"ಮಹ್ಮದ್ ಗವಾನನಿಗೆ ನಾವು ಕೊಟ್ಟ ಶಿಕ್ಷೆ ಇನ್ನು ಮುಗಿದಿಲ್ಲ"
"ಮಹ್ಮದ್ ಗವಾನನಿಗೆ ನಾವು ಕೊಟ್ಟ ಶಿಕ್ಷೆ ಇನ್ನು ಮುಗಿದಿಲ್ಲ"
“ರಾಜಾರಾಷ್ಟ್ರಕೃತಂ ಪಾಪಂ ರಾಜಪಾಪಂ ಪುರೋಹಿತಃ” ಎಂಬ ಒಂದು ಮಾತು ನಮ್ಮ ನಡುವೆ ಇದೆ. ಇದರರ್ಥ "ಪ್ರಜೆಗಳು ಮಾಡಿದ ಪಾಪ ದೊರೆಗೂ, ದೊರೆ ಮಾಡಿದ ಪಾಪ ಮಂತ್ರಿಗೂ ಬರುವುದೆಂದು" ಹೇಳಲಾಗುತ್ತದೆ. ಇಂತಹ ಪಾಪಕ್ಕೆ ಬಲಿಯಾದವನು ಮಹೆಮೂದ್ ಗವಾನ್.
ಒಬ್ಬ ವ್ಯಾಪಾರಿಯಾಗಿ ಭಾರತಕ್ಕೆ ಬಂದ ಪರ್ಷಿಯಾ ಮೂಲದ ಮಹಮ್ಮದ್ ಗವಾನ ಬೀದರಿಗೆ ಬಂದು ನೆಲೆಸಿದ ಬಳಿಕ ಅವನೊಂದಿಗೆ ಬೀದರ ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಿತು. ಮೂಲತಃ ವ್ಯಾಪಾರಿ ಆಗಿದ್ದ ಗವಾನನು ತನ್ನ ಪಾಂಡಿತ್ಯದ ಮೂಲಕವೇ ರಾಜ್ಯ ಸೇವೆಗೆ ಸೇರಿಕೊಂಡವನು. ತನ್ನ ದುಡಿಮೆ, ಸೌಜನ್ಯ, ಸರಳತೆ, ಚಾಣಾಕ್ಷತನ, ದಾನ ಮತ್ತು ಬುದ್ದಿಮತ್ತೆಗಳಿಂದಾಗಿ ಬಹುಬೇಗ ಎಲ್ಲರಿಗೂ ಪ್ರಿಯವಾದ; ಅಷ್ಟೇ ವೈರಿಗಳೂ ಹುಟ್ಟಿಕೊಂಡರು.
ಮೊದಲಿಗೆ, ಅರಸ ಅಲ್ಲಾವುದ್ದೀನ್ ನ ಆಪ್ತನಾದ. ನಂತರ ಹುಮಾಯೂನ್ (೧೪೫೮-೬೧)ನ ಪ್ರಧಾನಮಂತ್ರಿ ಆದ. ಕ್ರಿ.ಶ.೧೪೬೩-೮೨ರ ವರೆಗೆ ಆಳಿದ ೩ನೇ ಮಹ್ಮದನು ಅಪ್ರಾಪ್ತ ಬಾಲಕನಾಗಿದ್ದರಿಂದ ಅವನ ವಿದ್ಯಾಭ್ಯಾಸದ ಜವಾಬ್ದಾರಿಯ ಜೊತೆಗೆ ಅವನ ಪ್ರಧಾನಮಂತ್ರಿಯೂ ಆದ. "ರಾಜ್ಯದ ಪ್ರಧಾನಿ, ಭಾವಿ ರಾಜನಿಗೆ ಶಿಕ್ಷಕನಾದುದ್ದು" ಆ ಕಾಲಮಾನದ ಒಂದು ಅಪೂರ್ವ ಘಟನೆಯೇ ಆಗಿತ್ತು.
