ಚೆನ್ನಯ್ಯ

ಚೆನ್ನಯ್ಯ

ಇಷ್ಟಲಿಂಗ ಇನ್ನೂರಹದಿನಾರು 

ಮುಖದಿಂದ ತೃಪ್ತಿಗೊಳ್ಳುತಿಹುದು.

ಪ್ರಾಣಲಿಂಗ ನೂರಾಹನ್ನೊಂದು 

ಮುಖವಾಗಿ ತೃಪ್ತಿಗೊಳ್ಳುತಿಹುದು.

ಭಾವಲಿಂಗ ಷಡ್ವಿಧ ಮುಖದಿಂದ ತೃಪ್ತಿಗೊಳ್ಳುತಿಹುದು.

ಈ ತ್ರಿವಿಧಲಿಂಗವು ಒಂದಾಗಿ, ವಿಶ್ವತೋಮುಖವಾಗಿ

ಶರಣನ ಅಂಗದಲ್ಲಿ ಶಿವಲಿಂಗವೆ ತೃಪ್ತಿಗೊಳ್ಳುತಿಹುದು.

ಈ ಭೇದವ ತಿಳಿಯದೆ ಭಿನ್ನವಿಟ್ಟು 

ಕೊಟ್ಟು ಕೊಂಬೆನೆಂಬ ಕುನ್ನಿಗಳಿಗೆ ಶಿವಲಿಂಗ ಮುನ್ನವಿಲ್ಲವೆಂದ ನಿಮ್ಮ ಶರಣ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ

      *ಚೆನ್ನಯ್ಯ* - (ಬಸವೋತ್ತರ ಕಾಲದ ಶರಣ)

          *ವಚನ ಅನುಸಂಧಾನ*

ಶರಣರ ತತ್ವ ಸಿದ್ಧಾಂತಗಳು; ಸಾಧಕನ ಅಂಗದ ಲಿಂಗದ ಮತ್ತು ಜಂಗಮದ ಸ್ವರೂಪ ಅವುಗಳ ಸಂರಚನೆ ಹಾಗೂ ಅವು ನಿರ್ವಹಿಸುವ ಕಾರ್ಯ ನಿರ್ವಹಣೆಯ ಕ್ರಿಯಾ ವಿಧಾನಗಳ ಕುರಿತಾಗಿ ಅತ್ಯಂತ ಸೂಕ್ಷ್ಮವಾಗಿ ಗಮನಿಸಿ, ಭೌತಿಕ ಜೈವಿಕ ಹಾಗೂ ಆಧ್ಯಾತ್ಮಿಕ ನೆಲೆಯಲ್ಲಿ ಜರುಗುವ ಎಲ್ಲಾ ಕ್ರಿಯಾ ಪಲ್ಲಟಗಳ ಸಂಗತಿಯ ಸ್ಥಿತಿ ಗತಿಯನ್ನು ವಿವರಿಸುತ್ತಾ ಅನುಭಾವಿಕ ಹಂತದಲ್ಲಿನ ವಿಸ್ತಾರ ವನ್ನು ಹೆಚ್ಚಿಸಿ, ಅಂತಿಮ ಗಂತವ್ಯದ ಅನುಭೂತಿ ಯ ಪರಿಣಾಮವನ್ನು ಅಸೀಮವಾಗಿಸಿ ಸಾಧಕನ ಸಿದ್ಧಿಯನ್ನು ವೃದ್ಧಿಸಿ ಬೆಳಗುತ್ತವೆ. 

ಈ ಮೇಲಿನ ವಚನವನ್ನ ರಚಿಸಿದ್ದು ಹದಿನೇಳನೇ ಶತಮಾನದ ಚೆನ್ನಯ್ಯ ಎಂಬ ವಚನಕಾರ ಶರಣ (ಹನ್ನೆರಡನೇ ಶತಮಾನದ ಮಾದಾರ ಚೆನ್ನಯ್ಯ ಶರಣರು ಬೇರೆ ಈ ಚೆನ್ನಯ್ಯ ಬೇರೆ ಎಂಬುದು 

ಗಮನಕ್ಕೆ ಇರಲಿ) ಪ್ರಸ್ತುತ ವಚನ ಶರಣನ ಅಂಗ ಮತ್ತು ಶಿವಲಿಂಗದ ಅಭಿನ್ನತೆಯನ್ನು ಕುರಿತಂತೆ ವಿವರಿಸುತ್ತದೆ. ಭಿನ್ನವಾಗಿ ಕಾಣುವ ಕುನ್ನಿಗಳನ್ನು ವಚನಕಾರರು ಕಟುವಾಗಿ ಟೀಕಿಸಿದ್ದಾರೆ. ಇದನ್ನು ಅನುಸಂಧಾನ ಮಾಡಿ ವಿವರವಾಗಿ ನೋಡೋಣ

*#ಇಷ್ಟಲಿಂಗ ಇನ್ನೂರಹದಿನಾರು* 

*ಮುಖದಿಂದ* *ತೃಪ್ತಿಗೊಳ್ಳುತಿಹುದು.*

*ಪ್ರಾಣಲಿಂಗ* *ನೂರಾಹನ್ನೊಂದು* 

*ಮುಖವಾಗಿ* *ತೃಪ್ತಿಗೊಳ್ಳುತಿಹುದು*.

