ಪ್ರಾರ್ಥನೆ -ಭಾರತೀಯ ಸಂಸ್ಕೃತಿ
ಪ್ರಾರ್ಥನೆ -ಭಾರತೀಯ ಸಂಸ್ಕೃತಿ
ಪ್ರಾರ್ಥನೆ -ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನ ಹೊಂದಿದೆ. ಪ್ರಾರ್ಥನೆ ವೇದಗಳ ಕಾಲದಿಂದ ಬೆಳೆದು ಬಂದು ಎಲ್ಲರ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಸಮಾಧಾನ ,,ನೆಮ್ಮದಿ, ಶಾಂತಿಯ ಬದುಕಿಗೆ ಪ್ರಾರ್ಥನೆ ಅವಶ್ಯಕ. ಪ್ರಾರ್ಥನೆ ಎಂಬುದು ಮನಸ್ಸಿನ ಆರೋಗ್ಯಕ್ಕೆ, ಆತ್ಮದ ಅರಿವಿಗೆ, ಜೀವಾತ್ಮನ ಪರಿವೆಗೆ ಬೇಕಾದಂತಹ ಉತ್ತಮ ಸಾಧನ. ಪ್ರಾರ್ಥನೆ ಎಂಬುದು ನಮ್ಮ ಮನ ಭಾವಗಳನ್ನು ಅರಳಿಸುವ, ಸುಚಿಯಾಗಿಡುವ ಸದೃಢವಾಗಿಸುವ ಕಾರ್ಯವನ್ನು ಮಾಡುತ್ತದೆ. ಮನಸ್ಸಿಗೆ ವಿಚಾರದ ಶಕ್ತಿಯನ್ನು ಹೆಚ್ಚಿಸುವ, ಜ್ಞಾನದ ವೃದ್ಧಿಗೆ ಕಾರಣವಾಗಿದೆ. ಮನವನ್ನು ಸಮಚಿತ್ತದಲ್ಲಿ ಇಟ್ಟುಕೊಂಡು ಉತ್ತಮ ಕಾರ್ಯಗಳನ್ನು ಮಾಡುವಲ್ಲಿ ಪ್ರಾರ್ಥನೆ ಸಹಕಾರಿಯಾಗಿ ತನ್ನ ಸಲಹೆ, ಸೂಚನೆಗಳನ್ನು ಕೊಡುವಂತೆ ನಮಗೆ ನೀಡುತ್ತದೆ. ಪ್ರಾರ್ಥನೆ ಎಂಬುದು ಜೀವ ,ಮನ, ದೇಹಕ್ಕೆ ಒಂದು ವಿಶ್ರಾಂತಿಯ ಸ್ಥಿತಿಯ ಪರಿಕಲ್ಪನೆಯನ್ನು ವಿಷದಪಡಿಸುತ್ತದೆ. ಶಾಂತಿಯಲ್ಲಿರುವ ನೆಮ್ಮದಿ ಉಣಬಡಿಸುತ್ತದೆ.
ಧನಾತ್ಮಕತೆಯನ್ನು ಹೆಚ್ಚಿಸುತ್ತದೆ .ನಕಾರಾತ್ಮಕ ಚಿಂತನೆಗಳಿಗೆ ಎಡೆ ಮಾಡಿಕೊಡದೆ ಶಾಂತಿ ಮತ್ತು ನೆಮ್ಮದಿ ನೀಡುವ ಸಾಧನ ಈ ಪ್ರಾರ್ಥನೆಯಾಗಿ ಕಾರ್ಯನಿರ್ವಹಿಸುತ್ತದೆ.
