ಟೆಂಗಳಿ ಗ್ರಾಮದ ಮಹಾದ್ವಾರ ರಿಪೇರಿ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ
ಟೆಂಗಳಿ ಗ್ರಾಮದ ಮಹಾದ್ವಾರ ರಿಪೇರಿ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ
ಕಲಬುರಗಿ: ಕಾಳಗಿ ತಾಲ್ಲೂಕಿನ ಟೆಂಗಳಿ ಗ್ರಾಮದ ಐತಿಹಾಸಿಕ ಮಹಾದ್ವಾರ (ಅಗಸಿ) ರಿಪೇರಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಜಿಲ್ಲೆ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಕಲಬುರಗಿ ಸಹಾಯಕ ಆಯುಕ್ತರ ಮುಖಾಂತರ ಮನವಿ ಸಲ್ಲಿಸಲಾಗಿದೆ.
ಅಂಡಗಿ ಪ್ರತಿಷ್ಠಾನದ ಅಧ್ಯಕ್ಷ ಶಿವರಾಜ ಅಂಡಗಿ ಅವರು ಮಾರ್ಚ್ 12, 2026ರಂದು ಮನವಿ ಪತ್ರ ಸಲ್ಲಿಸಿ, ಟೆಂಗಳಿ ಗ್ರಾಮದ ಮಹಾದ್ವಾರ ಅವನತಿ ಸ್ಥಿತಿಯಲ್ಲಿ ಇರುವುದರಿಂದ ತಕ್ಷಣವೇ ರಿಪೇರಿ ಕಾಮಗಾರಿ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಮನವಿ ಪತ್ರದಲ್ಲಿ ಉಲ್ಲೇಖಿಸಿರುವಂತೆ, ಮೇ 17, 2025ರಂದು ವಿಜಯವಾಣಿ ದಿನಪತ್ರಿಕೆ ಆಯೋಜಿಸಿದ್ದ ಜಿ.ಪಂ. ಸಿ.ಇ.ಓ ಅವರ ಫೋನ್-ಇನ್ ಕಾರ್ಯಕ್ರಮದಲ್ಲಿ ಟೆಂಗಳಿ ಗ್ರಾಮದ ಮಹಾದ್ವಾರ ಸಮಸ್ಯೆಯನ್ನು ಗಮನಕ್ಕೆ ತರಲಾಗಿತ್ತು. ಬಳಿಕ ಕಾಳಗಿ ತಾಲೂಕು ಅಭಿಯಂತರರಿಂದ ಜನವರಿ 19, 2026ರಂದು ಸುಮಾರು 16 ಲಕ್ಷ ರೂ. ವೆಚ್ಚದ ಅಂದಾಜು ಎಸ್ಟಿಮೇಟ್ ಸಿದ್ಧಪಡಿಸಲಾಯಿತು. ಆದಾಗ್ಯೂ ಇದುವರೆಗೆ ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ತಿಳಿಸಿದ್ದಾರೆ.
ಇತಿಹಾಸ ಪ್ರಸಿದ್ಧ ಟೆಂಗಳಿ ಗ್ರಾಮ ರಾಷ್ಟ್ರಕೂಟರ ಕಾಲದಲ್ಲಿ ಪ್ರಮುಖ ಕೇಂದ್ರವಾಗಿದ್ದು, ಗ್ರಾಮದಲ್ಲಿ ಕೋಟೆ ಹಾಗೂ ಅನೇಕ ಐತಿಹಾಸಿಕ ಸ್ಮಾರಕಗಳು ಮತ್ತು ದೇವಾಲಯಗಳು ಇದ್ದವು. ಊರಿಗೆ ಪ್ರವೇಶಿಸಲು ಒಂದೇ ಮಹಾದ್ವಾರ ಇದ್ದಿತೆಂದು ಹಿರಿಯರು ಹೇಳುವ ಮಾತು. ಇಂತಹ ಐತಿಹಾಸಿಕ ಮಹಾದ್ವಾರದಲ್ಲಿ ಈಗ ಬಿರುಕು ಬಿಟ್ಟಿದ್ದು, ಗಿಡ-ಗಂಟಿಗಳು ಬೆಳೆದಿರುವುದರಿಂದ ಯಾವಾಗ ಬೇಕಾದರೂ ಕುಸಿಯುವ ಭೀತಿ ಉಂಟಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಮಾರ್ಚ್ 14ರಂದು ಕಾಳಗಿಯಲ್ಲಿ ನಡೆದ ವಿವಿಧ ಕಾಮಗಾರಿಗಳ ಅಡಿಗಲ್ಲು ಸಮಾರಂಭದ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಸುಭಾಷ್ ರಾಠೋಡ್, ರಾಜೇಶ್ ಗುತ್ತೇದಾರ, ರಮೇಶ್ ಮರಗೋಳ, ವಿನೋದಕುಮಾರ ಜನೇವರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇನ್ನೂ ಏಪ್ರಿಲ್ ತಿಂಗಳಲ್ಲಿ ಟೆಂಗಳಿ ಗ್ರಾಮದ ಜಾತ್ರೆ ನಡೆಯಲಿದ್ದು, ಸಾವಿರಾರು ಭಕ್ತರು ಊರಿಗೆ ಆಗಮಿಸುವ ಸಾಧ್ಯತೆ ಇದೆ. ವಿಶೇಷವಾಗಿ ಬ್ಯಾಂಡ್ ಬಾಜಾ ಸಹಿತ ಫಲ್ಲಕ್ಕಿ ಮೆರವಣಿಗೆ ಊರಿನ ಮಹಾದ್ವಾರ ಮೂಲಕವೇ ಸಾಗುವ ಹಿನ್ನೆಲೆಯಲ್ಲಿ ಯಾವುದೇ ಅವಘಡ ಸಂಭವಿಸದಂತೆ ತಕ್ಷಣವೇ ಅಗಸಿ ರಿಪೇರಿ ಕಾಮಗಾರಿ ಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ವಿನಂತಿಸಲಾಗಿದೆ.
