ಘಾಟ ಹಿಪ್ಪರಗಿಯ ಗವಿಗಳು : ಒಂದು ಹೊಸ ಶೋಧ.

ಘಾಟ ಹಿಪ್ಪರಗಿಯ ಗವಿಗಳು : ಒಂದು ಹೊಸ ಶೋಧ.
ನಮ್ಮಲ್ಲಿ ಅನೇಕ ಹಿಪ್ಪರಗಿಗಳಿವೆ. ಬಸವಕಲ್ಯಾಣ ತಾಲೂಕಿನಲ್ಲಿಯೇ ಎರಡು ಹಿಪ್ಪರಗಿಗಳಿವೆ. ಘಾಟ ಹಿಪ್ಪರಗಿ ಮತ್ತು ಬಾಗ ಹಿಪ್ಪರಗಿ. ಆಳಂದ ತಾಲೂಕಿನಲ್ಲಿ ಮಾದನ ಹಿಪ್ಪರಗಾ, ಪೋತನ ಹಿಪ್ಪರಗಾಗಳಿವೆ. ಜೇವರ್ಗಿ ತಾಲ್ಲೂಕಿನಲ್ಲಿ ಎಸ್.ಎನ್. ಹಿಪ್ಪರಗಿ ಎಂಬ ಊರಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ದೇವರಹಿಪ್ಪರಗಿ ಎಂಬ ಗ್ರಾಮವಿದೆ. ಶರಣ ಮಡಿವಾಳ ಮಾಚಿದೇವನ ಜನ್ಮಸ್ಥಳವಾಗಿ ಇದನ್ನು ಗುರುತಿಸಲಾಗುತ್ತದೆ. ಈ ದೇವರ ಹಿಪ್ಪರಗಿಗೂ ಉಳಿದ ಹಿಪ್ಪರಗಿಗಳಿಗೂ ಏನಾದರೂ ಚಾರಿತ್ರಿಕ ಸಂಬಂಧಗಳಿವೆಯೇ? ಹುಡುಕಬೇಕಿದೆ. ಸಂಸ್ಕೃತ ಭಾಷೆಯಲ್ಲಿ ಪಿಪ್ಪಲ ಎಂದರೆ ಅರಳಿ ಮರ ಎಂಬ ಅರ್ಥವಿದೆಯಂತೆ. ಈ ಸಂಸ್ಕೃತದ ಪಿಪ್ಪಲವು ಮೂಲ ಪ್ರಾಕೃತದಲ್ಲಿ ಹಿಪ್ಪಲ ಎಂದು ಪ್ರಾದೇಶಿಕ ಪ್ರಭೇಧವಾಗಿರುವ ಮರಾಠಿ ಮೂಲದ ಪ್ರಾಕೃತ ಪದ ಎನ್ನುತ್ತಾರೆ ಬೀದರ ಜಿಲ್ಲೆಯ ಸ್ಥಳನಾಮಗಳ ಕೆಲಸ ಮಾಡಿರುವ ಡಾ. ವೈಜಿನಾಥ ಭಂಡೆ ಅವರು. ಅವರು ಹೇಳುವಂತೆ ಇದು ಪಿಪ್ಪಲಿಕಾ> ಹಿಪ್ಪಲಿಕಾ> ಹಿಪ್ಪರಗಾ ಎಂದಾಗಿದೆ. ಬನ್ನೇರುಘಟ್ಟ, ಹೆಸರಘಟ್ಟ ಸ್ಥಳನಾಮಗಳ ಹಾಗೇ ಪ್ರಾಚೀನ ಸ್ಥಳನಾಮಗಳಲ್ಲಿ 'ಘಟ್ಟ' ಪದವು ಹೆಸರಿನ ಪೂರ್ವದಲ್ಲೇ ಬಳಸಿದಂತಿದೆ. ಉದಾಹರಣೆಗೆ ಬಸವಕಲ್ಯಾಣ ತಾಲೂಕಿನಲ್ಲಿ 'ಘಾಟ್ ಬೋರಾಳ'ಎನ್ನುವ ಊರಿದೆ. ಶಾಸನೋಕ್ತ ಹೆಸರು 'ಘಟ್ಟದ ಬೋರಿವಿಳೆ' ಎಂದಿದೆ. 'ಘಟ್ಟದ ಹಿಪ್ಪರಿಗೆ' ಈಗ 'ಘಾಟ್ ಹಿಪ್ಪರಗಾ' ಎಂದೂ ಆಗಿರುವಂತಿದೆ ಎಂಬ ಇನ್ನೊಂದು ವಾದವು ಇದೆ (ಮಿಥುನ್ ರೆಡ್ಡಿ)
ಈ ಘಾಟಹಿಪ್ಪರಗಿಯು ಬಸವಕಲ್ಯಾಣ ತಾಲೂಕಿನಲ್ಲಿ ಬರುವ ಗ್ರಾಮವಾಗಿದೆ. ತಾಲೂಕು ಕೇಂದ್ರದಿಂದ ೧೫ ಕಿ.ಮೀ ದೂರದಲ್ಲಿ ಬೆಟ್ಟದ ಕೆಳಗಡೆ ಈ ಗ್ರಾಮ ನೆಲೆಗೊಂಡಿದೆ. ಗ್ರಾಮದ ಪರಿಸರ ನೋಡುತ್ತಿದ್ದಂತೆ ಇದೊಂದು ಪ್ರಾಚೀನ ಗ್ರಾಮವೆಂದು ಭಾಸವಾಗುತ್ತದೆ. ಗ್ರಾಮದ ದೇವಾಲಯಗಳ ಎದುರಿಗೆಲ್ಲ ಪ್ರಾಚೀನ ಶಿಲ್ಪಗಳು, ವೀರಗಲ್ಲುಗಳು ಸಾಕಷ್ಟು ಕಂಡುಬರುತ್ತವೆ. ಬೆಟ್ಟದ ಪರಿಸರಲ್ಲಿರುವ ಹೊಲದಲ್ಲಿ ಎರಡು ಶಾಸನ ಶಿಲ್ಪಗಳಿದ್ದವೆಂದು ಸ್ಥಳೀಯರು ಹೇಳುತ್ತಾರೆ. ಆದರೆ ನಾನು ಅವುಗಳನ್ನು ಬಹಳಷ್ಟು ಹುಡುಕಿದರು ಅವು ಕಂಡು ಬರಲಿಲ್ಲ. ಬಹುಶಃ ಅವುಗಳ ಕಣ್ಮರೆಗೆ ಈಗ ಬೆಟ್ಟದ ಮೇಲೆ ನಡೆಯುತ್ತಿರುವ ಗಣಿಗಾರಿಕೆಯೇ ಕಾರಣವಾಗಿರಬಹುದು. ಇದರಿಂದ ಬೆಟ್ಟದ ಅಡಿಯಲ್ಲಿರುವ ಆರೇಳು ಗವಿಗಳು ಕೂಡ ಶಿಥಿಲಾವಸ್ಥೆಗೆ ತಲುಪುತ್ತಿವೆ. ಇದನ್ನು ತಡೆಯದಿದ್ದರೆ ಬಹುದೊಡ್ಡ ಚರಿತ್ರೆಯೇ ಕಣ್ಮರೆಯಾಗುವ ಅಪಾಯವಿದೆ.
