ಏಕೀಕರಣದ ಪಿತಾಮಹ ಸರ್ದಾರ್ ವಲ್ಲಭಭಾಯ್ ಪಟೇಲ್
 
                                ಏಕೀಕರಣದ ಪಿತಾಮಹ -ಸರ್ದಾರ್ ವಲ್ಲಭಭಾಯ್ ಪಟೇಲ್
ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ರಾಜಕೀಯ ಮುತ್ಸದಿ, ಸಂಘಟನಾ ಶಕ್ತಿ, ವಾಕ್ ಚಾತುರ್ಯ, ಯೋಜನೆಗಳ ಪಿತಾಮಹ, ಈ ದೇಶ ಕಂಡ ಅಪ್ರತಿಮ ದೇಶಭಕ್ತ ಸರ್ದಾರ್ ವಲ್ಲಭಭಾಯ್ ಪಟೇಲರ ಸೇವಾ ಕೈಂಕರ್ಯಗಳು ಅಪಾರ.
ಶಾಶ್ವತ ನೆನಪಿನಲ್ಲಿ ಉಳಿಯುವ ಹಲವಾರು ದೇಶನಾಯಕರುಗಳಲ್ಲಿ 'ಉಕ್ಕಿನ ಮನುಷ್ಯ' ಎಂದೇ ಪ್ರಖ್ಯಾತಿ ಪಡೆದಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ರವರು ಪ್ರಮುಖರಾಗಿ ನಮ್ಮೆದುರು ನಿಲ್ಲುತ್ತಾರೆ.
ಗಾಂಧಿಯವರ ನೇತೃತ್ವದಲ್ಲಿ ನಡೆದ ಚಂಪಾರಣ್ಯ ಸತ್ಯಾಗ್ರಹದ ನಂತರ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಜಯಗಳಿಸಲು ಗಾಂಧಿ ಸಮರ್ಥರು ಎಂಬುದೂ ಸರ್ದಾರರ ಅರಿವಿಗೆ ಬಂತು ಹಿರಿಯ ಚೇತನನಿಗಿದ್ದ ದೇಶಭಕ್ತಿ, ಸರಳತೆ, ಶ್ರದ್ಧೆಯನ್ನು ಸ್ವತಃ ಹತ್ತಿರದಿಂದ ನೋಡಿದ್ದ ಪಟೇಲರು ಬಹುಬೇಗ ಆಕರ್ಷಿತರಾಗಿ ಗಾಂಧಿಗೆ ಬಲು ಆಪ್ತರಾಗಿಬಿಟ್ಟರು.
ಅಂತೆಯೇ ಪಟೇಲರ ಆರಂಭಿಕ ಜೀವನದ ಬಗ್ಗೆ ತಿಳಿದುಕೊಳ್ಳುವುದಾದರೆ, ಅಕ್ಟೋಬರ್ 31,1875 ರಂದು ನಾಡಿಯಾದ್ ಗುಜರಾತ್ ಬಾಂಬೆ ಪ್ರೆಸಿಡೆನ್ಸಿಯಲ್ಲಿ ಜನ್ಮತಾಳಿದರು. ಬಾಲ್ಯದಿಂದಲೇ ಅಪ್ಪನ ಶಿಸ್ತು ಎಂಬ ಚೌಕಟ್ಟಿನಲ್ಲಿ ಬೆಳೆದು ವಿನಯಶೀಲರಾಗಿದ್ದರು. ಬಾಲಕನಿರುವಾಗಲೇ ದೇಶದ ಬಗ್ಗೆ ಅತಿ ಆಸಕ್ತಿ ಹೊಂದಿದ್ದ ಪಟೇಲರು ' ಇನ್ಸ್ ಆಫ್ ಕೋರ್ಟ್ ನಲ್ಲಿ L.L.B ಪದವಿ ಪಡೆದು ಯಶಸ್ವಿ ವಕೀಲರಾಗಿ ಜನಮನ್ನಣೆಗಳಿಸಿದ್ದರು.ತರುವಾಯ ಗುಜರಾತ್ ನ ಖೇಡಾ, ಬೊರ್ಸಾದ್ ಮತ್ತು ಬರ್ಡೋಲಿಗಳಿಂದ ರೈತರನ್ನು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಅಹಿಂಸಾತ್ಮಕ, ನಾಗರಿಕ ಅಸಹಕಾರ ಚಳುವಳಿಗಾಗಿ ಸಂಘಟಿಸಿದರು. ಈ ಹೊತ್ತಿಗಾಗಲೇ ಗುಜರಾತ್ ನ ಪ್ರಭಾವಿ ನಾಯಕನಾಗಿ ಹೊರಹೊಮ್ಮಿದ್ದರು. ತರುವಾಯ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ 49ನೇ ಅಧ್ಯಕ್ಷರಾಗಿ ನೇಮಕಗೊಂಡು,
