ಜ್ಞಾನದಿಂದ ಜೀವನ ಉಜ್ವಲವಾಗುತ್ತದೆ: ಜಗನ್ನಾಥ ಶೇರಿಕಾರ
ರೂ. 5 ಸಾವಿರ ಶುಲ್ಕ ವಿನಾಯಿತಿ ಉಪಾಧ್ಯಕ್ಷ ಬಸವರಾಜ ಮಾಲಿ ಘೋಷಣೆ
ಜ್ಞಾನದಿಂದ ಬದುಕು ಉಜ್ವಲ ಕನಸು ದೊಡ್ಡದಾಗಿರಲಿ ನನಸಾಗಿಸಲು ನಿರಂತರ ಶ್ರಮ ಅಗತ್ಯ - ಜಗನ್ನಾಥ ಶೇರಿಕಾರ
ಚಿಂಚೋಳಿ: ನೀವು ವಿದ್ಯಾರ್ಥಿ ಬದುಕಿನ ಬಹುಮುಖ್ಯ ತಿರುವಿನಲ್ಲಿದ್ದಾರೆ. ನೀವು ಯಾವುದೇ ಕ್ಷೇತ್ರ ಆಯ್ದುಕೊಂಡರೂ ಕೂಡ ನಿಮ್ಮ ಕನಸು ದೊಡ್ಡದಾಗಿರಲಿ. ಅದನ್ನು ನನಸು ಮಾಡಲು ನಿರಂತರ ಶ್ರಮ ಅಗತ್ಯ ಎಂದು ಪತ್ರಕರ್ತ ಜಗನ್ನಾಥ ಡಿ. ಶೇರಿಕಾರ ತಿಳಿಸಿದರು.
ಅವರು ವೀರೇಂದ್ರ ಪಾಟೀಲ ಎಜುಕೇಶನ ಟ್ರಸ್ಟನ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಶುಭ ಕೋರುವ ( ಬೀಳ್ಕೊಡುವ) ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಶನಿವಾರ ಮಾತನಾಡಿದರು.
ಜ್ಞಾನ ಮತ್ತು ಪ್ರಚಾರ ಜಗತ್ತನ್ನು ಆಳುತ್ತಿವೆ. ವಿದ್ಯಾರ್ಥಿಗಳು ಪ್ರಚಾರದ ಹಿಂದೆ ಬಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಕಾಲ ಕಳೆದು ಸಮಯ ವ್ಯರ್ಥ ಮಾಡದೇ ಜ್ಞಾನಾರ್ಜನೆಗೆ ಒತ್ತು ನೀಡಬೇಕು ಇದರಿಂದ ನಿಮ್ಮಭವಿಷ್ಯ ಉಜ್ವಲಗೊಳ್ಳಲಿದೆ. ನಮ್ಮಲ್ಲಿ ಉತ್ಸಾಹ ಹೆಚ್ಚಾಗಿರಬೇಕು ಅದು ಕೊನೆಯವರೆಗೂ ಇರಬೇಕು. ಅರ್ಜಿ ಸಲ್ಲಿಸುವಾಗ ಇರುವ ಉತ್ಸಾಹ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವಾಗ ಇರದು. ಇದಕ್ಕೆ ಶುಕ್ರವಾರ ಪ್ರಕಟವಾದ ಯುಪಿಎಸ್ ಸಿ ಪರೀಕ್ಷೆ ಫಲಿತಾಂಶ ನಿದರ್ಶನವಾಗಿದೆ. 937876 ಜನ ಅರ್ಜಿ ಸಲ್ಲಿಸಿದರೆ ಪರೀಕ್ಷೆ ಬರೆದವರು 576793 ಜನ ಕೊನೆಗೆ ಆಯ್ಕೆಯಾದವರು 958 ಜನ ಎಂದರು.
ಅಧ್ಯಕ್ಷತೆ ವಹಿಸಿದ್ದ ನಮ್ಮ ಶಾಲೆಯ ವಿದ್ಯಾರ್ಥಿನಿ ಕಳೆದ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 5ನೇ ರ್ಯಾಂಕ್ ಗಳಿಸಿದ್ದಾರೆ. ನಮ್ಮಶಾಲೆ ಆರಂಭವಾದಾಗಿನಿಂದ ತಾಲ್ಲೂಕಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಮೂಲಕ ಉತ್ತಮಫಲಿತಾಂಶದಿಂದ ಹೆಸರು ಮಾಡಿದೆ ಎಂದು ವೀರೇಂದ್ರ ಪಾಟೀಲ ಎಜುಕೇಶನ ಟ್ರಸ್ಟ ಉಪಾಧ್ಯಕ್ಷ ಬಸವರಾಜ ಮಾಲಿ ತಿಳಿಸಿದರು.
ನಮ್ಮ ಸಂಸ್ಥೆಯ ಶಾಲೆಗಳಲ್ಲಿ ಎಸ್ ಎಸ್ ಎಲ್ ಸಿ ಮುಗಿಸಿ ನಮ್ಮ ಸಂಸ್ಥೆಯ ಪಿಯು ಕಾಲೇಜಿನಲ್ಲಿ ಪ್ರವೇಶ ಪಡೆದರೆ ಅವರಿಗೆ ರೂ. 5 ಸಾವಿರ ಶುಲ್ಕದಲ್ಲಿ ವಿಶೇಷ ರಿಯಾಯಿತಿ ನೀಡಲಾಗುವುದು ಎಂದು ಘೋಷಿಸಿದರು.
ಮುಖ್ಯ ಶಿಕ್ಷಕ ವಿಶ್ವನಾಥ ನಾಯಿನೂರು, ವೀರೇಂದ್ರ ಪಾಟೀಲ ಪಿಯು ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರಶಾಂತ ಪಾಟೀಲ, ಸಂಸ್ಥೆಯ ಸಲಹೆಗಾರರಾದ ಅಬ್ರಾಹಂ ಅವರು ಮಾತನಾಡಿದರು. ವಿದ್ಯಾರ್ಥಿನಿಯರಾದ ತಸ್ಮಿಯಾ, ನಬಿಯಾ, ಪ್ರಿಯಾಂಕಾ, ಶೀತಲ್, ಸುಕನ್ಯಾ ಅನುಭವ ಹಂಚಿಕೊಂಡರು. ಭಾಗ್ಯಶ್ರೀ ಸ್ವಾಗತಿಸಿದರು. ದೇವಿಕಾ ನಿರೂಪಿಸಿದರು.ಅನುರಾಧಾ ವಂದಿಸಿದರು. ಕಾರ್ಯಕ್ರಮದ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಚಿಂಚೋಳಿ ಪಟ್ಡಣದ ವೀರೇಂದ್ರ ಪಾಟೀಲ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಶುಭ ಕೋರುವ ಕಾರ್ಯಕ್ರಮದಲ್ಲಿ ಪತ್ರಕರ್ತ ಜಗನ್ನಾಥ ಶೇರಿಕಾರ ಹಾಗೂ ಉಪಾಧ್ಯಕ್ಷ ಬಸವರಾಜಮಾಲಿ ಅವರು ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ವಿತರಿಸಿದರು.
