ಬಸವ ಸಂಸ್ಕೃತಿ ಅಭಿಯಾನ ಯಶಸ್ಸಿಗೆ ಅಕ್ಕ ಗಂಗಾಂಬಿಕಾ ಪಾಟೀಲ ಕರೆ

ಬಸವ ಸಂಸ್ಕೃತಿ ಅಭಿಯಾನ ಯಶಸ್ಸಿಗೆ ಅಕ್ಕ ಗಂಗಾಂಬಿಕಾ ಪಾಟೀಲ ಕರೆ
ಚಿಂಚೋಳಿ: ಬೀದರ ನಗರದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಬಸವ ಸಂಸ್ಕೃತಿ ಅಭಿಯಾನ ಸಮಿತಿ ಸೆ.೩ರಂದು ಹಮ್ಮಿಕೊಂಡ ಬೃಹತ್ ಬಸವ ಸಂಸ್ಕೃತಿ ಅಭಿಯಾನ ಯಶಸ್ಸಿಗೆ ಬಸವ ಸೇವಾ ಪ್ರತಿಷ್ಠಾನದ ಅಕ್ಕ ಗಂಗಾಂಬಿಕಾ ಪಾಟೀಲ ಕರೆ ನೀಡಿದರು.
ಅವರು ತಾಲ್ಲೂಕಿನ ಚಿಮ್ಮನಚೋಡ ಗ್ರಾಮದಲ್ಲಿ ಬಸವ ಪರುಷ ಕಟ್ಟೆ ಸಮಿತಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡ ಶರಣ ಚಿಂತನ ಉಪನ್ಯಾಸ ಮಾಲಿಕೆಯ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಂಗಳವಾರ ಮಾತನಾಡಿದರು.
ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಕರ್ನಾಟಕ ಸರ್ಕಾರ ಘೋಷಿಸಿ ಒಂದು ವರ್ಷವಾಗಿದ್ದು, ನಾಡಿನ
ನೂರಾರು ಮಠಾಧೀಶರ ನೇತೃತ್ವದಲ್ಲಿ ನಡೆಯುವ ಅಭಿಯಾನದಲ್ಲಿ ಲಿಂಗ, ರುದ್ರಾಕ್ಷಿ, ವಿಭೂತಿ ಹಾಗೂ ಶರಣರ ವೇಷಧಾರಿಗಳ ಮೆರವಣಿಗೆ ವೈಭವದಿಂದ ಜರುಗಲಿದೆ ಎಂದರು.
ಬಸವಣ್ಣನವರು ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ, ನೈತಿಕ ಮತ್ತು ಸಾಂಸ್ಕೃತಿಕ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಪರಿವರ್ತನೆ ತಂದು ಜಿಡ್ಡುಗಟ್ಟಿದ ಸಮಾಜದಲ್ಲಿ ನವಚೈತನ್ಯ ಮೂಡಿಸಿದ್ದಾರೆ ಎಂದರು. ಬಸವಣ್ಣನವರ ಆಶಯದಂತೆ ಸಮ ಸಮಾಜ ನಿರ್ಮಾಣ ಮತ್ತು ಬಸವಣ್ಣನವರ ತತ್ವಾದರ್ಶಗಳ ಕುರಿತು ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಕಾರಣ ಬಸವ ಭಕ್ತರು, ಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಅವರು ಕರೆ ನೀಡಿದರು.
ಚಿಮ್ಮನಚೋಡ ಗ್ರಾಮದ ಮಧ್ಯ ಭಾಗದಲ್ಲಿ ಕಾರಣಿಕ ಕಟ್ಟೆಯಿತ್ತು ಇದನ್ನು ಪರುಷ ಕಟ್ಟೆಯಾಗಿ ಅಭಿವೃದ್ಧಿ ಪಡಿಸಿ ಬಸವಣ್ಣನವರ ಪುತ್ಥಳಿ ಪ್ರತಿಷ್ಠಾಪಿಸಿ ಪ್ರತಿನಿತ್ಯ ಪೂಜೆ ಪ್ರಾರ್ಥನೆ ನಡೆಸುತ್ತ ವಚನ ಪಠಣದೊಂದಿಗೆ ಬಸವ ಸಂಸ್ಕೃತಿ ಎತ್ತಿ ಹಿಡಿಯುವ ಕೆಲಸ ನಡೆಯುತ್ತಿದೆ ಎಂದು ನಿವೃತ್ತ ಸರ್ಜನ್ ಡಾ. ಸಿ. ಎಸ್ ರಗಟೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಗವಿಸಿದ್ದಪ್ಪ ಪಾಟೀಲ, ಸಂಗೀತ ಪ್ಯಾಧ್ಯಾಪಕ ಮಹೇಶ ಬಡಿಗೇರ್, ಎಕೆಆರ್ ದೇವಿ ಪಿಯು ಕಾಲೇಜಿನ ಪ್ರಾಂಶುಪಾಲ ವಿದ್ಯಾಸಾಗರ ದೇಶಮುಖ್, ಪತ್ರಕರ್ತ ಜಗನ್ನಾಥ ಶೇರಿಕಾರ, ಶರಣ ಜೀವಿ ಜಗದೀಶ ಮರಪಳ್ಳಿ, ಚಂದ್ರಯ್ಯ ಸ್ವಾಮಿ, ಉದಯಕುಮಾರ ಪಾಟೀಲ, ಉದ್ಯಮಿ ಲಿಂಗಾರತಿ ನಾವದಗೇರ್, ಮಂಜುನಾಥ ದುಬಲಗುಂಡಿ ಮೊದಲಾದವರು ಇದ್ದರು. ಪರುಷ ಕಟ್ಟೆ ಸಮಿತಿ ಅಧ್ಯಕ್ಷ ಆನಂದಕುಮಾರ ಬೆಡಸೂರು ಅಧ್ಯಕ್ಷತೆವಹಿಸಿದ್ದರು. ಇದೇ ವೆಳೆ ಬಸವ ಸಂಸ್ಕೃತಿ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸಿದ್ದಲಿಂಗ ದುಬಲಗುಂಡಿ ಸ್ವಾಗತಿಸಿದರು. ಜ್ಯೋತಿ ಸಂಗೊಂಡ ನಿರೂಪಿಸಿದರು. ರಮೇಶ ಭೂತಪೂರ ವಂದಿಸಿದರು.