ್ನು ಅವಲಂಬಿಸಿರುವ ಲಿಂಗಾಯತ ಸಮಾಜದ ಸಂಶಯದ ಸೋಂಕಿನ ಮನಸುಗಳು ಇಷ್ಟಲಿಂಗದ ಸೃಷ್ಟಿಯ ಕುರಿತಂತೆ ಅನ್ಯರ ಬೋಧನೆಗೆ ಒಳಗಾಗಿರುವ ಕಾರಣದಿಂದ ಸ್ಪಷ್ಟತೆಗೆ ಅಂಥವರ ಹೃನ್ಮನಗಳು ಪಕ್ವವಾಗಿಲ್ಲಾ ಎನ್ನುವುದು ಸುಳ್ಳಲ್ಲ. ಅದೇನೇ ಇದ್ದರೂ ಅಂದಿನ ೧೨ನೆ ಶತಮಾನದ ಬಹುತೇಕ ಜನ ಇಷ್ಟಲಿಂಗವ ನ್ನು ಧರಿಸಿ ಲಿಂಗಾಯತರಾದವರು ಅಪ್ಪ ಬಸವ ಣ್ಣನವರು ಕೊಟ್ಟ ಇಷ್ಟಲಿಂಗವನ್ನು ಅತ್ಯಂತ ನಿಷ್ಠೆ ಭಯಭಕ್ತಿಯಿಂದ ಇಷ್ಟಪಟ್ಟು ತಂತಂ ಕೊರಳಲ್ಲಿ ಕಟ್ಟಿಕೊಂಡರಷ್ಟೇ ಅಲ್ಲದೆ ಇಷ್ಟಲಿಂಗ ಸಾಧನೆಯ ಮಾಡಿ ಅಮರ ಗಣಂಗಳಾಗಿ ಅಪ್ಪ ಬಸವಣ್ಣವರ ಕಾರುಣ್ಯದ ಕರುಣೆಯಿಂದ ಅನುಭವ ಮಂಟಪ ದಲ್ಲಿ ಜರುಗಿದ ಅನುಭಾವಿಕ ಸಂವಾದಗಳೊಂದಿ ಗೆ ಬೆಳೆದು ಬೆಳಕಾಗಿ ಬೆಳಗಿದರೆನ್ನುವುದು ಈಗಿನ ಚಾರಿತ್ರಿಕ ಸತ್ಯವಾಗಿದೆ. ಆದರೆ ಇಲ್ಲಿ ಈ ಮೇಲಿನ ಮಡಿವಾಳ ಮಾಚಿದೇವರ ವಚನವು ಇಷ್ಟಲಿಂಗ ವನ್ನು ಧರಿಸಿದರೂ ಅದನ್ನ ಸರಿಯಾದ ಕ್ರಮದಲ್ಲಿ ಅನುಸಂಧಾನ ಮಾಡಿ ಸಾಧಿಸದೇ ಠಕ್ಕತನವನ್ನು ಬೀಳುವ ಲಿಂಗಾಯತನ ಕುರಿತಂತೆ ಕಠಿಣವಾಗಿ ನುಡಿಯುತ್ತದೆ. ಇದನ್ನ ಅನುಸಂಧಾನ ಮಾಡುವ ಮೂಲಕ ವಿವರವಾಗಿ ಅರಿತುಕೊಳ್ಳಲು ಪ್ರಯತ್ನ ಮಾಡಿ ನೋಡೋಣ.

*#ಇರುಳು ಹಗಲೆಂದರಿಯದ ಅಂಧಕನ* 

*ಕೈಯಲ್ಲಿ ಕೈದೀವಿಗೆ ಇರ್ದಡೇನು,* 

*ಪಥವ ನೋಡಿ #ನಡೆಯಬಲ್ಲನೆ ?*

ಇಲ್ಲಿ ಇಷ್ಟಲಿಂಗದ ಕುರಿತಾಗಿ ಮಾತನಾಡುವುದು ಇರುವ ಕಾರಣಕ್ಕೆ ಪೀಠಿಕೆ ರೂಪದಲ್ಲಿ ವಚನದ ಈ ಸಾಲುಗಳು ಸೂಕ್ತವಾಗಿಯೇ ಉಕ್ತವಾಗಿವೆ. 

ಹಗಲಿರುಳಿನ ಫರಕನ್ನು ಅರಿಯಲಾರದ ಕುರುಡ ಕೈಯಲ್ಲಿ ಕೈದೀವಿಗೆ ಹಿಡಿದ ಮಾತ್ರಕ್ಕೆ ಸರಿಯಾದ ಹಾದಿಗೆ ಆತ ಹತ್ತಲಾರನು ಎನ್ನುವುದೇ ಪ್ರಸ್ತುತ ವಚನದ ಈ ಸಾಲಲ್ಲಿರುವ ತಾತ್ಪರ್ಯವಾಗಿದೆ.

