ಹೆಂಡದ ಮಾರಯ್ಯ

ಬಲ್ಲೆನೆಂಬ ಮದದಲ್ಲಿ ಅರಿದೆನೆಂಬ ಮಹಾ ಮದವಂ ಕೊಂಡು, ಅಹಂಕಾರವೆಂಬ ಮದ, ಸರ್ವಾಂಗ ವೇಧಿಸಿ ತಲೆಗೇರಿದಲ್ಲಿ,
ಸತ್ತೆಂಬುದನರಿಯದೆ, ಚಿತ್ತೆಂಬುದ ತಿಳಿಯದೆ,
ಆನಂದವೆಂಬ ಆಶ್ರಯವ ಭಾವಿಸಿ ನೋಡದೆ,
ಸ್ಥೂಲಸೂಕ್ಷ್ಮಕಾರಣವೆಂಬ ತನುತ್ರಯದ ಭೇದವ ಕಾಣಲರಿಯದೆ,
ಅಂಡಪಿಂಡವೆಂಬ ಖಂಡಿತವ ತಿಳಿಯಲರಿಯದೆ,
ದಿಂಡೆಯತನದಿಂದ ಕಂಡೆನೆಂದಡೆ, ಅದು ತಾ ಕೊಂಡ ಮೂರು ಹೆಂಡದ ಗುಣವೆಂದೆ,
ಧರ್ಮೇಶ್ವರಲಿಂಗದ ಸಂಗವಲ್ಲಾಯೆಂದೆ.
*ಹೆಂಡದ ಮಾರಯ್ಯ*
*ವಚನ ಅನುಸಂಧಾನ*
ಅಪ್ಪ ಬಸವಣ್ಣನವರು ಕಲ್ಯಾಣದ ಬಿಜ್ಜಳನೆಂಬ ಚಕ್ರವರ್ತಿಯ ಒಡ್ಡೋಲಗದಲ್ಲಿ ತಮ್ಮ ಅಪಾರ ಬುದ್ದಿ ಮತ್ತೆಯ ಮೂಲಕ ಪ್ರವೇಶವನ್ನು ಪಡೆದು ಮಂತ್ರಿ ಪದವಿಯನ್ನು ಹೊಂದಿದ್ದರು ಎನ್ನುವುದು
ಎಷ್ಟು ನಿಜವೋ ಅಷ್ಟೇ ಮತ್ತೊಂದು ಸತ್ಯವಾದ ಮಾತು ಏನೆಂದರೆ; ಅಪ್ಪ ಬಸವಣ್ಣನವರು ತಮ್ಮ ಬಾಲ್ಯ ಜೀವನದಿಂದಲೂ ಅಸಮಾನತೆಯ ಬಗ್ಗೆ ಹಾಗೂ ಸಮಾಜದಲ್ಲಿನ ಮೇಲು ಕೀಳು, ಶ್ರೇಷ್ಠ ಕನಿಷ್ಠ, ಹೆಣ್ಣು ಗಂಡು ಎನ್ನುವ ತರತಮ ಭಾವದ ತೀವ್ರತೆಯನ್ನು ಕಣ್ಣಾರೆ ಕಂಡುಂಡು ಕನಲಿದ್ದರು. ಅದನ್ನ ಪ್ರತಿರೋಧಿಸಿ ಮನೆಯಿಂದ ಹೊರಬಿದ್ದು, ಆ ಕುರಿತಂತೆ ಅವರು ಬಹುಕಾಲದಿಂದ ತಮ್ಮಲ್ಲಿ ವೈಚಾರಿಕ ಚಿಂತನೆಯ ಮೂಲಕ ಪರಿಹಾರವನ್ನು
ಕಂಡುಕೊಂಡು ಅದರ ಪ್ರಾಯೋಗಿಕ ಅನುಷ್ಠಾನ ಮಾಡಲು ಸದಾವಕಾಶಕ್ಕಾಗಿ ಕಾಯುತ್ತಿದ್ದ ವೇಳೆ ಬಿಜ್ಜಳನ ಆಸ್ಥಾನದಲ್ಲಿ ಮಹಾಮಂತ್ರಿಯಾದರು.