ಕಾಂಗ್ರೆಸ್ ಪಕ್ಷವನ್ನು 1934 ಮತ್ತು 1937ರ ಚುನಾವಣೆಯಲ್ಲಿ ಮುನ್ನೆಡೆಸಿ, ತಮ್ಮ ಛಾಪನ್ನು ಯಶಸ್ವಿಯಾಗಿ ಬೀರಿದರು. ಇದರ ಜೊತೆಗೆ ಕ್ವಿಟ್ ಇಂಡಿಯಾ ಚಳುವಳಿಗೂ ಪ್ರೇರೆಪಿಸಿದರು.
ಇದೇ ವೇಳೆ 1947ರ ಸ್ವತಂತ್ರ ಭಾರತದ ಪ್ರಥಮ ಪ್ರಧಾನಮಂತ್ರಿಯಾಗಿ ಜವಹರಲಾಲ್ ನೆಹರು ಆಯ್ಕೆಗೊಂಡರೆ. ಈ ಸಮಯದಲ್ಲಿಯೇ ಸರ್ದಾರರು ಪ್ರಥಮ ಉಪಪ್ರಧಾನಮಂತ್ರಿ ಹಾಗೂ ಬಲಿಷ್ಠ ಗೃಹಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದರು. ಈ ವೇಳೆ ಭಾರತದ ವಿಭಜನೆಯಿಂದ ಉಂಟಾದ ಹಿಂಸಾಚಾರದ ಸಮಯದಲ್ಲಿ ಪಂಜಾಬ್ ಮತ್ತು ದೆಹಲಿಯ ನಿರಾಶ್ರಿತರ ಪರಿಹಾರ ಕಾರ್ಯಗಳಲ್ಲಿ ಪಾಲ್ಗೊಂಡು ಆ ಭಾಗಗಳಲ್ಲಿ ಶಾಂತಿ ಪುನರ್ ಸ್ಥಾಪಿಸಲು ಕರ್ತವ್ಯ ನಿರ್ವಹಿಸಿ, ಎಲ್ಲರಿಂದಲೂ ಸೈ ಎನಿಸಿಕೊಂಡು, ಭಾರತಕ್ಕೆ ಹಂಚಿಕೆಯಾದ ಬ್ರಿಟಿಷ್ ವಸಾಹತುಶಾಹಿ ಪ್ರಾಂತ್ಯಗಳನ್ನು ಹೊಸದಾಗಿ ಸ್ವತಂತ್ರ್ಯ ಹೊಂದಿದ ರಾಷ್ಟ್ರವಾಗಿ ಯಶಸ್ವಿಯಾಗಿ ಏಕೀಕರಿಸಿ ಹೊಸ ಭಾರತವನ್ನು ರೂಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಈ ಕಾರಣದಿಂದಲೇ ಪಟೇಲರನ್ನು ಏಕೀಕರಣದ ಪಿತಾಮಹ ಎನ್ನಲಾಗುತ್ತದೆ.ಹೊಡೆದು ಚೂರುಗಳಾಗಿದ್ದ 565ಕ್ಕೂ ಹೆಚ್ಚು ಪ್ರಾಂತ್ಯಗಳನ್ನು ಒಗ್ಗೂಡಿಸುವುದು ಮತ್ತು ಜನರ ಮನವೊಲಿಸುವುದು ಅಷ್ಟೂ ಸುಲಭದ ಕೆಲಸವಾಗಿರಲಿಲ್ಲ. ಕಾಕತಾಳೀಯವೆಂದರೆ, ಭಾರತದ ಒಕ್ಕೂಟವನ್ನು ಸೇರದೆ ತಟಸ್ಥವಾಗಿ ಉಳಿದಿದ್ದ ಜುನಾಗಡ, ಹೈದರಬಾದ್ ಹಾಗೂ ಕಾಶ್ಮೀರವನ್ನು ಸೇರಿಸಲು ಸಾಕಷ್ಟು ಕಷ್ಟ ಪಡಬೇಕಾಗಿ
ಬಂತು. ಜುನಾಗಢ ಜನರ ಮನವೊಲಿಸಿ ಕೊನೆಗೆ ಭಾರತದ ಒಕ್ಕೂಟವನ್ನು ಸೇರಿಸಲಾಯಿತು ಆದರೆ ನಿಜಾಮನಿಂದ ನಲುಗಿಹೋಗಿದ್ದ ಹೈದರಬಾದ್ ಪ್ರತ್ಯೇಕವಾಗಿ ಉಳಿಯಲು ನಿರ್ಧರಿಸಿತ್ತು ಅಲ್ಲಿನ ಜನರಿಗೆ ಭಾರತವನ್ನು ಸೇರುವ ಮನೋಇಚ್ಛೆ ಇತ್ತು. ಆದರೆ ನಿಜಾಮನ ದುರಾಡಳಿತ ಮತ್ತು ಅರಾಜಕತೆಯಿಂದ ಬೇಸತ್ತು ಹೋಗಿದ್ದರು.
ಕೊನೆಗೆ ಆಪರೇಷನ್ ಪೋಲೋ ಎಂಬ ಗುಪ್ತ ಪೊಲೀಸ್ ಕಾರ್ಯಾಚರಣೆಯಿಂದ ನಿಜಾಮನನ್ನು ಬಂಧಿಸಿ ಹೈದರಾಬಾದ್‌ನ್ನೂ ಭಾರತದ ಒಕ್ಕೂಟಕ್ಕೆ ಸೇರ್ಪಡೆ ಮಾಡಿದರು.
