ಷ.ಬ್ರ.ಶ್ರೀ.ಡಾ.ಚನ್ನವೀರ ಶಿವಾಚಾರ್ಯರ ಚನ್ನಶ್ರೀ ವಾಣಿ

ಷ.ಬ್ರ.ಶ್ರೀ.ಡಾ.ಚನ್ನವೀರ ಶಿವಾಚಾರ್ಯರ ಚನ್ನಶ್ರೀ ವಾಣಿ

ಷ.ಬ್ರ.ಶ್ರೀ.ಡಾ.ಚನ್ನವೀರ ಶಿವಾಚಾರ್ಯರ ಚನ್ನಶ್ರೀ ವಾಣಿ

ಕನ್ನಡ ನಾಡಿನ ಪ್ರಗತಿಗೆ ಮಠಗಳ ಪಾತ್ರ ಹಿರಿಯಾಗಿದೆ. ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿ ಮಠಗಳು ಸಲ್ಲಿಸುತ್ತಿರುವ ಸೇವೆ ಅನನ್ಯವಾದುದು ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಠಗಳು ಸಾಮರಸ್ಯ ಮತ್ತು ಸೌಹಾರ್ದತೆಗೆ ಪ್ರಸಿದ್ಧವಾಗಿದ್ದು ಅಂತಹದರಲ್ಲಿ ಹಾರಕೂಡದ ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠವು ಮುಂಚೂಣಿಯಲ್ಲಿದೆ. ಸ್ವತಹ: ಸಾಹಿತಿಗಳಾಗಿರುವ ಡಾ.ಚೆನ್ನವೀರ ಶಿವಾಚಾರ್ಯರು ಸಾಹಿತ್ಯ ಸಾರಸ್ವತ ಲೋಕಕ್ಕೆ ಹಲವಾರು ಕೃತಿಗಳನ್ನು ನೀಡಿದ್ದಾರೆ. ಅದರಲ್ಲಿ "ಚನ್ನನಶ್ರೀವಾಣಿ"ಒಂದು ಪ್ರಮುಖ ಕೃತಿಯಾಗಿದೆ.

ಈ ಕೃತಿ ಅವಲೋಕಿಸಿದಾಗ ನಾಡಿನ ಭಾಷಾ ವಿದ್ವಾoಸರಾದ ಡಾ.ಸಂಗಮೇಶ ಸವದತ್ತಿ ಮಠ ಅವರು ಮುನ್ನುಡಿಯಲ್ಲಿ ಪ್ರಜಾವಾಣಿಯಲ್ಲಿ ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರ ಈ ಅಂಕಣ ಬರಹಗಳ ಶಿರ್ಷಿಕೆ ' ಅಮೃತವಾಣಿ'. ಇದು ವಿಶೇಷವಾಗಿ ಸಮಾಜ ಮತ್ತು ಧರ್ಮ/ಅಧ್ಯಾತ್ಮಗಳಿಗೆ ಕೇಂದ್ರೀಕೃತಾಗಿರುವಂಥದ್ದು. ಇದರಲ್ಲಿ ಶುದ್ಧ ಸಾಹಿತ್ಯಕ್ಕಿಂತ ದಾರ್ಶನಿಕ ಸಾಹಿತ್ಯದ ಸೌಗಂಧ ಸೂಸಿ ಹರಿದಿದೆ. ಇನ್ನೊಂದು ಇದರ ವೈಶಿಷ್ಟ್ಯವೆಂದರೆ ಇಲ್ಲಿರುವ ಎಲ್ಲ 61 ಲೇಖನಗಳು 'ಅ' ಅಕ್ಷರದಿಂದ ಆರಂಭವಾಗುವ ವಿಶಿಷ್ಟ ಪದಗಳನ್ನು ಆ ಪದಗಳ ಅರ್ಥದೊಂದಿಗೆ ಪ್ರತಿ ಬರಹ ಆರಂಭವಾಗುತ್ತದೆ. ಮುಂದುವರೆದಂತೆ ಆ ಪದದ ಜಾಡು ಹಿಡಿದು ಒಂದೊಂದೇ ಸಾಮಾಜಿಕ ಧಾರ್ಮಿಕ ವಿಚಾರ ಬಿಚ್ಚಿಕೊಳ್ಳುತ್ತ ಸಾಗುತ್ತದೆ. ಕೆಲವು ಸಲ ಪದಾರ್ಥದ ತಾತ್ವಿಕ ಹಿನ್ನೆಲೆ ಅದರ ಅರ್ಥವಂತಿಕೆಯನ್ನೂ ಪೂಜ್ಯರು ಹೇಳುತ್ತಾರೆ. ಇಷ್ಟು ಚಿಕ್ಕದಾದ ವ್ಯಾಪ್ತಿಯಲ್ಲಿ ಗಂಭೀರ ತಾತ್ವಿಕ ಅಂಶಗಳನ್ನೂ ವಿವರಿಸಿರುವ ಪೂಜ್ಯರ ಪ್ರತಿಭೆ ನಮ್ಮನ್ನು ಬೆರಗುಗೊಳಿಸುವಂತಿದೆ. ಮೊದಲನೆಯ ಬರೆಹದಲ್ಲಿಯೇ ಪೂಜ್ಯರ ಬರವಣಿಗೆಯ ಸ್ವರೂಪ ಮಹತ್ವವನ್ನು ತಿಳಿಯಬಹುದಾಗಿದೆ. 'ಅಂಗದೊಳಡಗಿದ ಲಿಂಗ' ಎಂಬುದು ಆ ಬರವಣಿಗೆ ಶೀರ್ಷಿಕೆ. ಅಂಗವೆಂದರೆ ಸಾಮಾನ್ಯಾರ್ಥದಲ್ಲಿ ಶರೀರ. ಆದರೆ ಭೌತಿಕ ಶರೀರಕ್ಕೆ ಮಹತ್ವಬರಬೇಕಾದರೆ ಆ ಶರೀರದಲ್ಲಿನ ಮನಸ್ಸು ಪರಿಶುದ್ಧವಾಗಿರಬೇಕಾಗುತ್ತದೆ. ಆಗ ಚಿತ್ತ ಶುದ್ಧಿಯಾಗಿ ಶರೀರದಿಂದ ಮಾಡುವ ಎಲ್ಲ ಕಾರ್ಯಗಳೂ ಸುಗಮ ಶುದ್ಧವಾಗಿ ಜರಗುತ್ತವೆ. ಅದು ಆ ವ್ಯಕ್ತಿಯ ಶ್ರೇಯೋಭಿವೃದ್ಧಿ ಕಡೆಗೆ ಸಾಗುತ್ತದೆ ಎಂದು ಶ್ರೀಗಳು ಹೇಳುತ್ತಾರೆ. ಇದು ಬಹಳ ಅರ್ಥಪೂರ್ಣವಾದ ವಿವೇಚನೆ. ಶರೀರದಿಂದ ಮನಸ್ಸು, ಮನಸ್ಸಿನಿಂದ ಬದುಕಿನ ಶ್ರೇಯಸ್ಸು. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಮನ ಶುದ್ಧವಾಗಿಲ್ಲದೆ ಇದ್ದರೆ ಶರೀರ ದಾರಿ ತಪ್ಪುತ್ತದೆ ಎಂಬ ವಿಚಾರ ಬಹಳ ಮಹತ್ವದ್ದು. ಇದಾದ ನಂತರ ತಾತ್ವಿಕ ವಿಚಾರದೆಡೆಗೆ ಪೂಜ್ಯರ ವಿವರಣೆ ಸಾಗುತ್ತದೆ. ಅಲ್ಲಿ ಪೂಜ್ಯರು ಒಂದು ಸ್ವಾರಸ್ಯಕರವಾದ ಮತ್ತು ನವೀನತಮವಾದ ಅರ್ಥದ ಬೆಳಕು ಚೆಲ್ಲುತ್ತಾರೆ. 