ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ನೆನವಿನೊಂದಿಗೆ.

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ನೆನವಿನೊಂದಿಗೆ.
ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ನೆನವಿನೊಂದಿಗೆ.

17.09.2025ರಂದು ಹೈದ್ರಾಬಾದ್ ಕರ್ನಾಟಕದ ವಿಮೋಚನೆಯ ಧ್ವಜಾರೋಹಣದ ಸಂಭ್ರಮದಲ್ಲಿ...

  ಅಂದಿನ ಹೈ.ಕ. ಭಾಗದ ಜಲಿಯನ್ ವಾಲಾಬಾಗ್ - ಗೋರಟಾ ದುರಂತ...

-ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ನೆನವಿನೊಂದಿಗೆ.

 ಹೈದ್ರಾಬಾದ್ ಕರ್ನಾಟಕದ ಬಿಸಿಲೂರುಗಳಲ್ಲಿರುವ ನಮಗೆಲ್ಲಾ ವರ್ಷದಲ್ಲಿ ಎರಡೆರಡು ದಿವಸ ಸ್ವಾತಂತ್ರೊತ್ಸವಗಳ ಸಂಭ್ರಮಗಳು. ಹೌದು, ಇಡೀ ದೇಶದಲ್ಲಿ ಆಗಸ್ಟ್ 15ರಂದು ಸ್ವಾತಂತ್ರ ದಿನಾಚರಣೆಯ ಸಂಭ್ರಮಾಚರಣೆಯನ್ನಾಚರಿಸಿದರೆ ಹೈ.ಕ ಭಾಗದಲ್ಲಿ ಇದರ ಜೊತೆಗೆ ಸೆಪ್ಟೆಂಬರ್ 17ರಂದು ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಈ ಭಾಗದ ಸ್ವಾತಂತ್ರೊತ್ಸವದ ಸಂಭ್ರಮವೆಂದು ಅಭಿಮಾನದಿಂದ ಆಚರಿಸುವ ರೂಢಿಯಿದೆ.

 ತಮಗೆಲ್ಲ ತಿಳಿದಿರಬಹುದಾದ ವಿಷಯವಿದು, ಭಾರತಾಂಬೆಯು ಭ್ರಿಟೀಷರಿಂದ ಮುಕ್ತವಾಗಿ ಸ್ವತಂತ್ರ ಪಡೆದುಕೊಂಡ ಅತ್ಯಂತ ಶುಭ ಘಳಿಗೆಯಲ್ಲಿ ಕಾಶ್ಮೀರ ಮತ್ತು ಹೈದ್ರಾಬಾದ್ ಕರ್ನಾಟಕದಂತಹ ಹಿಂದುಳಿದ ಭಾಗಗಳಲ್ಲಿ ರಾಜಪ್ರಭುತ್ವ ತನ್ನ ಹಿಡಿತದ ಸಂಕೋಲೆಯಿಂದ ಮುಕ್ತಗೊಳಿಸಲು ಹಠ ಹಿಡಿದಾಗ ದೇಶದ ಅಂದಿನ ನೇತಾರರು ಕಾಶ್ಮೀರ ರಾಜನ ಹಾಗೂ ಹೈದ್ರಾಬಾದ್ ನಿಜಾಮನ ಈ ಭಾಗಗಳನ್ನು ಭಾರತಾಂಬೆಯ ಮಡಿಲಿನೊಳಗೆ ಒಕ್ಕೂಟದಲ್ಲಿ ಸೇರಿಸಿಕೊಳ್ಳಲು ಹಲವಾರು ಆಮಿಷಗಳನ್ನೊಡ್ಡಿ ಮನ ಒಲಿಸಿದಾಗ ಹಾಗೂ ಹೀಗೂ ಕಾಶ್ಮೀರ ರಾಜನು ದೇಶದ ಇತರ ಭಾಗಗಳಿಗಿಂತ ತನ್ನ ಕಾಶ್ಮೀರಕ್ಕೆ ಹಲವು ರೀತಿಯ ಹೆಚ್ಚುವರಿ ಸೌಲಬ್ಯ, ಮೀಸಲಾತಿ ನೀಡಿದ್ದಲ್ಲಿ ಮಾತ್ರ ಭಾರತದ ಒಕ್ಕೂಟದಲ್ಲಿ ಸೇರಲು ಒಪ್ಪಿಕೊಳ್ಳುವೆನೆಂಬ ಷರತ್ತಿನೊಂದಿಗೆ ತಲೆದೂಗಿದಾಗ ಅಂದಿನ ನೇತಾರರು ಸಹ ತಲೆಯಾಡಿಸಿದರು, ಆದರೆ ನಮ್ಮ ನಿಜಾಮನು ತನ್ನ ಹಠಮಾರಿತನದಿಂದಾಗಿ ಒಕ್ಕೂಟದಲ್ಲಿ ಸೇರಲು ಒಪ್ಪದ ಕಾರಣ ಸಂಧಾನದ ವೈಫಲ್ಯತೆಯ ನಂತರ ಸೈನಿಕ ಕಾರ್ಯಾಚರಣೆ ಮಾಡುವ ಮೂಲಕ ಹೈದ್ರಾಬಾದ್ ಕರ್ನಾಟಕದ ಭಾಗವನ್ನು 17ನೇ ಸೆಪ್ಟೆಂಬರ್-1948ರಂದು ಭಾರತದ ಒಕ್ಕೂಟದಲ್ಲಿ ಸೇರಿಸಿಕೊಂಡಿರುವುದೊAದು ಈ ಭಾಗದವರ ಸ್ವಾತಂತ್ರ್ಯ ಹೋರಾಟದ ಬಹುದೊಡ್ಡ ಕಹಾನಿ. 