ಗ್ರಾಮಸ್ಥರು ಗವಿ ಸ್ಮಾರಕವನ್ನು ‘ರಾಮಲಿಂಗೇಶ್ವರ ದೇವಾಲಯ’ ಎಂದು ಕರೆಯುತ್ತಾರೆ. ಅದೊಂದು ಗವಿಗುಡಿ. ಮೂಲತಃ ಇದೊಂದು ಶಿವ ದೇವಾಲಯ. ಯಾವುದೋ ಕಾಲಘಟ್ಟದಲ್ಲಿ ಹೆಸರು ಬದಲಾಗಿದೆ. ಗವಿಯ ಒಳಗಡೆ ಶಿವ-ಪಾರ್ವತಿಯರ ಶಿಲ್ಪದೊಂದಿಗೆ ಸ್ಥಾವರ ಲಿಂಗಗಳಿವೆ. ಶಿವಪಾರ್ವತಿ ಶಿಲ್ಪದ ಮುಂದೆ ನಂದಿಯನ್ನು ಕೂಡಿಸಲಾಗಿದೆ. ಪ್ರಾಂಗಣದಲ್ಲೂ ನಂದಿಯಿದೆ. ಸು. ೬.೧೦ ಅಡಿ ಎತ್ತರ, ೧೮.೧ ಅಡಿ ಅಗಲ ಮತ್ತು ೧೪.೮ ಅಡಿ ಉದ್ದವಿರುವ ವಿಶಾಲ ಗವಿಯದು. ಒಳಗಡೆ ಎರಡು ನಂದಿಗಳು, ಒಂದು ಚಿಕ್ಕ ನಂದಿ, ಮೂರು ಸ್ಥಾವರಲಿಂಗಗಳು, ಒಂದು ರಾಮನ ಶಿಲ್ಪ, ಒಂದು ಶಿವ-ಪಾರ್ವತಿಯರ ಶಿಲ್ಪ, ಒಂದು ವಿಷ್ಣುವಿನ ಶಿಲ್ಪ, ಒಂದು ಬಿಲ್ಲುಧಾರಿ ಶಿಲ್ಪ, ಎರಡು ದೀಪದ ಕಲ್ಲುಗಳು ಮತ್ತು ಸಪ್ತಮಾತೃಕೆಯರ ಶಿಲ್ಪಗಳನ್ನು ನಾವಲ್ಲಿ ಕಾಣಬಹುದು.
ರಾಮನ ಶಿಲ್ಪದಲ್ಲಿ ಕಾಲುಗಳ ಹತ್ತಿರ ಎರಡು ಕಡೆ ಸ್ತ್ರೀ ಶಿಲ್ಪಗಳು ಇದ್ದು, ಅದರ ಮುಂದೆ ಸ್ಥಾವರಲಿಂಗವಿದೆ. ಶಿವನ ತೊಡೆಯ ಮೇಲೆ ಪಾರ್ವತಿ ಕುಳಿತ ಶಿಲ್ಪವಂತೂ ಬಹಳ ಮನಮೋಹಕವಾಗಿದೆ. ಅದರ ಕಾಲ ಬಳಿಯೊಂದು ನಂದಿಯಿದ್ದು, ಎರಡು ಕಡೆ ಕೈ ಮುಗಿಯುತ್ತಿರುವ ಶಿಲ್ಪಗಳಿವೆ. ಅದರ ಮುಂದೊಂದು ನಂದಿಯನ್ನು ಕೂರಿಸಲಾಗಿದೆ. ಮಹಿಷಾಸುರ ಮರ್ದಿನಿ(ದುರ್ಗೆ) ಸಿಂಹದ ಮೇಲೆ ಕುಳಿತು ವ್ಯಕ್ತಿಯನ್ನು ಸಂಹರಿಸುತ್ತಿರುವ ಶಿಲ್ಪವೊಂದಿದೆ. ಕೈಯಲ್ಲಿ ಕತ್ತಿಯನ್ನು ಹಿಡಿದು ನೃತ್ಯ ಭಂಗಿಯಲ್ಲಿ ನಿಂತಿರುವ ಸ್ತ್ರೀ ಶಿಲ್ಪವೂ ಕೂಡ ಸುಂದರವಾಗಿದೆ. ಇದರ ಮುಂದೊಂದು ಸ್ಥಾವರಲಿಂಗ ಕಂಡುಬರುತ್ತದೆ.
