ಆದಯ್ಯ

ಆದಯ್ಯ

ಆದಯ್ಯ ಶರಣ 

ಕಡಲೊಳಗಣ ವಡಬ ಹೊದ್ದಿಯೂ ಹೊದ್ದದಂತೆ, ಇಂದುಕಾಂತದೊಳಗೆ ಬಿಂದುವಿದ್ದಿಲ್ಲದಂತೆ, ದರ್ಪಣದೊಳಗಣ ಪ್ರತಿಬಿಂಬ ಮುಟ್ಟಿಯೂ ಮುಟ್ಟದಂತೆ,

ಸರ್ವಸಾಕ್ಷಿಕನಾದ ಸೌರಾಷ್ಟ್ರ ಸೋಮೇಶ್ವರನು ಪಿಂಡದೊಳಗಡಗಿ ಇಲ್ಲದಂತಿಪ್ಪನಯ್ಯಾ.

                            *ಆದಯ್ಯ    *ವಚನ ಅನುಸಂಧಾನ*

ಲಿಂಗಾಯತವು ಮನುಷ್ಯನ ಶರೀರ ಕೇಂದ್ರವಾಗಿ ರುವ ಶರಣ ಧರ್ಮವಾಗಿದೆ. ಇದು ಅಪ್ಪ ಬಸವಾ ದಿ ಶರಣರೆಲ್ಲಾ ಸೇರಿಕೊಂಡು ಕಟ್ಟಿರುವ ಪ್ರಖರ ವೈಚಾರಿಕ ವೈಜ್ಞಾನಿಕ ಆರ್ಥಿಕ ನೈತಿಕ ಸಾಮಾಜಿಕ ನೈಸರ್ಗಿಕ ಆಧ್ಯಾತ್ಮಿಕ ಹೀಗೆ ಹಲವು ಆಯಾಮಗ ಳ ಆಚಾರ ವಿಚಾರಗಳ ಕುರಿತು ಕೂಲಂಕಷವಾಗಿ ಚಿಂತನೆಯನ್ನು ಮಾಡಿದಂಥಾ ಆಳ ಸಂಗತಿಗಳನ್ನ ಒಳಗೊಂಡ ಪಿಂಡಾಂಡ ಬ್ರಹ್ಮಾಂಡದ ಸಂಯುಕ್ತ ಘಟವೇ ಈ ಮಾನವ ಶರೀರವಾಗಿದೆ. ಈ ಅರಿವಿನ ಅಗಾಧತೆಯ ಮೇಲೆ ಧಾರ್ಮಿಕತೆಯ ಮನೋಭಾವದ ಕೆನೆಪದರೂ ಕಟ್ಟಿಕೊಂಡಿರುವ ಕಾರಣಕ್ಕೆ ಶರಣಧರ್ಮವು ಅತ್ಯಂತ ನಿಖರವಾದ ವೈಚಾರಿಕತೆಯನ್ನು ಮತ್ತು ವೈಜ್ಞಾನಿಕತೆಯನ್ನ ಈ ವಸ್ತು ವಿಷಯಗಳಲ್ಲಿ ಹೊಂದಿರುವ ಕಾರಣಕ್ಕಾಗಿ ಅಲ್ಲಿ ನಿಗಿನಿಗಿಸುವ ಅರ್ಥಪ್ರಖರತೆಯು ಹೂತು ಹೋದ ಸಂಪತ್ತಿನಂತಾಗಿದೆ. ಹಾಗಾಗಿಯೇ ಅದು ಸಹಜವಾದ ಬರಿಗಣ್ಣಿಗೆ ಕಾಣಿಸಿಕೊಳ್ಳದೆ ಗಹನ ತತ್ವ ಸಿದ್ಧಾಂತಗಳಲ್ಲಿ ಘನತರವಾಗಿ ಪವಡಿಸಿದೆ. ಶರಣ ಐಕ್ಯ ಎನ್ನುವ ಅತ್ಯುನ್ನತ ಘನಪದವಿಗಳು ಗಗನ ಕುಸುಮಗಳಾಗಿ ಪರಿಮಳಿಸುವ ಮೂಲಕ ಹಾಗೂ ವಿಭೂತಿ ಇಷ್ಟಲಿಂಗ ರುದ್ರಾಕ್ಷಿ ಧಾರಣೆಗ ಳಂಥ ಲಾಂಛನಗಳು ಬಾಹ್ಯಾಚರಣೆಯಲ್ಲಿಯೇ ಹೆಚ್ಚು ಎದ್ದು ಕಾಣುವ ಕಾರಣದಿಂದ, ಪ್ರಗತಿಪರ ಜನಪರ ಜೀವಪರಗಳಂಥಾ ಸರ್ವಸಮಾನತೆಯ ಗಟ್ಟಿಯಾದ ಒಳನೋಟ ಉಳ್ಳ ಶರಣ ಧರ್ಮವು ಮಠ ಪೀಠಗಳ ಕಾವಿಗಳ ಕಾಟದಿಂದಾಗಿ, ಇಲ್ಲಿ ಲಿಂಗಾಯತದಲ್ಲಿ ಈಗ ಪ್ರಜ್ಞಾವಂತಿಕೆಯು ಕಮ್ಮಿ ಆಗಿ ಆವರಿಸಿದ ಧಾರ್ಮಿಕತೆಯ ಕಬಂಧಬಾಹು ಗಳಲ್ಲಿ ಬಂಧಿಯಾಗಿ ತೋರಿಕೆಯ ಶುಷ್ಕ ನಡೆಯ ಆಚರಣೆ ಕಾರಣದಿಂದಾಗಿ ಪೇಲವವಾಗಿ ನಲುಗಿ ಹೋದ ದುರಂತ ಕಣ್ಣೆದುರೇ ತೋರಿ ಬರುತ್ತದೆ. 

