ಗೋರಕ್ಷ ಶರಣ

ಗೋರಕ್ಷ ಶರಣ

ನಾ ನಿನ್ನ ಕೇಳಿಹೆನೆಂದಡೆ 

ನಾನಂಗಿ ನೀ ನಿರಂಗಿ. 

ನಾ ನಿನಗೆ ಹೇಳಿಹೆನೆಂದಡೆ 

ನಾ ಸಂಗಿ ನೀ ನಿಸ್ಸಂಗಿ.

ನಿನ್ನಂಗ ಎನ್ನಂಗದಲ್ಲಿ ಪ್ರೇರಿಸಿ ನಿನ್ನಂಗ ಎನ್ನಂಗದಲ್ಲಿ ಪ್ರೇರಿಸಿ ನಿನ್ನರಿವು ಎನ್ನ ಆತ್ಮದಲ್ಲಿ ನಿಂದು ಅರಿವಹನ್ನಕ್ಕ ನನಗೂ ನಿನಗೂ ತತ್ತುಗೊತ್ತು. ಗೋರಕ್ಷಪಾಲಕ ಮಹಾಪ್ರಭು 

ಸಿದ್ಧಸೋಮನಾಥ ಲಿಂಗವು ಸರಿ ಹುದುಗು.

             **   *ಶರಣ ಗೋರಕ್ಷ*

               ***ವಚನ ಅನುಸಂಧಾನ*

ವಚನಗಳು; ಶಿವ ಶರಣರ ಸಂಗ ಸುಖದಲ್ಲಿಂದ ಹುಟ್ಟಿದ ಸುಂದರ ಸಂಭಾಷಣೆಯ ನುಡಿಗಳು. ಅವು ನಡೆಯಲ್ಲಿ ಒಮೂಡಿರುವ ಶರಣರ ಪಾದ (ಜ್ಞಾನ)ದ ಹೆಗ್ಗುರುತಿನ ಹೆಜ್ಜೇನ ಹನಿ ಹರಳುಗಟ್ಟಿ ಪರಿಮಳಿಸುವ ಹಳಕುಗಳು. ಇವನ್ನು ಸವಿದಷ್ಟೂ ಆಗುವ ಮತ್ತು ಸಿಗುವ ಆನಂದದ ಅನುಭವದಾ ಅನನ್ಯತೆಯ ಜೊತೆ ದಕ್ಕುವ ಅನುಭಾವದ ಆ ದಿವ್ಯತೆಯ ಸಮರಸ್ಯವು ನಿಜಕ್ಕೂ ರಸಪಾಕವೇ ಸೈ! ಇಂಥ ಅನುಭೂತಿಯ ಸುಖವನ್ನ ಅಕ್ಷರದಲ್ಲಿ ಸಂಪೂರ್ಣವಾಗಿ ಇಂಬಿಟ್ಟು ಅಭಿವ್ಯಕ್ತಿಸುವುದು ಇನ್ನೂ ಕಷ್ಟದ ಕೆಲಸ. ಅದನ್ನು ಖುದ್ದಾಗಿ ಸವಿದು ಸ್ವಯಂ ಸುಖಿಸಿದಾಗ ಮಾತ್ರವೇ ಆ ಶಿವಸುಖಾ ನುಭವವು ದಕ್ಕೀತು. ಇಲ್ಲಿ ಪ್ರಸ್ತುತ ಈ ಮೇಲಿನ ಗೋರಕ್ಷ ಶರಣರ ವಚನವು ಅಂತಹುದೇ ಒಂದು ಸುಂದರ ಸ್ವಗತದ ರೀತಿಯಂಥಾದ್ದು. ಇದನ್ನ ಇಲ್ಲಿ ಅನುಸಂಧಾನ ಮಾಡುವ ಮೂಲಕ ಅದರಲ್ಲಿಯ ಸೊಗಡನ್ನು ಈಗ ಇನ್ನೂ ಮನದಣಿ ಸವಿಯಲು ಒಂದು ಪ್ರಯತ್ನವನ್ನು ಮಾಡಿ ನೋಡೋಣ.