ಕಾಯಕ ದಾಸೋಹ ತತ್ವದ ಜೊತೆ ಇಷ್ಟಲಿಂಗದ ಸಾಂಗತ್ಯ ಮಾಡಿಸುವ ಮೂಲಕ ದುಡಿಯುಜನ ವರ್ಗದ ಏಳಿಗೆ ಬಯಸಿ ಅವರ ಸಾಮಿಪ್ಯವನ್ನು ತಾಯಿ ಮಮತೆ, ಸದುವಿನಯದಂಥ ನಡತೆಯ ಜೊತೆಗೆ ಸಾಧಿಸಿ, ಅಂಥಾ ಶೋಷಿತ ಜನಮಾನಸ ದಲ್ಲಿ ಪರಿವರ್ತನೆಯ ಹೊಸ ಗಾಳಿಯನ್ನು ತಂದು ಕೊಟ್ಟರು. ಆ ನಿಟ್ಟಿನಲ್ಲಿ ಈ ಮೇಲಿನ ವಚನವನ್ನ ರಚಿಸಿದ ವಚನಕಾರ ಶರಣ ಹೆಂಡದ ಮಾರಯ್ಯ ಶರಣರೂ ಒಬ್ಬ ಫಲಾನುಭವಿಗಳಾಗಿರುವರು. ಹೆಂಡ ಮಾರುವ ತಮ್ಮ ಹಿಂದಿನ ವೃತ್ತಿಯನುಭವ ಹಾಗೂ ಅಲ್ಲಿನ ಪರಿಭಾಷಯನ್ನು ಬಳಸಿಕೊಂಡು ತಮ್ಮಅನುಭಾವಿಕ ವಚನಗಳನ್ನ ಕಟ್ಟಿ ಕೊಟ್ಟಿದ್ದು
ಅಪೂರ್ವವಾಗಿದೆ. ಅವರ ಪ್ರಸ್ತುತ ಈ ಮೇಲಿನ ವಚನದ ಅನುಸಂಧಾನವ ಮಾಡಿ ನೋಡೋಣ
*#ಬಲ್ಲೆನೆಂಬ ಮದದಲ್ಲಿ ಅರಿದೆನೆಂಬ ಮಹಾ ಮದವಂ ಕೊಂಡು,* *ಅಹಂಕಾರವೆಂಬ ಮದ,* *ಸರ್ವಾಂಗ ವೇಧಿಸಿ #ತಲೆಗೇರಿದಲ್ಲಿ,*
ಇಲ್ಲಿ ಅರೆಬೆಂದ ಸಾಧಕನೊಬ್ಬನ ಮನಸ್ಥಿತಿಯ ಅಹಮ್ಮಿನ ಚಿತ್ರವನ್ನು ಚಿತ್ರಿಸಿದ್ದಾರೆ. ತಾನು ಎಲ್ಲಾ ಬಲ್ಲೆ ಎನ್ನುವ ಮದದ ಜೊತೆಯಲ್ಲಿ ಬಹಳಷ್ಟನ್ನು ತಾನು ಅರಿತುಕೊಂಡಿರುವೆನೆಂಬ ಮಹಾಮದವ ಹೊಂದಿರುವ ಮೂಲಕ ಅಹಂಕಾರದ ಮದವು ಸರ್ವಾಂಗ ತುಂಬಿಕೊಂಡು ಅದು ತಲೆಗೇರಿದಲ್ಲಿ ಎನ್ನುವ ಮೂಲಕ ಆತನು ಹಿಡಿದ ಅಧಃಪತನದ ಮಾರ್ಗವನ್ನು ಸೂಚ್ಯವಾಗಿ ತೋರಿಸಿದ್ದಾರೆ. ಇಲ್ಲಿ ಸಾಧಕನು ಭಕ್ತಿ ಭಾವದಿಂದ ಅರಿವಿನ ಆಚರಣೆ ಮಾಡಿ ಉನ್ನತಿ ಸಾಧಿಸುವುದು ಅತ್ಯಗತ್ಯವಾಗಿದೆ ಎನ್ನುವುದನ್ನು ವಚನದ ಈ ಸಾಲುಗಳು ದ್ಯೋತಿ ಸುತ್ತವೆ.
*#ಸತ್ತೆಂಬುದನರಿಯದೆ, ಚಿತ್ತೆಂಬುದ ತಿಳಿಯದೆ,*
*ಆನಂದವೆಂಬ ಆಶ್ರಯವ ಭಾವಿಸಿ ನೋಡದೆ,*
*ಸ್ಥೂಲಸೂಕ್ಷ್ಮಕಾರಣವೆಂಬ ತನುತ್ರಯದ ಭೇದವ #ಕಾಣಲರಿಯದೆ,*
ಬಲ್ಲೆನೆಂಬ ಮದ ಅರಿದೆನೆಂಬ ಅಹಂಕಾರ ಮದ ತಲೆಗೇರಿದವನು ಸತ್ ಎನ್ನುವುದನ್ನು ಅರಿಯದೆ ಚಿತ್ ಎಂಬುದ ತಿಳಿಯದೆ, ಆನಂದವೆಂಬಾಶ್ರಯ
ಭಾವಿಸಿ ನೋಡದೆ, ಸ್ಥೂಲ ಸೂಕ್ಷ್ಮ ಕಾರಣವೆಂಬ ತನುತ್ರಯಗಳನ್ನು ಪರಿಭಾವಿಸಿ ಅಲ್ಲಿನ ವ್ಯತ್ಯಾಸ ಅರಿಯದೆ ಅಹಂಕಾರದ ಮದದ ನಿಶೆ ಏರಿದವನ ದುಸ್ಥಿತಿಯನ್ನು ಇಲ್ಲಿ ವಚನದ ಈ ಸಾಲುಗಳಲ್ಲಿ ಪರಿಣಾಮ ಬೀರುವಂತೆ ಹೆಂಡದ ಮಾರಯ್ಯ ಶರಣರು ಚಿತ್ರಿಸಿದ್ದಾರೆ. ಸಾಧಕನಿಗೆ ತಾನು ಸಾಧಿ ಸಬೇಕಾದ ಮಾರ್ಗದ ತತ್ವಗಳ ಒಳತಿರುಳನ್ನು ತಿಳಿದು ಸರಿಯಾಗಿ ಅರಿತುಕೊಂಡು ಅಂಗಗುಣ ಧರ್ಮದ ಬೇಧವನ್ನು ಅಂದರೆ; ಸ್ಥೂಲ ಸೂಕ್ಷ್ಮ ಕಾರಣವೆಂಬ ದೇಹ ಮನಸ್ಸು ಮತ್ತು ಭಾವವನ್ನು ಅರಿಯಲಾರದೇ ಕುರುಡನಂತೆ ಸಾಗುವುದನ್ನು ವಚನದ ಈ ಸಾಲುಗಳು ಎತ್ತಿ ತೋರಿಸುತ್ತವೆ.
