ಪ್ರಣವಾನಂದ ಶ್ರೀಗಳ ಪಾದಯಾತ್ರೆ 13ನೇ ದಿನಕ್ಕೆ ಈಡಿಗರ ಮಕ್ಕಳ ಭವಿಷ್ಯ ನಿರ್ಮಾಣಕ್ಕಾಗಿ ಹೋರಾಟದ ಕಿಚ್ಚು
ಪ್ರಣವಾನಂದ ಶ್ರೀಗಳ ಪಾದಯಾತ್ರೆ 13ನೇ ದಿನಕ್ಕೆ
ಈಡಿಗರ ಮಕ್ಕಳ ಭವಿಷ್ಯ ನಿರ್ಮಾಣಕ್ಕಾಗಿ ಹೋರಾಟದ ಕಿಚ್ಚು
ಕಲಬುರಗಿ : ಈಡಿಗ ಬಿಲ್ಲವ, ನಾಮಧಾರಿ , ಧೀವರ, ನಾಯಕ ತೀಯಾ ಸೇರಿದಂತೆ 26 ಪಂಗಡಗಳ ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ, ಜ. 6 ರಿಂದ ಪ್ರಾರಂಭಗೊಂಡ ಡಾ. ಪ್ರಣವಾನಂದ ಶ್ರೀಗಳ ಪಾದಯಾತ್ರೆಯು ಇದೀಗ 13ನೇ ದಿನಕ್ಕೆ ಕಾಲಿರಿಸಿದೆ ಹಾಗೂ ಪಾದಯಾತ್ರೆಯು 200 ಕೀ.ಮೀ. ಪ್ರಯಾಣವನ್ನು ಪೂರೈಸಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ಕರದಾಳು ಶಕ್ತಿಪೀಠದಿಂದ ಜ. 6ರಂದು ಆರಂಭಗೊಂಡ ಪಾದಯಾತ್ರೆಯು ಶಹಾಬಾದ್, ಜೇವರ್ಗಿ, ಶಹಾಪುರ,ದೇವದುರ್ಗ, ಮಸ್ಕಿ, ಸಿಂಧನೂರು ಮೂಲಕ ಗಂಗಾವತಿ ಪಟ್ಟಣದ ಕಡೆಗೆ ಸಾಗುತ್ತಿದೆ. ಪಾದಯಾತ್ರೆಯು ಒಟ್ಟು 200 ಕಿ.ಮೀ ಸಂಚರಿಸಿದ್ದು 42 ದಿನಗಳ ನಂತರ ಫೆ.12 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸಮಾಪನಗೊಳ್ಳಲಿದೆ. ಬೇಡಿಕೆ ಈಡೇರದಿದ್ದರೆ ನಿರಶನ ಸತ್ಯಾಗ್ರಹ ಮುಂದುವರಿಯಲಿದೆ. ಒಟ್ಟು 700 ಕೀ.ಮೀ. ಪಾದಯಾತ್ರೆಯು 41 ದಿನಗಳಲ್ಲಿ ಪೂರ್ಣಗೊಳ್ಳಲಿದ್ದು ಈ ಮಧ್ಯೆ 12 ಕಡೆಗಳಲ್ಲಿ ಬಹಿರಂಗ ಸಭೆ ಜಾಗೃತಿ ಸಭೆ ಹಾಗೂ ಸ್ಥಳೀಯ ಮುಖಂಡರ ಜೊತೆ ಚರ್ಚೆ ಏರ್ಪಡಿಸಲಾಗಿದೆ. ಅತಿ ಹಿಂದುಳಿದ ಸಮುದಾಯಗಳ ಮಠಾಧೀಶರು, ಸರ್ವ ಪಕ್ಷದ ನಾಯಕರು ಸೇರಿದಂತೆ ಗಣ್ಯರು ಸ್ವಾಮೀಜಿಯವರ ಪಾದಯಾತ್ರೆಗೆ ದಾರಿಯುದ್ದಕ್ಕೂ ಪೂರ್ಣ ಬೆಂಬಲ ವ್ಯಕ್ತಪಡಿಸಿ ಸ್ವಾಗತಿಸುತ್ತಿದ್ದಾರೆ.
