ಕೀಲಾರದ ಭೀಮಣ್ಣ ಶರಣ

ಕೀಲಾರದ ಭೀಮಣ್ಣ
ವ್ಯಾಧನಂತೆ ಜಾಲಗಾರನಂತೆ ಹೇಮಚೋರನಂತೆ ಇಂತೀ ಗಾಹುಗಳ್ಳರಂತೆ
ಮಾತಿನಲ್ಲಿ ಬ್ರಹ್ಮವ ನುಡಿದು
ಸರ್ವ ಸಂಸಾರದಲಿ ಏಳುತ್ತ ಮುಳುಗುತ್ತ ಬೇವುತ್ತ ನೋವುತ್ತ ಮತ್ತೆ ಬ್ರಹ್ಮದ ಸುಮ್ಮಾನದ ಸುಖಿಗಳೆಂತಪ್ಪರೊ?
ಇಂತು ನುಡಿಯಬಾರದು ಸಮಯವ ಬಿಡಬಾರದು ಕ್ರೀಯ ಅರಿದು ಮರೆಯಬಾರದು ಜ್ಞಾನವ. ಇಂತೀ ಭೇದವನರಿದು ಹರಿದವಗಲ್ಲದೆ ಕಾಲಕರ್ಮ ವಿರಹಿತ ತ್ರಿಪುರಾಂತಕ ಲಿಂಗವು ಸಾಧ್ಯವಿಲ್ಲ.
** *ಕೀಲಾರದ ಭೀಮಣ್ಣ*
*ವಚನ ಅನುಸಂಧಾನ*
ಅತ್ಯಂತ ಪ್ರಖರ ವೈಚಾರಿಕತೆಯ ಒಳನೋಟ ಉಳ್ಳ ಶರಣರು; ಹರಿತವಾದ ತಮ್ಮ ಅರಿವಿನ ಅಸ್ತ್ರ ಶಸ್ತ್ರದಿಂದ ತನುತ್ರಯಗಳನ್ನ ಶುದ್ಧೀಕರಣ ಮಾಡಿಕೊಂಡು ನುಡಿವ ನಿರ್ಮಲವಾದ ಭಾವನೆ ಗಳ ಮೂಲಕ ನಿಜಾಚರಣೆಯನ್ನು ಮಾಡುತ್ತಲೇ ಅನುಭವವನ್ನು ಹೊಂದುವುದರ ಜೊತೆಜೊತೆಗೆ ವಿಶ್ವಾತ್ಮಕವಾದ ಪರಿಪ್ರೇಕ್ಷ್ಯದ ಆಶಯದಲ್ಲಿದ್ದು ಕೊಂಡು ಚಿಂತನ ಮಂಥನ ಗೈದು, ಅನುಭಾವದ ಅನುಭೂತಿಯ ಅನೂಹ್ಯ ಜ್ಞಾನಸಂಪತ್ತು ಗಳಿಸಿ,
ಅದನ್ನು ಅವರು ಶರಣರ ಸಂಗ ಸಂವಾದದಲ್ಲಿ ಮಂಡಿಸಿ ಮನ್ನಣೆ ಪಡೆದು ಲೋಕ ಕಲ್ಯಾಣಕ್ಕಾಗಿ ವಚನ ದಾಸೋಹ ಮಾಡಿ ತೊಳಗಿ ಬೆಳಗಿದರು. ಹಾಗೆಯೇ ಡಂಭಾಚಾರಿಗಳ ನಡಗೆ ನಿಷ್ಠುರವಾದ ನುಡಿಗಳ ಮೂಲಕ ಅಂಥವರ ಚಳಿಯನ್ನ ಬಿಡಿಸಿ ನಿವಾಳಿಸಿ ಒಗೆದಿದ್ದಾರೆ! ಈ ಮೇಲಿನ ವಚನದಲ್ಲಿ ಕೀಲಾರದ ಭೀಮಣ್ಣ ಶರಣರು ಅಂಥ ಕಪಟಿಗಳ ಅನಾಚಾರಿಗಳ ಭಂಡತನದ ಬಂಡುಬಿಡಿಸಿದ್ದಾರೆ. ಪ್ರಸ್ತುತ ವಚನದ ಅನುಸಂಧಾನ ಮಾಡಿ ಹೆಚ್ಚಿನ ಒಳನೋಟದ ವಿವರವನ್ನಿಲ್ಲಿ ಕಾಣುವ ಪ್ರಯತ್ನ ಮಾಡಿ ನೋಡೋಣ.