'ಅಂಗ'ವು 'ಲಿಂಗ'ವಾಗಲು ಅ ದಲ್ಲಿನ ಮಧ್ಯದ ಗೆರೆಯನ್ನು ತೆಗೆದರೆ ಸಾಕು ಎನ್ನುತ್ತಾರೆ. ಇದುಎನಿಸಿದರೂ ಸತ್ಯವಾಗಿದೆ. ಲಿಂಗ ಎಂಬುದು ಪರಮಾತ್ಮನ ಸ್ವರೂಪ, ಅಂಗವನ್ನು ಹೊಂದಿರುವವನು ಪರಮಾತ್ಮನಾಗಲು ಅಡ್ಡಬರುವ ಗೆರೆ ತೆಗೆಯಬೇಕು. ಹಾಗೆಂದರೇನು? ಎಂಬ ಜಿಜ್ಞಾಸೆ ನಮಗಾಗುತ್ತದೆ. ಅಡ್ಡಗೆರೆ ಎಂದರೆ ಅದು ಕಣ್ಣಿಗೆ ಕಾಣುವ ಅಡ್ಡಗೆರೆಯಾದರೂ ಜಂಜಾಟದ ಬದುಕಿನಲ್ಲಿ ಸಾಗುವಾಗ ಎಷ್ಟೋ ಭೀಕರ ಅಡೆತಡೆಗಳು, ಕಷ್ಟಗಳು ಎದುರಾಗುತ್ತವೆ. ಅವೇ ಅಡ್ಡಗೆರೆಗಳು, ಅವು ಅಂಗವನ್ನು ಲಿಂಗವನ್ನಾಗಿ ಅಂದರೆ ಶಿವನನ್ನಾಗಿ ಮಾಡಲು ಅಡ್ಡಿಯಾಗುತ್ತವೆ. ಅವುಗಳನ್ನು ನಿವಾರಿಸಿದಾಗ ಮಾತ್ರ ಅಂಗನು ಲಿಂಗವಾಗಬಲ್ಲನು. ಅಹಂಕಾರ ಎನ್ನುವುದು ಆ ಅಡ್ಡಗೆರೆಗಳಲ್ಲಿ ಮುಖ್ಯವಾದದ್ದು. ಅದನ್ನು ಮೊದಲು ನಿವಾರಿಸತಕ್ಕದ್ದು ಎನ್ನುತ್ತಾರೆ. ಅಹಂಕಾರ ಎಂಬುದು ಹಣ, ಅಧಿಕಾರ, ವಿದ್ಯೆ, ಯೌವ್ವನ, ಸೌಂದರ್ಯ ಇವುಗಳಿಂದ ಉಂಟಾಗುತ್ತದೆ. ಇವು ಇದ್ದಾಗಲೂ ಯಾವನು ಅಹಂಕಾರದಿಂದ ಮೆರೆಯುವುದಿಲ್ಲವೋ ಅವನು ಮಾತ್ರ ಲಿಂಗ (ಪರಮಾತ್ಮ)ನಾಗಲು ಸಾಧ್ಯ. ಅಂಥವನ ಬಾಳೇ ಸಾರ್ಥಕ ಎಂದು ಬರೆಹವನ್ನು ಪೂರ್ಣಗೊಳಿಸುತ್ತಾರೆ.

ಅಂಗರಕ್ಷಕರ ಬಗ್ಗೆ ಹೇಳುತ್ತ ಪೂಜ್ಯರು ಗಣ್ಯರ ಬೆಂಗಾವಲಾಗಿ ನಿಲ್ಲುವ ಅಂಗರಕ್ಷಕರು ಯಾವಾಗಲೂ ಜಾಗೃತರಾಗಿದ್ದು ತಮ್ಮ ಕಾಯಕ ಮಾಡುತ್ತಾರೆ. ಅವರು ತಮ್ಮ ಕರ್ತವ್ಯವನ್ನು ನಿಭಾಯಿಸಬೇಕಾದರೆ ಅವರಲ್ಲೂ ನಿಷ್ಠೆ, ಪ್ರಾಮಾಣಿಕತೆ, ಸ್ಥಿತಪ್ರಜ್ಞತೆ, ಆಶೆ ಆಮಿಷಗಳಿಗೆ ಒಳಗಾಗದೇ ಇರುವುದು. ಸಾಹಸ, ಧೈರ್ಯ, ಇಂಥ ಗುಣಗಳನ್ನು