ಗುರು ದೇವೋ ಭವ

ಗುರು ದೇವೋ ಭವ

ಗುರು ದೇವೋ ಭವ

“ಗುರು ಬ್ರಹ್ಮ ಗುರು ವಿಷ್ಣು ಗುರುರ್ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ “.ಇದು ಅಕ್ಷರಶಹ ಸತ್ಯವಾದ ಮಾತು .ಏಕೆಂದರೆ ಅರಿವಿನ ಮಾರ್ಗ ತೋರಿಸುವ ಗುರು ಇಲ್ಲದೆ ಏನೂ ಕಾಣಿಸದು, ಇಂತಹ ಗುರುತರವಾದ ಹೊಣೆಹೊತ್ತ ಶಿಕ್ಷಕರ ದಿನಾಚರಣೆಯ ಆಚರಣೆ ಸರ್ವಸಮ್ಮತವಾದದ್ದು ವರ್ಷವೀಡಿ ಮಕ್ಕಳ ಏಳಿಗೆಯ ನಿಟ್ಟಿನಲ್ಲಿ ಸಾಗುವ ಶಿಕ್ಷಕರಿಗೆ ಗೌರವ ಕೃತಜ್ಞತೆ ಸಲ್ಲಿಸುವ ದಿನ ಶಿಕ್ಷಕರ ದಿನ. ಅವರ ನಿಸ್ವಾರ್ಥ ಸೇವೆಗೆ ಒಂದಿಷ್ಟು ನುಡಿ ನಮನ ಸಲ್ಲಿಸುವ ದಿನ.

ಆ ದಿನ ನಾವು ಉನ್ನತ ಶಿಕ್ಷಕರಾಗಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದ ಆದರ್ಶಪ್ರಾಯರಾದ ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರ ಫೋಟೋ ಪೂಜನದೊಂದಿಗೆ ಅವರಿಗೆ ಅನಂತ ನಮನ ಸಲ್ಲಿಸುವ ದಿನ. ಶಿಕ್ಷಕ ಏನನ್ನಾದರೂ ಸಾದಿಸಬಲ್ಲ ಎಂದು ತೋರಿಸಿಕೊಟ್ಟ ಧೀಮಂತ ನಾಯಕ ಅವರು.

ಮಕ್ಕಳನ್ನು ತಿದ್ದಿ ತೀಡಿ ಮೂರ್ತಿಯಾಗಿಸಬಲ್ಲ ಶಿಕ್ಷಕ ,ತಾನೂ ಪೂಜಿಪ ಮೂರ್ತಿಯಂತೆ ಬದುಕಬಲ್ಲ ಎಂದು ತೋರಿಸಿಕೊಟ್ಟ ಛಲಗಾರರವರು. ಒಬ್ಬ ಶಿಕ್ಷಕ ಒಬ್ಬ ರಾಷ್ಟ್ರಪತಿ ಆದದ್ದು ಅಸಾಮಾನ್ಯ ಸಾಧನೆ. ಇಲ್ಲಿ ಅವರ ಕಾರ್ಯ ಹೇಗಿರಬೇಕು ಎಂಬುದನ್ನು ನಾವು ಉಹಿಸಿಕೊಳ್ಳಬೇಕು. ಅವರ ಜೀವನ, ಅವರ ಇರುವಿಕೆ , ಅವರ ಆದರ್ಶ,ಅವರ ಸಾಧನೆಯ ಬಗ್ಗೆ ಶಿಕ್ಷಕರ ದಿನದಂದು ನಾವು ಸ್ಮರಿಸಲೇಬೇಕು. ಆದರ್ಶ ವ್ಯಕ್ತಿಗಳ ಅರಿಯುವುದರಿಂದ ಅವರಂತೆ ನಾವಾಗಬೇಕು ಎಂಬ ಭಾವ ಮೂಡದೇ ಇರದು.

ಎಂದೂ ತಮ್ಮ ವೃತ್ತಿಯನ್ನು ಮರೆಯದ ಮತ್ತು ಗೌರವಿಸುವ ಅವರು ತಮ್ಮ ಜನ್ಮದಿನದ ನಿಮಿತ್ಯ ಶಿಕ್ಷಕರ ದಿನ ಆಚರಿಸಲು ತಿಳಿಸಿದರು. ಅಂದಿನಿಂದ ಇಂದಿನವರೆಗೆ ಎಲ್ಲ ಶಿಕ್ಷಕರು ಆದರ್ಶಗಳನ್ನು ಹುಡುಕಿ, ಆದರ್ಶ ಶಿಕ್ಷಕರ ಸನ್ಮಾನಿಸುತ್ತಾ ಈ ಕಾರ್ಯಕ್ರಮ ಜರುಗುವುದು.ಎಲ್ಲ ಶಿಕ್ಷಕರೂ ಆದರ್ಶ ಶಿಕ್ಷಕ ಆಗಲಾರರು. ಆದರೂ ಆದರ್ಶ ವ್ಯಕ್ತಿಗಳ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡಬೇಕು. ಮಕ್ಕಳ ಸರ್ವತೋಮುಖ ಏಳಿಗೆಯನ್ನು ಮಾಡುತ್ತ ವಲಾಪೇಕ್ಷೆಯ ಅಪೇಕ್ಷೆ ಇಲ್ಲದೆ,ಆದರ್ಶಗಳನ್ನು ಮೈಗೂಡಿಸಿಕೊಂಡು, ಸದಾ ನಿಸ್ವಾರ್ಥ ಸೇವೆ ಮಾಡುವವನೇ ಆದರ್ಶ ಶಿಕ್ಷಕ.

ಶಿಕ್ಷಕರ ವೃತ್ತಿ ಎಷ್ಟು ಗೌರವಯುತವಾದದ್ದು, ಅಷ್ಟೇ ಜವಾಬ್ದಾರಿಯುತವಾದದ್ದು ಕೂಡ. ಸಮಾಜದ ನಾಗರಿಕರನ್ನು ನಿರ್ಮಿಸುವ ಕಾರ್ಯದಲ್ಲಿ ತೊಡಗಿದ್ದ ಶಿಕ್ಷಕ ಸತತವಾಗಿ ಸರ್ವ ವಿಷಯಗಳ ತಿಳಿದು ಗ್ರಹಿಸಿ ,ಅದನ್ನು ಮಕ್ಕಳ ಮನ ತಲುಪುವಂತೆ ಅರುಹುವ ಜವಾಬ್ದಾರಿಯುತ ಹುದ್ದೆ ಶಿಕ್ಷಕ ಹುದ್ದೆ. ಅವನ ಮಾತು, ನಡೆ- ನುಡಿ ಇರುವಿಕೆ ಎಲ್ಲವೂ ಆದರ್ಶ ಪ್ರಾಯವಾಗಿಯೇ ಇರಬೇಕು. ಮಣ್ಣಿನ ಮಡಕೆ ಮಾಡುವ ಕುಂಬಾರನ ತಾಳ್ಮೆ ಶಿಕ್ಷಕನಿಗೆ ಇರಬೇಕು.

ಶಿಕ್ಷಕರು ಹೇಗಿರಬೇಕು? ಅವರು ಹೊರುವ ಜವಾಬ್ದಾರಿ ಎಷ್ಟು ಗುರುತರವಾದದ್ದು? ಮತ್ತು ವಿದ್ಯಾರ್ಥಿಗಳಿಗೆ ಶಿಕ್ಷಕರ ಮಹತ್ವ ,ಶಿಕ್ಷರಿಗೆ ನಾವು ನೀಡಬೇಕಾದ ಗೌರವ, ಅವರು ಹೇಗೆ ನಮ್ಮ ಬದುಕಿನ ದಾರಿಯಲ್ಲಿ ಊರುಗೋಲಾಗುವರು?, ಎಂಬೆಲ್ಲ ವಿಷಯವನ್ನು ಮಕ್ಕಳಿಗೆ ಮನವರಿಕೆ ಮಾಡಿಸುವ ಸಲುವಾಗಿ ಆಚರಿಸುವ ದಿನವೇ ಶಿಕ್ಷಕರ ದಿನಾಚರಣೆ. ಶಿಕ್ಷಕರು ಕೇವಲ ಪ್ರಶಸ್ತಿಗಾಗಿ ದುಡಿಯುವುದಲ್ಲ ,ಮಕ್ಕಳೆಳ್ಗೆಗೆಯೇ ಶಿಕ್ಷಕರ ಪ್ರಶಸ್ತಿ ಆಗಿರಬೇಕು. ಉತ್ತಮ ಬೋಧನೆಯಿಂದ ಅತ್ಯುತ್ತಮ ವಿದ್ಯಾರ್ಥಿಗಳು ನಿರ್ಮಾಣವಾಗಿ ಸಮಾಜದ ಒಳ್ಳೆಯ ನಾಗರಿಕರಾದರೆ ಅದೇ ಶಿಕ್ಷಕರಿಗೆ ಬಹುಮಾನ, ಸಾಧನೆ.

ಡಾ ಅನ್ನಪೂರ್ಣ ಹಿರೇಮಠ