ಭಾವ -- ಭಾಷೆ-ಮುಕ್ಕಣ್ಣ ಕರಿಗಾರ
ಭಾವ -- ಭಾಷೆ-ಮುಕ್ಕಣ್ಣ ಕರಿಗಾರ
ಭಾವನೆಗಳ ಅಭಿವ್ಯಕ್ತಿ ಸಾಮರ್ಥ್ಯದಿಂದಾಗಿಯೇ ಮನುಷ್ಯನು ಪ್ರಾಣಿವರ್ಗದಿಂದ ಭಿನ್ನನಾಗಿದ್ದಾನೆ.ಭಾವನೆಗಳು ಪ್ರಾಣಿಗಳಿಗೂ ಇವೆ,ಅವು ತಮ್ಮದೆ ವಿಶಿಷ್ಟ ಕೂಗು,ಕರೆ,ಆಂಗಿಕ ಅಭಿನಯಗಳಿಂದ ವ್ಯಕ್ತಪಡಿಸುತ್ತವೆ.ಆದರೆ ಮನುಷ್ಯನಿಗೆ ಭಾಷೆ ಎಂಬ ಮಹಾನ್ ಸಿದ್ಧಿ ಪ್ರಾಪ್ತವಾಗಿದೆ.ಭಾಷೆಯ ಮಾಧ್ಯಮದ ಮೂಲಕ ಮನುಷ್ಯ ತನ್ನ ಭಾವನೆಗಳನ್ನು ವ್ಯಕ್ತಪಡಿಸುವನು .ಭಾಷೆಯು ಸಂವಹನ ಮಾಧ್ಯಮವೇ ಹೊರತು ಅದುವೇ ಸರ್ವಸ್ವವಲ್ಲ.ಮೂಕರು ಮಾತನಾಡಲಾರರು ಹಾಗೆಂದು ಅವರಲ್ಲಿ ಭಾವನೆಗಳು ಇರುವುದಿಲ್ಲ ಎಂದರ್ಥವಲ್ಲ.ಯೋಗಿಗಳು ಭಾಷೆಯ ಬಳಕೆ ಕಡಿಮೆ ಮಾಡುತ್ತಾರೆ,ಹಿತಮಿತವಾಗಿ ಮಾತನಾಡುತ್ತಾರೆ.
ಭಾಷೆಯು ಮನುಷ್ಯ ಮನುಷ್ಯರ ನಡುವೆ ಸಂಪರ್ಕಸೇತುವೆ ಹೇಗೋ ಹಾಗೆಯೇ ಅದು ವ್ಯಕ್ತಿ- ಸಮಾಜಗಳಲ್ಲಿ ಸಂಘರ್ಷವನ್ನು ಉಂಟು ಮಾಡುವ ಸಾಧನವೂ ಹೌದು.ಭಾಷೆಯು ಭಾವನೆಯಿಂದ ಜೀವ ಪಡೆಯುತ್ತದೆ.ಭಾವನೆಯು ಸತ್ ಆಗಿದ್ದರೆ ಅಂದರೆ ಸದ್ಭಾವನೆ ಆಗಿದ್ದರೆ ಅದರಿಂದ ಸಮಾಜದಲ್ಲಿ ಹಿತಕರ ವಾತಾವರಣ ಉಂಟಾಗುತ್ತದೆ. ದುರ್ಭಾವವನ್ನು ಒಡಲಲ್ಲಿಟ್ಟುಕೊಂಡ ಭಾಷೆ ತಂಟೆ,ತಕರಾರು,ಜಗಳ,ಸಂಘರ್ಷಗಳ ಕಾರಣವಾಗುತ್ತದೆ. ವಿದ್ಯುತ್ ಪ್ರವಾಹಕ ಲೈನ್ ನಲ್ಲಿ ಪಾಸಿಟಿವ್ ಮತ್ತು ನೆಗೆಟಿವ್ ಆಯಾನುಗಳಿರುವಂತೆ ಭಾವನೆಯಲ್ಲಿ ಸದ್ಭಾವ,ದುರ್ಭಾವಗಳಿವೆ.ವಿದ್ಯುತ್ ಲೈನ್ ನಲ್ಲಿ ಧನ,ಋಣ ವಿದ್ಯುತ್ ಪ್ರವಾಹಗಳು ಉಂಟು ಮಾಡುವ ಪರಿಣಾಮವನ್ನೇ ಭಾವನೆಗಳು ಭಾಷೆಯ ಮೂಲಕ ಸಮಾಜಜೀವನದಲ್ಲಿ ಉಂಟು ಮಾಡುತ್ತವೆ.