*ಭಾವಲಿಂಗ ಷಡ್ವಿಧ* *ಮುಖದಿಂದ #ತೃಪ್ತಿಗೊಳ್ಳುತಿಹುದು.*

ಇಲ್ಲಿ ಸ್ಥಾವರಲಿಂಗವನ್ನು ಮೂರು ಅಂಗವಾಗಿ ಗುರುತಿಸಿ; ಇಷ್ಟಲಿಂಗ(ತನು)ವು ಇನ್ನೂರಾಹದಿ ನಾರು ಸಕೀಲಗಳ ಮುಖದಲ್ಲಿ ಶಿವಪ್ರಸಾದವನ್ನು ಸ್ವೀಕರಿಸಿ ತೃಪ್ತಿಗೊಳ್ಳುತಿಹುದು ಎನ್ನುವ ಮೂಲಕ ಶರೀರದ ಅಂತರ್ಜಾಲ ಸಂರಚನಾ ವ್ಯವಸ್ಥೆಯ ಭೌತಿಕ ಸ್ವರೂಪದ ನೆಲೆಯಲ್ಲಿ ನಡೆಯುವಂತಹ ಜೈವಿಕ ಕ್ರಿಯಾತ್ಮಕ ವ್ಯವಸ್ಥೆಯ ಪರಿಚಲನೆಯ ಮೂಲಕ ಸಾಧಕನ ತನು ತೃಪ್ತಿಹೊಂದಿ ವಿಕಾಸ ಹೊಂದುತ್ತಿರುವುದೆಂದು ಊಹಿಸಿ ಭಾವಿಸುತ್ತಾರೆ ಅದರಂತೆ ಪ್ರಾಣಲಿಂಗ(ಜೀವ)ವು ಮುಖ್ಯವಾಗಿ ನೂರಾಹನ್ನೊಂದು ನಾಡಿಮಿಡಿತದ ಮುಖವಾಗಿ ತೃಪ್ತಿಗೊಳ್ಳುತಿಹುದೆನ್ನುವಲ್ಲಿ ನೂರಾಹನ್ನೊಂದು ಜೀವಚೈತನ್ಯದ ಮುಖದಿಂದ ಶಿವಪ್ರಸಾದವನ್ನು ಸ್ವೀಕರಿಸಿ ತೃಪ್ತಿಯನ್ನು ಹೊಂದುತ್ತಿರುವ ಕುರಿತು ಪರಿಭಾವಿಸಿ ಕೊಂಡು ಹೇಳುತ್ತಾರೆ.ಕೊನೆಯಲ್ಲಿ ಭಾವಲಿಂಗವು ಷಡ್ವಿಧಮುಖದಿಂದ ತೃಪ್ತಿಗೊಳ್ಳು ತಿಹುದು ಎನ್ನುವರು. ಅಂದರೆ;ಇಲ್ಲಿ ಭಾವಶರೀರ ತಾಯಗರ್ಭಸ್ಥ ಭಾವ, ಶಿಶುಭಾವ, ಮಗುಭಾವ, ತಾರುಣ್ಯಭಾವ, ಮುಪ್ಪಿನಭಾವ ಮತ್ತು ಮರಣ ಶಯ್ಯದಭಾವ ಹೀಗೆ ಜೀವದ ಆರು ಹಂತದಲ್ಲಿನ ಭಾವಲಿಂಗವು ತೃಪ್ತಿ ಹೊಂದಿರುವ ಬಗ್ಗೆ ಊಹಿಸಿ ಪೂರ್ವಿಕರು ಈ ರೀಯಲ್ಲಿ ಹೇಳಿಕೊಂಡು ಬಂದಿ ದ್ದಾರೆಂದು ವಚನಕಾರರು ಮೂರೂ ಹಂತದಲ್ಲಿನ ಸಂಗತಿಯನ್ನು "ತೃಪ್ತಿಗೊಳ್ಳುತ್ತಿರಬಹುದು" ಎಂಬ

