ಹೊಡೆಹುಲ್ಲ ಬಕಂಣ್ಣ

ಹೊಡೆಹುಲ್ಲ ಬಕಂಣ್ಣ

ಕಾಷ್ಟವಗ್ನಿಯೊಳಗಿಡಲಿಕ್ಕಾಗಿ,

ಆ ಕಾಷ್ಟದೊಳಗಿದ್ದಗ್ನಿ ನಾನಿದ್ದೇನೆ, 

ನೀ ಬೇಡಾ ಎಂದಿತ್ತೆ ? ತಾನಡಗಿ 

ಇದಿರಿಟ್ಟ ಅಗ್ನಿಗೆ ಒಡಲಾಯಿತ್ತು.

ಇಂತು ಇದ್ದ ಇದಿರಿಂಗೆ ಒಡಲೆಡೆಗೊಡದ ಅಗಮ್ಯಂಗೆ ಪಡಿಪುಚ್ಚವಿಲ್ಲ,

ಕುಂಭೇಶ್ವರಲಿಂಗದಲ್ಲಿದ್ದ ಜಗನ್ನಾಥನನರಿದವಂಗೆ.

     *ಹೊಡೆಹುಲ್ಲ ಬಂಕಣ್ಣ*

                **      *ವಚನ ಅನುಸಂಧಾನ*

ಮನುಷ್ಯನೊಳಗೆ ಏನೆಲ್ಲಾ ಶಕ್ತಿಯನ್ನ ಪ್ರಕೃತಿಯು ಇಂಬಿಟ್ಟಿದೆ ಎನ್ನುವುದನ್ನ ಚೆನ್ನಾಗಿ ತಿಳಿದುಕೊಂಡಿ ದ್ದ ಅಪ್ಪ ಬಸವಾದಿ ಶರಣರು ತಮ್ಮ ಅರಿವಿನ ಈ ಜ್ಞಾನರಸ ಪಾಕವನ್ನು ಅನುಭವ ಮಂಟಪದಲ್ಲಿನ ಚರ್ಚೆ ಸಂವಾದದ ಮೂಲಕ ಕಾಸಿ ಸೋಸಿದ್ದನ್ನು ಸಂಸ್ಕರಿಸಿ ತಮ್ಮ ಅನುಭಾವಿಕ ನೆಲೆಯ ವಚನಗ ಳಲ್ಲಿ ಎರಕಹೊಯ್ದು ಹರಳುಗಟ್ಟಿಸಿ ಇಟ್ಟಿರುವರು

ಹಾಗಾಗಿಯೇ ಶರಣರಿಗೆ ಈ ಅಂಗ/ಕಾಯವು; ದೇವಾಲಯವಾಯ್ತು, ಅಷ್ಟೇ ಅಲ್ಲದೆ ಅದುವೇ ಗುರುಲಿಂಗಜಂಗಮ ಆಗಿದ್ದಲ್ಲದೇ ಈ ಕಾಯವೇ ಕೈಲಾಸ ಕೂಡಾ ಆಯಿತೆನ್ನುವುದು ಈ ಕಾಯದ ಮಹತ್ವವನ್ನ ಎತ್ತಿ ತೋರಿಸುತ್ತದೆ. ಇಂಥ ಕಾಯ ಅಂದ್ರೆ ಈ ಶರೀರವನ್ನು ಹಾಗೂ ಇದರೊಳಗಿನ ಮಹತ್ವದ ತತ್ವಗಳನ್ನ ಮತ್ತು ಅಲ್ಲಿ ಜರುಗುವಂಥ ವಿಸ್ಮಯಕಾರಿ ಜೈವಿಕ ವಿದ್ಯಮಾನಗಳನ್ನು ಸೂತ್ರ ಬದ್ಧವಾಗಿ ಅರಿತುಕೊಳ್ಳುವಲ್ಲಿ ಇಷ್ಟಲಿಂಗದ ಪರಿ ಕಲ್ಪನೆಯ ಶೋಧವೇ ಅನನ್ಯವಾದದ್ದಾಗಿದೆ. ಈ ಇಷ್ಟಲಿಂಗವು ವಿಶ್ವಾತ್ಮಕವಾಗಿ ವ್ಯಾಪಿಸಿದಂತಹ ಅಗೋಚರ ಅನುಪಮ ಅಪ್ರತಿಮವೂ ಆಗಿರುವ ಚಿನ್ಮಯ ಚೇತನ್ಯಶಕ್ತಿಯ ಕುರುಹಾಗಿದೆ. ಇದನ್ನು ಅಂಗದ ಮೇಲೆ ಧರಿಸಿಕೊಂಡು ನಿತ್ಯಶಿವಯೋಗ ಸಾಧನೆ ಮಾಡುವ ಮೂಲಕ ಈ ಕಾಯ/ಅಂಗವ ಲಿಂಗವನ್ನಾಗಿ ಮಾಡಿಕೊಳ್ಳಲು ಬಯಸುವ ಭವಿ ಭಕ್ತನಾದ ಲಿಂಗಾಯತನಿಗೆ ಅಪ್ಪ ಬಸವಣ್ಣವರು ಕರುಣಿಸಿ ಕೊಟ್ಟಿದ್ದಾರೆ. ಅಂದರೆ ಇಲ್ಲಿ ಸಾಧಕರು