 ಇದರ ಹಿಂದೆ ಒಂದು ದೊಡ್ಡ ಚರಿತ್ರೆಯೇ ಇದೆ ಎಂಬುದು ನಾನು ಚಿಕ್ಕವನಿದ್ದಾಗ ನನ್ನಮ್ಮ ಪಠಾಣರ ದಾಳಿ, ರಜಾಕಾರರ ದಾಳಿ ಎಂಬ ಕುರಿತು ತಾವಿರುವ ತುಂಗಭದ್ರ ಜಲಾಶಯದಲ್ಲಿ ಮುಳುಗಡೆಯಾಗಿರುವ ನಾರಾಯಣದೇವರ ಕೆರೆ (ನಾಣಿಕೇರೆ)ಯಲ್ಲಿ ತಮ್ಮ ಮತ್ತು ಸುತ್ತಲಿನ ಮನೆಯವರ ಮೇಲೆ, ಜನರ ಮೇಲೆ ಮಹಿಳಿಯರ ಮೇಲೆ ನಡೆಸಿದ ಹತ್ಯಾಕಾಂಡದ ಕುರಿತು ಮನೆಗಳೊಳಗೆ ಬೆಂಕಿ ಹಾಕುವ ಕುರಿತು, ಮನೆಯ ಯಜಮಾನನ್ನು ಹಿಂಸಿಸುವ ಕುರಿತು, ಮಹಿಳೆಯರನ್ನು ಸತಾಯಿಸುವ ಕುರಿತು... ಹೀಗೆ ನಡೆದಿರುವ ಹಿಂಸಾಕಾಂಡದ ವಿವರಗಳನ್ನು ಕತೆ ಕಟ್ಟಿ ಹೇಳುತ್ತಿರುವಾಗ ನನಗೆ ಬಾಲ್ಯದ ವಯಸ್ಸು ಆಗ ಸರಿಯಾದ ಚಿತ್ರಣ ಸಿಕ್ಕಿರಲಿಲ್ಲ. ಒಂದು ಕತೆಯನ್ನಾಗಿ ಮಾತ್ರ ಗ್ರಹಿಸಿದ್ದೆ. ನಂತರ ಹೈದ್ರಾಬಾದ್ ನಿಜಾಮ ವ್ಯವಸ್ಥೆಯ ಕುರಿತು ತಿಳಿದಾಗ ನಮ್ಮಮ್ಮ ಹೇಳಿದ್ದು ಕೇವಲ ಕತೆಯಲ್ಲಿ ಅವರು ಅನುಭವಿಸಿದ್ದು ನಿಜದ ನೋವೆಂದು.  