ರಾಮಲಿಂಗೇಶ್ವರ ಗವಿ ಸ್ಮಾರಕದ ಪಕ್ಕದಲ್ಲಿಯೇ ಮತ್ತೆರಡು ಚಿಕ್ಕ ಗವಿಗಳಿವೆ. ಅದರಲ್ಲಿ ಕೊನೆಯ ಗವಿಯು (ಎಲ್ಲಮ್ಮನ ಗವಿ) ೫.೫ ಅಡಿ ಎತ್ತರ, ೧೨.೮ ಅಡಿ ಅಗಲ ಮತ್ತು ೧೨.೪ ಅಡಿ ಉದ್ದದಿಂದ ಕೂಡಿದೆ. ಈ ಗವಿಯು ೫ ಅಡಿ ಎತ್ತರ ಮತ್ತು ೩ ಅಡಿ ಅಗಲದಿಂದ ಕೂಡಿರುವ ಬಾಗಿಲನ್ನು ಹೊಂದಿದೆ. ಗವಿಯ ಒಳಗಡೆ ಎರಡು ಸ್ಥಾವರಲಿಂಗಗಳು, ಒಂದು ದೀಪದ ಕಲ್ಲು, ಮತ್ತು ಪೂಜಿಗೊಳ್ಳುತ್ತಿರುವ ಇತರೆ ದೈವಗಳ ಶಿಲ್ಪಗಳು ಕಂಡುಬರುತ್ತವೆ. ಇದರ ಪಕ್ಕದ ಮತ್ತೊಂದು ಗವಿಯು ೬.೪ ಅಡಿ ಉದ್ದ, ೫.೧ ಅಡಿ ಅಗಲ ಮತ್ತು ೪.೫ ಅಡಿ ಎತ್ತರದಿಂದ ಕೂಡಿದೆ. ಈ ಗವಿಯ ಒಳಗಡೆ ಒಂದು ಸ್ಥಾವರಲಿಂಗ ಮತ್ತು ಒಂದು ದೀಪದ ಕಲ್ಲಿದೆ. ಈ ಗವಿಯ ಪಕ್ಕದಲ್ಲಿ ಸಂಪೂರ್ಣವಾಗಿ ಹಾಳಾದ ರೀತಿಯಲ್ಲಿರುವ ಮತ್ತೊಂದು ಗವಿಯಂತಿರುವ ಸ್ಥಳವಿದ್ದು, ಅದು ಹಾಗೆಯೇ ಬೆಟ್ಟದ ಒಳಹೊಕ್ಕಿರುವಂತೆ ಕಾಣುತ್ತದೆ. ಸ್ಥಳೀಯರಿಗೆ ಇದರ ಬಗ್ಗೆ ಕೇಳಿದಾಗ ಒಮ್ಮೆ ಹುಲಿ ಕೋಣ ಜಗಳವಾಡುತ್ತ ಇಲ್ಲಿಂದ ಕಲ್ಯಾಣದ ತ್ರಿಪುರಾಂತಕ ಕೆರೆಯಲ್ಲಿ ಹೋಗಿ ತೇಲಿದವೆಂದು ಹೇಳುತ್ತಾರೆ. ಆ ಕಡೆ ಕಲ್ಯಾಣದ ಘನ ಲಿಂಗರುದ್ರಮುನಿ ಗವಿಯ ಹತ್ತಿರವೂ ಸಹ ಈ ರೀತಿಯ ಕಥೆಯ ಸ್ಥಳವೊಂದನ್ನು ಸ್ಥಳೀಯರು ತೋರಿಸುತ್ತಾರೆ. ಈ ತರಹದ ಕಥೆಗಳು ಶರಣರ ಸ್ಮಾರಕವೆನಿಸಿರುವ ಬಹಳಷ್ಟು ಕಡೆ ಪ್ರಚಲಿತದಲ್ಲಿವೆ. ಇಂತಹ ಕಥೆಗಳ ಮೂಲಕ, ಈ ಸ್ಮಾರಕಗಳು ಕಲ್ಯಾಣದೊಂದಿಗೆ ಹೊಂದಿರುವ ನಂಟಿನ ಕೊಂಡಿಯನ್ನು ಜನಪದರು ಹೀಗೆ ತಮ್ಮ ನೆನಪಿನಲ್ಲಿ ಉಳಿಸಿಕೊಂಡಿರಬಹುದಾದ ಸಾಧ್ಯತೆಗಳಿವೆ.