ಅಧಿಕಾರದ ವಿಕೇಂದ್ರಿಕರಣ, ಧಾರ್ಮಿಕ, ಸಮಾನತೆ ಮತ್ತು ಸ್ವಾತಂತ್ರ್ಯ, ಆಸ್ತಿ ಹಕ್ಕು ಸೇರಿದಂತೆ ಇನ್ನಿತರ ಜನಪರ ಯೋಜನೆಗಳನ್ನು ಜಾರಿಗೆ ತಂದರು.
ಇಷ್ಟೇ ಅಲ್ಲದೇ ಆಧುನಿಕ ಅಖಿಲಭಾರತ ಸೇವೆಗಳ ವ್ಯವಸ್ಥೆಯನ್ನು ಸ್ಥಾಪಿಸಿದ್ದಕ್ಕಾಗಿ ಇವರನ್ನು 'ಅಖಿಲಭಾರತ ಸೇವೆಗಳ ಪಿತಾಮಹ' ಎಂದು ಕರೆಯಲಾಗುತ್ತದೆ. ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಸರ್ದಾರ್ ಪಟೇಲರಿಗೆ 1991 ಸರ್ಕಾರ 'ಭಾರತರತ್ನ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದರಂತೆ 31 ಅಕ್ಟೋಬರ್ 2018 ರಂದು ಪಟೇಲರ ಏಕತಾ ಪ್ರತಿಮೆಯನ್ನು ಸ್ಥಾಪಿಸಿಲಾಗಿದೆ.
ಗೌರವ ನಮನಗಳು: ಆಡಳಿತದಲ್ಲಿ ಅತ್ಯಂತ ನಿಷ್ಪಕ್ಷಪಾತ ಮತ್ತು ಭ್ರಷ್ಟಾಚಾರವನ್ನು ತಡೆಗಟ್ಟಲು ಹಲವು ಕ್ರಮಗಳನ್ನು ಕೈಗೊಂಡು ದೇಶಕ್ಕೆ ಮಾದರಿಯಾದವರು ಸರ್ದಾರ್ ವಲ್ಲಭಭಾಯ್ ಪಟೇಲ್ ರವರು. ಅವರ ಈ ಜನ್ಮದಿನದ ಸಂದರ್ಭದಲ್ಲಿ ಅವರನ್ನು ಸ್ಮರಣೆ ಮಾಡಿಕೊಂಡು, ಗೌರವಪೂರ್ವಕ ನಮನಗಳು ಸಲ್ಲಿಸುತ್ತೇವೆ.
 
ಲೇಖಕ-ಸಂಗಮೇಶ ಎನ್ ಜವಾದಿ
ಬರಹಗಾರರು, ಪತ್ರಕರ್ತರು, ಪರಿಸರ ಸಂರಕ್ಷಕರು.
 

 kkeditor
                                    kkeditor                                 
                    
                 
                    
                 
                    
                 
                    
                 
                    
                 
                    
                 
                    
                 
    
             
    
             
    
             
    
             
    
             
    
             
    
 
    
 
    
 
    
 
    
 
    
                                        
                                     
    
 
    