 ಅಂದಿನ ಹೈದ್ರಾಬಾದ್ ಸಂಸ್ಥಾನದ ವ್ಯಾಪ್ತಿಯಲ್ಲಿ ನಡೆದ ಕಲಹಗಳು, ಹಿಂದೂ ಮುಸ್ಲಿಮ್ ವೈಮನಸ್ಸುಗಳು, ಸಣ್ಣಪುಟ್ಟ ಕದಗಳು, ವಿಶೇಷವಾಗಿ ಪಠಾಣರ ದಬ್ಬಾಳಿಕೆಗಳು ಅವರು ಹಿಂದೂಗಳ ಕುಟುಂಬದವರನ್ನು ಸಂಬಂಧವಿರಲಿ ಇಲ್ಲದಿರಲಿ ದ್ವೇಷಿಸುವುದು, ಹಿಂಸಿಸುವುದು, ಹತ್ಯಗೈಯುವುದು ಸಾಗಿಯೇ ಇತ್ತು. ಇವುಗಳ ಮಧ್ಯೆಯೂ ಹಿಂದೂ ಮುಸ್ಲಿಮ್‌ರಲ್ಲಿ ಸಾಮರಸ್ಯ, ಭಾವೈಕ್ಯತೆಗಳನ್ನು, ಮುಕ್ತವಾದ ಆಪ್ತ ಪ್ರೀತಿ ವಿಶ್ವಾಸವನ್ನು ಕಾಣುವಂಥ ಕಂಡಿದ್ದ ಪ್ರದೇಶವಿದು. ಮುಸ್ಲಿಮ್ ಹಬ್ಬಗಳಲ್ಲಿ ಕಾಶೀಮ್ ಸಾಬರ ಮನೆಯಲ್ಲಿ ತಯಾರಿಸುವ ಸುರಖುಂಬಾ, ಬಿರಿಯಾನಿಯ ಮೇಲೆ ಆತನ ಹಿಂದು ಗೆಳೆಯ ಕಾಶೀನಾಥನ ಹೆಸರಿರುತ್ತಿತ್ತು ಹಾಗೆಯೇ ಕಾಶೀನಾಥನ ಮನೆಯಲ್ಲಿ ಯುಗಾದಿಯ ದಿನ ತಯಾರಿಸುವ ಹೋಳಿಗೆ, ಬೇವು-ಬೆಲ್ಲದ ಮೇಲೆ ಗೆಳೆಯ ಕಾಶೀಮ್ ಸಾಬರ ಹೆಸರಿರುತ್ತಿತ್ತು. ಈ ಭಾಗದಲ್ಲಿ ಹಿಂದೂ ಮುಸ್ಲಿಂರ ಹಬ್ಬಗಳಲ್ಲಿ ಪರಸ್ಪರರು ಸಂಬ್ರಮವನ್ನು ಹಂಚಿಕೊಳ್ಳುವ ಸಂಪ್ರದಾಯ ಈಗಲೂ ಇದೆ. 

 ಇವೆಲ್ಲವನ್ನೂ ಮೀರಿದ ಒಂದಿಷ್ಟು ದುರಂತಗಳೂ ಇಲ್ಲಿ ಕೆಲವು ವಿಷ ಘಳಿಗೆಗಳಲ್ಲಿ ಘಟಿಸಿಬಿಡುತ್ತವೆ. ಅಂಥ ವಿಷ ಘಳಿಗೆಯ ಕುರಿತು ನಾನೀಗ ನಿಮಗೆ ಹೇಳ ಹೊರಟಿರುವುದು. ಈ ವಿಷ ಘಳಿಗೆಯೇ ಅಂದಿನ ಸ್ವಾತಂತ್ರ ಸಂಗ್ರಾಮದಲ್ಲಿ ಜಲಿಯನ್ ವಾಲಾಬಾಗ್‌ದಲ್ಲಿ ಘಟಿಸಿದ ದುರಂತವನ್ನು ನೆನಪಿಸುವಂಥದ್ದೊಂದು. ಹೇಗೆ ಜಲಿಯನ್ ವಾಲಾಬಾಗ್ ದುರಂತವು ಭಾರತ ಸ್ವಾತಂತ್ರö್ಯ ಪಡೆಯುವುದಕ್ಕೆ ನಾಂದಿಯಾಯಿತೋ ಹಾಗೆಯೇ ಅಂದಿನ ಇದೇ ಹೈದ್ರಾಬಾದ್ ಕರ್ನಾಟಕ ಭಾಗದ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ “ಗೊರಟಾ” ಗ್ರಾಮದಲ್ಲಿ ಘಟಿಸಿದ್ದ ದುರಂತವೊಂದು ಈಗ ಇತಿಹಾಸ. ಒಂದರ್ಥದಲ್ಲಿ ಈ ಇತಿಹಾಸವೇ ಹೈದ್ರಾಬಾದ್ ಕರ್ನಾಟಕದ ಈ ಭಾಗವನ್ನು ನಿಜಾಮ ಸರ್ಕಾರದ ಮುಷ್ಠಿಯಿಂದ ಮುಕ್ತಿ ಪಡೆಯಬೇಕೆಂಬ ಹಂಬಲಕ್ಕೆ ಕಾರಣವಾಗಿರಬಹುದೆಂದೆನಿಸುತ್ತದೆ. ಆ ಘಟನೆಯ ವಿವರ ಹೀಗಿದೆ. 