ಜ್ಯೋತಿ ಮುಟ್ಟಿ ಜ್ಯೋತಿ ಆಗುವ ಅವಕಾಶವನ್ನು ಇಲ್ಲಿ ಲಿಂಗಾಯತನಿಗೆ ಯಥೇಚ್ಛವಾಗಿ ಕಲ್ಪಿಸಿಕೊ ಟ್ಟಿದ್ದಾರೆ. ಈ ಹಿನ್ನೆಲೆಯ ಅರುವಿನಲ್ಲಿ ಮೇಲಿನ ಹೊಡೆಹುಲ್ಲ ಬಂಕಣ್ಣ ಶರಣರ ವಚನವನ್ನು ಈಗ ಅನುಸಂಧಾನ ಮಾಡಿ ತನ್ಮೂಲಕ ಪ್ರಾಪ್ತಿ ಆಗುವ ಹೆಚ್ಚಿನ ರೀತಿಯ ವಿಚಾರಗಳನ್ನ ತಿಳಿದುಕೊಳ್ಳಲು ಒಂದು ಪ್ರಯತ್ನ ಮಾಡಿ ನೋಡೋಣ.

*#ಕಾಷ್ಟವಗ್ನಿಯೊಳಗಿಡಲಿಕ್ಕಾಗಿ,*

*ಆ ಕಾಷ್ಟದೊಳಗಿದ್ದಗ್ನಿ ನಾನಿದ್ದೇನೆ,*

*ನೀ ಬೇಡಾ ಎಂದಿತ್ತೆ ?* *ತಾನಡಗಿ*

*ಇದಿರಿಟ್ಟ ಅಗ್ನಿಗೆ #ಒಡಲಾಯಿತ್ತು.*

ಶರಣರು ತಮ್ಮ ಆಳವಾದ ಅರಿವಿನ ವಿಚಾರಗಳ ಆಚರಣೆಯನ್ನು ತಮ್ಮ ನಡೆನುಡಿಯ ವಚನಗಳ ಮೂಲಕ ಹೇಳುವಲ್ಲಿ ಉಪಮೆ ಪ್ರತಿಮೆ ಪ್ರತೀಕ ರೂಪಕ ದೃಷ್ಟಾಂತ ಹೀಗೆ ತಮಗೆ ಆಗಯಾವುದೇ ಸೂಕ್ತ ಕಂಡ ವಿಧಾನವನ್ನು ಬಳಸುವ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುವ ಅನನ್ಯವಾದ ಪ್ರತಿಭೆಯನ್ನು ತೋರಿಸಿರುತ್ತಾರೆ. ಅದರಂತೆಯೇ ಇಲ್ಲಿ ಈ ಮೇಲಿನ ಸುಂದರವಾದ ಸಾಲುಗಳಲ್ಲಿ ಅಷ್ಟೇ ಸುಂದರವಾದಂಥ ಉಪಮೆ ಬಳಸಿ ಹೇಳಿದ್ದಾರೆ. ಅಂದ್ರೆ ಒಂದು ಕಟ್ಟಿಗೆಯನ್ನು ಅಗ್ನಿಯಲ್ಲಿ ಇಟ್ಟಾಗ, ಆ ಕಟ್ಟಿಗೆಯಲ್ಲಿ ಈಗಾಗಲೇ ಸುಪ್ತವಾಗಿ ಅಲ್ಲಿರುವ ಅಗ್ನಿಯು 'ನಾನಿಲ್ಲಿದ್ದೇನೆ ನೀ ಬೇಡಾ' ಎನ್ನುವುದೇ? ಇಲ್ಲ ಹಾಗೇನು ಕಟ್ಟಿಗೆ ಒಳಗಿರುವ ಅಗ್ನಿಯಂತೂ ಹೇಳಲಾರದು. ಅದು ತಾನು ಉಡುಗಿ ಅಡಗುತ್ತಾ ಮುಂದಿರುವ ಅಗ್ನಿಗೆ ಮೈ ನೀಡಿ ಇಂಬಿಟ್ಟುಕೊಳ್ಳುತ್ತದೆ ಎಂದು ಇಲ್ಲಿ ಈ ವಚನಕಾರ ಶರಣರು ಹೇಳಿದ್ದಾರೆ. ಇಲ್ಲಿನ ಒಂದು ವಿಶೇಷವೆಂದರೆ ಈ ವಿಚಾರವು ಬೆಳೆದು ವಚನದ ಈ ಮುಂದಿನ ಸಾಲಲ್ಲಿರುವ ವಿಷಯದ ಸಂಗತಿ ಜೊತೆಗೆ ಸಾಂಗತ್ಯವನ್ನು ನೀಡಲು ಹಾತೊರೆಯು ತ್ತದೆ. ಅದನ್ನು ಈಗಗಮನಿಸೋಣ