ಆ ದಿನಗಳಲ್ಲಿಯೇ ಅವನ ಬಳಿ ೨೬ ಲಕ್ಷ ರೂಪಾಯಿಗಳ ಆಸ್ತಿ ಇತ್ತು. ಅವನ ಮನೆಯನ್ನು ೧೦೦ ಜನ ಸಶಸ್ತ್ರ ಸೈನಿಕರು, ೧೦ ಜನ ದೀಪಧಾರಿಗಳು ಕಾಯುತ್ತಿದ್ದರೆಂದು ರಶಿಯನ್ ಪ್ರವಾಸಿಗ ನಿಕೆಟಿನ್ ಬರೆಯುತ್ತಾನೆ. ಆದರೆ, ತನ್ನ ಈ ಸಂಪತ್ತನ್ನೆಲ್ಲ ರಾಜ್ಯದ ಜನರ ಶಿಕ್ಷಣಕ್ಕಾಗಿ ಖರ್ಚು ಮಾಡಿದ ಮಹಾನುಭಾವ ಈತ. ಆ ಕಾಲದಲ್ಲಿಯೇ ಹಣದ ಹೊಳೆಯನ್ನು ಹರೆಸಿ ೩ ವರ್ಷಗಳ ಪ್ರರಿಶ್ರಮದಲ್ಲಿ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸಿದ.
'ದಾಸೋಹ' ಅವನ ಬದುಕಿನ ಒಂದು ಭಾಗವಾಗಿ ಹೋಗಿತ್ತು. ವ್ಯಾಪಾರಿ ಆಗಿದ್ದ ಅವನು ಮೊದಲಿನಿಂದಲೇ ಹೀಗಿದ್ದನೋ? ಅಥವಾ ಕಲ್ಯಾಣದ ಪರಿಸರಕ್ಕೆ ಬಂದಮೇಲೆ ದಾನ ಮಾಡುವುದನ್ನು ಆರಂಭಿಸಿದನೋ ನನಗೆ ತಿಳಿದಿಲ್ಲ. ಆದರೆ ಅವನೊಬ್ಬ ಕೊಡುಗೈ ದಾನಿ ಎಂಬುದರಲ್ಲಿ ಎರಡು ಮಾತಿಲ್ಲ.
ಅವನ ಈ ವರ್ಚಸ್ಸು ಸ್ಥಳೀಯ ಜನರಿಗೆ ಅರಿಗಿಸಿಕೊಳ್ಳಲಾಗಲಿಲ್ಲ. ಅವನು 'ಹೊರಗಿನವನು' ಎಂಬ ಆಪಾದನೆ ಬೇರೆ ಅಂದಿನ ರಾಜಕಾರಣದಲ್ಲಿತ್ತು. ಸ್ಥಳೀಯರಾರನ್ನು ಚರಿತ್ರೆ ನಮಗೀಗ ನೆನಪಿಸುತ್ತಿಲ್ಲ. ಈ 'ವಿದೇಶಿಗ' ತಾನು ಮಾಡಿದ ಪುಣ್ಯ ಕೆಲಸಗಳಿಗಾಗಿ ಮತ್ತೆ ಮತ್ತೆ ನಮಗೆ ನೆನಪಾಗುತ್ತಿದ್ದಾನೆ.