*#ನಾ #ನಿನ್ನ ಕೇಳಿಹೆನೆಂದಡೆ* 

*ನಾನಂಗಿ ನೀ ನಿರಂಗಿ.*

*ನಾ ನಿನಗೆ ಹೇಳಿಹೆನೆಂದಡೆ*

*ನಾ ಸಂಗಿ ನೀ #ನಿಸ್ಸಂಗಿ.*

ಇಲ್ಲಿ ವಚನಕಾರರು ತಮ್ಮ ಎದುರಿನಲ್ಲಿರವಂಥಾ ವ್ಯಕ್ತಿಯ ಸಂಗಾತ ಅತ್ಯಂತ ಆತ್ಮೀಯ ಭಾವದಲ್ಲಿ ಸಂಭಾಷಿಸುವಂತೆ ವಚನದ ಈ ಸಾಲುಗಳು ಇಲ್ಲಿ ರೂಪ ಪಡೆದಿವೆ. ಎದುರು ಇರುವ ವ್ಯಕ್ತಿ ಕುರಿತೇ ಮಾತನಾಡಿದ ರೀತಿಯಂತು ನಿಜಕ್ಕೂ ಮನಮೋ ಹಕವಾಗಿದೆ. ವಚನಕಾರರೇ ಇಲ್ಲಿ ಮಾತಿಗೆ ಶುರು ಮಾಡಿ ಹೇಳತಾರೆ; ನಾ ನಿನ್ನನ್ನು ಕೇಳುವೆನೆಂದರೆ ನೀನು ನಿರಂಗಿ ಅಂದ್ರೆ, ಅಂಗವೇ ಇಲ್ಲದವನು!? ನಾನು ಅಂಗ ಉಳ್ಳವನು. ಹಾಗಾಗಿ ನೀನು ಹೇಗೆ ನನ್ನ ಮಾತನ್ನು ಕೇಳಿಸಿಕೊಳ್ಳಲು ಸಾಧ್ಯ!? ಎಂದು ಹೇಳಿ, ಆಯ್ತು ನಾನೇ ನಿನಗೆ ಹೇಳಬೇಕೆಂದರೆ; ನೀನೋ ಒಬ್ಬಂಟಿಯಾಗಿ ಇರುವವನು. ನಾನೋ ಶರಣರ ಸಂಗದಲ್ಲಿ ಇರುವವನು ಎಂದೆನ್ನುವಲ್ಲಿ ವಚನಕಾರ ಗೋರಕ್ಷ ಶರಣರು ಇಲ್ಲಿ ಆ ಅಗಮ್ಯ ಅಗೋಚರನಾದ ನಿರಂಜನ ನಿರವಯ ಶಿವನನ್ನ ಕುರಿತಂತೆ ಹೀಗೆ ಬಿನ್ನಾಣದ ನುಡಿಯಲ್ಲಿ ಬಿನ್ನಹಿ ಸುತ್ತಾರೆಂದು ಓದುಗನ ಅರಿವಿಗೆ ಸ್ಪಷ್ಟವಾಗಿಯೇ ಬಿಡುತ್ತದೆ. ಆಗ;

*#ನಿನ್ನಂಗ ಎನ್ನಂಗದಲ್ಲಿ ಪ್ರೇರಿಸಿ ನಿನ್ನಂಗ ಎನ್ನಂಗದಲ್ಲಿ ಪ್ರೇರಿಸಿ* *ನಿನ್ನರಿವು ಎನ್ನ ಆತ್ಮದಲ್ಲಿ ನಿಂದು ಅರಿವಹನ್ನಕ್ಕ* *ನನಗೂ ನಿನಗೂ ತತ್ತುಗೊತ್ತು.* *ಗೋರಕ್ಷಪಾಲಕ ಮಹಾಪ್ರಭು*

*ಸಿದ್ಧಸೋಮನಾಥ ಲಿಂಗವು ಸರಿ #ಹುದುಗು.*

ಹೀಗೆ ಅಗೋಚರನಾದ ಶಿವನನ್ನು ಕಾಣುವುದಕ್ಕೆ ಶರಣರಿಗೆ ಅಪ್ಪ ಬಸವಣ್ಣನವರು ಇಷ್ಟಲಿಂಗವನ್ನ ಕರುಣಿಸಿ ಕೊಟ್ಟಿದ್ದಾರೆ. ಅದಕ್ಕಾಗಿ ಇಲ್ಲಿ ಗೋರಕ್ಷ ಶರಣರು; ನಿನ್ನಂಗ(ಇಷ್ಟಲಿಂಗ)ದಲ್ಲಿ ನನ್ನಂಗವನ್ನ ಕಣ್ಣೋಟದಲ್ಲಿ ಸೇರಿಸಿ, ನಿನ್ನಂಗ(ಇಷ್ಟಲಿಂಗ)ವು ನನ್ನ ಅಂಗದಲ್ಲಿ ಸೇರಿ, ನಿನ್ನ ಅರಿವಿನ ಸ್ಮರಣೆಯ ರೂಪ ನನ್ನ ಆತ್ಮದಲ್ಲಿ ನೆಲೆನಿಂತು ಅರಿಯಬೇಕು ಎಂದರೆ; ಅದಕ್ಕೊಂದು ನಿರ್ದಿಷ್ಟವಾದಂಥ ಸ್ಥಾನ ಬೇಕು. ಆ ಸ್ಥಾನವು ಯಾವುದು ಎಂದರೆ, ತಮ್ಮ ಕುರುಹು ಆಗಿರುವಂಥ ಇಷ್ಟಲಿಂಗವೇ ಇಲ್ಲಿರುವ ಗೋರಕ್ಷಪಾಲಕ ಮಹಾಪ್ರಭುಸಿದ್ಧಸೋಮನಾಥ ಲಿಂಗವು. ಅದುವೇ ಪರಸ್ಪರರು ಸಮರಸವಾಗಿ ಹುದುಗಿಕೊಳ್ಳಲು ಇರುವ ಪ್ರಶಸ್ತವಾದ ಸ್ಥಾನವು ಎಂದು ಹೇಳುವ ಮೂಲಕ ಇಲ್ಲಿ ಈ ಇಷ್ಟಲಿಂಗದ ನೆಲೆಯಲ್ಲಿ ಮಾತ್ರವೇ ಶಿವನನ್ನು ಸಂಧಿಸಿ ಶರಣ ಸಂಭಾಷಣೆಯನ್ನು ಪರಿಪೂರ್ಣವಾಗಿ ಮಾಡಲು ಸಾಧ್ಯವೆಂದು ವಚನಕಾರ ಶರಣ ಗೋರಕ್ಷರು ಈ ಪ್ರಸ್ತುತ ವಚನದಲ್ಲಿ ಪ್ರತಿಪಾದಿಸಿರುವರು ಎಂದು ಹೇಳಬಹುದು.