*#ಇಂತು ಇದ್ದ ಇದಿರಿಂಗೆ ಒಡಲೆಡೆಗೊಡದ* *ಅಗಮ್ಯಂಗೆ ಪಡಿಪುಚ್ಚವಿಲ್ಲ,*

*ಕುಂಭೇಶ್ವರಲಿಂಗದಲ್ಲಿದ್ದ #ಜಗನ್ನಾಥನನರಿದವಂಗೆ.*

ಈ ರೀತಿಯಲ್ಲಿ ಅಂಗೈಯಲ್ಲಿರುವ ಇಷ್ಟಲಿಂಗದ ಅನುಷ್ಠಾನ ಮಾಡುವಾಗ ಅಂಗದೊಳಗಿನ ಆತ್ಮ ಎದುರಲ್ಲಿರುವ ಅಗಮ್ಯಗೆ ಯಾವುದೇ ರೀತಿಯ ಹಿಂಜರಿಕೆ ಸಂಶಯ ಇರದೇ ಇಂಬಿಟ್ಟುಕೊಳ್ಳಲು ತೆರೆದ ಮನದಿಂದ ಹಾತೊರೆಯಬೇಕು. ಆದರೆ ಅಗಮ್ಯ ಚಿನ್ಮಯ ಚೈತನ್ಯಕ್ಕೆ ಬಾಗಿಲುಗಳೇ ಇಲ್ಲ! ತೆರೆದು ಒಳಬರಲು. ಹಾಗಾಗಿ ಕುಂಭೇಶ್ವರ ಲಿಂಗ ದಲ್ಲಿದ್ದ ಜಗನ್ನಾಥನ ಅರಿದವನು - ಅಗ್ನಿಯಲ್ಲಿಟ್ಟ ಕಟ್ಟಿಗೆ ತನ್ನಲ್ಲಿದ್ದ ಅಗ್ನಿಯು ಎದುರಿಗಿನ ಅಗ್ನಿಯ ಜೊತೆಗೆ ಒಡಬೆರೆತು ಒಂದೇ ಅಗ್ನಿ ಆದಂತೆ, ಇಲ್ಲಿ ಈಗಾಗಲೇ ಅಂಗದಲ್ಲಿ ಬೆಳಗುವ ಆತ್ಮ ಜ್ಯೋತಿ ಇಷ್ಟಲಿಂಗದ ದ್ವಾರ ಪರಮ ಪರಂಜ್ಯೋತಿಯನ್ನು ಬೆರೆತು ಬೇರಿಲ್ಲದ ಹಾಗೆ ಇರಬೇಕು. ತನ್ಮೂಲಕ ಶರಣತ್ವದ ಜ್ಯೋತಿ ಮುಟ್ಟಿ ಜ್ಯೋತಿಯಾಗುವುದ ಸಮರ್ಥಿಸಿಕೊಂಡು ಬೆಳಗುವದು ಎನ್ನುವುದನ್ನು ಹೊಡೆಹುಲ್ಲ ಬಂಕಣ್ಣ ಶರಣರು ಈ ವಚನದಲ್ಲಿ ನಿಚ್ಚಳವಾಗಿ ನಿದರ್ಶನ ಮಾಡಿ ತೋರಿಸಿದ್ದಾರೆ.

             ಅಳಗುಂಡಿ ಅಂದಾನಯ್ಯ*