ಭಾಷೆಯು ಭಾವನೆಗಳನ್ನು ವ್ಯಕ್ತಪಡಿಸುವ ಸಾಧನವಾದರೂ ಅದು ಎಲ್ಲ ಭಾವನೆಗಳನ್ನು ವ್ಯಕ್ತಪಡಿಸಲಾರದು.ಭಾವನೆಗಳೆಲ್ಲವೂಭಾಷೆಯ ರೂಪದಲ್ಲಿ ಪ್ರಕಟಗೊಳ್ಳವು.ಭಾಷಾತೀತ ಸ್ಥಿತಿಯಲ್ಲಿಯೇ ದೈವತ್ವದ ನೆಲೆಯಿದೆ.ಪರಮಾತ್ಮನ ದರ್ಶನ, ಸಾಕ್ಷಾತ್ಕಾರಗಳು ಭಾಷಾತೀತ ಈಶತ್ವದ ನೆಲೆಯಲ್ಲಿ ಘಟಿಸುವ ಅಪರೋಕ್ಷ ಸಂಗತಿಗಳು.ಭಾಷಾತೀತನಾದ ಭಗವಂತನು ತನ್ನ ಭಕ್ತನೆದುರು ಪ್ರಕಟಗೊಂಡಾಗ ಪರಮಾತ್ಮನು ಭಕ್ತನ ಭಾಷೆಯಲ್ಲಿಯೇ ಮಾತನಾಡುತ್ತಾನೆ ! ನಮ್ಮ ಕಥೆ ಕಾವ್ಯ ಪುರಾಣ,ಸಿನೆಮಾಗಳಲ್ಲಿ ಪ್ರದರ್ಶಿಸುವಂತೆ ಭಕ್ತರು ಬೇಡಿದಾಗ ಭಗವಂತ 'ವರಂ ಬ್ರೂಹಿ'ಎಂದು ಕೇಳಿ ' ತಥಾಸ್ತು' ಎಂದು ಮಾತ್ರ ಅನುಗ್ರಹಿಸುವುದಿಲ್ಲ ! ಅದು ಕೇವಲ ಶಿಷ್ಟಸಂಸ್ಕೃತಿಯ ಜನರ ಭ್ರಾಂತಿಮಾತ್ರ.ಶಿವ ತನ್ನ ಭಕ್ತನೆದುರು ' ಏನು ವರಬೇಡುತ್ತಿ,ಬೇಡು ಮಗು' ಎಂದು ಕೇಳಿ 'ಆಗಲಿ' ಎಂದೂ'ನಿನ್ನಾಸೆ ಈಡೇರಲಿ' ಎಂದೂ ಆಶೀರ್ವದಿಸಬಲ್ಲ.ಕನ್ನಡಿಗ ಭಕ್ತನೊಂದಿಗೆ ಕನ್ನಡದಲ್ಲಿ ಮಾತನಾಡುವಂತೆ ಇಂಗ್ಲಿಷ್ ಭಕ್ತನೊಂದಿಗೆ ಶಿವನು ಇಂಗ್ಲೀಷ್ ನಲ್ಲಿಯೂ ವ್ಯವಹರಿಸಬಲ್ಲ.
ಮಂತ್ರವು ಭಾಷೆಯೇ.ಆದರೆ ಅದು ಶಕ್ತಿಶಾಲಿಯಾದ ಸೂತ್ರಭಾಷೆ.ದಿನನಿತ್ಯನಾವು ಬಳಸುವ ಭಾಷೆಯಲ್ಲಿ ಅಧ್ಯಾತ್ಮಿಕ ಶಕ್ತಿ ಇರುವುದಿಲ್ಲ, ಮಂತ್ರಗಳಲ್ಲಿ ಅಧ್ಯಾತ್ಮಿಕ ಶಕ್ತಿ ಸುಪ್ತವಾಗಿರುತ್ತದೆ.ಭಕ್ತನ ಅನವರತ ಸಾಧನೆಯಿಂದ ಮಂತ್ರಾಂತರ್ಗತಶಕ್ತಿಯು ಪ್ರಕಟಗೊಂಡು ಭಕ್ತನ ಇಷ್ಟದೈವವನ್ನು ಅವನೆದುರು ಪ್ರಕಟಗೊಳ್ಳುವಂತೆ ಮಾಡುತ್ತದೆ. ಭಗವದನುಗ್ರಹಕ್ಕೆ ಪಾತ್ರವಾಗುವ ಭಾಷೆಯೇ ಸರ್ವೋತ್ಕೃಷ್ಟ ಭಾಷೆ.ಅದು ಕನ್ನಡವಾಗಿರಬಹುದು,ತೆಲುಗು ಆಗಿರಬಹುದು ಇಲ್ಲವೆ ಮರಾಠಿ ಆಗಿರಬಹುದು ಅಥವಾ ಮತ್ತಾವುದೇ ಭಾಷೆ ಆಗಿರಬಹುದು ಆದರೆ ಸಂಸ್ಕೃತವೇ ಆಗಿರಬೇಕು ಎಂದಿಲ್ಲ.ಸಂಸ್ಕೃತ 'ದೇವಭಾಷೆ' ಎಂದು ದೇವರು ಸಂಸ್ಕೃತದಲ್ಲೇ ಮಾತನಾಡುತ್ತಾನೆ ಎಂದು ಭಾವಿಸಬೇಕಿಲ್ಲ.ಧರ್ಮ,ದೇವರುಗಳು ಸಂಸ್ಕೃತ ಬಲ್ಲವರ ಆಸ್ತಿಯಾಗಿದ್ದ ಕಾಲದಲ್ಲಿ ಇಂತಹ ನಂಬಿಕೆ ಬೆಳೆದು,ಗಟ್ಟಿಗೊಂಡಿದೆ.ಯಾವ ಕಾಲವೇ ಆಗಿರಲಿ ದೇವರು ಯಾವುದೇ ಒಂದು ಭಾಷೆಯನ್ನು ತನ್ನ ಅಧಿಕೃತ ಭಾಷೆ ಎಂದು ಪರಿಗಣಿಸುವುದಿಲ್ಲ.ದೇವರಿಗೆ ಒಂದು ಅಧಿಕೃತ ಭಾಷೆಯೂ ಇಲ್ಲ.ಪ್ರಪಂಚದಲ್ಲಿ ಇರುವ ಎಲ್ಲ ಭಾಷೆಗಳಲ್ಲಿಯೂ ಪರಮಾತ್ಮನು ವ್ಯವಹರಿಸಬಲ್ಲ.ಆದ್ದರಿಂದ ಅವನು ಸರ್ವಜ್ಞ, ಎಲ್ಲ ಭಾಷೆಗಳನ್ನು, ಎಲ್ಲ ವಿಚಾರಗಳನ್ನು ಬಲ್ಲವನು.ಭಗವಂತನು ಭಾವನೆಯನ್ನು ಓದುತ್ತಾನೆಯೇ ಹೊರತು ಆಡುವ ಭಾಷೆಯನ್ನಲ್ಲ.
