ಸಮ್ಮೇಳನಾಧ್ಯಕ್ಷರಾಗಿ ಗಜಲ್ ಕವಿ ಡಾ.ಕಾಶಿನಾಥ ಅಂಬಲಗೆ ಆಯ್ಕೆ

ಸಮ್ಮೇಳನಾಧ್ಯಕ್ಷರಾಗಿ ಗಜಲ್ ಕವಿ ಡಾ.ಕಾಶಿನಾಥ ಅಂಬಲಗೆ ಆಯ್ಕೆ
ಸೆ.೭ ರಂದು ಬೀದರಿನಲ್ಲಿ ದ್ವಿತೀಯ ಅಖಿಲ ಕರ್ನಾಟಕ ಗಜಲ್ ಸಮ್ಮೇಳನ
ಕಲಬುರಗಿ, ಆ.೭- ಅಖಿಲ ಕರ್ನಾಟಕ ದ್ವಿತೀಯ ಗಜಲ್ ಸಾಹಿತ್ಯ ಸಮ್ಮೇಳನವನ್ನು ಸೆಪ್ಟೆಂಬರ್ ೭ ರಂದು ಭಾನುವಾರ ಬೀದರ ನಗರದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಗಜಲ್ ಸಮ್ಮೇಳನದ ರೂವಾರಿ ಆಗಿರುವ ಕರ್ನಾಟಕ ಗಜಲ್ ಅಕಾಡೆಮಿ ಕಾರ್ಯದರ್ಶಿ ಮಹಿಪಾಲರೆಡ್ಡಿ ಸೇಡಂ ತಿಳಿಸಿದ್ದಾರೆ.
ಕಳೆದ ವರ್ಷ ಕಲಬುರಗಿಯ ವಿಶ್ವವಿದ್ಯಾಲಯದಲ್ಲಿ ಪ್ರಥಮ ಗಜಲ್ ಸಾಹಿತ್ಯ ಸಮ್ಮೇಳನ ನಡೆಸಲಾಗಿತ್ತು, ಈ ಬಾರಿ ಕರ್ನಾಟಕದ ಮುಕುಟಪ್ರಾಯ ಎನಿಸಿರುವ ಧರಿನಾಡಿನಲ್ಲಿ ದ್ವಿತೀಯ ಗಜಲ್ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತಿದ್ದು, ಸಮ್ಮೇಳನಾಧ್ಯಕ್ಷರಾಗಿ ಕನ್ನಡದ ಹಿರಿಯ ಕವಿ, ಬಹುಭಾಷಾ ವಿದ್ವಾಂಸರು ಹಾಗೂ ಗಜಲ್ ಸಾಹಿತ್ಯದಲ್ಲಿ ಹೆಚ್ಚು ಕೊಡುಗೆ ನೀಡಿದ ಡಾ.ಕಾಶಿನಾಥ ಅಂಬಲಗೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಒಂದು ದಿನದ ಈ ಸಮ್ಮೇಳನದಲ್ಲಿ ಉದ್ಘಾಟನೆ, ಉಪನ್ಯಾಸ ಗೋಷ್ಠಿ, ಗಜಲ್ ವಾಚನ ಗೋಷ್ಠಿ ಮತ್ತು ಗಾಯನ ಜೊತೆಗೆ ಸಮಾರೋಪ ಸಮಾರಂಭ ನಡೆಯಲಿದೆ. ನಾಡಿನ ಅನೇಕ ಹಿರಿಯ, ಯುವ ಗಜಲ್ ಬರಹಗಾರರು ಸಮ್ಮೇಳನದಲ್ಲಿ ಭಾಗವಹಿಸುವರು. ಕನ್ನಡದಲ್ಲಿ ಗಜಲ್ ಬೆಳೆದು ಬಂದ ರೀತಿ ಹಾಗೂ ಉರ್ದು ಮತ್ತು ಕನ್ನಡದ ಗಜಲ್‌ನಲ್ಲಿ ಸಾಮಯಿಕ ಕುರಿತು ತಳಸ್ಪರ್ಶಿಯಾದ ಉಪನ್ಯಾಸ ಆಯೋಜಿಸಲಾಗಿದೆ. ಸುಮಾರು ೫೦ ಕ್ಕೂ ಹೆಚ್ಚು ಗಜಲಕಾರರು ವಾಚನ ಮಾಡಲಿದ್ದಾರೆ. ಬೀದರಿನಲ್ಲಿ ಸಮ್ಮೇಳನವನ್ನು ಲೇಖಕರಾದ ಡಾ.ಸಂಜೀವಕುಮಾರ ಅತಿವಾಳೆಯವರ ಮುನ್ನಡೆಸಲಿದ್ದಾರೆ ಎಂದು ಮಹಿಪಾಲರೆಡ್ಡಿ ತಿಳಿಸಿದ್ದಾರೆ.