*ಅಂಡಪಿಂಡವೆಂಬ ಖಂಡಿತವ ತಿಳಿಯಲರಿಯದೆ,*
*ದಿಂಡೆಯತನದಿಂದ ಕಂಡೆನೆಂದಡೆ,* *ಅದು ತಾ ಕೊಂಡ ಮೂರು ಹೆಂಡದ ಗುಣವೆಂದೆ,*
*ಧರ್ಮೇಶ್ವರಲಿಂಗದ #ಸಂಗವಲ್ಲಾಯೆಂದೆ.*
ಅಖಂಡ ತತ್ವದ ತುಂಡಾದ ಈ ಮಾನವ ಶರೀರ ಒಳಗೊಂಡಿರುವ ಸಂಗತಿಗಳನ್ನು ಸರಿಯಾಗಿ ಅರ್ಥ ಮಾಡಿ ಕೊಳ್ಳಲಾರದೆ, ಅರೆಬರೆ ಅರಿತು ಬಲ್ಲೆನೆಂಬ ಮದದ ಅಹಂಕಾರಿ ತನ್ನ ತಾ ತಿಳಿದು ಕೊಳ್ಳದೆ ಈ ಶರೀರದ ಮಹತ್ವವನ್ನು ಅರಿಯದೆ ಭಂಡತನದಿಂದ ಬಾಯಿ ಬಡುಕತನದಿ ಕಂಡೆನು ಎಂದು ಆತ ಹೇಳಿದರೆ ನಿಜವಾಗಿಯೂ ಆತನು ಕಂಡದ್ದು ತನು ಮನ ಭಾವದ ಈ ಮೂರುಸ್ಥಿತಿಗ ಳನ್ನ ಅರಿತೆನೆಂಬ ಅಹಂಕಾರದ ಜೊತೆಬಲ್ಲೆನೆಂಬ ಮದಗಳು ತುಂಬಿದರೆ ಅವುಗಳನ್ನು ಹಂಡೆಯಲ್ಲಿ ಇರುವ ಹೆಂಡದ ಗುಣ ಎನ್ನುವೆನೆನ್ನುವ ಪ್ರಸ್ತುತ ವಚನದ ವಚನಕಾರ ಮಾರಯ್ಯನವರು ಇದು ಧರ್ಮೇಶ್ವರಲಿಂಗದ ಸಂಗಸುಖ ಅಲ್ಲಾ ಎನ್ನುವ ಮೂಲಕ ಸಾಧಕನ ತನುಮನ ಭಾವಗಳು ಸತ್ಯ ಶುದ್ಧ ಅರಿವಿನ ಬೆಳಕನ್ನು ತುಂಬಿಕೊಂಡು ಹಣ್ಣಿನ ಗೊನೆ ಬಾಗಿದ ಹಾಗೆ ಸದಾ ಸಚ್ಚಿದಾನಂದ ಲಿಂಗ ಸಂಗ ಸುಖದಲ್ಲಿ ತೇಲಾಡ ಬೇಕು ಎನ್ನುವ ಶರಣ ಸಂದೇಶವನ್ನು ಲೌಕಿಕದಲ್ಲಿನ ಸುರೆಯ ನಿಶೆಯ ಪರಿಣಾಮ ಮತ್ತು ಪರಿಭಾವನೆಯ ಮೂಲಕವೇ ಅತ್ಯಂತ ಅರ್ಥಪೂರ್ಣವಾಗಿ ಅರಿವಿನ ಮಾರ್ಗ ದ ಕುರಿತಂತೆ ಇಲ್ಲಿ ಮಾರ್ಗದರ್ಶನದ ಮಾತುಗಳ ಹೇಳಿದ್ದಾರೆ ಎನ್ನಬಹುದಾಗಿದೆ.
*ಅಳಗುಂಡಿ ಅಂದಾನಯ್ಯ*