 ಭಾರತಕ್ಕೆ ಸ್ವತಂತ್ರ ಸಿಕ್ಕರೂ ಭಾರತದ ಒಕ್ಕೂಟದಲ್ಲ ವಿಲೀನವಾಗಲು ಒಪ್ಪಿರದ ನಿಜಾಮರ ಧೋರಣೆಯಿಂದ ಈ ಭಾಗದವರು ಹೈದ್ರಾಬಾದ್ ನಿಜಾಮನ ಅಧಿಕಾರದ ಬಂಧನದಲ್ಲಿದ್ದ ಕಾರಣ ಅರಾಜಕತೆ ಅದಾಗಲೇ ಆರಂಭವಾಗಿತ್ತು. ಅಲ್ಲಲ್ಲಿ ನಡೆಯುತ್ತಿದ್ದ ಹತ್ಯಾಕಾಂಡಗಳಲ್ಲಿಯೇ ಘನಘೋರವಾಗಿ ಜರುಗಿದ್ದು ಗೋರಟಾ ಹತ್ಯಾಕಾಂಡ. ಇದು ಗೋರಟಾ ಗ್ರಾಮದ ಮತ್ತು ಹೈದ್ರಾಬಾದ್ ಕರ್ನಾಟಕ ಭಾಗದ ಇತಿಹಾಸದಲ್ಲಿಯೇ ರಜಾಕಾರರು ನಡೆಸಿದ ಅಮಾನವೀಯ ಪೈಶಾಚಿತ ಕುಕೃತ್ಯ ಸುಮಾರು ಮೂರು ದಿವಸಗಳ ಹತ್ಯಾಕಾಂಡದಲ್ಲಿ ಮಾಡಿರುವ ಅತ್ಯಾಚಾರ, ಅನ್ಯಾಯ, ಹರಿಸಿದ ರಕ್ತದ ಕಾಲುವೆ ಬಹಳಷ್ಟು ಮನಸ್ಸುಗಳನ್ನೂ ನೀರಾಗಿಸಿವೆ, ತಲ್ಲಣಗೊಳಿಸಿವೆ. ಕೇಳಿದರೆ ಇಂದಿಗೂ ಕಣ್ಣಂಚು ಒದ್ದೆಯಾಗುತ್ತದೆ. ರಜಾಕಾರರು ದಬ್ಬಾಳಿಕೆಗಳು ಅಷ್ಟೊಂದು ಘನಘೋರವಾಗಿದ್ದವು. ಇದೇ ಕಾರಣಕ್ಕಿರಬೇಕು ಗೋರಟಾ ದುರಂತಕ್ಕೆ ಜಲಿಯನ್ ವಾಲಾಬಾಗ್‌ಕ್ಕೆ ಹೋಲಿಸಿರುವುದು. 

 ಗೋರಟಾದಲ್ಲಿ ಹಿಂದೂ-ಮುಸ್ಲಿಂರು ಆಪ್ತವಾಗಿ ಭಾವೈಕ್ಯತೆಯಿಂದಲೇ ಬದುಕನ್ನು ಸಾಗಿಸುತ್ತಿರುವಾಗ ಪಕ್ಕದ ಗ್ರಾಮದ ಮಸೀದಿಯೊಳಗಿರುವ ಕಲ್ಲನ್ನು ಮುಸ್ಲಿಂರೇ ಬೀಳಿಸಿದ್ದು, ಅದೇ ಕಲ್ಲನ್ನು ಹಿಂದೂ ಜನಾಂಗದ ಸಾರ್ವಜನಿಕರಲ್ಲೊಬ್ಬರು ಬಳಸಿಕೊಳ್ಳಲು ಮುಂದೆ ಬಂದ ಕಾರಣ ಹಿಂದೂಗಳನ್ನು ವಿರೋಧಿಸಿದ್ದು ಒಂದೆಡೆಯಾದರೆ, ಮಸೀದಿಯೊಂದರ ಕಲ್ಲನ್ನು ಮುಸ್ಲಿಂರೇ ಕಿತ್ತುಹಾಕಿ ಆ ಕಲ್ಲನ್ನು ಬೇಕೆಂದೇ ಹಿಂದೂಗಳು ಕಿತ್ತಿದ್ದಾರೆಂದು ಬಿಂಬಿಸಿರುವುದು ಮತ್ತೊಂದು ಕಾರಣ. ಹಾಲಗೋರಟಾ ಮತ್ತು ಪಕ್ಕದ ಹೊನ್ನಳ್ಳಿಯಲ್ಲಿ ತಿರಂಗಾ ಝಂಡಾ ಹಾರಿಸಿದ್ದು ಹೀಗ ... ಇಂಥ ಸಣ್ಣಪುಟ್ಟ ಘಟನೆಗಳನ್ನು ಮುಂದಿಟ್ಟುಕೊಂಡೇ ಗೋರಟಾ ದುರಂತಕ್ಕೆ ಕಾರಣವಾಗಿರಬಹುದೆಂದು ಸ್ಥಳೀಯರ ಅಭಿಪ್ರಾಯವಾಗುದೆ, (ಈ ದುರಂತದ ವಿವರಗಳು ಅದರಿಂದಾದ ಪರಿಣಾಮಗಳ ಕುರಿತು “ಹೈದ್ರಾಬಾದ್ ಕರ್ನಾಟಕ ಜಲಿಯನ್ ವಾಲಾಬಾಗ ಗೋರಟಾ” ಎಂಬ ತಮ್ಮ ಕೃತಿಯಲ್ಲಿ ಶ್ರೀ ವಿರೂಪಾಕ್ಷಯ್ಯ ಶಿವಲಿಂಗಯ್ಯ ಮಠಮತಿಯವರು ವಿವರವಾಗಿ ದಾಖಲಿಸಿದ್ದಾರೆ) 

