ಬಾಹೂರ ಬೊಮ್ಮಣ್ಣ

ಬಾಹೂರ ಬೊಮ್ಮಣ್ಣ
ಹುರಿಯ ಮೆಟ್ಟುವ ವಿಹಂಗ ಜಾತಿ ಜೀವಂಗಳೆಲ್ಲವೂ ಮುಂಚಿ ಅವ ಬಲ್ಲಡೆ
ಸಂಚವ ಮೆಟ್ಟಿ ತಾವು ಸಿಕ್ಕುವವೆ ?
ಆ ತೆರನ ಕಂಡು ತ್ರಿವಿಧದ ಹುರಿಯಲ್ಲಿ ಅಡಿಯನಿಕ್ಕಿ ಅಡೆಗೊಡ್ಡಿದಂತೆ ಬಿದ್ದಿರುತ್ತ, ಮತ್ತರಿಕೆಯ ಮಾತ ನುಡಿದಡೆ ಅದು ಬರುಕಟಿಯೆಂಬರು.
ನೆರೆ ಅರಿದು ಹರಿದ ಶರಣರು
ಸಂಗನಬಸವಣ್ಣ ಸಾಕ್ಷಿಯಾಗಿ ಬ್ರಹ್ಮೇಶ್ವರ ಲಿಂಗವ ಹೊರೆ ಹೊರೆಯಲ್ಲಿ ವೇಧಿಸಬೇಕು.
*ಬಾಹೂರ ಬೊಮ್ಮಣ್ಣ*
ವಚನ ಅನುಸಂಧಾನ
ಶರಣರು ರಚಿಸಿದ ವಚನಗಳು; ಅವರ ಅರಿವು ಗೊಂಡ ತನು ಮನ ಭಾವಗಳು ತಮ್ಮ ಬದುಕಿನ ದಾರಿಯಲ್ಲಿ ತಪ್ಪಾಗದಂತೆ ಅರಿವಿನ ಜ್ಞಾನವನ್ನು ತಮ್ಮೊಳಹೊರಗೆ ಬಿತ್ತಿ ಬೆಳೆದು ಆಚರಣೆಯನ್ನು ಮಾಡಿ ದಕ್ಕಿಸಿಕೊಂಡ ಅನುಭವದ ರಸಪಾಕವನ್ನ ಅನುಭವ ಮಂಟಪದ ಜಂಗಮ ದಾಸೋಹದಲ್ಲಿ ಹಂಚಿ, ಚರ್ಚೆ ಮಾಡಿ ಪಡೆದ ಮಹದ ಮಿಂಚಿನಾ ಹೊಳಪನು ಹದವಾಗಿ ಮಿದ್ದುತ್ತಾ ಅಚ್ಚುಕಟ್ಟಾಗಿ ಅಕ್ಷರದಗಳ ಪಡಿಯಚ್ಚಿಗೆ ಹಾಕಿ ಹರಳುಗಟ್ಟಿಸಿದ ಪದ ಪದಗಳ ಹಳಕಿನ ಸ್ವಾದಿಷ್ಟ ಸ್ವಾನುಭಾವದಾ ಅನನ್ಯವಾದ ಅಮೃತ ಬೀಜಗಳೇ ಅನುಪಮವಾ ದ ಸಾಹಿತ್ಯ ರಚನೆಯ ವಚನಗಳಾಗಿವೆ. ಇವುಗಳ ವೈಶಿಷ್ಟ್ಯ ಇರುವುದು ಒಬ್ಬೊಬ್ಬ ಶರಣರ ವಿಭಿನ್ನ ಪ್ರತಿಭಾ ವಿನ್ಯಾಸದ ಅಭಿವ್ಯಕ್ತಿಯಲ್ಲಿ. ಇದನ್ನೆಲ್ಲಾ ಖುದ್ದಾಗಿ ಓದಿ ಅನುಭವಿಸಿ ಆನಂದಿಸಿದಾಗಲೇ ಅದರ ಸೊಗಡ ಸೊಬಗನ್ನ ಹೇಳಬಹುದು. ಇಲ್ಲಿ ಈಗ ಮೇಲಿನ ಬಾಹೂರ ಬೊಮ್ಮಣ್ಣ ಶರಣರ ಈ ವಚನ ಅನುಸಂಧಾನವ ಮಾಡಿ, ಪ್ರಾಸ್ತಾವಿಕ ವಾಗಿ ಹೇಳಿದ ಮಾತುಗಳಲ್ಲಿನ ನಿಜವನ್ನ ಪರೀಕ್ಷೆ ಮಾಡಿ ನೋಡಬಹುದು.
ಹುರಿಯ ಮೆಟ್ಟುವ ವಿಹಂಗ ಜಾತಿ* *ಜೀವಂಗಳೆಲ್ಲವೂ ಮುಂಚಿ ಅವಬಲ್ಲಡೆ
ಸಂಚವ ಮೆಟ್ಟಿ ತಾವು #ಸಿಕ್ಕುವವೆ ?
