ಅಲ್ಲಮಪ್ರಭು ದೇವರು

ಅಲ್ಲಮಪ್ರಭು ದೇವರು
ತನ್ನ ತಾನರಿದಡೆ ನುಡಿಯೆಲ್ಲ ತತ್ವ ನೋಡಾ !
ತನ್ನ ತಾ ಮರೆದಡೆ
ನುಡಿಯೆಲ್ಲ ಮಾಯೆ ನೋಡಾ !
ಅರಿದು ಮರೆದ ಶಿವಯೋಗಿಯ ಶಬ್ದವೆಲ್ಲವು
ಉಪದೇಶವಲ್ಲದೆ ಭಿನ್ನವುಂಟೆ ?
ನಿನ್ನ ಮನದ ಕಳವಳವ ತಿಳುಹಲೆಂದು ಮಾತನಾಡಿಸಿ ನೋಡಿದಡೆ, ಎನ್ನ ಮನದೊಳಗೆ ಕಂದು ಕಲೆ ಎಂಬುದಿಲ್ಲ ನೋಡಾ !
ನಮ್ಮ ಗುಹೇಶ್ವರಲಿಂಗಕ್ಕೆ ನೀನು ಕರುಣದ ಶಿಶುವಾದ ಕಾರಣ ಬಾಯ್ದೆಗೆದೆನಲ್ಲದೆ, ಭಿನ್ನವುಂಟೆ ಹೇಳಾ ಮರುಳೆ ?
*ಅಲ್ಲಮಪ್ರಭು ದೇವರು*
** *ವಚನ ಅನುಸಂಧಾನ*
ಲಿಂಗಾಯತ ಶರಣತತ್ವ ಸಿದ್ಧಾಂತಗಳೆಲ್ಲವೂ; ತನ್ನ ತಾನರಿಯುವ ಹಂಬಲ ಉಳ್ಳವರಿಗೆ ಸರಿ ದಾರಿಯನ್ನು ಸಮರ್ಥವಾಗಿ ಸತ್ಯ ತಿಳಿಯುವಂತೆ ತಿಳಿಸಿಕೊಡುತ್ತವೆ ಹಾಗೂ ಅದರಂತೆ ಸಾಧಕಗೆ ಅವುಗಳನ್ನು ತನ್ನ ಬದುಕಿನಲ್ಲಿ ಆಚರಿಸುವಂತೆ ಹೇಳಿಕೊಡುವವು. ಅಲ್ಲದೇ ಈ ಮಾರ್ಗವನ್ನು ಈಗಾಗಲೇ ಸಾಧಿಸಿದ ಶರಣರ ಸಂಗದಲ್ಲಿ ಸದಾ ಇರುವ ಮೂಲಕ ಹೆಚ್ಚಿನ ಅರಿವು ಹೊಂದುವಂತೆ ಈ ಶರಣತತ್ವ ಸಿದ್ಧಾಂತಗಳು ಪ್ರೇರಣೆ ನೀಡತ್ತವೆ. ಇಲ್ಲಿ ಅಲ್ಲಮಪ್ರಭು ದೇವರ ಈ ಮೇಲಿನ ವಚನ ಈ ವಿಷಯವನ್ನು ಕುರಿತಂತೆ ಶಿವಯೋಗಿಯೊಬ್ಬ ರು ತನ್ನ ತಾನು ಅರಿತು ಇರಲಾರದೆ ಮೈಮರೆತು ಮಾತನಾಡುವುದನ್ನು ಕಂಡು ಈ ವಚನ ವಿಚಾರ ಹೇಳಿದಂತೆ ಕಾಣಿಸುತ್ತದೆ.ಇದನ್ನು ಅನುಸಂಧಾನ ಮಾಡುವ ಮೂಲಕ ವಿವರವಾಗಿ ಪರಿಭಾವಿಸಿ ನೋಡೋಣ.
*#ತನ್ನ ತಾನರಿದಡೆ ನುಡಿಯೆಲ್ಲ ತತ್ವ ನೋಡಾ !*
*ತನ್ನ ತಾ ಮರೆದಡೆ*
*ನುಡಿಯೆಲ್ಲ ಮಾಯೆ #ನೋಡಾ !*
ಇಲ್ಲಿ ವ್ಯಕ್ತಿಯು ಭಕ್ತನಾದ ಮೇಲೆ ಆತ ತನ್ನೊಳಗೆ ಇರುವ ಪಂಚಭೂತಗಳ ಮತ್ತು ಪಂಚಪ್ರಾಣಗಳ ಗುಣ ದೋಷಗಳ ಮಾಯಾ ಮಲಗಳನ್ನ ತಿಳಿದು ಸರಿಯಾದ ರೀತಿಯಲ್ಲಿ ಅವುಗಳ ಒಳಿತು ಕೆಡಕು ಅರಿತುಕೊಂಡು; ಅದರಲ್ಲೂ ಮುಖ್ಯ ದೋಷಗ ಳೆಂದ್ರೆ ಅರಿಷಡ್ವರ್ಗಗಳು. ಅಂದ್ರೆ; ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಗಳು ಇವುಗಳನ್ನು ಸಾಧನೆ ಮಾಡಿ ನಿಗ್ರಹಿಸಿಕೊಂಡು, ತನುಮನಗಳ ಪರಿಶುದ್ಧತೆಯನ್ನು ಕಾಪಾಡಿಕೊಳ್ಳುವ ಮೂಲಕ
ಚಿತ್ತವನ್ನ ಅಹಂಕಾರದಿಂದ ಮುಕ್ತವಾಗಿಸಿಕೊಂಡ ಬಳಿಕ ಅದನ್ನು ಸುಚಿತ್ತವಾಗಿರಿಸಿಕೊಂಡಾಗ, ಚಿತ್ತ ಚಿನ್ಮಯವಾಯ್ತಂದ್ರೆ ಆಗ ಆತನ ನುಡಿ ಪರತತ್ವ ವಾಗುತ್ತದೆ. ಅದರೆ ಈ ಸಾಧನೆಯ ಮಾಡದೆ ತನ್ನ ತಾ ತಿಳಿಯದೇ ಸುಮ್ಮನೆ ಬಾಯಿಗೆ ಬಂದಂತೆ ಉನ್ಮಾದದಿಂದ ಮಾತನಾಡಿದ್ರೆ ನುಡಿದ ಆ ನುಡಿ ಯೇ ಮಾಯಾಮಲ ನೋಡಾ! ಎನ್ನುವ ಅಲ್ಲಮ ಪ್ರಭು ದೇವರು ಮುಂದುವರಿದು..
*ಅರಿದು ಮರೆದ ಶಿವಯೋಗಿಯ ಶಬ್ದವೆಲ್ಲವು*
*ಉಪದೇಶವಲ್ಲದೆ #ಭಿನ್ನವುಂಟೆ ?*
ಎನ್ನುವ ಮೂಲಕ ಇಲ್ಲಿ ಬರೀ ಮಾತನಾಡುವ ಆ ಶಿವಯೋಗಿಯ ಮತ್ತು ನಿಜ ಶರಣನ ನಡುವಿನ ವ್ಯತ್ಯಾಸವನ್ನು ಕುರಿತಂತೆ ಹೇಳಲಾಗಿದೆ. ತನ್ನನು ತಾನು ತಿಳಿದ ಶರಣನು ನುಡಿಯ ಪರಿಣಾಮದ
ಇತಿಮಿತಿಯನ್ನ ಅರಿತುಕೊಂಡು ತಾತ್ವಿಕವಾದಂಥ ಸತ್ಯವನ್ನು ನುಡಿಯುವ ಮೂಲಕ ಆತ ತನ್ನ ನಡೆ ಮಾದರಿಯಾಗಿರುವಂತೆ ನೋಡಿಕೊಂಡರೆ,ಅದೇ ಶಿವಯೋಗಿಯು ತನ್ನ ಅರಿವಿನ ಶಕ್ತಿಯ ಮರೆತು ಯೋಗಶಕ್ತಿಯ ಆ ಅಹಂ(ಗರ್ವ)ದಿಂದ ಇರುವ ಮೂಲಕ ಅನುಭಾವವಿಲ್ಲದ ಕಾರಣಕ್ಕೆ ಮಾದರಿ ಆಗದೆ ಕೇವಲ ಒಣ ಮಾತಿನ ಮಂಟಪ ಕಟ್ಟಿ ಆ ಮೂಲಕವೇ ತಾ ಹೇಳಲು ಉಪಕ್ರಮಿಸಿದ್ರೆ ಆಗ
ಅದು ಒಣ ಉಪದೇಶ ಆಗುತ್ತದೆಯೇ ಹೊರತು ನಿಷ್ಪತ್ತಿಯಾಗಿ ತತ್ವವಾಗುವುದಿಲ್ಲವೆಂದು ನಿಷ್ಠುರ ನುಡಿ ಪ್ರಶ್ನೆ ಕೇಳಿದ್ದಾರೆ ಇಲ್ಲಿ ಅಲ್ಲಮಪ್ರಭುಗಳು. ತನ್ಮೂಲಕ ಶಿವಯೋಗಿಯ ಮಿತಿಯ ಸ್ಪಷ್ಟವಾಗಿ ಗುರುತಿಸಿ ಹೇಳಿದ್ದಾರೆ.