ಸಂಶಯಾಸ್ಪದ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ

*#ಈ ತ್ರಿವಿಧಲಿಂಗವು ಒಂದಾಗಿ,* *ವಿಶ್ವತೋಮುಖವಾಗಿ*

*ಶರಣನ ಅಂಗದಲ್ಲಿ* *ಶಿವಲಿಂಗವೆ #ತೃಪ್ತಿಗೊಳ್ಳುತಿಹುದು.*

ಇಷ್ಟಲಿಂಗ ಪ್ರಾಣಲಿಂಗ ಮತ್ತು ಭಾವಲಿಂಗ ಇವು ಮೂರು ಸ್ಥಾವರಲಿಂಗದ ನೆಲೆಗಳೆಂದು ವಿಭಜನೆ ಮಾಡಿ ಶೈವ ಪರಂಪರೆಯು ಬೇರೆ ಬೇರೆಯಾಗಿ ಊಹಿಸಿ ಪರಿಭಾವಿಸಿಕೊಂಡು ಬಂದಿದ್ದರ ಬಗ್ಗೆ ಪ್ರಸ್ತುತ ವಚನದ ಪೂರ್ವ ಭಾಗದಲ್ಲಿ ಹೇಳಿದರೆ, ಪ್ರಸ್ತುತ ವಚನದ ಉತ್ತರ ಭಾಗದ ಈ ಸಾಲಿನಲ್ಲಿ ಶರಣನ ಅಂಗದಲ್ಲಿನ ಈ ಮೂರೂ ಸ್ಥಿತಿಗಳನ್ನು ವಿಭಜನೆಯ ಮಾಡಿ ನೋಡದೆ ವಿಶ್ವತೋಮುಖ ವಾಗಿ ಶಿವಪ್ರಸಾದ ಸ್ವೀಕರಿಸಿದಾಗ ಇದರಿಂದಾಗಿ ಸಾಕ್ಷಾತ್ ಶಿವಲಿಂಗವೇ ತೃಪ್ತಿ ಹೊಂದುವುದೆಂದು ಎನ್ನುವ ಮೂಲಕ ಶರಣ ಬೇರೆ ಅಲ್ಲ ಶಿವ ಬೇರೆ ಅಲ್ಲ ಎಂಬುದನ್ನಿಲ್ಲಿ ವಚನಕಾರರು ಹೇಳಿದ್ದಾರೆ.

*ಈ ಭೇದವ ತಿಳಿಯದೆ ಭಿನ್ನವಿಟ್ಟು* 

*ಕೊಟ್ಟು ಕೊಂಬೆನೆಂಬ ಕುನ್ನಿಗಳಿಗೆ ಶಿವಲಿಂಗ* *ಮುನ್ನವಿಲ್ಲವೆಂದ ನಿಮ್ಮ ಶರಣ, ಚೆನ್ನಯ್ಯಪ್ರಿಯ #ನಿರ್ಮಾಯಪ್ರಭುವೆ.*

ಶರಣರು ನೀಡಿದ ಈ ಶಿವ ರಹಸ್ಯದ ಬೇಧವನ್ನು ಅರಿಯಲಾರದವರು ಶರಣ ಬೇರೆ ಮತ್ತು ಶಿವನೆ ಬೇರೆ ಎಂದು ತಿಳಿದುಕೊಂಡು ಶರಣನಿಗೆ ಒಂದು ಶಿವನಿಗೆ ಮತ್ತೊಂದೆಂಬ ಈ ಭಿನ್ನ ಭಾವದಿಂದಲೇ ಕೊಡು ಕೊಳ್ಳುವುದ ಮಾಡುವುದನ್ನು ಈ ವಚನ ಖಂಡಿಸಿ ಇಂತಹ ಭೇದಭಾವದವರಿಗೆ ಶಿವಲಿಂಗ ದೇವರೆಂದಿಗೂ ಒಲಿಯಲಾರನೆಂದು ಪ್ರಸ್ತುತ ಈ ವಚನಕಾರ ಚೆನ್ನಯ್ಯ ಶರಣರು ತಮ್ಮ ಇಷ್ಟಲಿಂಗ ಸಾಕ್ಷಿಯಾಗಿ, ಶರಣ ಬೇರೆ ಅಲ್ಲ ಶಿವ ಬೇರೆ ಅಲ್ಲ ಎರಡೂ ಒಂದೇ ಎಂಬುದನ್ನು ಪ್ರಸ್ತುತ ವಚನದ ಮೂಲಕ ಸಾರಿ ಹೇಳುತ್ತಾ ಶರಣರ ತತ್ವವನ್ನ ಎತ್ತಿ ಹಿಡಿದು ಮೆರೆದಿದ್ದಾರೆಂದು ಹೇಳಬಹುದಾಗಿದೆ.

             ಅಳಗುಂಡಿ ಅಂದಾನಯ್ಯ*