ಇದಲ್ಲದೆ ಇಲ್ಲಿ ಇನ್ನೊಂದು ಸ್ಥಳ ಚರಿತ್ರೆ ಕಂಡುಬರುತ್ತದೆ. ರಾಮ-ಲಕ್ಷ್ಮಣರು ವನವಾಸದಲ್ಲಿರುವಾಗ ಇಲ್ಲಿ ತಂಗಿದ್ದರೆಂಬುದು ಸ್ಥಳೀಯ ಐತಿಹ್ಯವಾಗಿದೆ. ಒಮ್ಮೆ ರಾಮನ ತಂಗಿ ಮಾಂಸ ತಿನ್ನುತ್ತಿರುವಾಗ ಕೋಪಗೊಂಡ ರಾಮ, ಲಕ್ಷ್ಮಣ ಮತ್ತು ವೀರಭದ್ರರು ಆಕೆಯನ್ನು ಬೆನ್ನಟ್ಟಿಕೊಂಡು ಹೋದರಂತೆ. ಆಕೆ ಅವರಿಂದ ತಪ್ಪಿಸಿಕೊಳ್ಳಲು ಓಡಿ, ಕೊನೆಗೆ ದಣಿದಾಗ ಅಲ್ಲಿನ ಗುಡ್ಡವೇ ಒಡೆದುಹೋಗಿ ಆಕೆಗೆ ದಾರಿ ಮಾಡಿಕೊಟ್ಟಿತು ಎನ್ನುತ್ತಾರೆ. ಆ ರೀತಿ ಒಡೆದ ಇಂಗ್ಲೀಷನ ‘ವಿ’ ಆಕಾರದ ಗುಡ್ಡವು ಅಲ್ಲಿ ಇಂದಿಗೂ ಸಹ ಕಂಡುಬರುತ್ತದೆ. ಈ ಗುಡ್ಡದ ಆ ಕಡೆ ಬಗದೂರಿ ಗ್ರಾಮದ ಬಯಲು ಪ್ರದೇಶದಲ್ಲಿ ಒಂದು ಆಲದ ಮರವಿದ್ದು, ಆಕೆ ಅಲ್ಲಿ ಲಿಂಗೈಕ್ಯಳಾದಳೆಂದು ಹೇಳಲಾಗುತ್ತದೆ. ಆದ್ದರಿಂದ ಇಂದಿಗೂ ಕೂಡ ಅಲ್ಲಿ ಮಾಂಸ, ಕುಡಿತ, ಮೈಲಿಗೆ, ಧೂಮಪಾನ ಇವುಗಳನ್ನು ಮಾಡಲು ಜನ ಹೆದರುತ್ತಾರೆ. ಈ ಪರಿಸರದಲ್ಲಿ ಎಲ್ಲಿಯೂ ಕಂಡುಬರದ ಉದ್ದನೆಯ ಮರಗಳು ದೇವಾಲಯದ ಮುಂಭಾಗದಲ್ಲಿವೆ. ವರ್ಷವಿಡಿ ಆ ಮರಗಳಿಗೆ ಕುದುರೆ ಜೇನು ಮನೆ ಮಾಡಿಕೊಂಡಿರುತ್ತವೆ. ಯಾರೇ ಇಲ್ಲಿ ದುಶ್ಚಟಗಳನ್ನು, ಅವಾಂತರಗಳನ್ನು ಮಾಡಿದರೆ ಅವರಿಗೆ ಆ ಕುದುರೆ ಜೇನುಗಳು ಶಿಕ್ಷೆ ನೀಡುತ್ತವೆ ಎಂಬ ನಂಬಿಕೆ ಜನರಲ್ಲಿದೆ (ಸಂದರ್ಶನ: ರಾಮಚಂದ್ರ ಹಂಡಗೆ; ಡಿಸೆಂಬರ್-೨೦೧೨). ಶ್ರಾವಣ ಮಾಸದಲ್ಲಿ ದಿನಾಲು ಪೂಜೆ ಮಾಡುತ್ತಾರೆ. ಪ್ರತಿವರ್ಷ ಯುಗಾದಿಯ ನಂತರ ಐದನೇ ದಿನ ಜಾತ್ರೆಯನ್ನು ಮಾಡಲಾಗುತ್ತದೆ.
ಘಾಟಹಿಪ್ಪರಗಿ ಪರಿಸರ ಶಾಕ್ತ ಆರಾಧನೆಯ ಕೇಂದ್ರವಾಗಿದ್ದರಬಹುದಾದ ಕೆಲವು ಕುರುಹುಗಳು ನಮಗೆ ನೋಡಲು ಅಲ್ಲಿ ಈಗಲೂ ಸಿಗುತ್ತವೆ. ಗವಿಯ ಮುಂಭಾಗದ ಪುಷ್ಕರಣಿ ಒಂದರಲ್ಲಿ ಸಪ್ತಮಾತೃಕೆಯರ ಶಿಲ್ಪವಿದ್ದು, ಇವು ಶಾಕ್ತದೇವತೆಯರು ಎಂಬುದನ್ನು ನಾವು ಗಮನಿಸಬಹುದು. ಅಲ್ಲಿಯ ಒಂದು ಗವಿಯಲ್ಲಿ ಮಗುವಿನ ಮೇಲೆ ಕುಳಿತ ಸ್ತ್ರೀ ದೈವವೊಂದರ ಶಿಲ್ಪ ಇದಕ್ಕೆ ಇನ್ನೊಂದು