*#ನಿನ್ನ ಮನದ ಕಳವಳವ ತಿಳುಹಲೆಂದು* *ಮಾತನಾಡಿಸಿ ನೋಡಿದಡೆ, ಎನ್ನ ಮನದೊಳಗೆ ಕಂದು ಕಲೆ ಎಂಬುದಿಲ್ಲ ನೋಡಾ !*
ಅಲ್ಲಮಪ್ರಭುಗಳು ಇಲ್ಲಿ ಶಿವಯೋಗಿ ಒಬ್ಬರನ್ನು ಎದಿರುಗೊಂಡಾಗ ನಡೆದ ಸಂಭಾಷಣೆ ಇದಾಗಿದೆ ಎನ್ನುವುದು ವಚನದ ಓದಿನಿಂದ ಸ್ಪಷ್ಟವಾಗುತ್ತದೆ ಎಂದು ಹೇಳಿದಂತೆ, ಶರಣ ಸದಾ ಅರಿವಿನೆಚ್ಚರದ ಲ್ಲೇ ಇರುವುದನ್ನು ಹಾಗೂ ಶಿವಯೋಗಿ ತನಗಾದ ಅಲ್ಪ ಪ್ರಮಾಣದ ಸಾಧನೆಯ ಪರಿಣಾಮವನ್ನೇ ಮಾತನಾಡಿ ಅರೆಮರುಳನಾಗುವುದನ್ನು ಕುರಿತು ಈ ಮೇಲಿನ ವಚನದ ಸಾಲಿನಲ್ಲಿ ತಮಗಾದಂಥಾ ಕಳಕಳಿಯನ್ನು ಆ ಶಿವಯೋಗಿಗೆ ಹೇಳಿದಾಗ ಆತ ಅಲ್ಲಮರಿಗೇನೇ 'ನೀವೀಗ ನನಗೆ ಹೇಳುತ್ತಿರುವ ನುಡಿಯು ಉಪದೇಶ ಆಗದೇನು?' ಎಂದು ಪ್ರಶ್ನೆ ಮಾಡಿರುವಾಗ ಮೇಲಿನಂತೆ ಅಲ್ಲಮಪ್ರಭುಗಳು ಹೇಳಿದ್ದಾರೆ.
*#ನಮ್ಮ ಗುಹೇಶ್ವರಲಿಂಗಕ್ಕೆ ನೀನು ಕರುಣದ ಶಿಶುವಾದ* *ಕಾರಣ ಬಾಯ್ದೆಗೆದೆನಲ್ಲದೆ, ಭಿನ್ನವುಂಟೆ ಹೇಳಾ #ಮರುಳೆ ?*
ಎಂದು ಅಲ್ಲಮಪ್ರಭುಗಳು ತಮ್ಮ ಮನದೊಳಗೆ ಯಾವ ಪೂರ್ವಾಗ್ರಹವಿಲ್ಲ ಆದರೆ ಶಿವಯೋಗಿ ಆದ ನೀನು ನಮ್ಮ ಗುಹೇಶ್ವರನ ಕರುಣದ ಕಂದ ನೀನೆಂಬ ಕಳಕಳಿಯ ಕಾರಣಕ್ಕೆ ನಿನ್ನೊಳಗೆಯಿರ ಬಹುದಾದ ಕಳೆಕಸವನ್ನು ಕಳೆಯುವುದಕ್ಕಾಗೇ ನಿನ್ನನ್ನು ಮಾತನಾಡಿಸಿದೆನೇ ಹೊರತು ಬೇರೆಯ ಯಾವುದೇ ಉದ್ದೇಶವಿಲ್ಲವೋ ಮರುಳೇ ಎಂದು ಅಲ್ಲಮಪ್ರಭುಗಳು ಶಿವಯೋಗಿಗೆ ಉತ್ತರಿಸುವ ಮೂಲಕ ನುಡಿ ಸೂತಕ ಬಲ್ಲಂಥ ಶರಣನ ಗುಣ ಗೌರವವನ್ನು ಇಲ್ಲಿ ಎತ್ತಿಹಿಡಿದು ತೋರಿಸಿದ್ದಾರೆ. **
*ಅಳಗುಂಡಿ ಅಂದಾನಯ್ಯ*