*#ವ್ಯಾಧನಂತೆ ಜಾಲಗಾರನಂತೆ ಹೇಮಚೋರನಂತೆ* *ಇಂತೀ ಗಾಹುಗಳ್ಳರಂತೆ*
*ಮಾತಿನಲ್ಲಿ ಬ್ರಹ್ಮವ ನುಡಿದು*
*ಸರ್ವ ಸಂಸಾರದಲಿ ಏಳುತ್ತ ಮುಳುಗುತ್ತ* *ಬೇವುತ್ತ ನೋವುತ್ತ ಮತ್ತೆ ಬ್ರಹ್ಮದ ಸುಮ್ಮಾನದ #ಸುಖಿಗಳೆಂತಪ್ಪರೊ?*
ಪ್ರಾಣಿಗಳ ಕೊಂದು ಉಪಜೀವನ ನಡೆಯಿಸುವ ವ್ಯಾಧನಂತೆ, ಜಲಚರ ಜೀವಗಳ ನಿರ್ದಯವಾಗಿ ಕೊಂದು ತಂದು ಬದುಕನ್ನು ನಡೆಸುವ ಜಾಲಗಾರ ನಂತೆ ಹಾಗೂ ಅನ್ಯರ ಧನ ಕನಕಾದಿ ದ್ರವ್ಯಗಳನ್ನ ಕದ್ದೊಯ್ವ ಕಳ್ಳನಂತೆ ಹೀಗೆ ಈ ಎಲ್ಲಾ ಕಳ್ಳಕಟುಕ ರು ದಿನಾಲು ಅನಾಚಾರವನ್ನು ನಿರ್ದಯವಾಗಿ ಮಾಡಿಯೂ ಮತ್ತೆ ಮೇಲೆ ದೇವರ ದಿಂಡರ ಬಗ್ಗೆ ಅಪಾರವಾದ ಭಯಭಕ್ತಿಯ ಢೋಂಗಿ ಮಾತನ್ನು ಆಡ್ತಾ ಸಂಸಾರ ಸಾಗರದಲ್ಲಿ ಮುಳುಗಿ ಏಳುತ್ತಾ ಲೌಕಿಕ ಜೀವನದ ಬಗ್ಗೆ ಪ್ರತಿ ಕ್ಷಣವೂ ಖುದ್ದಾಗಿ ಕುದಿ ಕುದಿದು ಈಡೇರದ ತಮ್ಮ ಆಶೆಆಕಾಂಕ್ಷೆಗಳ ಬಗ್ಗೆ ಚಿಂತಿಸುವ ಇವರು ನಿಜವಾದ ದೇವರನ್ನು ಪೂಜಿಸಿ ಒಲಿಸಿಕೊಂಡು ಸುಖಿಗಳಾಗಲು ಹೇಗೆ ಸಾಧ್ಯ!? ಎನ್ನುವ ವಿಸ್ಮಯವನ್ನ ಇಲ್ಲಿ ವಚನಕಾರ ಶರಣ ಕೀಲಾರದ ಭೀಮಣ್ಣರು ವ್ಯಕ್ತಪಡಿಸಿದ್ದಾರೆ.
*#ಇಂತು ನುಡಿಯಬಾರದು ಸಮಯವ ಬಿಡಬಾರದು ಕ್ರೀಯ ಅರಿದು ಮರೆಯಬಾರದು ಜ್ಞಾನವ.* *ಇಂತೀ ಭೇದವನರಿದು ಹರಿದವಗಲ್ಲದೆ ಕಾಲಕರ್ಮ ವಿರಹಿತ ತ್ರಿಪುರಾಂತಕ ಲಿಂಗವು #ಸಾಧ್ಯವಿಲ್ಲ.*
ಅನಾಚಾರ ಹಿಂಸಾಚಾರ ದುರಾಚಾರ ಮಾಡುವ ಇಂಥವರು ಯಾವ ಬಾಯಿಯಿಂದ ದೇವರ ಬಗ್ಗೆ ಮಾತನಾಡುವರು? ಮಾಡಬಾರದ್ದ ಮಾಡಿಯೂ ದೇವರ ಕುರಿತು ಮಾತನಾಡಬಾರದು. ತಮ್ಮ ಜೀವನೋಪಾಯಕ್ಕಾಗಿ ಮಾಡುವ ಕಾಯಕವನ್ನ ನಿಜವಾದ ಶಿವಾರ್ಪಣ ಭಾವದಿಂದ ಮಾಡುವ ಮೂಲಕ ದೋಷ ಮುಕ್ತವಾಗಿ, ಈ ರೀತಿ ದೇವರ ಪೂಜೆ ಮಾಡುವ ಆಚರಣೆಯ ಬಿಡದೆಯಿರುವ ಈ ಅರಿವಿನ ಮೂಲಕ ಪಡೆದುಕೊಂಡ ಜ್ಞಾನವ ಎಂದೂ ಮರೆಯಬಾರದು. ಈ ಜೀವ ಜಗತ್ತಿನಲ್ಲಿ ಒಂದು ಜೀವವ ಇನ್ನೊಂದು ಜೀವವು ಕೊಂದು ತಿಂದು ಬದುಕುವ ಅನಿವಾರ್ಯ ಸ್ಥಿತಿ ಇರುವ ಈ ಮಾಯಾ ಪ್ರಪಂಚದ ರಹಸ್ಯವನ್ನು ಬಸವಾದಿ ಶರಣರು ಬಲ್ಲವರಾಗಿದ್ದರು. ಸೃಷ್ಟಿಯಲ್ಲಿರುವ ಈ ಬೇಧ ಸೂಕ್ಷ್ಮವನ್ನು ಅರಿತುಕೊಂಡರೆ ಮಾತ್ರ ಈ ಭವದ ಲೌಕಿಕ ಜೀವನ ಸಾಧ್ಯವಾಗುತ್ತದೆಂದು - ಕಾಯಕದಿಂದ ದನಕಾಯುವ ಅನುಭಾವದಿಂದ ವಚನಕಾರ ಶರಣರಾದ ಕೀಲಾರದ ಭೀಮಣ್ಣರು; 'ಭವದಲ್ಲಿ ಭಕ್ತನಾಗಿ ಹೇಗೆ ಬೆಳೆದು, ಶರಣನಾಗಿ. ಹೇಗೆ ಬೆಳಗಿ ಬಾಳಬೇಕು' ಎನ್ನುವುದನ್ನು ಪ್ರಸ್ತುತ ಈ ವಚನದ ಮೂಲಕ ಸಾರಿ ಹೇಳಿದ್ದಾರೆ.
**
*ಅಳಗುಂಡಿ ಅಂದಾನಯ್ಯ*