ಸರಕಾರ ಮಾಡದ ಕಾರ್ಯ ಮಹಾದಾಸೋಹ ಸಂಸ್ಥಾನ ಮಾಡಿ ಕೀರ್ತಿ ಪಡೆದಿದೆ : ಜಾಧವ್

ಸರಕಾರ ಮಾಡದ ಕಾರ್ಯ ಮಹಾದಾಸೋಹ ಸಂಸ್ಥಾನ ಮಾಡಿ ಕೀರ್ತಿ ಪಡೆದಿದೆ : ಜಾಧವ್
ಲಿಂಗೈಕ್ಯ ಡಾ.ಶರಣಬಸಪ್ಪ ಅಪ್ಪಗೆ ನುಡಿನಮನ
ಕಲಬುರಗಿ :ಒಂದು ಸರ್ಕಾರ ಮಾಡದ ಕೆಲಸವನ್ನು ಶರಣ ಬಸವೇಶ್ವರ ಸಂಸ್ಥಾನ ಮಾಡಿ ನಾಡು ಮೆಚ್ಚುವಂತೆ ಮಾಡಿದ ಡಾ.ಶರಣಬಸಪ್ಪ ಅಪ್ಪ ಸದಾ ಸ್ಮರಣೀಯರು ಎಂದು ಮಾಜಿ ಲೋಕ ಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಅಭಿಪ್ರಾಯಪಟ್ಟರು.
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದ ಆವರಣದ ಅನುಭವ ಮಂಟಪದಲ್ಲಿ ಆ. 28ರಂದು ಲಿಂಗೈಕ್ಯ ಡಾ. ಶರಣಬಸವಪ್ಪ ಅಪ್ಪ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿ ಶಿಕ್ಷಣ ರಂಗದಲ್ಲಿ ಕ್ರಾಂತಿಕಾರಿ ಸಾಧನೆ ಮಾಡಿ ಕಲಬುರಗಿಯನ್ನು ನಾಡಿನ ಮತ್ತು ರಾಷ್ಟ್ರದ ನಕಾಶೆಯಲ್ಲಿ ಗುರುತಿಸುವಂತೆ ಮಾಡಿದರು. ಜಾತಿ, ಮ,ತ ಪಂಥ ಎಂಬ ಭೇದವಿಲ್ಲದೆ ಸರ್ವರನ್ನು ಸಮಾನವಾಗಿ ಕಂಡ ಮಹಾದಾಸೋಹ ಸಂಸ್ಥಾನವು ಧರ್ಮ ಜ್ಯೋತಿಯನ್ನು ಬೆಳೆಸಿದೆ. ಮಹಾ ಸಂಸ್ಥಾನದ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತು ನಾನು ಕೂಡ ವೈದ್ಯನಾಗಿ ಬೆಳೆಯಲು ಸಾಧ್ಯವಾಯಿತು.ಅಪ್ಪಾ ಅವರ ಆಶೀರ್ವಾದದಿಂದಲೇ ಲೋಕಸಭಾ ಸದಸ್ಯನಾಗಿ ಅವರ ಕನಸಿನಂತೆ ನಿರ್ಮಾಣಗೊಂಡ ಸಂಸತ್ತಿನ ಒಂಬತ್ತನೇ ದ್ವಾರದಲ್ಲಿ ಕುದುರೆಯ ಮೇಲೆ ಕುಳಿತ ಬಸವಣ್ಣನವರ ಮೂರ್ತಿಗೆ ನಮಸ್ಕಾರ ಮಾಡಿ ಸಂಸತ್ತಿನ ಮೆಟ್ಟಿಲಿಗೆ ನಮನ ಸಲ್ಲಿಸಿ ಲೋಕಸಭೆ ಪ್ರವೇಶಿಸುವಂತಾದುದು ನನ್ನ ಪುಣ್ಯ ವಿಶೇಷ ಎಂದು ಹೇಳಿದರು. ಮಾತ್ರವಲ್ಲ ನನ್ನ ಮಗ ಶಾಸಕ ಡಾ. ಅವಿನಾಶ್ ಕೂಡ ಇಲ್ಲೇ ಶಿಕ್ಷಣ ಪಡೆದು ಉನ್ನತ ಸ್ಥಾನ ಪಡೆಯುವಂತಾಯಿತು.
ಶ್ರೇಷ್ಠ ಮಾನವತಾವಾದಿಯಾಗಿ ಮಹದಾಸೋಹರತ್ನರಾಗಿ ಪರಂಪರೆಯನ್ನು ಕಟ್ಟಿದ ಅವರ ಕಾರ್ಯವನ್ನು ಒಂಭತ್ತನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಮುನ್ನಡೆಸುವ ಎಲ್ಲ ಸೂಚನೆ ಅವರ ದಿವ್ಯ ಮಾತುಗಳಿಂದ ವ್ಯಕ್ತವಾಗಿದೆ. ಸಮಾಜಕ್ಕಾಗಿ ನಾನು ಎಂದು ಸಾರಿದ ಚಿರಂಜೀವಿ ದೊಡ್ಡಪ್ಪ ಅಪ್ಪ ದೊಡ್ಡ ದಾರ್ಶನಿಕರಾಗುವ ಆಶಯವಿಟ್ಟಿದ್ದಾರೆ ಎಂದರು.ಮಾತೋಶ್ರೀ ದಾಕ್ಷಾಯಿಣಿ ಅವ್ವ, ಬಸವರಾಜ ದೇಶಮುಖ್ ಮಾರ್ಗದರ್ಶನದಲ್ಲಿ ಸಂಸ್ಥಾನವು ಇನ್ನಷ್ಟು ಬೆಳಗಿ ನಾಡಿಗೆ ಕೀರ್ತಿ ತರಲಿ ಎಂದು ಡಾ.ಜಾಧವ್ ನುಡಿ ಹರಕೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥಾನ ಮಠದ ಮಾತೋಶ್ರೀ ದಾಕ್ಷಾಯಿಣಿ ಅವ್ವ ಅಧ್ಯಕ್ಷತೆ ವಹಿಸಿದ್ದರು. 9ನೇ ಪೀಠಾಧಿಪತಿಗಳಾದ ಚಿರಂಜೀವಿ ದೊಡ್ಡಪ್ಪ ಅಪ್ಪ ಸಾನಿಧ್ಯವಹಿಸಿದ್ದರು. ಕಾರ್ಯಕ್ರಮದಲ್ಲಿ ಅನೇಕ ಮಠಾಧೀಶರು ರಾಜಕೀಯ ಮುಖಂಡರು ಗಣ್ಯರು ಉಪಸ್ಥಿತರಿದ್ದರು.