*#ಗುರುಚರಪರವನರಿಯದ* *ದುರಾಚಾರಿಯ ಕೈಯಲ್ಲಿ ಲಿಂಗವಿರ್ದಡೇನು,* *ಅವ ಸತ್ಯ ಸದಾಚಾರವನುಳ್ಳ ಭಕ್ತಿವಂತರಿಗೆ #ಸರಿಯಹನೆ?*

ಮೇಲೆ ತಿಳಿದು ಕೊಂಡಂತೆ, ಕುರುಡನ ಕೈಯಲ್ಲಿ ಕೈದೀವಿಗೆ ಇದ್ದರೂ ಸಹಿತ ಆತನು ಹೇಗೆ ಸರಿಯ ದಾರಿಯಲ್ಲಿ ಹೋಗುವದಿಲ್ಲವೋ ಹಾಗೆಯೇನೇ ಇಲ್ಲಿಯೂ ಕೂಡಾ ಗುರು ಲಿಂಗ ಜಂಗಮವನ್ನು ಸರಿಯಾಗಿ ಅರಿಯದ ದುರಾಚಾರಿಯು ಕೈಯಲ್ಲಿ ಇಷ್ಟಲಿಂಗವನ್ನ ಹಿಡಿದು ಡಾಂಭೀಕನಾಗಿದ್ದರೇನು ಬಂತು? ಆತ ಸತ್ಯ ಸದಾಚಾರ ಉಳ್ಳ ಭಕ್ತಿವಂತ ರಿಗೆ ಸಮನಾಗಲಾರನು ಎನ್ನುವುದು ಮಡಿವಾಳ ಮಾಚಿದೇವರ ಸುಸ್ಪಷ್ಟವಾದ ನಿಲುವಾಗಿದೆ .

*#ಅವನು ಶಿವಭಕ್ತನಾಗಿ ಕೆಟ್ಟುಹೋದ*

*ತೆರನೆಂತೆಂದಡೆ:* *ಭಕ್ತರ *ಗೃಹದಲ್ಲಿ ತುಡುಗ* 

*ತಿಂದ ನಾಯಿ,* *ಮರಳಿ ಮತ್ತೆ ಹೊಲಸಿಂಗೆರಗಿದ ತೆರನಾಯಿತೆಂದ #ಕಲಿದೇವಯ್ಯ*

ಮಾಚಿದೇವರು; ಸದಾಚಾರ ಇಲ್ಲದೆ ಇಷ್ಟಲಿಂಗವ ಕೈಯಲ್ಲಿ ಹಿಡಿದುಕೊಂಡ ಡಾಂಭಿಕನನ್ನು ಅಷ್ಟಕ್ಕೆ ಬಿಡದೆ ಸುಮ್ಮನಾಗುವುದಿಲ್ಲ! ಅಂಥವ ಶಿವಭಕ್ತ ನಾಗಿಯೂ ಕೆಟ್ಟು ಹೋದದ್ದು ಯಾವ ತೆರನಾಗಿ ಎಂದರೆ, ಭಕ್ತರ ಮನೆಯಲ್ಲಿಯ ಅಡುಗೆಯನ್ನು ತುಡುಗು ಮಾಡಿ ತಿಂದಂಥ ನಾಯಿಯು ಹೊರಳಿ ಮತ್ತೆ ಹೊಲಸು ಹೇಸಿಗೆ ಕಂಡಲ್ಲಿ ಬಾಯಿಯನ್ನು ಹಾಕಿದ ತೆರನಂತೆ! ಎಂದು ಅತ್ಯಂತ ನಿಷ್ಠುರವಾದ ಪದಗಳ ಮೂಲಕ ಅಂಥಹ ದುರಾಚಾರಿಯನ್ನು ಟೀಕಿಸಿದ್ದಾರೆ. ತನ್ಮೂಲಕವಾಗಿ ಇಷ್ಟಲಿಂಗವನ್ನು ಕಟ್ಟಿಕೊಳ್ಳುವುದರಷ್ಷೇ ಮುಖ್ಯ ಸದಾಚಾರಿಯೂ ಆಗಿರಬೇಕು ಎನ್ನುವುದನ್ನು ಪ್ರಸ್ತುತ ಈ ವಚನದ ಮೂಲಕ ಸಾರಿ ಹೇಳುತ್ತಾರೆ. ಇಂದಿನ ಬಹುತೇಕ ಲಿಂಗಾಯತರಿಗೆ ಈ ವಚನವು ಯಥಾವತ್ತಾಗಿ ಅನ್ವಯವಾಗುತ್ತದೆ ಎನ್ನುವುದೇ ಇಲ್ಲಿನ ಬೆರಗು ಮತ್ತು ವಿಸ್ಮಯದ ನಿಜವಾದ ಮಾತಾಗಿದೆ.

                     ಅಳಗುಂಡಿ ಅಂದಾನಯ್ಯ*