ಒಳ್ಳೆಯ ಉದಾಹರಣೆಯಾಗಿದೆ. ಆಳಂದದಲ್ಲಿ ಆದಂತೆ ಯಾವುದೋ ಕಾಲಘಟ್ಟದಲ್ಲಿ ಸ್ಥಳೀಯ ಸ್ತ್ರೀ ದೈವವನ್ನು ಅಲ್ಲಿಂದ ಪಲ್ಲಟಗೊಳಿಸಿದಂತೆ ಅನುಮಾನಗಳಿದ್ದು, ಆಕೆ ಅಲ್ಲಿಂದ ಪಕ್ಕದ ಬಗದೂರಿ ಗ್ರಾಮದ ಪ್ರದೇಶದಲ್ಲಿ ಹೋಗಿ ಉಳಿದಂತೆ ಅಥವಾ ಜೀವಬಿಟ್ಟಂತೆ ಕಾಣುತ್ತದೆ. ಅಥವಾ ಸತಿ ಹೋದ ಸ್ಥಳವೂ ಆಗಿರುವ ಸಾಧ್ಯತೆಗಳಿವೆ. ಕರ್ನಾಟಕದ ಸಂದರ್ಭವನ್ನಿಟ್ಟುಕೊಂಡು ಮಧ್ಯಕಾಲೀನ ಚರಿತ್ರೆಯನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಕರ್ನಾಟಕದ ಬಹಳಷ್ಟು ಹಳ್ಳಿಗಳಲ್ಲಿ ಗಂಡು-ಹೆಣ್ಣುಗಳ ಮಧ್ಯೆ ಹೀಗೆ ಜಗಳಗಳಾದ ಉದಾಹರಣೆಗಳು ನಮಗೆ ಕಂಡು ಬರುತ್ತವೆ. ಎಲ್ಲಮ್ಮ, ವೇಜಕ್ಕವ್ವೆ (ಪರಳಿ), ಆಳಂದಿದೇವಿ (ಆಳಂದ), ಚಳಕಾದೇವಿ (ಚಳಕಾಪುರ), ಘತ್ತರಗಿ ಭಾಗಮ್ಮ, ಜನ್ನನ ಯಶೋಧರ ಚರಿತೆಯ ಚಾಮುಂಡಿ ಇತ್ಯಾದಿ. ಇವುಗಳನ್ನು ಚಾರಿತ್ರಿಕವಾಗಿ ಗಂಡುಪಂಥ ಮತ್ತು ಹೆಣ್ಣುಪಂಥಗಳ (ಧಾಮಿಕ ಪಂಥಗಳ) ನಡುವಿನ ಜಗಳದ ಸಂಕೇತವಾಗಿಯೂ ವಿಸ್ತೃತ ಅಧ್ಯಯನ ನಡೆಸಬೇಕಾದ ಅವಶ್ಯಕತೆ ಇದೆ.
ಪ್ರಸ್ತುತ ಬಗದೂರಿ ಪ್ರದೇಶದ ಆಲದ ಮರದಡಿ ಇರುವ ಹೆಣ್ಣುದೇವರ ಗುಡಿಯನ್ನು ಸ್ಥಳೀಯರು ಎಲ್ಲಮ್ಮದೇವಿಯ ಹೆಸರಿನಲ್ಲಿ ಪೂಜಿಸುತ್ತಿದ್ದು, ಸುತ್ತಲಿನ ಜನರಿಗೆ ಅದು ಅತ್ಯಂತ ಪೂಜ್ಯನೀಯವೆನಿಸಿದೆ. ಮಕ್ಕಳಾಗದವರಿಗೆ ಮಕ್ಕಳನ್ನು ಕರುಣಿಸುವ ದೈವವಾಗಿ ಈಕೆ ಇಲ್ಲಿ ಪೂಜೆಗೊಳ್ಳುತ್ತಿದ್ದಾಳೆ. ಬಹುಶಃ ಜನಪದರ ನಂಬಿಕೆಯನ್ನು ಗುಮನಿಸುವುದಾದರೆ, 'ಬಗದೂರಿ'>'ಭಗ' ಎಂಬ ಪದಕ್ಕೆ ಸಂಬಂಧಿಸಿದ ಸ್ಥಳನಾಮವಾಗಿರಬಹುದಾದ ಸಾಧ್ಯತೆಗಳಿವೆ. ಸ್ಥಳೀಯ ಕಥೆಯಲ್ಲಿ ಬರುವ ವೀರಭದ್ರ ೧೩ನೇ ಶತಮಾನಕ್ಕೆ ಕರ್ನಾಟಕದ ಚರಿತ್ರೆಯಲ್ಲಿ ಕಾಣಿಸಿಕೊಳ್ಳುವ ಕಾರಣಕ್ಕೆ ಅವನನ್ನು ಹಾಗೂ ಸ್ಥಳೀಯ ಯಾವುದೋ ಹೆಣ್ಣಿನ ಪಾತ್ರವನ್ನು ಸೀತೆಯೊಂದಿಗೆ ಸಮೀಕರಿಸಿ ಇಲ್ಲಿ ಐತಿಹ್ಯವೊಂದನ್ನು ಹೆಣೆಯಲಾಗಿದೆ. ಅದರೊಳಗಿನ ಗುಟ್ಟನ್ನು ನಾವು ಹುಡುಕಬೇಕಿದೆ.