ಸಮ್ಮೇಳನಾಧ್ಯಕ್ಷರ ಆಯ್ಕೆ ಸಮಿತಿ:
ಕಳೆದ ಬಾರಿ ಸಮ್ಮೇಳನಾಧ್ಯಕ್ಷರಾಗಿದ್ದ ಹಿರಿಯ ಗಜಲಕಾರ್ತಿ ಪ್ರಭಾವತಿ ದೇಸಾಯಿ ವಿಜಯಪುರ, ಕರ್ನಾಟಕ ಗಜಲ್ ಅಕಾಡೆಮಿ ಅಧ್ಯಕ್ಷ ರಂಗಸ್ವಾಮಿ ಸಿದ್ದಯ್ಯ, ಬೆಳಗಾವಿಯ ಪ್ರೊ.ಶಮಾ ಜಮಾದಾರ ಯರಗಟ್ಟಿ, ಬಳ್ಳಾರಿಯ ಅಬ್ದುಲ್ ಹೈ ತೋರಣಗಲ್ಲು , ಸಿಕಂದರ್ ಅಲಿ, ವಿಜಯಪುರದ ಹೇಮಲತಾ ವಸ್ತçದ, ಹುಬ್ಬಳ್ಳಿಯ ನಿರ್ಮಲಾ ಶೆಟ್ಟರ್, ಕೋಲಾರದ ಅಶೋಕಬಾಬು ಟೇಕಲ್, ಬೀದರಿನ ಡಾ.ಸಂಜೀವಕುಮಾರ ಅತಿವಾಳೆ, ವಿಜಯಕುಮಾರ ಗೌರೆ, ಕಲಬುರಗಿಯ ಸಿದ್ದರಾಮ ಸರಸಂಬಿ, ಶಹಾಪುರದ ಜ್ಯೋತಿ ದೇವಣಗಾಂವ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಡಾ.ಕಾಶಿನಾಥ ಅಂಬಲಗೆ ಅವರನ್ನು ಸರ್ವಾನುಮತದಿಂದ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು ಎಂದು ಅವರು ತಿಳಿಸಿದ್ದಾರೆ.
`ಗಜಲ್ ಶರಣಾರ್ಥಿಯ ಕವಿ’ಗೆ ಸಮ್ಮೇಳನಾಧ್ಯಕ್ಷತೆಯ ಗೌರವ :
ಕಾಶೀನಾಥ ಅಂಬಲಗೆ ಅವರು ಹುಟ್ಟಿದ್ದು ೧೦-೦೭-೧೯೪೭ ರಲ್ಲಿ. ಬೀದರ ಜಿಲ್ಲೆಯ, ಬಸವಕಲ್ಯಾಣ ತಾಲೂಕಿನ ಮುಚಳಂಬಿ ಗ್ರಾಮದಲ್ಲಿ. ತಂದೆ ರಾಚಪ್ಪ ಅಂಬಲಗೆ, ತಾಯಿ ಗುರಮ್ಮ ಅಂಬಲಗೆ. ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅಂಬಲಗೆ ಹಿಂದಿ ಭಾಷೆಯಲ್ಲೂ ಎಂ.ಎ ಪದವಿ ಗಳಿಸಿದ್ದಾರೆ. ಬಿ.ಎಡ್ ಜೊತೆಗೆ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಪಿಎಚ್.ಡಿ ಪದವಿಯನಂತರ ಅಧ್ಯಾಪಕ ವೃತ್ತಿಯನ್ನು ಆಯ್ದುಕೊಂಡ ಅವರು ಮಹಾವಿದ್ಯಾಲಯದಲ್ಲಿ ೨೧ವರ್ಷ, ವಿಶ್ವವಿದ್ಯಾಲಯದಲ್ಲಿ ೧೨ ವರ್ಷ ಹಿಂದಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿಯೂ ತೊಡಗಿಸಿಕೊಂಡಿದ್ದಾರೆ.