ದೇವರ ಅನುಗ್ರಹವನ್ನು ನೆನಪಿಸುತ್ತದೆ. ದೇವ ನಮ್ಮೊಂದಿಗೆ ಇದ್ದಾನೆ ಎಂಬ ಭಾವದಿ ಸುಮಧುರ ಕ್ಷಣ ಕಳೆಯುವಂತೆ ಮಾಡುತ್ತದೆ. ಮತ್ತು ದೇವರ ಇರುವಿನ ಕುರಹನ್ನು ನಮಗೆ ತೋರಿಸುತ್ತದೆ. ದೇವರು ಇದ್ದೇ ಇದ್ದಾನೆ ಪ್ರಾರ್ಥನೆಯಿಂದ ಅವನನ್ನು ಒಲಿಸಿಕೊಳ್ಳುವುದು ಸುಲಭ ಎಂಬ ವಿಚಾರವನ್ನು ತಿಳಿಸಿಕೊಡುತ್ತದೆ.
ಮುಂಜಾನೆಯ ಪ್ರಾರ್ಥನೆಯಿಂದ ಮನೋಬಲ ಹೆಚ್ಚಾಗಿ ದೃಢತೆ ಹೊಂದುತ್ತೇವೆ. ನಂಬಿಕೆಯನ್ನು ಬಲಪಡಿಸುತ್ತದೆ ಈ ಪ್ರಾರ್ಥನೆ. ಅನೇಕ ಸಮಸ್ಯೆಗಳಿಗೆ ಉತ್ತರವನ್ನು ಇದು ನೀಡುತ್ತದೆ. ಸಮಸ್ಯೆಗಳು ಸಮಸ್ಯೆಯಂತೆ ತೋರದಂತೆ ನೋಡಿಕೊಳ್ಳುತ್ತದೆ ಈ ಪ್ರಾರ್ಥನೆ.
ದೇಹ ಮತ್ತು ಆತ್ಮವನ್ನು ಶುದ್ಧೀಕರಿಸುತ್ತದೆ. ವ್ಯಕ್ತಿಯ ದೇಹ ಆತ್ಮಶುದ್ಧಿಯೊಂದಿಗೆ ಮನಸ್ಸಿಗೆ ಚೈತನ್ಯ ತುಂಬುವ ಕೆಲಸ ಈ ಪ್ರಾರ್ಥನೆಯದು. ದೀರ್ಘಕಾಲದ ಸಮಸ್ಯೆಗಳನ್ನು ಕೂಡ ಬಗೆಹರಿಸುವ ಸಾಮರ್ಥ್ಯ ಹೊಂದಿದೆ.. ಚಿಂತೆಗಳು ದೂರಾಗಿ ಚಿಂತನೆಗಳು ನಮ್ಮೊಳಗೆ ಸುಳಿದಾಡುತ್ತವೆ.
ಪ್ರಾರ್ಥನೆಯು ಇಡೀ ದಿನವನ್ನು ಸುರಕ್ಷಿತವಾಗಿಡುವಂತೆ ಮಾಡುತ್ತದೆ. ಆದ್ದರಿಂದಲೇ ಗಾಂಧೀಜಿಯವರು ಪ್ರಾರ್ಥನೆಯಿಂದ ಶಾಂತಿ ಮನೋಭಾವ ಪ್ರಾಮಾಣಿಕತೆ, ಕಲಿಯುವಿರಿ ಎಂದು ಹೇಳಿದ್ದಾರೆ. ಪ್ರತಿದಿನ ,ಪ್ರತಿಕ್ಷಣ ಮಾಡುವ ಎಲ್ಲ ಕೆಲಸವನ್ನು ಮಾಡುತ್ತಲೇ ಹೊಸದನ್ನು ಕಲಿಯುವ ಮತ್ತು ತಿಳಿಯುವ ಮನಸ್ಥಿತಿ ನಮ್ಮದಾಗುತ್ತದೆ. ಜಾತಿ ಮತ್ತು ಧರ್ಮಕ್ಕಿಂತ ಸಾಮಾಜಿಕ ಸದೃಢತೆಗೆ ಪ್ರಾರ್ಥನೆ ಮುಖ್ಯ ಸ್ವಾಭಿಮಾನ ಮತ್ತು ಏಕತೆಯ ಸಂಕೇತವೇ ಈ ಚರಕ ಎಂದು ಗಾಂಧಿಜೀಯವರು ಹೇಳಿರುವರು.