ಅವನ ರುಂಡವನ್ನು ಮುಂಡದಿಂದ ಬೇರ್ಪಡಿಸುವ ದಿನ 'ರಾಜದ್ರೋಹಕ್ಕೆ ಏನು ಶಿಕ್ಷೆ' ಎಂದು ಅರಸ ಕೇಳಿದಾಗ ಗವಾನನು 'ಮರಣ ದಂಡನೆ' ಎಂದು ಉತ್ತರಿಸಿದ್ದನಂತೆ. ಅದು ತನ್ನ ಮೇಲೆ ಸ್ಥಳೀಯರು ಹೊರಿಸಿದ ಆಪಾದನೆಗೆ ಪ್ರತಿಯಾಗಿ ಅರಸ ಕೇಳುತ್ತಿದ್ದಾನೆ ಎಂಬುದು ಕೂಡ ಅವನಿಗೆ ಗೊತ್ತಿರಲಿಲ್ಲ. ಅಪಾದಿತರಿಗೆ ತನ್ನ ಬುದ್ದಿ ಮತ್ತು ಕಿವಿಯನ್ನು ಕೊಟ್ಟಿದ್ದ ಅರಸ ಗವಾನನ ರುಂಡ ಹಾರಿಸಲು ಆಜ್ಞಾಪಿಸಿದ. "ಈ ಮುದಿಯನಿಗೆ ಮರಣ, ಮಹೋತ್ಸವದಂತೆ. ಆದರೆ ಅರಸನಾದವನು ನ್ಯಾಯ-ಅನ್ಯಾಯಗಳನ್ನು ಇಷ್ಟೊಂದು ಲಘುವಾಗಿ ಅಳವಡಿಸಿಕೊಳ್ಳಬಾರದು" ಎಂಬ ಪಾಠ ಹೇಳುತ್ತಲೇ, ಗವಾನನು ತಾನು ಮಾಡಲಾರದ ತಪ್ಪಿಗೆ ತನ್ನ ಜೀವವನ್ನು ಬಿಟ್ಟನು. ಒಬ್ಬ ಶಿಕ್ಷಕ ಸಾಯುವ ಕಾಲಕ್ಕೆ ಇದಕ್ಕಿಂತಲೂ ಒಳ್ಳೆಯ ಪಾಠವನ್ನು ತನ್ನ ಶಿಷ್ಯನಿಗೆ ಮಾಡಲಾರ.
ಅವನಾಡುವ 'ಈ ಮುದಿಯನಿಗೆ ಮರಣ ಎಂಬುದು ಮಹೋತ್ಸವ' ಎಂಬ ಮಾತು ನಮ್ಮ ಶರಣರ 'ಮರಣವೇ ಮಹಾನವಮಿ' ಎಂಬ ಮಾತನ್ನು ನೆನಪಿಸಿತು. ಬದುಕು ಮತ್ತು ಕ್ರಿಯೆ ಎರಡರಲ್ಲೂ ಬೀದರ ಮತ್ತು ಬೀದರಿನ ಜನರನ್ನು ಆಗಲೂ ಅತ್ಯಂತವಾಗಿ ಪ್ರಭಾವಿಸಿದ್ದ ಈಗಲೂ ಅತ್ಯಂತವಾಗಿ ಪ್ರಭಾವಿಸುತ್ತಿರುವ ವ್ಯಕ್ತಿತ್ವ 'ಮಹ್ಮದ್ ಗವಾನ'ನದು. ಆದರೆ ನಾವು ಮಾತ್ರ ಆಗಲೂ ಅವನನ್ನು ಅರ್ಥ ಮಾಡಿಕೊಳ್ಳಲಿಲ್ಲ; ಈಗಲೂ ಸಹ.
