ಬಾಲಸಂಗಣ್ಣ

ಕಂಗಳು ನುಂಗಿದ ಬಯಲವ,
ಕರ್ಣ ಅವಗವಿಸಿದ ನಾದವ,
ನಾಸಿಕದಲ್ಲಿ ನಷ್ಟವಾದ ಸುಗಂಧವ,
ಜಿಹ್ವೆಯ ಕೊನೆಯಲ್ಲಿ ಅಳಿದ ರಸಾನ್ನವ,
ಮುಟ್ಟಿನ ದೆಸೆಯಲ್ಲಿ ನಿಶ್ಚಯವಾದ ಮೃದು ಕಠಿಣಾದಿ, ಇಂತಿವೆಲ್ಲವೂ ನಿಜನೆಲೆಯಲ್ಲಿ ಅಚ್ಚೊತ್ತಿದಂತೆ ಐಕ್ಯವಾದ ಮತ್ತೆ
ಅರ್ಪಿತವೆಂಬುದು ಹಿಂಚೋ, ಮುಂಚೋ ಎಂಬುದ ತಿಳಿದು, ಆ ಉಳುಮೆಯಲ್ಲಿ ಕಲೆದೋರದೆ ಅರ್ಪಿತ ನಷ್ಟವಾದುದು.
ಕಮಠೇಶ್ವರಲಿಂಗವ ಕೂಡಿ ಕೂಡಿದೆನೆಂದು ಎರಡಳಿದ, ಪ್ರಾಣಲಿಂಗ ಲಿಂಗಪ್ರಾಣವೆಂಬ ಸಂದೇಹವಳಿದ ಶರಣ.
*ಬಾಲಸಂಗಣ್ಣ*** *ವಚನ ಅನುಸಂಧಾನ*
ಶರಣ ಎನ್ನುವ ಪದವು; ಶರಣತತ್ವ ಸಿದ್ಧಾಂತದ ಅರಿವು ಆಚರಣೆಯ ನಿಷ್ಪತ್ತಿ ಸ್ಥಿತಿಯನ್ನ ಸಾಧಿಸಿ, ಪಾರಮಾರ್ಥಿಕ ಹಾಗೂ ಲೌಕಿಕದ ಬದುಕಿನಲ್ಲಿ ಸದಾ ಸನ್ನದ್ಧತೆಯ ಎಚ್ಚರದ ಮನಸ್ಥಿತಿಯನ್ನು ಹೊಂದಿರುವಂಥಾ ಸದ್ಗುಣ ಶಕ್ತಿವಂತ ಮಾನವ ಎನ್ನುವುದನ್ನ ಈ ಶರಣ ಪದವು ದ್ಯೋತಿಸುತ್ತದೆ. ಲಿಂಗಾಯತದಲ್ಲಿ ಸಾಧನೆ ಮಾಡಿ ಈ ಪದವಿಯ ಪಡೆದವರಿಗೆ ಶರಣ ಎಂಬ ಅತ್ಯುನ್ನತ ಘನತೆಯ ನ್ನು ಹೊಂದಿದ ಸ್ಥಾನಮಾನ ದಕ್ಕುತ್ತದೆ. ಶರಣರ ಬಹು ಮುಖ್ಯವಾದ ತತ್ವ ಷಟಸ್ಥಳ. ಭಕ್ತನ ಅಂಗ ದಲ್ಲಿದು; ಭಕ್ತಸ್ಥಲದಿಂದ ಮಹೇಶಸ್ಥಲ, ಪ್ರಸಾದಿ ಸ್ಥಲ, ಪ್ರಾಣಲಿಂಗಿಸ್ಥಲವನ್ನು ದಾಟಿ ನಂತರದಲ್ಲಿ ಇರುವುದೇ #ಶರಣಸ್ಥಲವಾಗಿದೆ. ಈ ಷಟಸ್ಥಳದ ಸಾಧನೆಯನ್ನು ಅಂತರಂಗದಲ್ಲಿ ಊರ್ಧ್ವಮುಖಿ ಯಾಗಿ ತನುಮನಭಾವವನ್ನು ಪರಿಶುದ್ಧವಾಗಿಸಿ ಒಂದೊಂದು ಸ್ಥಲವನ್ನು ಸಾಧನೆ ಮಾಡಿ ಸಾಧಿಸಿ ಶರಣಸ್ಥಲ ತಲುಪಿದ ಸಾಧಕನಿಗೆ ಐಕ್ಯಸ್ಥಲವನ್ನ ಸಾಧಿಸಿದರೂ ಶರಣಸ್ಥಲದ ನೆಲೆಯಲ್ಲೇ ಆತನು ಎಚ್ಚರದ ಆ ಚಾಲಕನ(ಶರಣ) ಸ್ಥಾನದಲ್ಲಿದ್ದು ಕೊಂಡೇ ಕಾಯದ ಮತ್ತು ಕಾಯಕದ ಕಾರ್ಯವ ನಿರ್ವಹಿಸಬೇಕಾದ ಲೌಕಿಕದ ಮಣಿಹವಿರುತ್ತದೆ. ಇಂಥ ಗುರುತರವಾದ ಹೊಣೆಗಾರಿಕೆ ನೆಲೆಯಲ್ಲಿ ಇರುವ ಶರಣನ ಬಗ್ಗೆ ಅನೇಕ ವಚನಕಾರ ಶರಣ ರು ತಮ್ಮ ವಚನಗಳನ್ನು ರಚಿಸಿದ್ದಾರೆ. ಪ್ರಸ್ತುತ ಈ ಮೇಲಿನ ವಚನದಲ್ಲಿ ಬಾಲಸಂಗಣ್ಣ ಶರಣರು ಕೂಡಾ ಶರಣನ ಕುರಿತಂತೆ ತಮ್ಮ ಈ ಮೇಲಿನ ವಚನವನ್ನು ರಚಿಸಿದ್ದಾರೆ. ಅದರಲ್ಲಿರುವ ಸೂಕ್ಷ್ಮ ಒಳನೋಟದ ವಿಶೇಷಗಳನ್ನು ಇಲ್ಲಿ ಪರಿಶೀಲಿಸಿ ನೋಡೋಣ.
*#ಕಂಗಳು ನುಂಗಿದ ಬಯಲವ,*
*ಕರ್ಣ ಅವಗವಿಸಿದ ನಾದವ,*
*ನಾಸಿಕದಲ್ಲಿ ನಷ್ಟವಾದ ಸುಗಂಧವ,*
*ಜಿಹ್ವೆಯ ಕೊನೆಯಲ್ಲಿ ಅಳಿದ ರಸಾನ್ನವ,*
*ಮುಟ್ಟಿನ ದೆಸೆಯಲ್ಲಿ ನಿಶ್ಚಯವಾದ ಮೃದು ಕಠಿಣಾದಿ,* *ಇಂತಿವೆಲ್ಲವೂ ನಿಜನೆಲೆಯಲ್ಲಿ ಅಚ್ಚೊತ್ತಿದಂತೆ ಐಕ್ಯವಾದ* *ಮತ್ತೆ*
*ಅರ್ಪಿತವೆಂಬುದು ಹಿಂಚೋ,* *ಮುಂಚೋ ಎಂಬುದ ತಿಳಿದು,* *ಆ ಉಳುಮೆಯಲ್ಲಿ ಕಲೆದೋರದೆ ಅರ್ಪಿತ #ನಷ್ಟವಾದುದು.*
ಇಲ್ಲಿ ಎರಡು ಸಂಗತಿಗಳು ಒಂದಾಗಿ ಬಿಚ್ಚಿ ಬೇರಾ ಗದಂತೆ ಬೆರೆತುಕೊಂಡ ಸ್ಥಿತಿಯನ್ನು ಕುರಿತಾಗಿದೆ. ಐದೂ ಪಂಚತತ್ವಗಳು ತಂತಮ್ಮ ಮೂಲಭೂತ ಗುಣಧರ್ಮದಲ್ಲಿ ಎಷ್ಟೊಂದು ಅನ್ಯೋನ್ಯತೆಯ ಸಾಧಿಸಿವೆ ಅನ್ನುವುದನ್ನು ವಚನಕಾರರು ಪ್ರಸ್ತುತ
ವಚನದ ಈ ಸಾಲುಗಳಲ್ಲಿ ಇಂಬಿಟ್ಟಿದ್ದಾರೆ. ಕಣ್ಣು ನೋಡಿದಾಗ ಅವು ಬಯಲನ್ನು ನುಂಗಿರುತ್ತವೆ. ಕಿವಿ ಕೇಳಿದ ನಾದವನ್ನು ತುಂಬಿಕೊಂಡಿರುವವು.