ಪಡೆದಿರಬೇಕಾಗುತ್ತದೆ ಎಂದು ಶ್ರೀಗಳು ಹೇಳುತ್ತಾರೆ. ಅಂಗರಕ್ಷಕರು ಮೈಮರೆತರೆ ಗಣ್ಯರ ಜೀವಕ್ಕೇ ಅಪತ್ತು ಉಂಟಾಗುತ್ತದೆ. ಇದನ್ನೆಲ್ಲ ಶ್ರೀಗಳು ಹೇಳುವುದನ್ನು ನೋಡಿದರೆ ನಾವು ಯಾವತ್ತೂ ಈ ಅಂಗರಕ್ಷಕರ ಬಗ್ಗೆ ಇಷ್ಟೆಲ್ಲಾ ಯೋಚಿಸಿಯೇ ಇಲ್ಲವಲ್ಲ ಎನಿಸುವುದಿಲ್ಲವೆ? ಅಂದರೆ ಪೂಜ್ಯರ ದೃಷ್ಟಿ ಇಂಥವರನ್ನು ಕುರಿತೂ ಚಿಂತಿಸಿದೆಎಂದರ್ಥ. ನಂತರ ಕೊನೆಗೆ ಶ್ರೀಗಳು ಮತ್ತೊಂದು ಸತ್ಯವನ್ನು ಹೇಳುತ್ತಾರೆ. ಭೂಲೋಕದಲ್ಲಿ ಮಾನವನನ್ನು ರಕ್ಷಿಸಲು ಮಾನವ ಎಂಬ ಅಂಗರಕ್ಷಕರು ಇದ್ದಂತೆ ಪರಲೋಕದಲ್ಲೂ ಒಬ್ಬ ರಕ್ಷಕನಿದ್ದಾನೆ. ಅವನೇ ಜಗತ್ತನ್ನು ರಕ್ಷಿಸುವ ಶಿವ ಮಹಾದೇವ. ಅವನ ರಕ್ಷಣೆ ಒಂದು ಕ್ಷಣ ತಪ್ಪಿದರೆ ಇಡೀ ಜಗತ್ತೇ ಸರ್ವನಾಶವಾಗುತ್ತದೆ. ಅಂತೆಯೇ ಜಗದ್ ರಕ್ಷಕನಾದ ಶಿವನನ್ನು ಮರೆಯದೇ ಸ್ಮರಿಸುತ್ತ ಸುರಕ್ಷಿತವಾಗಿರುವುದನ್ನು ನಾವು ರೂಢಿಸಿಕೊಳ್ಳಬೇಕು. ಆಗ ಮಾತ್ರ ದುರ್ಘಟನೆ. ಅಕಾಲಿಕ ಸಾವಿನಿಂದ ಮುಕ್ತಿ ಪಡೆಯಲು ಸಾಧ್ಯ ಎಂಬ ಸಂದೇಶವನ್ನು ನೀಡುತ್ತಾರೆ.

ಪೂಜ್ಯರು ಈ ಕೃತಿಯಲ್ಲಿ 'ತಾಯಿ'ಯ ಶ್ರೇಷ್ಠತೆಯ ಬಗ್ಗೆ ಅನೇಕ ಕಡೆಗೆ ಹೇಳಿದ್ದಾರೆ. ತಾಯಿದೇವರಿಗಿಂತ ಇನ್ನು ದೇವರಿಲ್ಲ ಎಂಬ ಹೇಳಿಕೆಯಂತೆ ತಾಯಿಗೆ ಗೌರವ ಕೊಡುವಲ್ಲಿ ಯಾರೂ ಹಿಂದೆ ಸರಿಯಬಾರದೆಂಬ ಸಂದೇಶವನ್ನು ನೀಡಿದ್ದಾರೆ. 'ಅಂತಃಕಲಹ'ವನ್ನು ಕುರಿತು ಹೇಳುತ್ತ ಅದರ ವಿಶಾಲವಾದ ಸಬಂಧಗಳ ಪರಿಣಾಮವನ್ನು ಮನದಟ್ಟು ಮಾಡಿಕೊಡುತ್ತಾರೆ. ಒಳಜಗಳದಿಂದಾಗಿ ದೇಶ, ರಾಜ್ಯ, ಸಂಸ್ಥಾನ, ಊರು, ಸಮಾಜ, ಕುಟುಂಬಗಳ ನಾಶ ಖಚಿತ. ಅದಕ್ಕೆ ಮಹತ್ವದ ಮದ್ದು ಎಂದರೆ ಐಕ್ಯತೆ, ಒಗ್ಗಟ್ಟು ಎನ್ನುತ್ತಾರೆ ಶ್ರೀಗಳು. 