ಬೀದರ ನಗರದ ಹೈದರಾಬಾದ್ ರಿಂಗ್ ರಸ್ತೆಯ ಗೋರನಳ್ಳಿ ಗ್ರಾಮದ ಕೆರೆಯ ದಂಡೆಯ ಮೇಲಿರುವ ಅವನ ಸಮಾಧಿ ಸ್ಥಳ ನೋಡಿದರೆ, ರಾಜಕೀಯ ಚದುರಂಗದಾಟದಲ್ಲಿ ಗವಾನನಿಗೆ ನಾವು ಕೊಟ್ಟ ಶಿಕ್ಷೆ ಇನ್ನು ಮುಗಿದಿಲ್ಲ ಎಂದೆನಿಸಿತು. ಅನಾಥವಾಗಿ ಮಲಗಿರುವ ಅವನ ಸಮಾಧಿ ಸ್ಥಳಕ್ಕೆ ಒಂದು ಬೋರ್ಡ(ನಾಮಫಲಕ)ನ್ನು ಕೂಡ ಹಾಕಲಾರದಷ್ಟು ನಮ್ಮ ಸಮಾಜಕ್ಕೆ ಚರಿತ್ರೆಯ ಮರೆವು ಬಂದಿದ್ದು ವಿಪರ್ಯಾಸ. ಅವನ ಪಕ್ಕದಲ್ಲಿ ಅವನ ಅನುಗಾಲದ ಗೆಳೆಯ ಇತಿಹಾಸಕಾರನೂ ಆಗಿದ್ದ ಅಬ್ದುಲ್ ಕರೀಂ ಹಮ್ದಾನಿ ಮತ್ತು ತಾರೀಖ್ ಏ ದುವುದಿ ಅವರನ್ನು ದಫನ್ ಮಾಡಿರುವುದು (ಅಬ್ದುಲ್ ಸಮದ್ ಭಾರತಿ ಅವರ ಹೇಳಿಕೆ) ಚರಿತ್ರೆಯ ವ್ಯಂಗ್ಯ ಅನಿಸಿತು. ಗವಾನನ ಗೆಳೆಯ 'ಸೈಯದ್ ಖಾನ್ ಗಿಲಾನಿ'ಗೂ ಅಂದೇ ಮರಣ ದಂಡನೆ ವಿಧಿಸಲಾಯಿತು. ಬಹುಶಃ ಅಲ್ಲಿರುವ ನಾಲ್ಕೈದು ಸಮಾಧಿಗಳಲ್ಲಿ ಇವನೂ ಇದ್ದಿರಬಹುದು.
ಗವಾನನ ಮರಣ ದಂಡನೆ ಆದ ಬಳಿಕ ಅವನ ಮನೆಯನ್ನು ಶೋಧಿಸಲಾಗಿ, ಕೆಲ ಮಣ್ಣಿನ ಮಡಿಕೆಗಳು, ಚಾಪೆ ಮತ್ತು ಆತ ಬರೆದ ೧೪೪ ಪತ್ರಗಳು ಮಾತ್ರ ಸಿಕ್ಕವಂತೆ. ಇನ್ನು ಕೆಲವರು ಹೇಳುವಂತೆ ಅವನ ಬಳಿ ಒಂದು ಗ್ರಂಥ, ಒಂದು ಕುದುರೆ ಮತ್ತು ಒಂದು ಆನೆ ಮಾತ್ರ ಇತ್ತಂತೆ.
ಯಾರೋ ಗವಾನನಿಗೆ ಆತ ಬದುಕಿರುವಾಗ ಕೇಳಿದ್ದರಂತೆ. ಹೀಗೆ ಎಲ್ಲವನ್ನು ತೊರೆಯುವುದರ ಮರ್ಮವೇನು ಎಂದು. ಆಗ ಆತ "ರಾಜ ಮತ್ತು ಪ್ರಜೆಗಳು ನನ್ನನ್ನು ಹೆಚ್ಚೆಚ್ಚು ಗೌರವಿಸುತ್ತಿರುವಾಗ ನನಲ್ಲಿ ಅಹಂಕಾರವುಂಟಾಗಬಹುದು. ಅದರಿಂದ ನಾನು ಭಯಪಡುತ್ತೇನೆ. ಅಹಂಕಾರವು ನನ್ನನ್ನು ಪಾಪ ಕೃತ್ಯಗಳನ್ನೆಸಗಲು ಪ್ರೇರೇಪಿಸಬಹುದು. ಪಾಪಗಳನ್ನೆಸಗಲು ಪ್ರೇರಣೆ ನೀಡುವ ವಸ್ತುಗಳನ್ನು ನಾನು ತೊರೆಯುತ್ತೇನೆ'' ಎಂದು ಉತ್ತರಿಸಿದನಂತೆ. ಎಂತಹ ಮುಗ್ಧ ಮನಸ್ಸು.