ಈ ಮೇಲಿನ ವಚನದಲ್ಲಿ ಆದಯ್ಯ ಶರಣರು ಈ ಶರೀರದ ಕುರಿತಂತೆ ಅತ್ಯಂತ ಪ್ರತಿಭಾಪೂರ್ಣ ನುಡಿ ಕಣಗಳನ್ನು ಎರಕಹೊಯ್ದಿಟ್ಟರುವರು.ಇಲ್ಲಿ ಅದನ್ನು ಈಗ ಅನುಸಂಧಾನ ಮಾಡಿ ವಿವರವಾಗಿ ಅರಿತುಕೊಳ್ಳಲು ಪ್ರಯತ್ನಿಸಿ ನೋಡೋಣ.

*#ಕಡಲೊಳಗಣ ವಡಬ ಹೊದ್ದಿಯೂ ಹೊದ್ದದಂತೆ,* *ಇಂದುಕಾಂತದೊಳಗೆ ಬಿಂದುವಿದ್ದಿಲ್ಲದಂತೆ,* *ದರ್ಪಣದೊಳಗಣ ಪ್ರತಿಬಿಂಬ ಮುಟ್ಟಿಯೂ #ಮುಟ್ಟದಂತೆ,*

ಇಲ್ಲಿ ಈ ಮೂರು ಮುಖ್ಯ ಉದಾಹರಣೆಗಳನ್ನು

ಹೇಳುವ ಮೂಲಕ ವಚನಕಾರ ಶರಣ ಆದಯ್ಯ

ನವರು ಮಾನವನ ಶರೀರದ ಅಗಾಧತೆಯನ್ನು

ಹಾಗೂ ಅದರಲ್ಲಿ ಒಡ ಬೆರೆತಿರುವ ನೈಸರ್ಗಿಕ ಮತ್ತು ವೈಜ್ಞಾನಿಕ ಸತ್ಯ ಸಂಗತಿಗಳನ್ನು ಜೊತೆಗೆ ಚಿನ್ಮಯ ಹಾಗೂ ಚಿಃಶಕ್ತಿಯ ಸಾಂಗತ್ಯವನ್ನ ಇಲ್ಲಿ

ಸ್ಪಷ್ಟವಾಗಿ ತಿಳಿಸಲು ಪ್ರಯತ್ನ ಮಾಡಿದ್ದಾರೆ.ಈಗ ವಚನವನ್ನು ಬಿಡಿಸಿ ನೋಡೋಣ. ಕಡಲೊಳಗೆ ಬಡಬಾಗ್ನಿ ಇರುತ್ತದೆ ಆದರೂ ಅದು ಕಾಣದಂತೆ ಇರುತ್ತದೆ. ಹಾಗೆಯೇ ಚಂದ್ರಕಾಂತದ ಶಿಲೆಯಲ್ಲಿ 