ಈ ಗವಿಗಳ ಪ್ರಾಂಗಣದಲ್ಲಿ ಲಿಂಗಧಾರಿಯೊಬ್ಬ ಖಡ್ಗವನ್ನು ಹಿಡಿದುಕೊಂಡಿರುವ ಶಿಲ್ಪ ನನ್ನ ಗಮನವನ್ನು ವಿಶೇಷವಾಗಿ ಸೆಳೆಯಿತು. ಇದನ್ನು ಸ್ಥಳೀಯವಾಗಿ 'ವೀರಭದ್ರ' ಶಿಲ್ಪ ಎಂದು ಕರೆಯಲಾಗುತ್ತದೆ. ಇಲ್ಲಿರುವ ಗವಿಗಳು ಶರಣರಿಗೆ ಸಂಬಂಧಿಸಿದ್ದವೆಂದು ಹೇಳಲು ಇರುವ ಏಕೈಕ ಅಧಾರವೆಂದರೆ ಈ ಶಿಲ್ಪ ಎನ್ನಬಹುದು. ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ‘ದೇವರ ಹಿಪ್ಪರಗಿ’ ಎಂಬ ಗ್ರಾಮವಿದೆ. ಅದು ಮಡಿವಾಳ ಮಾಚೀದೇವರ ಜನ್ಮಸ್ಥಳ. ಆ ಸಿಂದಗಿಯ ಹಿಪ್ಪರಗಿಗೂ, ಈ ಕಲ್ಯಾಣದ ಹತ್ತಿರವಿರುವ ಘಾಟಹಿಪ್ಪರಗಿಗೂ ಏನಾದರೂ ಸಂಬಂಧವಿರಬಹುದೇ? ಎಂಬ ಪ್ರಶ್ನೆ ಎದುರಾಯಿತು. ಅಲ್ಲದೇ, ಘಾಟಹಿಪ್ಪರಗಿಯ ಗವಿಯ ಪ್ರಾಂಗಣದ ಖಡ್ಗವನ್ನು ಹಿಡಿದ ಲಿಂಗಧಾರಿ ಶಿಲ್ಪ ಕಂಡುಬರುತ್ತದೆ. ಮಡಿವಾಳ ಮಾಚಿದೇವ ಗಣಾಚಾರಿ ಎಂಬುದನ್ನು ನಾವು ಇಲ್ಲಿ ವಿಶೇಷವಾಗಿ ಗಮನಿಸಬೇಕು. ಅವನನ್ನು ‘ಗಣಾಚಾರಿ ಮಡಿವಾಳ ಮಾಚಿದೇವ’ ಎಂದೇ ಕರೆಯಲಾಗುತ್ತದೆ. ಹಾಗಾಗಿ ಈ ಖಡ್ಗ ಮತ್ತು ಲಿಂಗಧಾರಿ ಶಿಲ್ಪ ಮಡಿವಾಳ ಮಾಚಿದೇವನದೇ ಎಂದು ಸಾಬೀತಾಗುತ್ತದೆ. ಅಲ್ಲದೆ ಅವನನ್ನು ವೀರಭದ್ರನ ಅವತಾರ ಎಂದು ಸಹ ಜನ ಗುರುತಿಸಿ ಪೂಜಿಸುತ್ತಾರೆ. ಅದರ ಪ್ರಕಾರ ಘಾಟಹಿಪ್ಪರಗಿಯ ಸ್ಥಳೀಯ ಕಥೆಯಲ್ಲಿಯು ಸಹ ವೀರಭದ್ರ, ರಾಮನ ತಂಗಿಯನ್ನು ಬೆನ್ನಟ್ಟಿರುವ ವಿವರಣೆ ಬರುತ್ತದೆ. ವೀರಭದ್ರ ಸಪ್ತಮಾತೃಕೆಯ ಶಿಲ್ಪಗಳಲ್ಲಿಯೂ ಕಂಡುಬರುವ ದೈವ. ಕೋಲಾರದ ಒಂದು ಶಾಸನದಲ್ಲಿ ಸಪ್ತಮಾತೃಕೆಯರೊಂದಿಗೆ ಅವನ ಹೆಸರಿದೆ (ಎಚ್.ಎಸ್.ಗೋಪಾಲರಾವ್, ಕಲ್ಯಾಣ ಚಾಲುಕ್ಯ ದೇವಾಲಯಗಳು: ಸಾಂಸ್ಕೃತಿಕ ಅಧ್ಯಯನ, ಪು:೧೮೦)
ರಾಮನ ತಂಗಿಯ ಪ್ರಸ್ತಾಪ, ಆಕೆ ಮಾಂಸ ತಿನ್ನುವುದು, ವೀರಭದ್ರ ರಾಮ-ಲಕ್ಷ್ಮಣರೊಂದಿಗೆ ಆಕೆಯನ್ನು ಬೆನ್ನಟ್ಟುವುದು ಇದೆಲ್ಲಾ ಒಂದಕ್ಕೊಂದು ತಾಳೆಯಾಗದ ಪುರಾಣ ಕಥೆ ಎನಿಸುತ್ತದೆ. ಇಲ್ಲಿ ಬೇರೇನೋ ನಿಜ ಚರಿತ್ರೆಯ ಕುರುಹುಗಳ ಸುಳಿವಿರಬಹುದು. ಸಪ್ತಮಾತೃಕೆಯರಿಗೆ ಪ್ರಾಣಿ ಬಲಿ ಇಲ್ಲ; ಸಪ್ತಮಾತೃಕೆಯರ ಕ್ಷೇತ್ರಪಾಲನಾದ ಭೈರವನಿಗೆ ಮಾತ್ರ ಪ್ರಾಣಿ ಬಲಿ ಇದೆ. ಮಾಚಿದೇವ ಕಲ್ಯಾಣ ಕ್ರಾಂತಿಯ ಕಾಲಕ್ಕೆ ವಚನಗಳ ಮತ್ತು ಶರಣರ ರಕ್ಷಣೆಗೆ ಟೊಂಕಕಟ್ಟಿ ನಿಂತವನು. ಅವನ ಚರಿತ್ರೆಯ ತುಂಬೆಲ್ಲಾ ಆತ ಬಿಜ್ಜಳನ ಸೈನ್ಯದೊಂದಿಗೆ ಹೋರಾಡಿರುವುದು ಕಂಡುಬರುತ್ತದೆ. ಬಹುಶಃ ಆತ ಈ ಘಾಟಿನ(ಬೆಟ್ಟದ) ಎರಡೂ ಕಡೆಯ ಬಯಲು ಪ್ರದೇಶದಲ್ಲಿ ಕ್ರಾಂತಿಯ ಕಾಲಕ್ಕೆ ಕೆಲ ಶರಣರೊಂದಿಗೆ ವಾಸ ಮಾಡಿರಬಹುದಾದ ಅಥವಾ ಅಲ್ಲಿ ಬಿಜ್ಜಳನ ಸೈನ್ಯದೊಂದಿಗೆ ಯುದ್ಧವಾಗಿರಲೂಬಹುದಾದ ಸಾಧ್ಯತೆಗಳಿವೆ. ಇದಕ್ಕೆ ಆಧಾರವೆಂಬಂತೆ ಪ್ರಸ್ತುತ ರಾಮಲಿಂಗೇಶ್ವರ ದೇವಾಲಯ ಎಂದು ಕರೆಯುವ ಹೆಸರಿನ ಗವಿಯ ಒಳಗಡೆ ಒಂದು ವೀರಗಲ್ಲು ಸಹ ಇದೆ. ಜೊತೆಗೆ ಹತ್ತಾರು ಜನ ದೋಣಿಯಲ್ಲಿ ಕುಳಿತು ಸ್ವರ್ಗಕ್ಕೆ ಹೋಗುತ್ತಿರುವ ಶಿಲ್ಪವಿದೆ. ಬಹುಶಃ ಅವರೆಲ್ಲರೂ ಶರಣರಾಗಿದ್ದು, ಯುದ್ದದಲ್ಲಿ ವೀರಮರಣ ಹೊಂದಿದವರಾಗಿರಬೇಕು?. ಅಲ್ಲದೇ ಬೆಟ್ಟದ ಆ ಕಡೆಯ ಗ್ರಾಮದ ಪರಿಸರದಲ್ಲಿರುವ ಆಲದ ಮರದಲ್ಲಿ ಲಿಂಗೈಕ್ಯಳಾದಳೆಂಬ ಸ್ತ್ರೀಯ ಕಥೆಯು ಕೂಡ ಇದನ್ನು ಪುಷ್ಟಿಕರಿಸುತ್ತದೆ.
ಇದಕ್ಕೆ ಸಾಕ್ಷಿಯಂಬಂತೆ ಇಲ್ಲಿಯ ಒಂದು ಗವಿಗೆ ʼಎಲ್ಲಮ್ಮನ ಗವಿʼ ಎಂಬ ಹೆಸರಿದೆ. ಇದಕ್ಕೆ ಮತ್ತಷ್ಟು ಆಧಾರ ಒದಗಿಸುವುದಾದರೆ ದೇವರ ಹಿಪ್ಪರಗಿಯಲ್ಲಿ ಯುಗಾದಿ ಮುಗಿದ ೮ನೇ ದಿನಕ್ಕೆ ಮಾಚಿದೇವರ ರಥೋತ್ಸವ ನಡೆದರೆ, ಇಲ್ಲಿ ಘಾಟಹಿಪ್ಪರಗಿಯಲ್ಲಿ ಯುಗಾದಿ ಮುಗಿದ ೫ನೇ ದಿನಕ್ಕೆ ಜಾತ್ರೆ ಮಾಡಲಾಗುತ್ತದೆ. ಮೇಲಾಗಿ ಅವನಿಗೆ ಸಂಬಂಧಿಸಿದ ಎರಡು ಗ್ರಾಮಗಳ ಹೆಸರಿನಲ್ಲಿ ‘ಹಿಪ್ಪರಗಿ’ ಎಂಬುದನ್ನು ನಾವು ವಿಶೇಷವಾಗಿ ಗಮನಿಸಬೇಕು. ಅವನನ್ನು ದೇವರಾಗಿ ಪೂಜಿಸುವ ಜನಪದರು ಅವನ ಜನ್ಮಸ್ಥಳಕ್ಕೆ ‘ದೇವರ ಹಿಪ್ಪರಗಿ’ ಎಂದು ಕರೆದರೆ, ಇಲ್ಲಿಯ ಗ್ರಾಮ, ಬೆಟ್ಟದ ಮೇಲಿರುವುದರಿಂದ ಅದಕ್ಕೆ ‘ಘಾಟಹಿಪ್ಪರಗಿ’ ಎಂದು ಕರೆದಿದ್ದಾರೆ ಎನಿಸುತ್ತದೆ. ಹಿಂದಿ ಭಾಷೆಯಲ್ಲಿ ‘ಘಾಟ’ ಎಂದರೆ ಬೆಟ್ಟ, ಗುಡ್ಡ ಎಂಬ ಅರ್ಥಗಳಿವೆ. ಮಾಚಿದೇವನಿಗೆ ‘ವೀರಗಂಟೆ ಮಡಿವಾಳೇಶ್ವರ’ ಎಂದು ಕರೆಯುವುದು ಕೂಡ ವಿಶೇಷ.
ಈ ಮೇಲೆ ವಿವರಿಸಿದ ಬಹಳಷ್ಟು ಅಂಶಗಳ ನಡುವೆ ಸಾಮ್ಯತೆಗಳಿರುವುದರಿಂದ ಘಾಟ ಹಿಪ್ಪರಗಿಯ ಪರಿಸರದಲ್ಲಿರುವ ಗವಿಗಳು ೧೨ನೇ ಶತಮಾನದ ಶರಣರಿಗೆ ಸಂಬಂಧಿಸಿದ್ದವೆಂದು ಹೇಳಬಹುದು. ಆನಂತರದ ಕಾಲಮಾನದಲ್ಲಿ ಅದನ್ನು ಜನಪದರು ರಾಮಲಿಂಗೇಶ್ವರ ದೇವಾಲಯವೆಂದು ಕರೆದಿರಬಹುದು. ವೀರಭದ್ರ ಮತ್ತು ರಾಮನ ಕಾಲಮಾನ ಬೇರೆ ಬೇರೆಯಾಗಿರುವ ಕಾರಣಕ್ಕೆ, ಅವರಿಬ್ಬರು ಜೊತೆಗೆ ಇದ್ದರೂ ಎಂಬ ಸ್ಥಳೀಯ ಐತಿಹ್ಯವನ್ನು ನಂಬಲು ಕಷ್ಟಸಾಧ್ಯ ಎಂಬುದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕಿದೆ.