'ಅಂತರಂಗ'ದ ಕುರಿತು ಹೇಳುತ್ತ ಮನುಷ್ಯನ ಅಂತರಂಗವೆಂದರೆ ಅವನ ಮನಸ್ಸು, ಅದು ಶುದ್ಧವಾಗಿರಬೇಕು. ಅದು ಶುದ್ಧವಾಗಿದ್ದರೆ ಅವನ ಚಟುವಟಿಕೆಗಳೂ ಅಂದರೆ ಅವನ ಇಡೀ ಜೀವನವೇ ಸಾತ್ವಿಕ ನಿಟ್ಟಿನಲ್ಲಿ ಸರಿದಾರಿಯಲ್ಲಿ ಸಾಗುತ್ತದೆ. ವಿಕಾಸದೆಡೆಗೆ ಸಾಗಲು ಪ್ರೇರಣೆ ನೀಡುತ್ತದೆ. ಬಸವಣ್ಣನವರು ಹೇಳಿದ 'ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ' ಎಂಬ ಏಳು ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅಂತರಂಗ ಶುದ್ದಿ ಆಗುತ್ತದೆ. ಅವರ ಜೀವನವೇ ಪಾವನವಾಗುತ್ತದೆ. ಅಂಥವರು ಯಾವುದೇ ತಪಸ್ಸು ಮಾಡುವ ಅಗತ್ಯವಿಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸುತ್ತಾರೆ. 'ಅಂತಿಮ ಸತ್ಯ' ಎಂಬ ಬರೆಹದಲ್ಲಿ ಅಂತಿಮಸತ್ಯ ಯಾವುದು? ಎಂದು ಕೇಳಿದರೆ ಅದೇ 'ಮರಣ ಅಥವಾ ಸಾವು'. ಸತ್ತ ವ್ಯಕ್ತಿಯ ಜೀವನ ಸಾರ್ಥಕತೆಯನ್ನು ಪತ್ತೆ ಹಚ್ಚಲು ಅವನ ಶವಯಾತ್ರೆಯಲ್ಲಿ ಎಷ್ಟು ಜನರು ಸೇರಿದ್ದಾರೆ? ಅವರು ವ್ಯಕ್ತಿಯ ಬಗ್ಗೆ ವ್ಯಕ್ತಪಡಿಸುವ ಅನಿಸಿಕೆಗಳು ಯಾವವು? ಎಂಬುದನ್ನು ನೋಡಬೇಕು ಎಂಬುದನ್ನು ಸನ್ಯಾಸಿಯೊಬ್ಬನಿಗೆ ಭಿಕ್ಷೆ ನೀಡಲು ಬಂದ ಸೇವಕಿಯಿಂದ ಹೇಗೆ ತಿಳಿದುಕೊಳ್ಳುತ್ತಾನೆ ಎಂಬ ಸ್ವಾರಸ್ಯಕರ ಉದಾಹರಣೆಯನ್ನು ಕೊಟ್ಟು ಮನವರಿಕೆ ಮಾಡಿಕೊಟ್ಟಿದ್ದಾರೆ. ಸ್ವರ್ಗ ನರಕಗಳು ನಮ್ಮ ನಮ್ಮ ಕರ್ಮಫಲಕ್ಕನುಗುಣವಾಗಿ ಬರುತ್ತವೆ. ಆದರೆ ಜನರು ಸತ್ಕರ್ಮಗಳನ್ನು ಮಾಡಲು ಅವಕಾಶ ಇದ್ದರೂದುಷ್ಕರ್ಮದಲ್ಲಿ ತೊಡಗಿ ನರಕಕ್ಕೆ ಹೋಗುತ್ತಾರೆ. ಇನ್ನೊಂದು ಮುಖ್ಯ ಅಂಶವೆಂದರೆ ಸ್ವರ್ಗ ನರಕಗಳು ಎಲ್ಲಿಯೋ ನಮಗೆ ಕಾಣದ ಸ್ಥಳದಲ್ಲಿ ಇಲ್ಲ. ಅದೆಲ್ಲ ಕಾಲ್ಪನಿಕ. ಅದರ ಪರಿಕಲ್ಪನೆಯನ್ನು ಹುಟ್ಟುಹಾಕಿದ ಉದ್ದೇಶವೆಂದರೆ ಸತ್ತ ಮೇಲೆ ನರಕಕ್ಕೆ ಹೋಗುತ್ತೇನೆ ಬಸವಣ್ಣನವರು ಹೇಳಿದಂತೆ ಅಲ್ಲಿ ಚಿತ್ರಹಿಂಸೆಗೆ ಒಳಗಾಗಬೇಕಾಗುತ್ತದೆ ಎಂಬ ಭಯ ಜನರಲ್ಲಿ ಇದ್ದರೆ ಲೌಕಿಕದಲ್ಲಿ ಸತ್ಕರ್ಮದಲ್ಲಿ ತೊಡಗಬೇಕೆಂಬ ಬುದ್ದಿ ಬರಬಹುದು ಎಂಬುದಷ್ಟೇ ಆಗಿದೆ. ದುಷ್ಕರ್ಮ ಮಾಡಿದವರಿಗೆ ಕಾಲಾಂತರದಲ್ಲಿ ಸಂಕಷ್ಟಗಳು ಎದುರಾಗಿ ತೊಳಲಾಡುವುದು, ಪಶ್ಚಾತಾಪ ಪಡುವುದು ಕಟ್ಟಿಟ್ಟ ಬುತ್ತಿ. 'ಹೂವಿನ ಆನಂದ' ಎಂಬ ಬರೆಹದಲ್ಲಿ ಹೂವು ಅಂದವಾಗಿರುತ್ತದೆ: ಸುವಾಸನೆ ಬೀರುತ್ತದೆ. ಆದರೆ ಒಂದೇ ದಿನದಲ್ಲಿ ಬಾಡಿಹೋಗುತ್ತದೆ. ಅಷ್ಟಾಗಿಯೂ ಅದರ ಒಂದು ದಿನದ ಬದುಕು ಸಾರ್ಥಕವಾದ ಬದುಕೇ ಆಗಿದೆ. ಹೂವಿನ ಆಯುಷ್ಯ ಅಲ್ಪ ಆಗಿದ್ದರೂ ದೇವರ ಶಿರದ ಮೇಲೆ, ಮಾನಿನಿಯರ ಮುಡಿಯ ಮೇಲೆ, ಗಣ್ಯರ ಭಾವಚಿತ್ರಗಳ ಮೇಲೆ ಹಬ್ಬ ಹುಣ್ಣಿಮೆಗಳಲ್ಲಿ, ಪೂಜೆ ಪುನಸ್ಕಾರಗಳಲ್ಲಿ ಬಳಕೆಯಾಗಿ ತನ್ನ ಸಾರ್ಥಕತೆಯನ್ನು ಸಾರುವುದಿಲ್ಲವೇ? ಹಾಗೆಯೇ ಮನುಷ್ಯರು ಕೂಡ ಅಲ್ಪಕಾಲ ಬದುಕಿದರೂ, ಇನ್ನೊಬ್ಬರ ಬದುಕಿಗೆ, ಸಮಾಜಕ್ಕೆ ಒಳ್ಳೆಯಕಾರ್ಯ ಮಾಡಿದರೆ ಅದೇ ನಿಜವಾದ ಸಾರ್ಥಕ ಬದುಕು ಎಂದು ಶ್ರೀಗಳು ಹೇಳುತ್ತಾರೆ. 