ಸಂತ ವಿನೋಬಾ ಅವರು ಈ ಪ್ರಾರ್ಥನೆಯ ಬಗ್ಗೆ ಹೀಗೆ ಹೇಳುತ್ತಾರೆ– ಬಡತನ ಮತ್ತು ದಾರಿದ್ರ ಹೋಗಲಾಡಿಸಲು ಎಲ್ಲರೂ ನಿತ್ಯ ಕಾಯಕದೊಂದಿಗೆ ದೇವನನ್ನು ಪ್ರಾರ್ಥಿಸುತ್ತಾ ಇರಿ ಎಂದಿದ್ದಾರೆ.
ದೇವತೆಗಳ ಬಗ್ಗೆ ಪ್ರೇಮ ಮತ್ತು ಆಧರ ನಮ್ಮ ಮನೋವಲಯದಲ್ಲಿ ನಿರ್ಮಾಣವಾಗಿ ಶಾಂತಿಯನ್ನು ತಂದೊಡುತ್ತದೆ .ಸರ್ವಶಕ್ತ ಈಶ್ವರ ನಮ್ಮನ್ನು ಕಾಪಾಡುತ್ತಾನೆ ಎಂಬ ಮನೋ ಧೈರ್ಯ ಬಲವಾಗುತ್ತದೆ.
ಸಕಲ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ ಎಂಬ ಮನೋಭಾವದಿಂದ ನಾವು ಮಾಡುವ ಕೆಲಸವನ್ನು ನಾವು ಶ್ರದ್ಧೆ ಏಕಾಗ್ರತೆಯಿಂದ ಮಾಡಿ ಮುಗಿಸಲು ಕಾರಣವಾಗುತ್ತದೆ.
ನಮಗೆ ಸಿಗಲಾರದಂತಹ ಅತಿ ಮುಖ್ಯವಾದ ವಸ್ತು ಮನುಶ್ಯಾಂತಿ ಆ ಮನಃಶಾಂತಿ ಈ ಪ್ರಾರ್ಥನೆಯಿಂದ ನಮಗೆ ದೊರಕುತ್ತದೆ.
ಉಪಾಸಕನನ್ನು ಸ್ತೂಲದಿಂದ ಸೂಕ್ಷ್ಮದೊಳಗೆ ಕೊಂಡೊಯ್ಯುವ ಒಂದು ಸುಲಭ ಸಾಧನವೆಂದರೆ ಈ ಪ್ರಾರ್ಥನೆ.
ಸಾಮೂಹಿಕ ಪ್ರಾರ್ಥನೆಗಳಿಂದ ಸಂಕೀರ್ಣತೆ ನಿರ್ಮಾಣವಾಗುವುದರೊಂದಿಗೆ ಸ್ಮರಣ ಶಕ್ತಿ, ಶ್ರವಣ ಶಕ್ತಿ ಬೆಳೆದು ತುಮುಲ ಧ್ವನಿಯು ವಾತಾವರಣದಲ್ಲಿ ಪವಿತ್ರ ಲಹರಿಗಳ ನಿರ್ಮಾಣವನ್ನು ಮಾಡುತ್ತದೆ.
ಪ್ರಾರ್ಥನೆ ಶಾಸ್ತ್ರೀಯ, ಸಂಗೀತ, ಉತ್ತಮ ಶಬ್ದ ಹಾಗೂ ಆಹಾರ, ನೀರಿನ ಮೇಲೆ ಬಹಳ ಉತ್ತಮ ಪರಿಣಾಮವನ್ನು ಬೀರಿ ನಮ್ಮ ದೇಹ ಮನ ಸುಸ್ಥಿರವಾಗಿ ಇಡುವಲ್ಲಿ ಕಾರ್ಯನಿರ್ವಹಿಸುತ್ತದೆ.
ಡಾಕ್ಟರ್ ಮಾಸಾಲೊ ಇಮೋಟೋ ಅವರು ತಾಯಿಯಿಂದಾಗಿ ಊಟದ ಮೊದಲು ಪ್ರಾರ್ಥನೆ ಮಾಡುವುದರ ಲಾಭವನ್ನು ಸ್ವತಃ ಅನುಭವಿಸಿದರು ಮತ್ತು ಅದನ್ನು ಅರುಹಿದರು.
