ಗೋಣಿ ಮಾರಯ್ಯ

ಗೋಣಿ ಮಾರಯ್ಯ

ಗೋಣಿ ಮಾರಯ್ಯ

ಸುರಗಿಯಲ್ಲಿ ತಟ್ಟುಚ್ಚಿರಿದ ಮತ್ತೆ ಧಾರೆ ಮೊನೆ ತಾಗಿತಲ್ಲಾ ಎಂಬೀ ಹೆಡ್ಡರ ಮಾತ ಕೇಳಲಾಗದು.

ಅರಿವ ಗ್ರಹಿಸಿದ ಚಿತ್ತಕ್ಕೆ ಮರವೆಗೆ ತೆರನುಂಟೆ?

ನಿಷ್ಠೆಯಲ್ಲಿ ನಿಷ್ಠೆ ಹುಟ್ಟಿದ ಮತ್ತೆ

ನಿಷ್ಠೆಯಾಚರಣೆ ಘಟ್ಟಿಸದು.

ಎಲ್ಲಕ್ಕೆ ಶರಣೆಂದು ಎಲ್ಲರಾಲಯದಲ್ಲಿ ಭಿಕ್ಷವ ತೆಗೆದುಕೊಂಡು, ಸಲ್ಲಲಿತ ಭಾವದಲ್ಲಿಪ್ಪ ಶರಣಂಗೆ ಗೋಣಿಯ ಮರೆಯ ಸಿಕ್ಕುದೊಡಕಿಲ್ಲ.

ಕೇಟೇಶ್ವರಲಿಂಗವು ತಾನು ತಾನಾದ ಶರಣ.

       *ಗೋಣಿ ಮಾರಯ್ಯ*

                      *ವಚನ ಅನುಸಂಧಾನ*

ಶರಣರ ತತ್ವ ಸಿದ್ಧಾಂತಗಳು; ಅವರುಗಳ ಅರಿವು ಆಚರಣೆಯ ಅಂದರೆ ನಡೆ ನುಡಿಯ ಸಿದ್ಧಾಂತದ ಫಲಶೃತಿಯಾಗಿವೆ. ಹೀಗೆ ಬೀಜ ರೂಪವಾಗಿರುವ ತತ್ವ ಸಿದ್ಧಾಂತಗಳನ್ನು ಧರಿಸಿ, ಬಿತ್ತಿ ಬೆಳೆಯಬೇಕು ಎನ್ನುವ ಭಕ್ತ ಸಾಧಕನು; ಮೊದಲಿಗೆ ಶರಣರು - ಸ್ವತಃ ತಮ್ಮ ಜೀವನದಲ್ಲಿ ಶರಣತತ್ವದ ಹಾಗೆಯೇ ಬಾಳಿ ಬದುಕುತ್ತಾ ರೂಪಿಸಿ ತೋರಿಸಿದ ಶರಣತ್ವ ದ ವ್ಯವಸ್ಥಿತ ಜೀವನ ಶಿಕ್ಷಣವು ಶಿಸ್ತು ಬದ್ಧವಾದ ವ್ಯಕ್ತಿಗತವಾದ ಹಾಗೂ ಸಮಷ್ಟಿಗತವಾದ ಭವದ ಸಾಮಾಜಿಕ ಬದುಕಿನಲ್ಲಿ ಜೀವನದ ಸಮಗ್ರವಾದ ಸಾಫಲ್ಯವನ್ನು ಪರಿಗ್ರಹಿಸುವ ಮೂಲಕ ಶರಣರ ಲಿಂಗಾಯತವು; ಜೀವನ ಧರ್ಮದ ಸಾಧನೆಯ ಬದುಕಿನ ಶಾಲೆಗೆ; ಇಷ್ಟಲಿಂಗ ವಿಭೂತಿ ರುದ್ರಾಕ್ಷಿ ಯನ್ನು ಧರಿಸು ಮೂಲಕ ಪ್ರಾಥಮಿಕ ಪ್ರವೇಶವ ಪಡೆದುಕೊಂಡು ಭಕ್ತನಾಗಿ ಅರಿವು ಆಚರಣೆಯ ಜೊತೆಗೆ ಭಕ್ತಸ್ಥಳದಿಂದ ಶರಣ ಐಕ್ಯಸ್ಥಳದ ತನಕ ಸಾಧನೆಯನ್ನು ಊರ್ಧ್ವಮುಖಿಯಾಗೇ ಹಂತ ಹಂತವಾಗಿ ಏರಿ ಸಾಧಿಸಿ ಶರಣನಾಗಿ ಇಹಪರದ ಬದುಕನ್ನು ಸಾರ್ಥಕಗೊಳಿಸುವ ಮಹಾ ಮಾರ್ಗ ವನ್ನು ಅಪ್ಪ ಬಸವಾದಿ ಶರಣರು ತಮ್ಮ ವಚನಗ ಳಲ್ಲಿ ಇಂಬಿಟ್ಟಿದ್ದು, ಸರ್ವಾಸಕ್ತ ಮನಸುಗಳಿಗೂ ಮುಕ್ತವಾಗಿ ತೆರೆದಿಟ್ಟರು. ಅಂತೆಯೇ ಇಲ್ಲಿ ಈ ಮೇಲಿನ ವಚನಕಾರ ಶರಣ ಗೋಣಿ ಮಾರಯ್ಯ ಹದಿನಾರನೆ ಶತಮಾನದ ಶರಣನಾದ್ರೂ ಇವರು ಗೋಣಿತಟ್ಟನ್ನು ಹೊದ್ದುಕೊಂಡು ದನಕಾಯುವ

ಕಾಯಕ ಮಾಡುವ ಮಾಹಿತಿ 'ಕೇಟೇಶ್ವರಲಿಂಗ ' ಅಂಕಿತದಲ್ಲಿನ ಅವರ ಒಂಭತ್ತು ಲಭ್ಯವಚನಗಳ ಮುಖಾಂತರ ತಿಳಿದು ಬರುತ್ತದೆ. ಈಗ ಇವರ ಈ ಮೇಲಿನ ಪ್ರಸ್ತುತ ವಚನದ ಅನುಸಂಧಾನವನ್ನು ಮಾಡಿ ನೋಡು ಮೂಲಕ ಹೆಚ್ಚಿನ ವಿಚಾರಗಳ ತಿಳಿದು ಕೊಳ್ಳುವಾ

*#ಸುರಗಿಯಲ್ಲಿ ತಟ್ಟುಚ್ಚಿರಿದ ಮತ್ತೆ ಧಾರೆ ಮೊನೆ* *ತಾಗಿತಲ್ಲಾ ಎಂಬೀ ಹೆಡ್ಡರ ಮಾತ ಕೇಳಲಾಗದು.*

*ಅರಿವ ಗ್ರಹಿಸಿದ ಚಿತ್ತಕ್ಕೆ ಮರವೆಗೆ ತೆರನುಂಟೆ?*

*ನಿಷ್ಠೆಯಲ್ಲಿ ನಿಷ್ಠೆ ಹುಟ್ಟಿದ ಮತ್ತೆ*

*ನಿಷ್ಠೆಯಾಚರಣೆ #ಘಟ್ಟಿಸದು.*

ಅತ್ಯಂತ ಪ್ರ್ಯಾಕ್ಟಿಕಲ್ ಮನೋಭಾವ ಹೊಂದಿದ ಶರಣರು ವರ್ತಮಾನ ಬದುಕಿಗೇ ಬದ್ಧವಾಗಿದ್ದು

ಅವರ ವಿಚಾರ ವಿನಿಮಯಗಳೂ ಇಹಪರವನ್ನು ಕುರಿತಂತೆ ಇವೆ.ಇಲ್ಲಿ ಅರಿವು ಆಚರಣೆ ಕುರಿತಾಗಿ

ವಚನ ಮಾತನಾಡಿದೆ. ಸುರಗಿ(ಆಯುಧ)ದಿಂದ ಚುಚ್ಚಿ ಇರಿದ ಮೇಲೆ, ಅರೆರೆ! ಇದರ ಅಲುಗೀಗ ತಮಗೆ ತಾಗಿತಲ್ಲಾ!! ಎಂದೆನ್ನುವ ಹೆಡ್ಡರ ಮಾತನ್ನ ಕೇಳಲಾಗದು. ಅದರಂತೆಯೇ ಅರಿವು ಚಿತ್ತದಲ್ಲಿ ಅಚ್ಚೊತ್ತಿ ಗ್ರಹಿಸಿದ ಮೇಲೆ ಆ ಚಿತ್ತಕ್ಕೆ ಮತ್ತೆ ಮರೆ ವಿಗೆ ಸ್ಥಾನವಿಲ್ಲ. ಆದ್ದರಿಂದ ಒಂದು ವಿಷಯದ ನಿಷ್ಠೆಯಲ್ಲಿ ನಿಷ್ಠೆ ಹುಟ್ಟಿದ ಮೇಲೆ ಪುನಃ ನಿಷ್ಠೆಯ ಆಚರಣೆಗೆ ಆಸ್ಪದವಿಲ್ಲ. ಅಂದ್ರೆ ಇಲ್ಲಿ ಈ ವಚನ ದ ತಾತ್ಪರ್ಯವೆಂದ್ರೆ, ಶರಣತತ್ವಗಳ 'ಅರಿವು' ಎನ್ನುದು ಒಮ್ಮೆ ಸರಿಯಾಗೇ ಆರಪಾರ್ ಅರ್ಥ ಆದಲ್ಲಿ ಅದನ್ನು ಮತ್ತೆ ಪುನಃ ಅರಿಯುವ ಕಷ್ಟದ ಆಚರಣೆ ಮಾಡಿಯೇ ತಿಳಿಯುವ ಅಗತ್ಯವೇನಿಲ್ಲ ಅದನ್ನು ದೈನಂದಿನ ಬದುಕಿನಲ್ಲಿ ಬಿತ್ತನೆ ಮಾಡಿ ಬೆಳಕಿನ ಬೆಳೆಯನ್ನು ತೆಗೆಯಬೇಕು ಎನ್ನುವುದೇ ಇಲ್ಲಿನ ಮುಖ್ಯ ಅಂಶವಾಗಿದೆ.

*ಎಲ್ಲಕ್ಕೆ ಶರಣೆಂದು ಎಲ್ಲರಾಲಯದಲ್ಲಿ ಭಿಕ್ಷವ ತೆಗೆದುಕೊಂಡು,* *ಸಲ್ಲಲಿತ ಭಾವದಲ್ಲಿಪ್ಪ ಶರಣಂಗೆ ಗೋಣಿಯ* *ಮರೆಯ ಸಿಕ್ಕುದೊಡಕಿಲ್ಲ.*

*ಕೇಟೇಶ್ವರಲಿಂಗವು ತಾನು ತಾನಾದ #ಶರಣ.*

ಹೀಗೆ ಅರಿವುಳ್ಳ ಲಿಂಗಾಯತ ಭಕ್ತ ಆಚರಣೆಗೆ ಪರಿಶುದ್ಧವಾದ ತನು ಮನ ಭಾವಗಳುಳ್ಳವನಾಗಿ, ಎಲ್ಲರಿಗೂ ಶರಣೆಂದು ವಿನೀತ ಭಾವದಿಂದ ದನ ಕಾಯಲು ಬಿಟ್ಟ ಎಲ್ಲರ ಮನೆಯಲ್ಲಿ ಭಿಕ್ಷೆ ಅಂದರೆ (ದನಕಾಯುವವ ದನಗಳನ್ನು ಅವರವರ ಮನೆಗೆ ಹೊಗಿಸಿದ ಮೇಲೆ ಅವರು ಕೊಡುವ) ಊಟ ಇಸಿದುಕೊಂಡುಂಡು ಉಂಡು ನೆಮ್ಮದಿ ಭಾವದಿಂದ ಇರುವ ಶರಣನಿಗೆ ಗೋಣಿ ಮರೆಯ ಸಿಕ್ಕು ತೊಡಕಿಲ್ಲ ಆತ ಸಾಕ್ಷಾತ್ ಕೇಟೇಶ್ವರಲಿಂಗ ತಾನೇ ತಾನಾದ ಶರಣ ಎನ್ನುವಲ್ಲಿ ಕಾಯಕನಿರತ ಶರಣನ ಜೀವನದ ಶೈಲಿಯ ನಡೆಯಲ್ಲೇ ಅದರ ಮಹತ್ವವು ಕಣ್ಣಿಗೆ ಎದ್ದು ಕಾಣುತ್ತದೆ. ಕಾಯಕವು ಯಾವುದೇ ಇದ್ರೂ ತಾನು ಮಾತ್ರ ಎಂಥವುದೇ ನಾಟಕೀಯ ಕಪಟತನದ ಭಾವವಿರದೆ ಸಹಜವು ಶುದ್ಧವೂ ಆದ ಅರಿವು ಆಚರಣೆಯ ಶರಣನು ಘನಮಹಿಮನಾಗಿಯೇ ಗೌರವಿಸಲ್ಪಡುವನೆಂಬ ಶರಣ ಸಂದೇಶವನ್ನು ಇಲ್ಲಿ ಈ ವಚನವು ಬಿತ್ತರಿ ಸುತ್ತದೆ ಎಂದು ಹೇಳಬಹುದು ಎನಿಸುತ್ತದೆ.

                    *ಅಳಗುಂಡಿ ಅಂದಾನಯ್ಯ*