ಗುಪ್ತ ಮಂಚಣ್ಣ

ಅಟ್ಟಕ್ಕೆ ನಿಚ್ಚಣಿಕೆಯನಿಕ್ಕಲಾಗಿ ನುಂಗಿತ್ತು ಅಟ್ಟವ ನಿಚ್ಚಣಿಕೆ.
ನಿಚ್ಚಣಿಕೆಯ ಮೆಟ್ಟಿದವಳ ಅಟ್ಟ ನುಂಗಿತ್ತು.
ಅಟ್ಟವ ನಿಚ್ಚಣಿಕೆಯ ಮೆಟ್ಟಿದವಳ ಬಟ್ಟಬಯಲು ನುಂಗಿತ್ತು.
ಆ ಬಟ್ಟಬಯಲ ಮೆಟ್ಟಿ ನೋಡಿ ಕಂಡ ನಾರಾಯಣಪ್ರಿಯ ರಾಮನಾಥ.
*ಗುಪ್ತ ಮಂಚಣ್ಣ*
ವಚನ ಅನುಸಂಧಾನ*
ಬಹಿರಂಗದ ಬದುಕಿನ ಪ್ರತೀಕ ಪ್ರತಿಮೆ ಉಪಮೆ ರೂಪಕಗಳನ್ನು ಬಳಸಿಕೊಂಡು ಶರಣರು; ತಾವು ಅಂತರಂಗದಲ್ಲಿ ಕಂಡುಂಡು ಅನುಭವಿಸಿದಂಥಾ ಅನುಭಾವಿಕ ಸತ್ಯ ಸಂಗತಿಗಳ ಅನುಭೂತಿಯ ಅನೂಹ್ಯವಾದ ಅನುಭಾವವನ್ನು ಅನನ್ಯವಾದ ರೀತಿಯಲ್ಲಿ ಪರಿಭಾವಿಸಿ, ಅಲ್ಲಿನ ಅದ್ಭುತವಾದ ಒಳನೋಟದ ಆ ಚಿತ್ರಣವನ್ನು ಅವರು ಅತ್ಯಂತ ಆಕರ್ಷಕ ರೀತಿಯಲ್ಲಿ ತಮ್ಮ ವಚನದ ರಚನೆಯ ಸೃಜನಶೀಲ ಅಭಿವ್ಯಕ್ತಿಯಲ್ಲಿ ದುಡಿಸಿಕೊಂಡಂಥ
ಪ್ರತಿಭೆಯನ್ನು ವಚನಗಳ ಅಧ್ಯಯನ ಮಾಡುವ ಸಂದರ್ಭದಲ್ಲಿ ಎದಿರುಗೊಂಡಾಗ ಆಗುವಂತಹ ಆ ಥ್ರಿಲ್ ನಿಜಕ್ಕೂ ಅನುಪಮವಾಗಿರುತ್ತದೆ. ಇಲ್ಲಿ ಈ ಮೇಲಿನ ಗುಪ್ತ ಮಂಚಣ್ಣ ಶರಣರ ವಚನವು ಅಂತಹ ಥ್ರಿಲ್ರನ್ನು ಯಥೇಚ್ಛವಾಗಿ ಉಣಬಡಿಸಿ ಖುಷಿ ಪಡಿಸುತ್ತದೆ. ಅದನ್ನು ಇಲ್ಲಿ ಅನುಸಂಧಾನ ಮಾಡುವ ಮೂಲಕ ವಚನಾಂತರಂಗದದೊಳಗೆ ಇರುವ ಸತ್ಯದ ಚಿತ್ರಣವನ್ನು ಕಾಣಲು ಪ್ರಯತ್ನಿಸಿ ನೋಡೋಣ.
*#ಅಟ್ಟಕ್ಕೆ ನಿಚ್ಚಣಿಕೆಯನಿಕ್ಕಲಾಗಿ ನುಂಗಿತ್ತು ಅಟ್ಟವ ನಿಚ್ಚಣಿಕೆ.*
*ನಿಚ್ಚಣಿಕೆಯ ಮೆಟ್ಟಿದವಳ ಅಟ್ಟ #ನುಂಗಿತ್ತು.*
ಇಲ್ಲಿ ಅಟ್ಟವನ್ನು ಹತ್ತುವುದಕ್ಕೆ ನಿಚ್ಚಣಿಕೆಯನ್ನು ಇಡಲಾಗಿದ್ದು, ಈ ನಿಚ್ಚಣಿಕೆ ಅಟ್ಟವನ್ನೇ ನುಂಗಿತು ಎನ್ನುವ ವಚನಕಾರರು ಮುಂದುವರಿದು ಮತ್ತೇ ಈ ನಿಚ್ಚಣಿಕೆಯ ಏರಿದ ಮಹಿಳೆಯನ್ನು ಅಟ್ಟವು ನುಂಗಿತೆನ್ನುವರು. ಹೀಗೆ ಇಲ್ಲಿ ಅಟ್ಟ ನಿಚ್ಚಣಿಕೆ ಮಹಿಳೆ ಮೆಟ್ಟಿದ ನುಂಗಿತು ಎನ್ನುವ ಈ ಪದಗಳು ಬಹಿರಂಗದ ಒಂದು ಕ್ರಿಯೆಯ ಒಟ್ಟಂದದ ಚಿತ್ರ ಣವು ಸಹಜವಾಗಿ ಅನುಭವಕ್ಕೆ ದಕ್ಕುತ್ತದೆ. ಇಲ್ಲಿ ವಚನಕಾರ ಶರಣ ಗುಪ್ತ ಮಂಚಣ್ಣ ಈ ವಚನದ ಮೂಲಕ ಕಾಣಬರುವ ಈ ಚಿತ್ರಣವನ್ನಷ್ಟೇ ಹೇಳ ಹೊರಟಿಲ್ಲ! ಅವರಿಲ್ಲಿ ಹೇಳ ಬಯಸಿದ್ದೇನಂದರೆ; ಮೇಲೆ ಹೆಸರಿಸಿದ ಪದಗಳ ಚಿತ್ರಣವನ್ನು ಬಳಸಿ ಕೊಂಡು ಅದನ್ನು ಶರಣ ತತ್ವಗಳಿಗೆ ಪರ್ಯಾಯ ರೂಪಕವಾಗಿ ಬಳಸಿಕೊಳ್ಳುವ ಮೂಲಕ, ಶರಣ ತತ್ವದ ಸಾಧಕನ ಅಂತರಂಗದೊಳಗೆ ನಡೆಯುವ ಜೈವಿಕ ನರಮಂಡಲದ ವ್ಯವಸ್ಥೆಯನ್ನುಪಯೋಗಿ ಸಿ ಊರ್ಧ್ವಮೂಖಿಯಾದ ಷಟಸ್ಥಳ ಸಿದ್ಧಾಂತದ ಆಧ್ಯಾತ್ಮಿಕ ಸಾಧನೆಯ ಕ್ರಿಯಾತ್ಮಕ ಚಿತ್ರಣವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿ ಅಟ್ಟ ಎನ್ನುವ ಪದ ಬ್ರಹ್ಮರಂದ್ರ ಅಂದ್ರೆ ಸಹಸ್ರಾರವನ್ನು ಉದ್ದೇಶಿಸಿ ಬಳಸಲಾಗಿದೆ. ನಿಚ್ಚಣಿಕೆ ಪದವನ್ನು ಷಟಸ್ಥಳದ ಪ್ರತಿಮೆಯಾಗಿ ಬಳಸಲಾಗಿದೆ, ಇನ್ನ ನಿಚ್ಚಣಿಕೆಯ ಮೆಟ್ಟಿದವಳು ಅಂದರೆ ಷಟಸ್ಥಳವನ್ನು ಶರಣಸತಿ ಮಾಡಬೇಕಾದ ಊರ್ಧ್ವಮುಖಿ ಸಾಧನೆ ಎನ್ನುವ ಶರಣ ತತ್ವದ ಪರಿಭಾವನೆಯ ದ್ಯೋತಿಸುತ್ತದೆ. ಹೀಗೆ ಶರಣತತ್ವ ಸಾಧಕನ ಅಂತರಂಗದೊಳಗಿನ ಷಟಸ್ಥಳದ ಸಾಧನೆಯ ವಿವಿಧ ಹಂತದ ಪರಿಣಾ ಮಗಳನ್ನು ಈ ಸಾಲುಗಳು ಹೇಳುತ್ತಿವೆ.
*#ಅಟ್ಟವ ನಿಚ್ಚಣಿಕೆಯ ಮೆಟ್ಟಿದವಳ ಬಟ್ಟಬಯಲು ನುಂಗಿತ್ತು.*
*ಆ ಬಟ್ಟಬಯಲ ಮೆಟ್ಟಿ ನೋಡಿ ಕಂಡ ನಾರಾಯಣಪ್ರಿಯ #ರಾಮನಾಥ.*
ಹೀಗೆ ಅಟ್ಟ ಎಂಬ ಸಹಸ್ರಾರ ಮತ್ತು ನಿಚ್ಚಣಿಕೆ ಎನ್ನುವ ಷಟಸ್ಥಳ ಮತ್ತು ಮೆಟ್ಟಿದವಳು ಎನ್ನುವ ಶರಣಸತಿ ಈ ಎಲ್ಲವನ್ನೂ ಒಟ್ಟಿಗೇ ಸೇರಿಸಿಯೇ ಬಟ್ಟಬಯಲು ಎನ್ನುವ ಕಟ್ಟಕಡೆಯ ಶರಣತತ್ವದ
ಗಂತವ್ಯವು ನುಂಗಿತೆಂದು ಸಾಧಕನ ಪರಿಪೂರ್ಣ ಶರಣತತ್ವ ಸಾಧನೆಯ ಚಿತ್ರಣವನ್ನು ವಚನಕಾರ ಶರಣ ಗುಪ್ತ ಮಂಚಣ್ಣ ಇಲ್ಲಿ ಕಟ್ಟಿಕೊಡುವರು. ವಚನದ ಕೊನೆಗೆ ಆ ಬಟ್ಟಬಯಲನ್ನೇ ಶರಣನು ಮೆಟ್ಟಿ ನೋಡುವ ಎನ್ನುವ ಮೂಲಕ ಶರಣ ತತ್ವ ದ ಮಹೋನ್ನತ ಶಕ್ತಿಯನ್ನು ಸಾಧನೆಯ ಮಾಡಿ ಸಾಧಕನಾದ ಭಕ್ತ ತನ್ನ ವ್ಯಕ್ತಿತ್ವವನ್ನು ತೋರುವ ಮತ್ತು ಮಹತ್ವವನ್ನು ಪ್ರಸ್ತುತ ವಚನದ ಮೂಲಕ
ಅರ್ಥಗರ್ಭಿತವಾಗಿ ಸಾದರಪಡಿಸಿದ್ದಾರೆ.
ಅಳಗುಂಡಿ ಅಂದಾನಯ್ಯ*