ಗಣೇಶೋತ್ಸವದಲ್ಲಿ ಕನ್ನಡ ನಾಡಗೀತೆಯ ಶತಮಾನೋತ್ಸವ ಸಂಭ್ರಮ

ಗಣೇಶೋತ್ಸವದಲ್ಲಿ ಕನ್ನಡ ನಾಡಗೀತೆಯ ಶತಮಾನೋತ್ಸವ ಸಂಭ್ರಮ
ಕಲಬುರಗಿ : ನಗರದ ಶ್ರೀ ಮಲ್ಲಿಕಾರ್ಜುನ ತರುಣ ಸಂಘದ ೨೭ನೇ ವಾರ್ಷಿಕೋತ್ಸವ ಹಾಗೂ ಗಣೇಶೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದ ಅಂಗವಾಗಿ ಆಗಸ್ಟ್ ೩೧ರಂದು ಕನ್ನಡ ನಾಡಗೀತೆಯ ಶತಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ನಾಡಗೀತೆ ಹಾಡುವ ಮೂಲಕ ಸಂಭ್ರಮ ವ್ಯಕ್ತಪಡಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿಯವರು ನಾಡಗೀತೆ ಹಾಡಿ ಶತಮಾನೋತ್ಸವ ಸಂಭ್ರಮಕ್ಕೆ ವಿಶೇಷ ಮೆರುಗು ನೀಡಿದರು. ಅವರು ಮಾತನಾಡಿ, *“ರಾಷ್ಟ್ರಕವಿ ಕುವೆಂಪು ಭಾರತವನ್ನು ತಾಯಿಯಂತೆ ಮತ್ತು ಕರ್ನಾಟಕವನ್ನು ಮಗಳಂತೆ ಕಲ್ಪಿಸಿಕೊಂಡು, ಭಾರತ ಮಾತೆಯ ಮಹಿಮೆ ಹಾಗೂ ಕರ್ನಾಟಕ ಮಾತೆಯ ಭುವನೇಶ್ವರಿ ಹಿರಿಮೆಗಳನ್ನು ಒಟ್ಟಿಗೆ ಕೊಂಡಾಡುವ ವಿಶಿಷ್ಟ ಪ್ರಯೋಗ ಮಾಡಿದ್ದಾರೆ. ರಾಷ್ಟ್ರ ಮತ್ತು ರಾಜ್ಯಕ್ಕೆ ಏಕಕಾಲದಲ್ಲಿ ಗೌರವ ಸಲ್ಲಿಸುವ ನಾಡಗೀತೆ ಶತಮಾನೋತ್ಸವ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿರುವುದು ನನ್ನ ಪುರ್ವಜನ್ಮದ ಪುಣ್ಯ,”* ಎಂದು ಅಭಿಪ್ರಾಯಪಟ್ಟರು.
ಆರಂಭದಲ್ಲಿ ಜೇರಟಗಿ ಶ್ರೀಗಳಾದ ಮಹಾಂತ ಮಹಾಸ್ವಾಮಿಗಳು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಮಲ್ಲಿನಾಥ ದೇಶಮುಖರು ರಾಷ್ಟ್ರಕವಿ ಕುವೆಂಪುರವರ ಭಾವಚಿತ್ರಕ್ಕೆ ಮಾಲಾರ್ಪಣೆ ನೆರವೇರಿಸಿದರು.
ಈ ಸಂದರ್ಭದಲ್ಲಿ ವಿರೇಶ ನಾಗಶೆಟ್ಟಿ, ಕರಣ ಆಂದೋಲ, ಶಶಿಧರ ಪ್ಯಾಟಿ, ಶಿವರಾಜ ಕೋಳಕೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಗಣೇಶೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿದ ಸುಮಾರು ೨೫ ವಿವಿಧ ಸ್ಪರ್ಧೆಗಳ ವಿಜೇತ ಮಕ್ಕಳಿಗೆ ಹಾಗೂ ಪಾಲಕರಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು.
-