ನೀರ ಹನಿ/ಬಿಂದು ಇದ್ದೂ ಇಲ್ಲದಂತೆ ಕಣ್ಣುಗಳ ನೋಟಕ್ಕೆ ಮರೆಮಾಚಿ ಇರುತ್ತದೆ. ಅದೇರೀತಿಯ ಲ್ಲಿ ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬ ಕಂಡರೂ ಮುಟ್ಟಿದರೆ ಮುಟ್ಟಿಸಿಕೊಳ್ಳದಂತೆ ಇರುತ್ತದೆ! ಈ ಮೂರು ಉದಾಹರಣೆಗಳು ಪ್ರಸ್ತುತ ವಚನದ ಮುಂದಿನ ಭಾಗದಲ್ಲಿರುವ ವಿಷಯವನ್ನ ಪೂರಕ ವಾಗಿ ಸಮರ್ಥಿಸುತ್ತವೆ.

*#ಸರ್ವಸಾಕ್ಷಿಕನಾದ ಸೌರಾಷ್ಟ್ರ ಸೋಮೇಶ್ವರನು ಪಿಂಡದೊಳಗಡಗಿ #ಇಲ್ಲದಂತಿಪ್ಪನಯ್ಯಾ.*

ಈ ಮೇಲಿನ ಮೂರು ಅರ್ಥಪೂರ್ಣವಾದಂಥಾ ಉದಾಹರಣೆಗಳು ಹೇಳುವ ವಿಚಾರಗಳಂತೆ; ಕಡಲಲ್ಲಿ ಅಗ್ನಿ ಇದ್ದರೂ ಕಾಣದಂತೆ ಇರುವಹಾಗೆ

ಚಂದ್ರಕಾಂತ ಶಿಲೆಯಲ್ಲಿ ನೀರಿನ ಅಂಶಗಳಿದ್ದರೂ ಕಾಣದಂತೆ ಇರುವ ಬೆರಗಿನ ಹಾಗೆ,ಮತ್ತು ಕನ್ನಡಿ ಒಳಗಿನ ಬಿಂಬವು ಕಾಣಬಹುದಾಗಿದೆಯಾದರೂ ಮುಟ್ಟಲು ಬಾರದಂತೆ ಇರುವ ಹಾಗೆ ಸರ್ವಕ್ಕೂ ಸಾಕ್ಷಿ ಆಗಿರುವ ಸೌರಾಷ್ಟ್ರ ಸೋಮೇಶ್ವರನು ಈ ಶರೀರದ ಪಿಂಡಾಂಡದಲ್ಲಿ ಅಡಗಿರುವನಾದರೂ ತಾನು ಇಲ್ಲದಂತೆ ಇರುವನು ಎನ್ನುವ ಸತ್ಯವನ್ನು ಆದಯ್ಯ ಶರಣರು ಇಲ್ಲಿ ಮನವರಿಕೆ ಮಾಡಿಕೊ ಟ್ಟಿದ್ದಾರೆ. ಮಾಯಾ ಮರವೆಯಲ್ಲಿ ಮರೆಯಾಗಿ ಇರುವಂತಹ ಅಂತಃಶಕ್ತಿಯ ಸಾಂಗತ್ಯವ ಸಾಧಿಸಿ ಪರಾತ್ಪರ ಚಿನ್ಮಯ ಶಿವಶಕ್ತಿಯ ಅಗಾಧತೆ ಕಂಡು ಕೊಳ್ಳಲೆಂದೇ ಅಪ್ಪ ಬಸವಣ್ಣನವರು ಸಾಧಕನ ಕೈಗೆ ಇಷ್ಟಲಿಂಗವನ್ನು ಕೊಟ್ಟಿದ್ದಾರೆ ಎನ್ನುವುದನ್ನು ಕೂಡಾ ಇಲ್ಲಿ ಪರೋಕ್ಷ ಪರಿಗಣಿಸ ಬೇಕಾಗುತ್ತದೆ.

          *ಅಳಗುಂಡಿ ಅಂದಾನಯ್ಯ*