ಇಲ್ಲಿ ಈ ವಚನಕಾರ ಶರಣರು ಒಂದು ಸುಂದರ ವಾದ ದೃಶ್ಯದ ಮೂಲಕ ರೂಪಕವನ್ನ ಸೃಷ್ಟಿಸಿದ್ದು ಅದು ಇಡೀ ವಚನದ ಶಿಲ್ಪಕ್ಕೆ ತಳಪಾಯವಾಗಿದೆ. ಬೇಟೆಗಾರ ಹರಡಿದ ಬಲೆಯಲ್ಲಿ ಬೀಳುವ ಎಲ್ಲಾ ಮೃಗಗಳು ಮುಂಚಿತವಾಗಿಯೇ ಬೇಟೆಗಾರನ ಈ ಸಂಚಿನ ಬಗ್ಗೆ ಅರಿತುಕೊಂಡಿದ್ದಿದ್ದರೆ ಅವುಗಳೆಲ್ಲಾ ಆ ಬಲೆಯಲ್ಲಿ ಬೀಳುತ್ತಿದ್ದವೇ!? ಎಂದು ಪ್ರಶ್ನೆಯ ಕೇಳು ಮೂಲಕ ಮುಂದಿನ ವಿಷಯಕ್ಕೆ ನೀಲನಕ್ಷೆ ಹಾಕಿ ತಾವು ಹೇಳಲಿರುವ ಮುಂದಿನ ವಿಚಾರಕ್ಕೆ ಕಾಯುವಂತೆ ಮಾಡಿದ್ದಾರೆ.
ಆ ತೆರನ ಕಂಡು ತ್ರಿವಿಧದ ಹುರಿಯಲ್ಲಿ ಅಡಿಯನಿಕ್ಕಿ ಅಡೆಗೊಡ್ಡಿದಂತೆ ಬಿದ್ದಿರುತ್ತ, ಮತ್ತರಿಕೆಯ ಮಾತ ನುಡಿದಡೆ ಅದು ಬರುಕಟಿಯೆಂಬರು.
ವಚನ ಪ್ರಾರಂಭದಲ್ಲಿ ಹೇಳಿದಂತೆ ಬೇಟೆಗಾರನು ಚೆಲ್ಲಿದ ಬಲೆಯಲ್ಲಿ ಮೃಗಗಳು ಸಂಚನರಿಯದೇ ಅಜ್ಞಾನದಿಂದ ಬಿದ್ದು ಬಿಡುತ್ತವೆ. ಆದರೆ ಅರಿವಿನ ಜೀವಿಯಾದ ಮಾನವನು ನೀನು ಮುಂದೆ ಅದೇ ಮಾದರಿಯ ತ್ರಿವಿಧದ ಹೊನ್ನು ಹೆಣ್ಣು ಮಣ್ಣಿನ ಬಲೆಯ ಚೆಲ್ಲಿ ಮಾಯೆ ಎಂಬ ಮಾಯಗಾರ್ತಿ ನಿನ್ನ ತನುಮನದಲ್ಲಿಯೇ ತನ್ನ ಅಡ್ಡಗಾಲು ಹಾಕಿ ಕುಳಿತಿದ್ದನ್ನ ಬುದ್ಧಿ ಜೀವಿಯಾದ ಮಾನವ ನೀನು ಅದರಲ್ಲಿ ಬಿದ್ದು ಒದ್ದಾಡುತ್ತಲಿದ್ದೀಯಾ! ಆದರೆ ಈಗ ಮತ್ತೆ ನೀನು ನಿನ್ನ ಮೇಲೆತ್ತಿ ಕಾಪಾಡಲೆಂದು ಅರಿಕೆಯನ್ನು ಮಾಡಿ ನುಡಿಯುತ್ತಿದರೆ ನಿಜಕ್ಕೂ ಅದೊಂದು ಬೂಟಾಟಿಕೆಯ ಮಾತಾಗುತ್ತದೆಯೊ ಎನ್ನುವರು ಬಾಹೂರ ಬೊಮ್ಮಣ್ಣ ಶರಣರು.
ನೆರೆ ಅರಿದು ಹರಿದ ಶರಣರು
ಸಂಗನಬಸವಣ್ಣ ಸಾಕ್ಷಿಯಾಗಿ ಬ್ರಹ್ಮೇಶ್ವರ ಲಿಂಗವ ಹೊರೆ ಹೊರೆಯಲ್ಲಿ ವೇಧಿಸಬೇಕು.
ಈ ವಚನದ ಮೊದಲೆರಡು ಭಾಗದ ನೋಟಗಳ ಮೂಲಕ ಮೃಗಗಳ ಅಜ್ಞಾನ ಕಾರಣದಿಂದಾಗುವ ಹಾಗೂ ಅರಿವಿನ ಮಾನವನ ತಿಳಿಗೇಡಿತನದಿಂದ ಆಗುವ ಹಾನಿಯ ವ್ಯತ್ಯಾಸದ ಸೂಕ್ಷ್ಮವ ತಿಳಿಸಿದ ವಚನಕಾರರು ಇಲ್ಲಿ ಅರಿವಿನ ಮೇಲಿನ ಮಾಯಾ ಮೋಹದ ಬಲೆಯನ್ನು ಅರಿತುಕೊಂಡ ಶರಣರು ಅದನ್ನು ಸದಾ ತಮ್ಮ ಸ್ವಾನುಭವದ ಕಟ್ಟೆಚ್ಚರದ ಮೂಲಕ ಹೊತ್ತು ಹೊತ್ತಿನ ಹೊರೆಯನ್ನ ಹರಿದು ನಿತ್ಯವೂ ಸಂಗನಬಸವಣ್ಣನ ಸಾಕ್ಷಿಯಾಗಿ ತಮ್ಮ ಇಷ್ಟಲಿಂಗದ ಸಾನ್ನಿಧ್ಯದಲ್ಲಿದ್ದು ಬೇಧಿಸಬೇಕೆಂದು ಬಾಹೂರ ಬೊಮ್ಮಣ್ಣ ಶರಣರು ಇಲ್ಲಿ ಹೇಳಿದ್ದಾರೆ
ಅಳಗುಂಡಿ ಅಂದಾನಯ್ಯ