ಚಿತಾಪುರದಲ್ಲಿ ಮಾಜಿ ಸಚಿವರು ಹಾಗೂ ಹಾಲಿ ಲೋಕಸಭಾ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿಯವರು ಬಹಿರಂಗ ಸಭೆಗೆ ಚಾಲನೆ ನೀಡಿದ್ದು ಈಡಿಗರ ಹೋರಾಟದ ಕಿಚ್ಚು ಹಚ್ಚಿದ್ದು ಸರಕಾರ ಕೂಡಲೇ ಚರ್ಚೆಗೆ ಆಹ್ವಾನಿಸಿ ಸಮಸ್ಯೆ ಇತ್ಯರ್ಥಗೊಳಿಸುವಂತೆ ಆಗ್ರಹಿಸಿದ್ದರು . 13 ದಿನಗಳು ಕಳೆದರೂ ಸರಕಾರವು ಸ್ಪಂದನೆ ನೀಡದೆ ದಿವ್ಯ ಮೌನ ವಹಿಸಿದ್ದು ರಾಜ್ಯದ ನಾಲ್ಕನೇ ಅತಿ ದೊಡ್ಡ ಹಿಂದುಳಿದ ಜನಸಮುದಾಯವನ್ನು ಕಡೆಗಣಿಸುತ್ತಿರುವ ಸರಕಾರದ ನಿಲುವನ್ನು ಸಮಾಜದ ಜನರು ತೀವ್ರವಾಗಿ ಖಂಡಿಸುತ್ತಿದ್ದಾರೆ.
ಈಡಿಗ ಮಕ್ಕಳ ಭವಿಷ್ಯಕ್ಕಾಗಿ ಈ ಹೋರಾಟ : ಡಾ. ಪ್ರಣವಾನಂದ ಶ್ರೀ
ಈಡಿಗರು ಸೇರಿದಂತೆ ರಾಜ್ಯದ 26 ಪಂಗಡಗಳ ಜನರು ಸ್ವಾತಂತ್ರ್ಯದ ನಂತರವೂ ಕೂಡ ತಮ್ಮ ಮೂಲಭೂತ ಬೇಡಿಕೆಗಳನ್ನು ಹೊಂದಿ ಮುಖ್ಯ ವಾಹಿನಿಗೆ ಸೇರಲು ಅಸಮರ್ಥವಾದ ಸ್ಥಿತಿಯಲ್ಲಿರುವ ಸಂದರ್ಭದಲ್ಲಿ ಈಡಿಗ, ಬಿಲ್ಲವ ಸೇರಿದಂತೆ 26 ಪಂಗಡಗಳ ಮಕ್ಕಳ ಭವಿಷ್ಯ ನಿರ್ಣಾಯಕವಾಗಿ ಈ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ. ಪ್ರಣವಾನಂದ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ಚಿಂಚೋಳಿಯಿಂದ ಕಲಬುರಗಿಗೆ 89 ಕೀ. ಮೀ ಮೊದಲ ಪಾದಯಾತ್ರೆ ಹಾಗೂ ಮಂಗಳೂರು ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಬೆಂಗಳೂರು ಫ್ರೀಡಂ ಪಾರ್ಕ್ ವರೆಗೆ 680 ಕೀ . ಮೀ ಪಾದಯಾತ್ರೆ ನಡೆಸಿದ ನಂತರ ಸಮಾಜದ ಬೇಡಿಕೆಗಳಿಗೆ ಸರಕಾರ ಸ್ಪಂದಿಸುವಂತೆ ಆಗಿದೆ. ಆನಂತರ ಈಡಿಗರ ಅಭಿವೃದ್ಧಿ ನಿಗಮ ಕುಲಶಾಸ್ತ್ರೀಯ ಅಧ್ಯಯನಕ್ಕೆ ಅನುಮತಿ ದೊರೆತಿದೆ. ಆದರೆ ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ನಿಗಮಕ್ಕೆ ಹಣಕಾಸು ನೆರವು ನೀಡದೆ ಹಾಗು ಇತರ ಹಲವು ಬೇಡಿಕೆಗಳನ್ನು ಈಡೇರಿಸದೆ ಈಗಿನ ಸರಕಾರವು ಕೊಟ್ಟ ಮಾತನ್ನು ಉಳಿಸಿಕೊಳ್ಳಲಾರದೆ ಸಮುದಾಯಕ್ಕೆ ಅನ್ಯಾಯ ಎಸಗಿದೆ. ಈಡಿಗ ನಿಗಮದ ಅಧ್ಯಕ್ಷರಿಗೆ ಈ ವರೆಗೆ ಅಧಿಕಾರ ಸ್ವೀಕರಿಸಲು ಕೂಡ ಅವಕಾಶ ನೀಡಲಿಲ್ಲ. ಅನುದಾನ ಬಿಡುಗಡೆ ಮಾಡದಿರುವುದು, ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಕುಲಕಸುಬು ಕಳೆದುಕೊಂಡ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸದಿರುವುದು, ವಿಧಾನಸೌಧ ಆವರಣದಲ್ಲಿ ನಾರಾಯಣ ಗುರುಗಳ ಮೂರ್ತಿ ಸ್ಥಾಪನೆ, ಅಬಕಾರಿ ಹರಾಜಿನಲ್ಲಿ ತೆಲಂಗಾಣ ಮಾದರಿಯಲ್ಲಿ ಈಡಿಗ, ಬಿಲ್ಲವ ಸೇರಿದ 26 ಪಂಗಡಗಳಿಗೆ ಮೀಸಲಾತಿ ಮುಂತಾದ 18 ಬೇಡಿಕೆಗಳನ್ನು ಪರಿಗಣಿಸುವಂತೆ ಪಾದಯಾತ್ರೆಯಲ್ಲಿ ಒತ್ತಾಯಿಸಲಾಗಿದೆ ಎಂದು ಸ್ವಾಮೀಜಿ ಹೇಳಿದರು.
ಜ.21ರಂದು ಪಾದಯಾತ್ರೆ ಗಂಗಾವತಿ ಪಟ್ಟಣಕ್ಕೆ
ಪಾದಯಾತ್ರೆ ಪ್ರತಿ ದಿನ ಸುಮಾರು 20 ಕೀ. ಮೀ ಗಳಷ್ಟು ಸಂಚರಿಸಿ ವಾಸ್ತವ್ಯ ಹೂಡಲಾಗುತ್ತಿದೆ. ಜ. 17ರಂದು ನೀರಮಾನವಿ, ಮಾನವಿ, ಹೀರೇ ಕೊಟ್ನೆಕಲ್, ಜ. 18ರಂದು ಹಿರೇಕೊಟ್ನೆಕಲ್ ನಿಂದ ಪೋತನಾಳ ಜವಳಗೆರ, ಮಾರುತಿ ನಗರ, ಜ 19ರಂದು ಜವಳಗೆರೆ, ಸಿಂಧನೂರು ಗೋರಿಬಾಳ ಕ್ಯಾಂಪ್, ಜ.20 ಗೋರಿಬಾಳ ಕ್ಯಾಂಪ್ ನಿಂದ ಚನ್ನಳ್ಳಿ ಕ್ರಾಸ್, ಕಾರಟಗಿ, ಮರ್ಲನಹಳ್ಳಿ ಹಾಗೂ ಜ. 21ರಂದು ಮರ್ಲನಹಳ್ಳಿಯಿಂದ ನವನಗರ ಶ್ರೀರಾಮನಗರ ಮೂಲಕ ಗಂಗಾವತಿ ಪಟ್ಟಣಕ್ಕೆ ಬಂದು ಸಾಯಂಕಾಲ 5 ಗಂಟೆಗೆ ಗಂಟೆಗೆ ಬಹಿರಂಗ ಸಭೆ ನಡೆಯಲಿದೆ. ಸಮಾಜದ ಹಿರಿಯ ಮುಖಂಡರು ಹಾಗೂ ಕಾರ್ಕಳದ ಶಾಸಕರಾದ ಸುನಿಲ್ ಕುಮಾರ್ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಸಮಾಜ ಹಿರಿಯ ಮುಖಂಡರಾದ ಎಚ್ ಆರ್ ಶ್ರೀನಾಥ್ ಧಣಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಮಾಧ್ಯಮ ಸಂಚಾಲಕರಾದ ಡಾ. ಸದಾನಂದ ಪೆರ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