  **   

  *#ಸಂಕ್ಷಿಪ್ತ #ಪರಿಚಯ*

(ಚಿತ್ರ ಸಾಂದರ್ಭಿಕ ಮಾಹಿತಿ ಅಂತರ್ಜಾಲ ಕೃಪೆ)

  **

ಮೂಲತ: ನಾಥಪರಂಪರೆಗೆ ಸೇರಿದ ಗೋರಕ್ಷರ ಮೂಲ ಹೆಸರು ಗೋರಖನಾಥ. ಇವರ ಗುರು ಮತ್ಸೇಂದ್ರನಾಥ. ಇವರಿಂದ ಗೋರಕ್ಷರು ಅನೇಕ ಸಿದ್ಧಿಗಳನ್ನು ಪಡೆದು ವಜ್ರಕಾಯರಾಗಿರುತ್ತಾರೆ. ಅಲ್ಲಮಪ್ರಭುಗಳು ಇವರನ್ನೊಮ್ಮೆ ಸಂಧಿಸಿದಾಗ ಈರ್ವರಿಗೂ ವಾದ ನಡೆದು ಅಲ್ಲಮಪ್ರಭುಗಳು ಈ ವಾದದಲ್ಲಿ ಇವರನ್ನು ಸೋಲಿಸಿ, ಇಷ್ಟಲಿಂಗ ದೀಕ್ಷೆಯ ನೀಡಿ, ಶೂನ್ಯಸಂಪಾದನೆ ಮಾರ್ಗವನ್ನ ತೋರಿಸುತ್ತಾರೆ ಎನ್ನುವ ಇವರ ಕಥೆ ಶೂನ್ಯ ಸಂಪಾದನೆ ಮತ್ತು ಪ್ರಭುಲಿಂಗಲೀಲೆ ಕೃತಿಗಳಲ್ಲಿ ಪ್ರಸಿದ್ಧವಾಗಿದೆ. ಇವರದು ಬದಾಮಿಯ ಹತ್ತಿರದ ಊರು ಪಟ್ಟದಕಲ್ಲು. ಅಲ್ಲಿಯ ಅರಸನ ಗೋವು ಗಳ ಕಾಯುವ ಕಾಯಕ ಮಾಡಿ ಕೊಂಡಿದ್ದರೆಂದು ಹೇಳಲಾಗಿದೆ. ಮುಂದೆ ಕಲ್ಯಾಣಕ್ಕೆ ಬಂದ ಇವರು

ಅನುಭವ ಮಂಟಪದ ೭೭೦ ಅಮರ ಗಣಂಗಳ ಲ್ಲಿ ಒಬ್ಬ ವಚನಕಾರ ಶರಣರಾಗಿ, ವಚನಗಳನ್ನು 'ಗೋರಕ್ಷಪಾಲಕಮಹಾಪ್ರಭು ಸಿದ್ಧಸೋಮನಾಥ ಲಿಂಗ' ಅಂಕಿತದಲ್ಲಿ ರಚಿಸಿದ್ದು, ಈವರೆಗೆ ಇವರ ೧೧ ವಚನಗಳು ದೊರೆತಿವೆ. ಅವುಗಳಲ್ಲಿ; ನಾನಾ ರೀತಿಯ ಸಿದ್ಧಿ, ಜ್ಞಾನ, ಯೋಗ, ಆತ್ಮ ವಿದ್ಯೆಗಳ ವಿವರಗಳನ್ನು ಹೆಣೆಯಲಾಗಿದೆ. ತಮ್ಮ ಜೀವಿತದ ಕೊನೆಯಲ್ಲಿ ಈ ಶರಣ ಗೋರಕ್ಷರು ಶ್ರೀಶೈಲದಲ್ಲಿ ಐಕ್ಯರಾದರೆಂದು ತಿಳಿದುಬರುತ್ತದೆ.

                 **

  *ಅಳಗುಂಡಿ ಅಂದಾನಯ್ಯ*