 ಈ ರೀತಿಯಲ್ಲಿ ವಿವಾದದ ಹೊಗೆ ಎದ್ದು ಅದು ಕಾಡ್ಗಿಚ್ಚು ಆಗಿ ಪರಿವರ್ತಿತವಾಗಿದ್ದೊಂದು ದುರಂತ. ಈ ಕಾರಣ ಮುಂದಿಟ್ಟುಕೊAಡು ಗೋರಟಾ ಮುಸ್ಲಿಂರು ಸುತ್ತಮುತ್ತಲಿನ ಗ್ರಾಮದವರನ್ನೆಲ್ಲ ಕೂಡಿಸಿಕೊಂಡು ಸಭೆಯನ್ನು ಏರ್ಪಡಿಸಿ ರಜಾಕಾರರ ಸಹಕಾರದೊಂದಿಗೆ ಗೋರಟಾ ದಂಗೆಯನ್ನು ರೂಪಿಸುತ್ತಾರೆ. ಇದೆಲ್ಲದರ ಫಲವಾಗಿ ದಿನಾಂಕ 09.05.1948 ಅಂದು ಅಮವಾಸ್ಯೆಯ ಸೂರ್ಯಗ್ರಹಣವಿತ್ತು ಪ್ರತಿ ಮನೆಯಲ್ಲಿ ಅಡುಗೆ ಮಾಡಿ ಊಟ ಮಾಡಬೇಕಾದಂಥ ಬೆಳಗಿನ ಸುಮಾರು 9.00 ಘಂಟೆಯ ಸಮಯ. ಇಡೀ ಊರಿಗೆ ಕರಾಳ ಛಾಯೆಯೊಂದು ಆವರಿಸಿತ್ತು. ಆಗ ಮುಸ್ಲಿಂ ಮತ್ತು ರಜಾಕಾರರು ತಂಡೋಪ ತಂಡವಾಗಿ ಇಡೀ ಊರನ್ನೇ ಮುತ್ತಿಕೊಳ್ಳುತ್ತಾರೆ. ಅವರ ಬಂದೂಕಿನ ಸದ್ದಿಗೆ ಜನರೆಲ್ಲ ಕಂಗಾಲಾಗಿ ಚೀರುತ್ತಾ ಮನೆಯ ಮಾಳಿಗೆ ಏರುತ್ತಾರೆ. ಮರೆಯಾಗಿ ಅವಿತುಕೊಳ್ಳುತ್ತಾರೆ. 