ಅಲ್ಲಾವುದ್ದೀನ್ ಹುಮಾಯೂನ್ ಷಾ ಪಟ್ಟಕ್ಕೆ ಬಂದಾಗ 'ಬರ್ಹಾನ್ ಇ ಮಾಸಿರಿ'ಯಲ್ಲಿ ದಾಖಲಾಗಿದ್ದ ಭಾಷಣವೊಂದನ್ನು ಆತ ಓದುತ್ತಾನೆ. ಅದರಲ್ಲಿ ಆತ ಗವಾನನ ವ್ಯಕ್ತಿರೂಪವನ್ನು ಕಟೆದು ನಿಲ್ಲಿಸಿದಂತೆ ಕಾಣುತ್ತದೆ. "ನಾವು ಒಂದು ಹೊಸ ಯುಗದ ಹೊಸ್ತಿಲಲ್ಲಿ ಈ ದೇಶದ ಚರಿತ್ರೆಯಲ್ಲಿ ನಿಂತಿದ್ದೇವೆ. ನಾನು, ಹೊರಗಿನಿಂದ ಸತ್ಯ ಮತ್ತು ಒಳ್ಳೆಯ ನಂಬಿಕೆಯ ಉಡುಪನ್ನು ಧರಿಸಿ, ಒಳಗಿನಿಂದ ದುರಾಚಾರ ಮತ್ತು ದುಷ್ಚಟಗಳಿಂದ ದೂರವಿರುವ ಈ ಒಳ್ಳೆಯ ಮನುಷ್ಯನ ಸಲಹೆ ಪಾಲಿಸುವುದಕ್ಕಿಂತ ಒಳ್ಳೆಯದು ಬೇರೇನೂ ಇಲ್ಲವೆಂದು ನಂಬಿದ್ದೇನೆ. ಅದಕ್ಕಾಗಿ ಖ್ವಾಜಾ ನಿಜಾಮುದ್ದೀನ್ ಮಹಮುದ್ ಗವಾನ ಎಂಬ ರಾಜ್ಯದ ನ್ಯಾಯಪರ ಮತ್ತು ವಿಚಾರಶೀಲ ವ್ಯಕ್ತಿಯನ್ನು ಪ್ರಧಾನಮಂತ್ರಿ ಆಗಿ ನೇಮಿಸಲು ನಿರ್ಧರಿಸಿದ್ದೇನೆ" ಎಂದು ಹೇಳುತ್ತಾನೆ. ಇದು ಗವಾನನ ಕುರಿತು ಅರಸನೊಬ್ಬನ ಸರಳೀಕೃತ ಮಾತುಗಳಲ್ಲ ಬದಲಿಗೆ, ಓರ್ವ ವ್ಯಕ್ತಿಯನ್ನು ಸಮಕಾಲೀನ ಸಮಾಜ ರಾಜಕಾರಣ ಕೊಟ್ಟ ಗೌರವ ಎನಿಸುತ್ತದೆ. ಅಲ್ಲದೆ ಈ ಮಾತುಗಳು ಗವಾನನ ವ್ಯಕ್ತಿತ್ವವನ್ನು ವಿಷದೀಕರಿಸುತ್ತವೆ.
