ತೇರು ಪಾದಗಟ್ಟೆ ಮುಟ್ಟುವುದೆಂದು?
ತೇರು ಪಾದಗಟ್ಟೆ ಮುಟ್ಟುವುದೆಂದು?
ಬಂಡಾಯ ಸಾಹಿತ್ಯ ಎಂಬ ಹೆಸರು ಕಾಯಿನ್ ಆಗುವ ಪೂರ್ವದಲ್ಲೇ "ಕ್ರಾಂತಿ" ದೈನಿಕದಲ್ಲಿ " ಬಂಡಾಯದ ಸಂತ ಕಡಕೋಳ ಮಡಿವಾಳಪ್ಪ " ಎಂಬ ಲೇಖನ ಬರೆದು ನಮಗೆಲ್ಲ ದಂಗು ಬಡಿಸಿದ ಮಲ್ಲಣ್ಣನ ಬರಹದ ರೋಮಾಂಚನ ಈ ಕ್ಷಣಕೂ ಮಾಸಿಲ್ಲ. ಆತನ ಬರಹಕ್ಕೆ ಮೊಗಲಾಯಿ ನೆಲದ ಕಾವು-ಕಸುವು, ಹ್ಯಾವ-ಹಿರಿಸು, ಮಿಗಿಲಾಗಿ ನಿತಾಂತ ಸೌಂದರ್ಯ. ಮಲ್ಲಿಕಾರ್ಜುನ ಭೌತಿಕವಾಗಿ ಎಲ್ಲೇ ಇದ್ದರೂ ಭಾವನಾತ್ಮಕವಾಗಿ ಕಡಕೋಳ, ಖೈನೂರು, ಯಡ್ರಾಮಿ, ಅಳಗುಂಡಗಿ, ಲಂಡೇನ್ಹಳ್ಳ, ಪುಂಡಿಪಲ್ಲೆ, ಬೆಲ್ಲದ ಜಿಲೇಬಿ, ಮಿರ್ಚಿಗಳಲ್ಲೇ ಇರೋದು.
ತತ್ವಪದಗಳ ಟಂಕಸಾಲೆಯಂತಿದ್ದ ಕಡಕೋಳದ ಮಣ್ಣಿನಲ್ಲಿ ಇವತ್ತಿಗೂ ಕಾವ್ಯಧಾರೆ ಅಂತಃಶ್ರೋತವಾಗಿ ಹರಿಯುತ್ತಿದೆ ಎಂಬುದಕ್ಕೆ ನಮ್ಮ ಕಡಕೋಳ ಮಲ್ಲಿಕಾರ್ಜುನ ಅವರ ಮುದನೀಡುವ ಮತ್ತು ಅನುಭಾವಜನ್ಯವಾದ ಕಾವ್ಯ ಪಯಣವೇ ಸಾಕ್ಷಿ. ಆತನ ಅನುಭವ ಕಣಜದ ಕೆಲವು ಬರಹಗಳು ಈಗ ಪ್ರಕಟಗೊಂಡಿವೆ. ಆದರೆ ಮಹಾಂತ-ಮಡಿವಾಳತನದ ಗುಂಗಿನ ಚುಂಗು ಹಿಡಿದು ಹೊಂಟರೆ ಹತ್ತು ಸಂಪುಟ ಹಾಳತವಾಗಿ ತರಬಲ್ಲ ತಾಕತ್ತು ಆತನದು. ಒಣ ಗ್ರಾಂಥಿಕತೆ ಮತ್ತು ಭ್ರಾಮಕತೆ ಬಿಟ್ಹಾಕಿ ನಮ್ಮ ಹೈ.ಕ. ನೆಲದ ನಾಲಗೆಯಿಂದ ಬರೆವ ಮಲ್ಲಣ್ಣನದು ಅಪ್ಪಟ ಜವಾರೀ ಶೈಲಿ.