ಮೂಗು ಮೂಸಿದ ಸುಗಂಧವನ್ನು ಹಿಡಿದಿಟ್ಟು ಕೊಂಡಿರುತ್ತವೆ. ನಾಲಿಗೆ ಸ್ವೀಕರಿಸಿದ ರಸಾನ್ನದ ಸ್ವಾದವನ್ನು ನಾಲಿಗೆ ತುದಿಯಲ್ಲಿ ಹಿಡಿದಿಟ್ಟುಕೊಂ ಡಿರುತ್ತದೆ. ಆಶ್ಚರ್ಯವೆಂದರೆ ಒಂದರ ಕಾರ್ಯ ವನ್ನು ಮತ್ತೊಂದು ಮಾಡುವುದಿಲ್ಲ. ಹಾಗೆಯೇ ಮುಟ್ಟಿನ ನಂತರದ ನಿಶ್ಚಿತ ಶುಕ್ಲ ಶೋಣಿತವನ್ನು ಹಿಡಿದುಕೊಂಡ ರೀತಿಯಲ್ಲಿ; ಈ ಕಣ್ಣು ಬಯಲು, ಕಿವಿ ನಾದ, ಮೂಗು ಗಂಧ, ನಾಲಿಗೆ ರುಚಿ, ಗರ್ಭ ಚೀಲ ಶುಕ್ಲ ಶೋಣಿತ ಹೀಗೆ ಈ ದ್ವಂದ್ವ ಸಂಗತಿಗ ಳಲ್ಲಿ ಯಾವುದು ಹಿಂದೆ ಮತ್ತು ಯಾವುದ್ಮುಂದೆ ಎನ್ನುವುದು ಅಚ್ಚೋತ್ತಿದಂತೆ ಆಗಿರುತ್ತದೆ. ಇಂಥ ನೆಲೆಯೊಳಗೆ ಸಂಭವಿಸಿದ ಕ್ರಿಯೆಯಲ್ಲಿ ಅರ್ಪಿತ ನಷ್ಟವಾಗಿರುತ್ತದೆ! ಎನ್ನುವುದೇ ಮೇಲೆ ಉಲ್ಲೇಖ ಗೊಂಡ ವಚನದ ಸಾಲಿನ ವಿಚಾರವಾಗಿದೆ.
*#ಕಮಠೇಶ್ವರಲಿಂಗವ ಕೂಡಿ ಕೂಡಿದೆನೆಂದು ಎರಡಳಿದ,* *ಪ್ರಾಣಲಿಂಗ ಲಿಂಗಪ್ರಾಣವೆಂಬ ಸಂದೇಹವಳಿದ #ಶರಣ.*
ವಚನದ ಮೊದಲ ಭಾಗದಲ್ಲಿ ಪಂಚ ಜ್ಞಾನೇಂದ್ರಿ ಯಗಳ ಗುಣ ಧರ್ಮದ ಕ್ರಿಯಾತ್ಮಕ ಪರಿಣಾಮ ವನ್ನು ಬಿಚ್ಚಿ ಬೇರೆಮಾಡಿ ತೋರಿಸಲು ಅದುಹ್ಯಾ ಗೆ ಸಾಧ್ಯವಿಲ್ಲವೋ ಅದರಂತೆಯೇ ಶರಣನಾದ ವನು ಕಮಠೇಶ್ವರಲಿಂಗವನ್ನ ಕೂಡಿ ಎರಡಳಿದು ಒಂದಾದ ಮೇಲೆ ಅಲ್ಲಿ ಮತ್ತೆ ಪ್ರಾಣಲಿಂಗ಼ ಇಲ್ಲವೆ ಲಿಂಗಪ್ರಾಣ ಎನ್ನುವಲ್ಲಿ ಈ ಪ್ರಾಣ ಮತ್ತು ಲಿಂಗ ಇವುಗಳಲ್ಲಿ ಯಾವುದು ಹಿಂದು ಯಾವುದು ಮುಂದು ಎಂದೆನ್ನುವ ದ್ವಂದ್ವವನ್ನು ಅಳಿದವನೇ ನಿಜ ಶರಣನು ಎನ್ನುವುದನ್ನು ಇಲ್ಲಿ ವಚನಕಾರ ಬಾಲಸಂಗಣ್ಣ ಅತ್ಯಂತ ಸುಂದರವಾದ ರೂಪಕ ಗಳ ಮೂಲಕ ಪ್ರಸ್ತುತ ವಚನದಲ್ಲಿ ಇಂಬಿಟ್ಟು ಕೊಟ್ಟಿರುತ್ತಾರೆ. ತನ್ಮೂಲಕ ಶರಣ ಬೇರೆಯಲ್ಲ ಶಿವ ಬೇರೆಯಲ್ಲ ಎನ್ನುವ ಮೂಲಕ ಶರಣನ ಮಹೋನ್ನತವಾದ ಘನತೆಯನ್ನು ಇಲ್ಲಿ ನಿಜಕ್ಕೂ ಉನ್ನತ ಮಟ್ಟದಲ್ಲಿಟ್ಟೂ ಎತ್ತಿ ತೋರಿಸಿದ್ದಾರೆ.
*ಅಳಗುಂಡಿ ಅಂದಾನಯ್ಯ*