ಬ್ರಾಹ್ಮಣರಾಗಿದ್ದ ಶಂಕರಾಚಾರ್ಯರಿಗೆ ದರ್ಶನ ನೀಡಿದ್ದ ಶಿವನು ಮಾದಾರ ಚೆನ್ನಯ್ಯನವರ ಮನೆಯ ಅಂಬಲಿಯ ಸವಿಯನ್ನು ಆರೋಗಿಸಿದ್ದಾನೆ.ಶಂಕರಾಚಾರ್ಯರ ಜೊತೆ ಸಂಸ್ಕೃತದಲ್ಲಿ ಮಾತನಾಡಿದ ಶಿವನು ಮಾದಾರ ಚೆನ್ನಯ್ಯನವರೊಂದಿಗೆ ಕನ್ನಡದಲ್ಲೇ ಮಾತನಾಡಿರುತ್ತಾನೆ! ಶಂಕರಾಚಾರ್ಯರಿಗೆ ಸೌಂದರ್ಯಲಹರಿ ಬರೆಯಲು ಸ್ಫೂರ್ತಿ ನೀಡಿದ ಪರಾಶಕ್ತಿಯೇ ಚಿದಾನಂದಾವಧೂತರಿಗೆ ದೇವಿಪುರಾಣ ಬರೆಯಲು ಪ್ರೇರಣೆ ನೀಡಿದ್ದಾಳೆ.ಶಂಕರಾಚಾರ್ಯರು ಸಂಸ್ಕೃತಭೂಯಿಷ್ಟ ಪದಪ್ರಯೋಗಗಳಿಂದ ಶಿವನನ್ನು ಒಲಿಸಿರಬಹುದು,ಮಾದಾರಚೆನ್ನಯ್ಯನವರು ಮಂತ್ರವೂ ಬಾರದೆ ಶಿವಶಿವ ಎನ್ನುತ್ತ ಶುದ್ಧಭಕ್ತಿಯಿಂದ ಶಿವನನ್ನು ಒಲಿಸಿದ್ದಾರೆ.ಸೌಂದರ್ಯಲಹರಿಯಲ್ಲಿ ಇರುವ ಶಕ್ತಿಯೇ ದೇವಿಪುರಾಣದಲ್ಲೂ ಇದೆ.
ಭಾಷೆಯು ಭಾವದಿಂದ ಪರಿಪುಷ್ಟಗೊಳ್ಳುತ್ತದೆ,ಪೂರ್ಣವಾಗುತ್ತದೆ.ಭಾವಪೂರ್ಣ ಭಾಷೆಯೇ ಭಗವದನುಗ್ರಹದ ಸಾಧನ.ಭಕ್ತನ ಮುಗ್ಧ,ಶುದ್ಧಾಂತಃಕರಣದ ಭಾವವು ಭಗವಂತನನ್ನು ಭಕ್ತನ ಸಮೀಪ ಕರೆ ತರುತ್ತದೆ.ಭಾಷೆಯಲ್ಲ,ಭಾವನೆಯೇ ಮುಖ್ಯವಾದುದು.ಭಾವವು ತೀವ್ರವಾದಷ್ಟು ಭಗವಂತನು ಭಕ್ತನ ಸಮೀಪ ಬರುತ್ತಾನೆ.ಭಾವವು ಉದಾತ್ತವಾಗಬೇಕು,ತೀವ್ರವಾಗಬೇಕು.ಉದಾತ್ತಭಾವನೆಯು ಲೋಕಕಲ್ಯಾಣಕಾರಿಯಾಗುವುದು.ಕಲ್ಯಾಣಗುಣಸಂಪನ್ನನಾದ ಪರಮಾತ್ಮನ ಅನುಗ್ರಹಕ್ಕೆ ಭಾವ ಭಾಷೆಗಳೆರಡೂ ಔನ್ನತಿಗೊಂಡಿರುವುದು ಅವಶ್ಯಕ.