 ಅದೇ ಊರಲ್ಲಿ ದೊಡ್ಡದಾದ ಮತ್ತು ರಕ್ಷಣೆಯನ್ನು ನೀಡಬಹುದಾದ ಸುರಕ್ಷಿತ ಮನೆ ಎಂದರೆ “ಮಹಾದೇವಪ್ಪಾ ಧೂಳಪ್ಪ ಡುಮಣೆ”ಯವರ ಮನೆ. ಈ ಮನೆ ಅಕ್ಷರಶಃ ಕೋಟೆಯಲ್ಲಿರುವ ಪುಟ್ಟ ಅರಮನೆಯಂತಿತ್ತು. ಇದೇ ಮನೆಯಲ್ಲಿ ಬಹಳಷ್ಟು ಜನ ರಕ್ಷಣೆ ಪಡೆಯುತ್ತಾರೆ. ಅದೇ ಸಮಯಕ್ಕೆ ನಿಜಾಮ ಸರ್ಕಾರದ ಪೋಲೀಸರು ಡುಮಣೆಯವರ ಮನೆ ಕಡೆಗೆ ಗೋಲಿಬಾರ್ ಮಾಡುತ್ತಾರೆ. ಕೆಲ ಹಿಂದೂ ಯುವಕರು ರಕ್ಷಣೆಗೆಂದು ಬರುವ ಹಿಂದೂಗಳನ್ನು ಡುಮಣೆಯವರ ಮನೆಯಲ್ಲಿ ಒಳಗೆ ಕಳಿಸುತ್ತಾರೆ. ಮುಸ್ಲಿಂರನ್ನು ಒಳಬಿಡದೇ ತಡೆಯುತ್ತಾರೆ. ಗೋಲಿಬಾರನಿಂದ ಮತ್ತು ರಜಾಕಾರ ಮುಸ್ಲಿಂರ ದಾಳಿಯಿಂದ ಸಾಧ್ಯವಾದಷ್ಟು ತಡೆಯುತ್ತಾರೆ. ಆದರೂ ಅಲ್ಲಿ ಸಾಕಷ್ಟು ಹಿಂದೂಗಳ ಮಾರಣ ಹೋಮವಾಗುತ್ತದೆ. 

 ಒಟ್ಟು ಮೂರು ದಿವಸದ ವರೆಗೆ ನಡೆಯುವ ಈ ಹತ್ಯಾಕಾಂಡದಲ್ಲಿ ಢುಮಣೆಯವರ ಈ ಮನೆಯಲ್ಲಿ ಸುಮಾರು 25-30ಜನ ಹತ್ಯಗೊಳಗಾಗಿ ಸಾಯುತ್ತಾರೆ. ಗೋರಟಾದ ಲಕ್ಷ್ಮಿ ದೇವಸ್ಥಾನದ ಹತ್ತಿರವಂತೂ ಪೈಶಾಚಿಕವಾಗಿ ದಾಳಿ ಮಾಡಿ ಹಿಂದೂಗಳ ಮಹಿಳೆಯರನ್ನು ಮತ್ತು ಊರ ಪ್ರಮುಖರನ್ನು ಎಳೆದೆಳೆದು ತಂದು ಕೊಚ್ಚಿ ಕೊಚ್ಚಿ ಹಲ್ಲೆ ಮಾಡಿ ಸಾಯಿಸುತ್ತಾರೆಂದು ಅಲ್ಲಿ ರಕ್ತದ ಕಾಲುವೆಯೇ ಹರಿಯುತ್ತಿತ್ತಂತೆ ಎಂದು ಸ್ಥಳೀಯರು ತಮ್ಮ ಹಿರೀಕರು ಹೇಳಿರುವುದನ್ನು ನೆನಪಿಸಿಕೊಳ್ಳುತ್ತಾರೆ. ಸರ್ಕಾರದ ದಾಖಲಾತಿಗಳ ಪ್ರಕಾರವೂ ಈ ಹತ್ಯಾಕಾಂಡದಲ್ಲಿ ಸರಿಸುಮಾರು 200ಕ್ಕೂ ಜನರು ಬಲಿಯಾಗಿರುವುದು ತಿಳಿಯುತ್ತದೆ. ಈ ವಿವರ ತಿಳಿಯುತ್ತಿದ್ದಂತೆ ನಾನು ಅಕ್ಷರಶಃ ಭಾವುಕನಾಗಿದ್ದೆ. ಹೀಗೆ ಗೋರಟಾದ ಹಿರೇಮಠದ ಹತ್ತಿರವೂ ದಾಳಿಯಾಗುತ್ತದೆ. ಇಡೀ ಊರಿಗೆ ಊರೇ ಮೂರು ದಿವಸಗಳ ವರೆಗೆ ಈ ಹತ್ಯಾಕಾಂಡಕ್ಕೆ ಸಾಕ್ಷಿಯಾಗಿ ಬಹಳಷ್ಟು ಹಾನಿಯನ್ನನುಭವಿಸುತ್ತದೆ. 

 ಅಷ್ಟಕ್ಕೆ ಸಮಾಧಾನವಾಗದ ಹಂತಕರು ಗೋರಟಾದಲ್ಲಿಯ ಮನೆಗಳಿಗೆ ಮತ್ತು ಢುಮಣೆಯವರ ಮನೆಗೆ ಬೆಂಕಿ ಹಚ್ಚುತ್ತಾರೆ ಕಲ್ಲು ಹೊಡೆಯುತ್ತಾರೆ. ಹೀಗೆ ಬೆಳಿಗ್ಗೆ 9 ಘಂಟೆಗೆ ಆರಂಭವಾದ ಕದನದ ಕಾಯಾಚರಣೆಯು ಇಡೀ ದಿವಸ ನಿರಂತರವಾಗಿ ನಡೆಯುತ್ತದೆ. ಊರಲ್ಲಿಯ ಹೀರೆಮಠದ ಹತ್ತಿರ ಲಕ್ಷ್ಮಿ ಗುಡಿಯ ಹತ್ತಿರ ನಿರಂತರ ಹತ್ಯೆ ನಡೆಯುತ್ತದೆಯಂತೆ. ಸಾಕಷ್ಟು ಜನ ಹತರಾಗುತ್ತಾರಂತೆ. ಈ ಹತ್ಯಾಕಾಂಡದಲ್ಲಿ ಮಡಿದವರ ಹೆಸರು ವಿವರಗಳನ್ನೂ ಸಹ ಅಂದಿನ ಸರ್ಕಾರ ಬಹಿರಂಗಪಡಿಸಿದೆಯAತೆ. ಈ ವಿಷಯವನ್ನು ತಿಳಿದುಕೊಂಡು ನಾನು ದಿನಾಂಕ 19.07.2015ರಂದು ಸ್ನೇಹಿತ ಕುಮಾರ ಶೇಖರ್‌ನೊಂದಿಗೆ ಗೋರಟಾಕ್ಕೆ ತೆರಳಿ ಅಲ್ಲಿ ಡುಮಣೆಯವರ ಮನೆಗೆ ಹೋಗಿ ಮಹಾದೇವಪ್ಪ ಢುಮಣೆಯವರ ಮೊಮ್ಮಗನಾದ ಶ್ರೀ ಮಲ್ಲಿಕಾರ್ಜುನ ಡುಮಣೆಯವರ ಜೊತೆ ಮಾತನಾಡಿ ಅಳಿದುಳಿದ ಆ ಮನೆಯಲ್ಲಿ ಸುತ್ತಾಡಿ ವಿಷಯವನ್ನು ತಿಳಿದುಕೊಳ್ಳುತ್ತಿದ್ದರೆ ನನ್ನ ಕಣ್ಣು ನನಗರಿವಿಲ್ಲದಂತೆಯೇ ಒದ್ದೆಯಾದವು. ಆ ಮನೆಯವರು ನನಗೆ ಕುಡಿಯಲು ಹಾಲೇನೋ ಕೊಟ್ಟರು ಆದರೆ ಆ ಮನೆಯಲ್ಲಿ ಅಂದು ಮಡಿದವರ ಆಕ್ರಂದನವೇ ನನ್ನ ಮನಸ್ಸನ್ನು ಆವರಿಸಿ ಕುಡಿದ ಹಾಲಿನ ಮುದ ರುಚಿಸಲಿಲ್ಲ. ದೂರವಾಣಿಯಲ್ಲಿ ಶ್ರೀ ರುದ್ರಮುನಿ ಎಂಬುವವರೂ ಸಹ ಸಾಕಷ್ಟು ವಿವರಗಳನ್ನು ನನಗೆ ನೀಡಿದರು.

