ನಾಗೇಂದ್ರನ ಔದಾರ್ಯ (ಸಣ್ಣ ಕತೆ)

ನಾಗೇಂದ್ರನ ಔದಾರ್ಯ (ಸಣ್ಣ ಕತೆ)

ನಾಗೇಂದ್ರನ ಔದಾರ್ಯ (ಸಣ್ಣ ಕತೆ)

ನಾಗೇಂದ್ರ ಮನೆಗೆ ಹಿರಿಯ ಮಗ. ಕೃಷಿ ಕಾರ್ಯ ಮಾಡುತ್ತ ತಂದೆಗೆ ಆಸರೆಯಾಗಿದ್ದ. ತಂದೆ ತೀರಿ ಹೋದ ಮೇಲೆ ಆತನ ಸ್ಥಾನದಲ್ಲಿ ನಿಂತು ತನ್ನ ತಂಗಿಯ ಮದುವೆ ಮಾಡಿದ. ತನಗೆಷ್ಟೇ ಕಷ್ಟವಾದರೂ ತನ್ನ ಕಿರಿಯ ತಮ್ಮ ರಮೇಶನಿಗೆ ಯಾವ ಕೊರತೆಯೂ ಆಗದಂತೆ ನೋಡಿಕೊಂಡ. ಉನ್ನತ ಶಿಕ್ಷಣವನ್ನೂ ಕೊಡಿಸಿದ. ದೊಡ್ಡ ಹುದ್ದೆಯೊಂದನ್ನು ಪಡೆದುಕೊಂಡ ರಮೇಶ ದೂರದ ಬೆಂಗಳೂರಲ್ಲಿಯೇ ನೆಲೆಸಿದ. ತನ್ನ ಸಹೋದ್ಯೋಗಿ ಜ್ಯೋತಿಯನ್ನು ಪ್ರೀತಿಸಿ ಮದುವೆಯಾದ. ನೋಡನೋಡುತ್ತಲೇ ಕೋಟ್ಯಾಧಿಪತಿಯಾದ. ತನ್ನ ಇಬ್ಬರು ಮಕ್ಕಳನ್ನು ಪ್ರತಿಷ್ಠಿತ ಶಾಲೆಗೆ ಸೇರಿಸಿದ.ಕಷ್ಟ ಪಟ್ಟು ಓದಿಸಿದ ಅಣ್ಣ ನಾಗೇಂದ್ರನನ್ನು, ಹೆತ್ತ ತಾಯಿಯನ್ನು ಸಂಪೂರ್ಣವಾಗಿ ಮರೆತುಬಿಟ್ಟ.

       ಇತ್ತ ಅಣ್ಣ ನಾಗೇಂದ್ರನಿಗೆ ಅತಿವೃಷ್ಟಿಯಿಂದಾಗಿ ಜೀವನ ಸಾಗಿಸುವುದು ಕಷ್ಟಕರವಾಯಿತು. ತನಗೆಷ್ಟೇ ಕಷ್ಟವಾದರೂ ಶ್ರೀಮಂತನಾಗಿದ್ದ ತಮ್ಮ ರಮೇಶನಿಗೆ ಸಹಾಯ ಕೇಳಲಿಲ್ಲ. ಮುಪ್ಪಿನ ತಾಯಿ ಅನಾರೋಗ್ಯದಿಂದಾಗಿ ಹಾಸಿಗೆ ಬಿಟ್ಟು ಏಳದಂತಾದಳು. ಸಾಲಸೋಲ ಮಾಡಿ ತಾಯಿಯನ್ನು ದೊಡ್ಡ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ. ತಾಯಿಯ ಅನಾರೋಗ್ಯದ ವಿಷಯ ತಿಳಿದ ರಮೇಶ ಅಣ್ಣ ನಾಗೇಂದ್ರನಿಗೆ ಫೋನಾಯಿಸಿದ. ಯಾವತ್ತೂ ಅಣ್ಣನನ್ನು ನೆನೆಸಿ ಮಾತನಾಡದ ರಮೇಶ ತಾಯಿಯ ಆರೋಗ್ಯದ ಬಗ್ಗೆ ವಿಚಾರಿಸಿದ. ತಮ್ಮನ ಕಾಳಜಿಪರ ಮಾತುಗಳು ನಾಗೇಂದ್ರನಿಗೆ ತುಂಬಾ ಖುಷಿ ಕೊಟ್ಟವು. ತಾಯಿಯ ಆಸ್ಪತ್ರೆಯ ಬಿಲ್ಲನ್ನು ಕಳಿಸಲು ರಮೇಶ ತಿಳಿಸಿದ. ಅಂತೆಯೆ ನಾಗೇಂದ್ರ ಆಸ್ಪತ್ರೆಯ ಖರ್ಚು ವೆಚ್ಚದ ಬಿಲ್ಲನ್ನು ಕಳಿಸಿಕೊಟ್ಟ. ರಮೇಶ , ಬಿಲ್ಲನ್ನು ತನ್ನ ಕಂಪನಿಗೆ ಸಲ್ಲಿಸಿ ಹಣವನ್ನು ಪಡೆದುಕೊಂಡು ತನ್ನ ಖಾತೆಗೆ ಜಮೆ ಮಾಡಿಕೊಂಡ. ತಾಯಿಯ ಆರೋಗ್ಯಕ್ಕಾಗಿ ಬಿಡಿಗಾಸನ್ನೂ ಕಳಿಸಲಿಲ್ಲ. ಈ ವಿಷಯ ಅಣ್ಣ ನಾಗೇಂದ್ರನಿಗೆ ಗೊತ್ತಾದರೂ ತಾಯಿಗೆ ತಿಳಿಸದೆ ತನ್ನೊಳಗೆ ಗೌಪ್ಯವಾಗಿರಿಸಿಕೊಂಡ. ತಮ್ಮ ರಮೇಶನ ಕೃತಘ್ನತೆಗೆ ಕೊನೆಯೇ ಇಲ್ಲ. ಅಣ್ಣ ನಾಗೇಂದ್ರನ ಔದಾರ್ಯಕ್ಕೆ ಎಣೆಯೇ ಇಲ್ಲ.

       ಪ್ರೊ.ಶೋಭಾದೇವಿ ಚೆಕ್ಕಿ