ಕುಮಾರವ್ಯಾಸ ಅವರ ಬದುಕು–ಬರಹ ಕುರಿತು ವಿಶೇಷ ಉಪನ್ಯಾಸ
ಕುಮಾರವ್ಯಾಸ ಅವರ ಬದುಕು–ಬರಹ ಕುರಿತು ವಿಶೇಷ ಉಪನ್ಯಾಸ
ಸಂತಪೂರ: ದಿನಾಂಕ 07-02-2026 ರಂದು ಸಂತಪೂರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಬನಮ್ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ), ಭಾಲ್ಕಿ ಇವರ ವತಿಯಿಂದ ಪ್ರಸಿದ್ಧ ಕನ್ನಡ ಕವಿ ಶ್ರೀ ಕುಮಾರವ್ಯಾಸ ಅವರ ಬದುಕು–ಬರಹ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಸಹ ಶಿಕ್ಷಕಿ ಶ್ರೀಮತಿ ಆಶಾ ಅವರು ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಕನ್ನಡ ಕವಿಗಳು ಹಾಗೂ ಸಾಹಿತ್ಯ ಪರಂಪರೆಯನ್ನು ಪರಿಚಯಿಸುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದ್ದು, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಓದು ಮತ್ತು ಸಾಹಿತ್ಯದ ಆಸಕ್ತಿಯನ್ನು ಬೆಳೆಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಆಶಯ ನುಡಿಯನ್ನು ಶಬನಮ್ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ಭಾಲ್ಕಿಯ ಅಧ್ಯಕ್ಷರಾದ ಡಾ. ಮಕ್ತುಂಬಿ ಅವರು ನುಡಿದರು. ಇಂದಿನ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಲು ಇಂತಹ ಸಣ್ಣ ಸಣ್ಣ ಸಾಹಿತ್ಯಿಕ ಪ್ರಯತ್ನಗಳು ಅಗತ್ಯವಾಗಿವೆ. ಕಾರ್ಯಕ್ರಮಗಳು ಮಕ್ಕಳ ಮನಸ್ಸಿನ ಮೇಲೆ ದೀರ್ಘಕಾಲದ ಪ್ರಭಾವ ಬೀರುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಪುಸ್ತಕಗಳನ್ನು ತಮ್ಮ ಉತ್ತಮ ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ವಿಶೇಷ ಉಪನ್ಯಾಸ ನೀಡಿದ ಸಹ ಶಿಕ್ಷಕರಾದ ಡಾ. ಶಿವಲಿಂಗ ಹೆಡೆಯವರು ಮಾತನಾಡಿ, ಕುಮಾರವ್ಯಾಸರು ರೂಪಕ ಹಾಗೂ ಅಲಂಕಾರಗಳ ಚಕ್ರವರ್ತಿಯಾಗಿದ್ದು, ಕನ್ನಡ ಕವಿಗಳಲ್ಲಿ ವಿಶಿಷ್ಟ ಸ್ಥಾನಮಾನ ಹೊಂದಿದ್ದಾರೆ. ಅವರ ಕೃತಿಗಳು ಓದುಗರನ್ನು ತನ್ನೊಳಗೆ ಸೆಳೆದುಕೊಳ್ಳುವ ಶಕ್ತಿ ಹೊಂದಿವೆ. ಇಂತಹ ಮಹಾನ್ ಕವಿಗಳ ಸ್ಮರಣಾರ್ಥ ಕಾರ್ಯಕ್ರಮಗಳು ನಡೆಯಬೇಕು ಹಾಗೂ ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹ ಶಿಕ್ಷಕರಾದ ಶ್ರೀ ಶಿವಾಜಿ ಅವರು ಮಾತನಾಡಿ, ಶಬನಮ್ ಸಂಸ್ಥೆಯು ಕನ್ನಡ ಸಾಹಿತ್ಯ ಹಾಗೂ ಕವಿಗಳ ಬದುಕಿನ ಕುರಿತು ಬೆಳಕು ಚೆಲ್ಲುವ ಮೂಲಕ ಶ್ಲಾಘನೀಯ ಕಾರ್ಯ ಮಾಡುತ್ತಿದೆ. ಗಡಿ ಭಾಗಗಳಲ್ಲಿ ಇಂತಹ ಸಾಹಿತ್ಯಿಕ ಚಟುವಟಿಕೆಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಹ ಶಿಕ್ಷಕರಾದ ಚಂದ್ರಕಾಂತ ಕೋಳಿ, ಸಹ ಶಿಕ್ಷಕಿ ಕಲ್ಪನಾ ಅವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶೃತಿ ಅವರು ಕಾರ್ಯಕ್ರಮವನ್ನು ಸುಸೂತ್ರವಾಗಿ ನಿರೂಪಿಸಿದರು. ಸಹ ಶಿಕ್ಷಕಿ ಪೂರ್ಣಿಮಾ ಅವರು ಸ್ವಾಗತಿಸಿ, ವಿದ್ಯಾರ್ಥಿ ಪ್ರದೀಪ ಅವರು ವಂದನಾರ್ಪಣೆ ಮಾಡಿದರು.