ಕವಿ, ಲೇಖಕ, ಸಾಹಿತಿ, ಕಾದಂಬರಿಗಾರರಾದ ಅಂಬಲಗೆ ಅನುವಾದಕರಾಗಿಯೂ ಪ್ರಸಿದ್ಧರು. ಜೊತೆಗೆ ಹಿಂದಿ, ಉರ್ದು ಸೇರಿದಂತೆ ಹಲವು ಭಾಷೆಗಳಲ್ಲಿ ಕಾಶೀನಾಥ ಅಂಬಲಗೆಯವರು ಕೃತಿಗಳನ್ನು ರಚಿಸಿದ್ದಾರೆ. ಅವರ ಪ್ರಮುಖ ಪ್ರಕಟಣೆಗಳು- ಕನ್ನಡದಲ್ಲಿ- ಮೂವತ್ತೈದು ಕವನಗಳು, ಇನ್ನಷ್ಟು ಕವನಗಳು, ಹುಲ್ಲ ಮೇಲಿನ ಹನಿಗಳು (ಮಿನಿ ಕವಿತೆ), ಕೌದಿ (ಕಾವ್ಯ), ಕಬೀರದಾಸರು (ಕರ್ನಾಟಕ ಸಾಹಿತ್ಯ ಅಕಾಡೆಮಿ), ಶಿವಶರಣ ಪಾಟೀಲ ಜವಳಿ- ವ್ಯಕ್ತಿ ಕೃತಿ (ಸಂಪಾದನೆ), ದಾಸೋಹ (ರಂಗ ಶಿಬಿರ ಸ್ಮರಣ ಸಂಚಿಕೆ. ಸಂಪದಾನೆ), ಮಹಿಳಾ ವಚನಗಳು, ಶಬ್ದದ ಬೆಡಗು (ಸಂಪಾದನೆ). ಶರಣರು ಹಾಗೂ ಸಂತರ ಸಾಮಾಜಿಕ ಕಾಳಜಿ, ಚುಳುಕಾದಿರಯ್ಯಾ (ಕಾವ್ಯ), ಬೇವು ಬೆಲ್ಲ(ಮಿನಿ ಕವಿತೆ). ಹಾಡುಗಳು ಉಳಿದಾವ(ಕಾವ್ಯ), ಮೂವತ್ತಕ್ಕೆ ಮುನ್ನೂರು(ಕಾವ್ಯ), ಶರಣು ಶರಣಾರ್ಥಿ ಗಜಲ್ ಗಳು(ಕಾವ್ಯ) ಸೇರಿದಂತೆ ಹಲವಾರು.
ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ ಕೃತಿಗಳು - ಸಮಕಾಲೀನ ಪಂಜಾಬಿ ಕವಿತೆಗಳು(ಕಾವ್ಯ ಕರ್ನಾಟಕ ಸಾಹಿತ್ಯ ಅಕಾಡೆಮಿ). ಕೋಗಿಲೆ ಅಳುತಿದೆ(ಕಾವ್ಯ), ಓದಿ ಅಳುವುದು(ಕವಿತೆಗಳು), ಸಪ್ದರ್ ಹಾಶ್ಮಿಯವರ ಮಕ್ಕಳ ನಾಟಕಗಳು, ಸೌಂದರ್ಯಶಾಸ್ತ್ರ (ಕರ್ನಾಟಕ ಲಲಿತ ಕಲಾ ಅಕಾಡೆಮಿ, ಬೆಂಗಳೂರು), ರಾಮಜಿ ಜಾಗ್ರತನಾದ (ಎನ್ ಬಿಟಿ.ದೆಹಲಿ).
ಅವರ ಹಿಂದಿ ಕೃತಿಗಳು - ಅಧೂರೆ ಶಬ್ದ(ಕವಿತೆ) ಆಧುನಿಕ ಹಿಂದಿ ಕಾವ್ಯ ಪ್ರಕಾಶ (ಸಂ), ಸಂತೋಷ ಔರ ಶಿವಶರಣೋಂ ಕೆ ಕಾವ್ಯ ಮೆ ಸಾಮಾಜಿಕ ಚೇತನಾ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೊತೆಗೆ ಕನ್ನಡದಿಂದ ಹಿಂದಿಗೂ ಹಲವಾರು ಕೃತಿಗಳು ಅನುವಾದಿಸಿದ್ದಾರೆ. ಲಂಕೇಶಕ ಕ್ರಾಂತಿ ಬಂತು ಕ್ರಾಂತಿ ನಾಟಕ, ಜಿ.ಎಸ್. ಶಿವರುದ್ರಪ್ಪ, ಕಣವಿ, ರಂಜಾನ ದರ್ಗಾ ಅವರ ಕವಿತೆಗಳನ್ನೂ ಹಿಂದಿಗೆ ಅನುವಾದಿಸಿದ್ದಾರೆ. ಸಾಹಿತ್ಯಿಕ ಕೃಷಿ ನಡೆಸಿರುವ ಹಿರಿಯ ಲೇಖಕರಾದ ಅಂಬಲಗೆ ಅವರಿಗೆ ಕೇಂದ್ರ ಸರ್ಕಾರದ ಕೇಂದ್ರೀಯ ಹಿಂದಿ ನಿರ್ದೇಶನಾಲಯದ ೫೦ ಸಾವಿರ ನಗದು ಬಹುಮಾನ, ಬೆಂಗಳೂರು ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಹಿಂದಿ ಪುರಸ್ಕಾರ, ಗುಲ್ಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪುರಸ್ಕಾರ, ಅಮ್ಮ ಪ್ರಶಸ್ತಿ ಸೇರಿದಂತೆ ಹಲವಾರು ಗೌರವ, ಪ್ರಶಸ್ತಿಗಳು ಸಂದಿವೆ.