 ಬಹುಶಃ ಈ ದುರಂತವೇ ಹೈದ್ರಾಬಾದ್ ಕರ್ನಾಟಕ ವಿಮೋಚನೆಗೆ ಪಥವಾಯಿತೆಂದೆನಿಸುತ್ತದೆ. ಈ ಗೋರಟಾದ ದುರಂತದ ವಿವರಗಳೆಲ್ಲವೂ ಅಂದಿನ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರು ಅವರಿಗೆ ತಿಳಿದು ಮನನೊಂದು ಸರದಾರ್ ವಲ್ಲಭಬಾಯಿ ಪಟೇಲರ ನೇತೃತ್ವದಲ್ಲಿ ಮಿಲಿಟರಿ ಕಾರ್ಯಾಚರಣೆಗೆ ಕರೆ ನೀಡಿ ನಿಜಾಮ ಸರ್ಕಾರದಂದ ಈ ಭಾಗಕ್ಕೆ 17.09.1948 ರಂದು ಮುಕ್ತಿ ದೊರಕಿಸಿಕೊಟ್ಟಿರುವುದು ಈ ದಿನವನ್ನು ಈ ಭಾಗದ ನಾವುಗಳೆಲ್ಲ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಎಂಬ ಹೆಸರಿನಲ್ಲಿ ಆಚರಿಸಿ ಸಂಭ್ರಮಿಸಿಕೊಳ್ಳುತ್ತಿರುವುದು ತಮಗೆಲ್ಲ ತಿಳಿದಿರುವ ವಿಷಯವಾಗಿದೆ. ಡುಮಣೆಯವರ ಅಳಿದುಳಿದ ಆ ಮನೆಯು ಸರ್ಕಾರದ ಸುಪರ್ದಿಯಲ್ಲಿ ಒಂದು ಸ್ಮಾರಕ ಭವನವಾಗಬೇಕೆಂಬುದೇ ನಮ್ಮಂಥವರ ಆಶಯ. ಗೋರಟಾ ಗ್ರಾಮದಲ್ಲಿ ಈಗಾಗಲೇ ಸರ್ದಾರ ವಲ್ಲಬಬಾಯಿ ಪಟೇಲರ ಪುತ್ಥಳಿಯೊಂದನ್ನು ಸ್ಥಾಪಿಸುವ ಕುರಿತು ಯೋಜನೆ ಹಮ್ಮಿಕೊಂಡಿದ್ದು ಮತ್ತು ಕಾರ್ಯ ಪ್ರಗತಿಯಲ್ಲಿರುವುದನ್ನು ನೋಡಿ ಮನಕ್ಕೊಂದಿಷ್ಟು ಸಮಾಧಾನವಾಯಿತು. ಇಷ್ಟೆಲ್ಲರ ತ್ಯಾಗ ಬಲಿದಾನದ ಫಲವಾಗಿ ಈ ಭಾಗ ವಿಮೋಚನೆಯಾಗಿರುವುದು ಮತ್ತು ಇತ್ತೀಚಿಗೆ ಸಂವಿಧಾನದ ಪರಿಚ್ಛೇದ 371-ಜೆ ಅಡಿಯಲ್ಲಿ ಈ ಭಾಗದ ನನ್ನವರಿಗೆ ವಿಶೇಷ ಸೌಲಭ್ಯಗಳು ದೊರೆಯುತ್ತಿರುವುದು ಒಂದಿಷ್ಟು ಸಮಾಧಾನಕ ವಿಷಯ. ಇವುಗಳ ಫಲಶೃತಿಗಳೆಲ್ಲವೂ ಶರಣರು ಸುವಿಚಾರಗಳನ್ನು ನುಡಿದು ನಡೆದಾಡಿದ ಈ ನೆಲದ ಸತ್ಪಾತ್ರಕ್ಕೆ ಸಲ್ಲಿಕೆಯಾಗಲಿ ಎಂಬುದೊಂದು ನನ್ನಾಶಯವಾಗಿತ್ತು. ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ಈ ದಿವಸವೇಕೋ ಇದೆಲ್ಲವೂ ನೆನೆನೆನೆದು ಭಾವುಕನಾದೆ, ಕಣ್ಣಂಚು ಒದ್ದೆಯಾಗುತ್ತಲೇ ಇದೆ. ಅಲ್ಲಿ ಮಡಿದವರ ಆತ್ಮಗಳಿಗೊಂದಿಷ್ಟು ಸಾಂತ್ವನ ಸಿಗಲೆಂದು ಈ ಅಕ್ಷರ ನಮನ. ಇತ್ತೀಚಿಗೆ ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು, ಈ ದಿನವನ್ನು ಕಲ್ಯಾಣ ಕರ್ನಾಟಕ ಉತ್ಸವದ ದಿನವೆಂದು ಪರಿಗಣಿಸಿದ್ದರಿಂದ ಈ ಭಾಗದವರ ನೆಮ್ಮದಿಯ ನಾಳೆಗಳು ಕಲ್ಯಾಣವಾಗಿರಲಿವೆ ಎಂಬುದು ನನ್ನ ಮತ್ತೊಂದಾಶಯ.

- ವೆಂಕಟೇಶ ಕೆ. ಜನಾದ್ರಿ, ಕನಕಗಿರಿ.

ಸಹಾಯಕ ಲೆಕ್ಕಾಧಿಕಾರಿ, ಕಕರಸಾ.ಸಂಸ್ಥೆ , ಕಲಬುರ್ಗಿ ವಿಭಾಗ-2, ಕಲಬುರ್ಗಿ-585102 

ಮೊ: 9945330492