ನಮ್ಮ ಬಟಾಬಯಲ ಬದುಕಿನ ಅಸದಳ ಸಂಕಟ, ಅಸಹಾಯಕತೆಗೆ ಕಾರಣರಾದ ಆಳರಸರ ದರ್ಪ- ದಬ್ಬಾಳಿಕೆ, ಪುರೋಹಿತಶಾಹಿ, ಜಮೀನ್ದಾರಿ ವ್ಯವಸ್ಥೆಯ ಕ್ರೌರ್ಯಗಳನ್ನು ಅನಾವರಣಗೊಳಿಸುವುದು ದೊಡ್ಡ ಸವಾಲು. ನಮ್ಮ ನಿತ್ಯದ ಬವಣೆಗಳನ್ನು ಬರೆದರೆ ಸಾಕು ಕೆಲವರಿಗೆ ನಮ್ಮದೊಂದು ಆಫ್ರಿಕಾದ ಕತೆಯಂತಾಗುತ್ತದೆ. ಆದರೆ ನಿಮ್ಮಹಾಗೆ ಹೇಳಿಕೊಳ್ಳದಿದ್ದರೆ ನಮಗೆ ನಾವೇ ಮೋಸ ಮಾಡಿಕೊಂಡಂತೆ. ನೀವು ನಿಮ್ಮ ಅನುಭವಜನ್ಯ ಪ್ರತಿಭೆಗೆ ಜನಹಿತದ ಸಾಣೆ ಹಿಡಿಸಿಕೊಂಡಿದ್ದರಿಂದ ನಿಮ್ಮ ಬರವಣಿಗೆಗೆ ದಿವ್ಯ ತಾಕತ್ತು ಪ್ರಾಪ್ತವಾಗಿದೆ. ಬಯಲ ಬದುಕಿನ ರೂಕ್ಷತೆಯನ್ನು ಅದೆಷ್ಟು ಸಮರ್ಥವಾಗಿ ಹಿಡಿದಿಡಬಹುದೆಂಬುದಕ್ಕೆ ಈ ಕೃತಿ ಜೀವಂತ ನಿದರ್ಶನ. ಏಕ್ ಜಿಂದಾ ಮಿಸಾಲ್.
ಕಟ್ಟ ಕಡೀಗೊಂದು ಖರೇಮಾತು ಹೇಳಬೇಕೆಂದರೆ ಮಲ್ಲಿಕಾರ್ಜುನಾ ! ನಾವೆಲ್ಲಾ ಬರೆದದ್ದಕ್ಕಿಂತ ಬರೇಯದೇ ಬಿಟ್ಟದ್ದೇ ಭಾಳ ಅದ. ಮುಂದಾದರೂ ನೀವು ಅದೆಲ್ಲವನ್ನು ಅಕ್ಷರಕ್ಕೆ ದಕ್ಕಿಸಬಲ್ಲಿರಿ ಎಂದುಕೊಳ್ಳಲೇ? ಅಂದಿನ ಆ ಕಡಕೋಳ, ಚಿಣಮಗೇರಿ ಸೀಮೆಗಳಲ್ಲಿ ನಾವು ಹಾಕಿದ ಹೆಜ್ಜೆಗಳು, ಹಸಿ- ಹಸಿ, ಮುಗ್ದ ಭಾಷಣಗಳು. ಏನೇನೋ ಮಾತಾಡಿ ಕೆಲವರ ಕೆಂಗಣ್ಣಿಗೆ ಗುರಿಯಾಗಿ ಗಾಬರಿ ಬಿದ್ದದ್ದು. ಮಡಿವಾಳಪ್ಪನೇ ನಮ್ಮನ್ನು ಬಚಾವ್ ಮಾಡಿದ್ದು. ಹೀಗೆ ಒಂದೇ, ಎರಡೇ ಊಫ್ ಅಸಂಖ್ಯ ನೆನಪುಗಳ ತೇರು. ಅರ್ಧಕ್ಕೆ ನಿಂತ ನಮ್ಮ ಈ ತೇರು ಪಾದಗಟ್ಟೆಗೆ ಮುಟ್ಟುವುದೆಂದು.?
*ಕಲಬುರ್ಗಿ* ಡಾ. ಮೀನಾಕ್ಷಿ ಬಾಳಿ*