ಪ್ರಾರ್ಥನೆಯಿಂದ ಜೀವನದಲ್ಲಿ ಸತತ ಆನಂದ ಸಿಗುವುದು ಖಚಿತವಾದ ವಿಷಯ.
ಇನ್ನೂ ವೈಜ್ಞಾನಿಕ ದೃಷ್ಟಿಯಿಂದ ನೋಡಿದಾಗಲೂ ಪ್ರಾರ್ಥನೆಗೆ ಲಭಿಸುವ ಲಾಭಗಳು ಆರೋಗ್ಯಕರ ,ಸಂತೃಪ್ತ ಬದುಕು ನಮ್ಮದಾಗಬೇಕೆಂದರೆ ಪ್ರಾರ್ಥನೆಯು ನಮಗೆ ದಿನನಿತ್ಯ ಅವಶ್ಯಕತೆವಾದಂತಹ ಒಂದು ಯೋಗ.
ಹೈಟಿಕ್ ವೈದ್ಯಕೀಯ ಚಿಕಿತ್ಸೆಯ ಜೊತೆ ಪ್ರಭಾವಿ ಹಾಗೂ ಅತ್ಯಂತ ನೈತಿಕವೂ ಆಗಿರುವ ವಿಧಾನವೆಂದರೆ ಈ ಪ್ರಾರ್ಥನೆ. ಪ್ರಾರ್ಥನೆಯು ನಮ್ಮ ಮನಸ್ಸು ,ನಮ್ಮ ವ್ಯಕ್ತಿತ್ವ ಮತ್ತು ತಿಳುವಳಿಕೆ ಮತ್ತು ಸತ್ವ ಇವೆಲ್ಲವನ್ನೂ ಒಗ್ಗೂಡಿಸಿ “ಸತ್ವ ಇಮ್ಲೆ ಭಗವಂ “ಮತ್ತು ಆತ್ಮದೊಂದಿಗೆ ಮೇಳೈಸುತ್ತದೆ.
ಪ್ರಾರ್ಥನೆಯ ಮೂಲಕ ನಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರಲು ನಮಗೆ ಅವಕಾಶಗಳಿವೆ. ವಿಜ್ಞಾನಿಗಳು ಹೇಳುವಂತೆ ಜಗತ್ತಿನ ಯಾವುದೋ ಮೂಲೆಯಲ್ಲಿ ಹಾರಾಡುವ ಚಿಟ್ಟೆಯ ರೆಕ್ಕೆಗಳ ಬಡಿತದಿಂದ ಬಿರುಗಾಳಿಗೆ ಸೃಷ್ಟಿಯಾಗಬಲ್ಲದು .ಆರ್ಕಿಟೆಕ್ ಪ್ರದೇಶದಲ್ಲಿ ಮಂಜುಗಡ್ಡೆ ಕರಗಿದರೆ ಇನ್ನಾವುದು ಪ್ರದೇಶದಲ್ಲಿ ಪ್ರವಾಹ. ಹಿಮಾಲಯದಲ್ಲಿ ಹಿಮಮಳೆ ಆದರೆ ದೆಹಲಿಯಲ್ಲಿ ಚಳಿ ಹೀಗೆ ಭೌತಿಕ ಜಗತ್ತಿನ ವ್ಯವಸ್ಥೆಯಲ್ಲಿ ಪರಿಸರ ಸಂಬಂಧಗಳಿಗಿರುವುದು ಸುಸ್ಪಷ್ಟ. ಕಾರಣ ಪ್ರಾರ್ಥನೆಯಿಂದ ಧನಾತ್ಮಕ ಚಿಂತನೆಗಳು ಹೆಚ್ಚಾಗಿ ಆರೋಗ್ಯಕರ, ತೃಪ್ತಿದಾಯಕ, ಸಮಾಧಾನದ ಬದುಕು ನಮ್ಮದಾಗುವುದು.
ಡಾ ಅನ್ನಪೂರ್ಣ ಹಿರೇಮಠ