'ಅಂಕಣ' ಎಂಬ ಬರೆಹದಲ್ಲಿ 'ಪಲ್ಲಕ್ಕಿ' ಎಂಬ ಅರ್ಥವುಳ್ಳ ಈ ಪದವು ಬಹಳ ವಿಶಾಲವಾದ ಅರ್ಥವನ್ನು ಹೊಂದಿದೆ ಎಂದು ಹೇಳುತ್ತಾ, ಪಲ್ಲಕ್ಕಿ ಪವಿತ್ರವಾದ ಕಾರ್ಯಗಳಲ್ಲಿ ಬಳಕೆಯಾಗುವಂಥದ್ದು. ಗುರುಗಳನ್ನು, ಮಹಾತ್ಮರನ್ನು, ಗೌರವಾನ್ವಿತ ಮಹಾನ್ ವ್ಯಕ್ತಿಗಳನ್ನು, ದೇವರ ವಿಗ್ರಹಗಳನ್ನು, ಪವಿತ್ರ ಗ್ರಂಥಗಳನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡುತ್ತಾರೆ. ಇದು ಭಕ್ತರು, ಅಭಿಮಾನಿಗಳು ಹಿರಿಯರಿಗೆ ಸಾಧಕರಿಗೆ ತೋರುವ ಗೌರವವಾಗಿದೆ. ಪೂಜ್ಯರು ಕೊನೆಗೊಂದು ಮಾತು ಹೇಳುತ್ತಾರೆ. 'ಕಟ್ಟಿಗೆಯ ಅಂದಣ ಮುರಿದು ಹೋಗಬಹುದು. ಕುಳಿತವರು ಇಲ್ಲವಾಗಬಹುದು ಆದರೆ ಯಾರು ಸಮಾಜದಲ್ಲಿ ಸದುವಿನಯ, ಸದ್ಭಕ್ತಿ, ಸಮ್ಯಕ್ ಜ್ಞಾನ ಅಳವಡಿಸಿಕೊಂಡು ಸಮಾಜಸೇವೆ ಮಾಡುತ್ತಾರೋ ಅವರು ಜನಸಾಗರದ ಹೃದಯವೆಂಬ ಪಲ್ಲಕ್ಕಿಯಲ್ಲಿ ಚಿರಂಜೀವಿಯಾಗಿ ಬಾಳುತ್ತಾರೆ'. ಇದು ಬಹಳ ಒಳ್ಳೆಯ ಸಂದೇಶವಾಗಿದೆ.

'ಅಕ್ಕಜದಿಂದ ಅವಸಾನ' ಎಂಬ ಬರೆಹದಲ್ಲಿ ಅಕ್ಕಜ ಎಂದರೆ ಹೊಟ್ಟೆಕಿಚ್ಚು. ಇನ್ನೊಬ್ಬರ ಏಳೆಯನ್ನು ಸಹಿಸದೇ ಅಸೂಯೆಪಟ್ಟರೆ ಅದನ್ನು ಹೊಟ್ಟೆಕಿಚ್ಚು ಅನ್ನುತ್ತಾರೆ. ಇದು ಒಂದು ರೀತಿ ಅಹಂಕಾರದ ಮತ್ತೊಂದು ರೂಪವಾಗಿದೆ. ಹೊಟ್ಟೆಕಿಚ್ಚು ನಮ್ಮನ್ನೇ ಸುಡುತ್ತದೆಯೇ ಹೊರತು ಬೇರೆಯವರಿಗೆ ಅದರಿಂದೇನೂ ಆಗುವುದಿಲ್ಲ. ಆದ್ದರಿಂದ ಯಾರು ಏನೇ ಅಂದರೂ ಹೊಟ್ಟೆಕಿಚ್ಚುಪಟ್ಟರೂ ಕೊನೆಗೊಂದು ಅಗೋಚರ ಶಕ್ತಿ ಸದ್ಗುಣಿಗಳಾಗಿ ಉನ್ನತಿಯ ಕಡೆಗೆ ಹೋಗುವವರನ್ನು ರಕ್ಷಣೆ ಮಾಡಿಯೇ ಮಾಡುತ್ತದೆ. ಆ ಶಕ್ತಿಯನ್ನೇ ನಾವು 'ದೇವರು' ಎನ್ನುವುದು. ಅಂಥ ದೇವರನ್ನು ನಂಬಿದವರಿಗೆ ಯಾವಾಗಲೂ ಯಶಸ್ಸಿನ ದಾರಿ ತೆರೆದೇ ಇರುತ್ತದೆ. ಹೊಟ್ಟೆಕಿಚ್ಚು ಪಡುವವರು ತಮ್ಮಲ್ಲಿ ತಾವೇ ಮಾನಸಿಕ ನೋವು ಅನುಭವಿಸುತ್ತ ಕೂಡುತ್ತಾರೆ.