ಈ ಬೆಟ್ಟದ ಇನ್ನೊಂದು ಕಡೆ ಇನ್ನೂ ಮೂರು ಗವಿಗಳಿವೆ. ಒಂದೇ ಸಾಲಿನಲ್ಲಿರುವ ಮೂರು ಗವಿಗಳ ಮುಖವು ಗ್ರಾಮದ ಕಡೆಗಿವೆ. ಪ್ರತಿಯೊಂದು ಗವಿಯು ತಲಬಾಗಿಲನ್ನು ಹೊಂದಿದ್ದು, ಒಳಗಡೆ ಎರಡು-ಮೂರು ಗವಿಗಳಿವೆ. ಬಹುದೊಡ್ಡ ಕುಟುಂಬವೇ ವಾಸ ಮಾಡುವಷ್ಟು ಅವು ದೊಡ್ಡದಾಗಿವೆ. ಆ ಸಾಲಿನ ಮೊದಲನೆಯ ಗವಿಯ ಗರ್ಭಗೃಹ ೮.೯ ಅಡಿ ಉದ್ದ, ೬.೭ ಅಡಿ ಅಗಲ ಮತ್ತು ೫.೩ ಅಡಿ ಎತ್ತರದಿಂದ ಕೂಡಿದೆ. ಗರ್ಭಗೃಹದಲ್ಲಿ ಒಂದು ಸ್ಥಾವರಲಿಂಗವಿದೆ. ಈ ಗವಿಯ ಪ್ರಾಂಗಣವು ೧೨.೨ ಅಡಿ ಉದ್ದ, ೨೦.೧ ಅಡಿ ಅಗಲ ಮತ್ತು ೫.೮ ಅಡಿ ಎತ್ತರದಿಂದ ಕೂಡಿದೆ. ಅದೇ ಸಾಲಿನ ಮತ್ತೊಂದು ಗವಿಯು ೬.೭ ಅಡಿ ಉದ್ದ, ೫.೬ ಅಡಿ ಅಗಲ ಮತ್ತು ೫.೨ ಅಡಿ ಎತ್ತರದಿಂದ ಕೂಡಿದೆ. ಈ ಗವಿಯ ಪ್ರಾಂಗಣದ ಮೂಲೆಯಲ್ಲಿ ಒಂದು ಕಟ್ಟೆಯಿದ್ದು, ಅದು ೫.೧ ಅಡಿ ಉದ್ದ ಮತ್ತು ೨.೭ ಅಡಿ ಅಗಲವಿದೆ. ಬಹುಶಃ ಇದನ್ನು ಮಲಗಲು ಬಳಸುತ್ತಿದ್ದರೇ ಅಥವಾ ಅಡುಗೆ ಮಾಡಲು ಬಳಸುತ್ತಿದ್ದರೆ ಎಂಬುದು ತಿಳಿದು ಬಂದಿಲ್ಲ. ಈ ಗವಿಯ ಒಂದು ಒಳ ಗವಿಯಲ್ಲಿ ಸ್ತ್ರೀ ಶಿಲ್ಪವಿದ್ದು, ಅದನ್ನು ‘ತುಕಬಾಯಿ ಶಿಲ್ಪ’ ಎಂದು ಕರೆಯಲಾಗುತ್ತದೆ. ಶಿಲ್ಪದ ತುಂಬ ಹಸಿರು ಸೀರೆಯನ್ನು ಸುತ್ತಲಾಗಿದೆ. ಅದೇ ದಿಣ್ಣೆಯ ಇನ್ನೊಂದು ಗವಿಯು ೧೩ ಅಡಿ ಉದ್ದ, ೧೩.೭ ಅಡಿ ಅಗಲ ಮತ್ತು ೫.೮ ಅಡಿ ಎತ್ತರದಿಂದ ಕೂಡಿದೆ. ಗರ್ಭಗೃಹದಲ್ಲಿ ಹಾಳಾದ ಸ್ಥಾವರಲಿಂಗವಿದ್ದು, ಅದರ ಮೇಲೆ ಶಿವ-ಪಾರ್ವತಿಯರ ಮೂರ್ತಿಯಿದೆ. ಗವಿಯ ಎದುರಿಗೊಂದು ಹೊರಗಡೆ ಬಯಲು ಪ್ರದೇಶದಲ್ಲಿ ಒಂದು ಸ್ಥಾವರಲಿಂಗವಿದೆ. ಈ ಗವಿಯ ತಲಬಾಗಿಲು ೩ ಅಡಿ ಎತ್ತರ, ೨ ಅಡಿ ಅಗಲದಿಂದ ಕೂಡಿದೆ.
ಆಕರಗಳು:
1. ಲೇಖಕರ ಕ್ಷೇತ್ರಕಾರ್ಯ, ೨೦೧೨ ಹಾಗೂ ೩೧.೦೭.೨೦೨೪.
2. ಸಂದರ್ಶನ - ರಾಮಚಂದ್ರ ಹಂಡಗೆ, ಘಾಟಹಿಪ್ಪರಗಿ ನಿವಾಸಿ ಮತ್ತು ದೇವಾಲಯದ ಪೂಜಾರಿ, ಡಿಸೆಂಬರ್-೨೦೧೨.
-ಡಾ. ವೀರಶೆಟ್ಟಿ ಬಿ. ಗಾರಂಪಳ್ಳಿ