ಮುಂದೆ ಹೈದರಾಬಾದಿನ ೭ನೇ ನಿಜಾಮರಾದ ಮೀರ್ ಉಸ್ಮಾನ್ ಅಲಿಖಾನ್ ಅವರ ಕಾಲಕ್ಕೆ ಕ್ರಿ.ಶ.೧೯೨೮ (ಹಿಜರಿ ಶಕೆ ೧೩೭೪)ರಲ್ಲಿ ತಮ್ಮ ಬಲಗೈಭಂಟ ಮತ್ತು ಪ್ರಧಾನಮಂತ್ರಿಯೂ ಆಗಿದ್ದ ಶ್ರೀ ಮಹಾರಾಜ ಸರ್ ಕಿಶನ್ ಪ್ರಸಾದ್ ಅವರನ್ನು ಆ ಕಾಲದ ಇತಿಹಾಸಕಾರ ಶೇರವಾನಿ ಅವರ ಬೇಡಿಕೆಯ ಮೇರೆಗೆ ಮಹ್ಮದ್ ಗವಾನನ ಸಮಾಧಿಗೆ ಭೇಟಿಕೊಡಿಸಿ, ಒಂದು ಶಾಸನ ಹಾಕಿಸುತ್ತಾರೆ. (ಸೈಯದ್ ಬೋಡೆ ರಿಯಾಜ್ ಅಹ್ಮದ್ ಅವರು ಹೇಳುವಂತೆ ಶೇರ್ವಾನಿ ಅವರು ಸಹ ಕುದುರೆ ಮೇಲೆ ಕುಳಿತು ದೀಪದ ಬೆಳಕಲ್ಲಿ ಈ ಸಮಾಧಿಯನ್ನು ಮೊದಲು ಹುಡುಕಿದರಂತೆ.) ಅದನ್ನು ಬೀದರಿನವರೇ ಆದ ಶ್ರೀ ಎಂ.ಎ. ಸಮದ್ ಭಾರತಿ ಅವರು ನಮಗೆ ಉರ್ದುವಿನಿಂದ ಇಂಗ್ಲಿಷಿಗೆ ಅನುವಾದ ಮಾಡಿಕೊಟ್ಟಿದ್ದಾರೆ. ನಾನವರಿಗೆ ಭೇಟಿಯಾದಾಗ ಈ 'ಭಾರತಿ' ಎಂದರೆ ನಿಮ್ಮ ಅಡ್ಡಹೆಸರೇ (ಮನೆತನದ) ಎಂದು ಕೇಳಿದೆ. ಅದು ಅವರ ಕಾವ್ಯನಾಮವಂತೆ. ಓರ್ವ ಶಾಲಾ ಶಿಕ್ಷಕರಾಗಿರುವ ಅವರು 'Monuments and Historical Places of Bidar' ಮತ್ತು 'A Short History Of Bidar' ಎಂಬ ಎರಡು ಸಂಶೋಧನಾ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಈ ಭಾಗದ ನಮ್ಮ ಇತಿಹಾಸ ವಲಯ ಅವರ ಹೆಸರೇ ಕೇಳಿಲ್ಲವೆಂಬುದು ಅಷ್ಟೇ ಸೋಜಿಗ.
Epitaph on the Tomb of Khwaja Mahmud Gawan
In the name of Allah, the Most Gracious, The Most merciful
(parise to Allah that he blessed me with martyrdom)
In the reign of His Exalted Highness Nawab Mir Osman Ali Khan Bahaddur,
The Nizam VII, the ruler of the Deccan
By Special Decree
Raja Rayan Maharaja Sir Kishan Prasad, the Right-hand of the State and Prime Minister has erected this epitaph on the tomb
The Martyr Malik-ut-Tujjar Khawaja Mahmud Gawan, the Prime mInister of the Bahmani Kingdom
The Servant of Humanity, The Innocent, Killed out of jealousy by plotters
On 5th Safar 884 A.H. (=1481 A.D.)
Derived from the poetic line written by his friend and biographer Abdul Karim Hamdani
"Mahmud Gawan be-gunah Shaheed Shud"
Age: 78 yrs.
Service: 26 yrs.
884 A.H.
The date of installation of Tomb-stone may be derived from
Dil Kusha daryaft lauhe nazar
1374 A.H. (=1928 A.D)
(workshop M. Abdullah Co.)
(Merchant in marble, Hyderabad)
ಸಹಕಾರ: ಡಾ.ರಘುಶಂಖ ಭಾತಂಬ್ರಾ.
ಬರವಣಿಗೆ: ಡಾ. ವೀರಶೆಟ್ಟಿ ಬಿ. ಗಾರಂಪಳ್ಳಿ.