'ಅಗಲಿಕೆ' ಎಂಬ ಬರೆಹದಲ್ಲಿ ಶ್ರೀಗಳು ಜನಪದ ಹಾಡುಗಳನ್ನು ಉದಾಹರಿಸುತ್ತ ಕುಟುಂಬದಲ್ಲಿ ಸಂತಸ ನೆಲೆಸಲು ಅಗಲಿಕೆ ಇಲ್ಲದೆ ಕೂಡಿಬಾಳಬೇಕು ಎನ್ನುತ್ತಾರೆ. 'ಅಗುರು' ಎಂಬ ಬರೆಹದಲ್ಲಿ ಮರ, ಗಿಡ, ವೃಕ್ಷಗಳು ಮನುಷ್ಯನಿಗೆ ದೇವರಿಂದ ಸೃಷ್ಟಿಯ ಮೂಲಕ ದೊರೆತ ಅಮೂಲ್ಯ ವರವಾಗಿವೆ. ಅವು ಇಲ್ಲದಿದ್ದರೆ ಜೀವನವೇ ಅಸ್ತವ್ಯಸ್ಥವಾಗುತ್ತದೆ ಎನ್ನುತ್ತಾರೆ.

ಹೀಗೆ ಪೂಜ್ಯರು ವಿವೇಚಿಸದೇ ಇರುವ ವಿಷಯಗಳೇ ಇಲ್ಲವೆನ್ನಬಹುದು. ಅಪಾರವಾದ ಅವರ ಅನುಭವ, ಹೊಸತರದಲ್ಲಿ ಕಾಣುವ ದೃಷ್ಟಿಕೋನ, ಮಾನವ ಬದುಕಿನ ಯೋಗಕ್ಷೇಮದ ಕಳಕಳಿ, ಸರಳ ನೇರ ಅಭಿವ್ಯಕ್ತಿಯ ಶೈಲಿ, ಕರಿಯನ್ನು (ಆನೆಯನ್ನು) ಕನ್ನಡಿಯೊಳಗೆ ಹಿಡಿದಿಡುವ ಕೌಶಲ, ಸಮಾಜೋನ್ನತಿಯ ವಿಶಾಲ ಭಾವ, ಸರ್ವಸಮನ್ವಯದ ಸನ್ಮಾರ್ಗ ದರ್ಶನ, ಮುಂತಾದ ಹಲವಾರು ಅಂಶಗಳು ಸಮ್ಮಿಳಿತವಾಗಿವೆ. ಅರವತ್ತೊಂದೂ ಬರೆಹಗಳನ್ನು ಒಟ್ಟಾರೆ ನೋಡಿದಾಗ ಮಾನವ ಜನಕಲ್ಯಾಣದ ಅದ್ಭುತ ಸಂದೇಶಗಳು ಇಲ್ಲಿ ಹೆಣೆದುಕೊಂಡು ವಿವಿಧ ಪುಷ್ಪಗಳ ಒಂದು ಬೃಹತ್ ಹೂಮಾಲೆಯಂತೆ ಜನಸಾಮಾನ್ಯರಿಗೆ ಅಮೃತ ಬಿಂದುಗಳಾಗಿ ಕಂಗೊಳಿಸಿವೆ.

 ಪುಸ್ತಕದ ಮುದ್ರಣ ಅಂದವಾಗಿದ್ದು ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠ ಹರಕೂಡ ಪ್ರಕಾಶನದಿಂದ ಪ್ರಕಾಶ ಕೊಂಡ ಈ ಪುಸ್ತಕದಲ್ಲಿ 142 ಪುಟಗಳಿದ್ದು 300 ಬೆಲೆ ನಿಗದಿಪಡಿಸಲಾಗಿದೆ. ಪೂಜ್ಯರ ಭಾವಚಿತ್ರ ಇರುವ ಮುಖ ಪುಟ ಅತ್ಯಾಕರ್ಷಕವಾಗಿದ್ದು ಮುದ್ರಣ ವರ್ಣ ರಂಜಿತವಾಗಿದೆ.

ಡಾ.ಶರಣಬಸಪ್ಪ ವಡ್ಡನಕೇರಿ