ಹಿಮಾಚಲ - ಮೇಘಸ್ಫೋಟಗಳ ಮಿಂಚಿನ ಸುಳಿವುಗಳಲ್ಲಿ..

ಹಿಮಾಚಲ - ಮೇಘಸ್ಫೋಟಗಳ ಮಿಂಚಿನ ಸುಳಿವುಗಳಲ್ಲಿ..
ನಮ್ಮ ಕಲ್ಬುರ್ಗಿಗೆ ನದಿ ನೀರು ಗಂಡಾಂತರ ಬಹಳ ವಿರಳ. ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ನಿರಂತರ ಮತ್ತು ಬಿರುಸಿನ ಮಳೆಯಾದಾಗಲೆಲ್ಲ ಪ್ರವಾಹ ಬರುತ್ತದೆ. ಆಗ ಕೃಷ್ಣಾ ಮತ್ತು ಭೀಮಾ ನದಿಗಳ ಹರಿವು ಘರ್ಜಿಸುತ್ತ ನದಿದಂಡೆಯ ಊರುಗಳನ್ನು ಶತ್ರು ಸೈನ್ಯದಂತೆ ಸುತ್ತುವರಿಯುತ್ತವೆ.
ಉತ್ತರ ಭಾರತದ ಹಿಮಾಚಲ ಹಾಗಲ್ಲ. ದೇಶ ವಿದೇಶಗಳ ಪ್ರವಾಸಿಗರನ್ನು ಸೆಳೆಯುವ ಮೋಹಕ ಪ್ರದೇಶ ಇದು. ಬಿಲಾಸ್ಪುರ ಜಿಲ್ಲೆಯ ನಾವಿರುವ ಬರ್ಮಾಣ ಊರಿಂದ ಉತ್ತರಕ್ಕೆ ಕೇವಲ 41 ಕಿ. ಮೀ ದೂರದಲ್ಲಿರುವ ಮಂಡಿ ನಗರ ಅಲ್ಲಿಂದ 107 ಕಿ. ಮೀ ಅಂತರದಲ್ಲಿರುವ ಮನಾಲಿ ಮತ್ತು ಈ ನಡುವೆಯೇ ಇರುವ ಕುಲ್ಲು ನಗರಗಳಲ್ಲಿ ಈಗ ಕರಾಳ ಸ್ಥಿತಿ ಉಂಟಾಗಿದೆ. ಈ ಭಾಗದ ನದಿಗಳಲ್ಲಿ ಕಟ್ಟಿಗೆ ತುಂಡುಗಳ ಜೊತೆ ಬಂಡೆಗಲ್ಲುಗಳೂ ಹರಿಯುತ್ತವೆ. ಬಹುತೇಕ ನದಿ ದಂಡೆಯಲ್ಲೇ ಇರುವ ರಾಜ್ಯ ಹೆದ್ದಾರಿಗಳು ಪ್ರವಾಹಕ್ಕೆ ಕೊಚ್ಚಿ ಹೋಗಿ ವಾಹನ ಸವಾರರು ದ್ವೀಪಗಳಂತೆ ದಿನಗಟ್ಟಲೇ ನಿಂತಲ್ಲೇ ನಿಂತಿರುತ್ತಾರೆ. ಸೆಳವಿಗೆ ಹರಿದುಹೋದವರ ಲೆಕ್ಕ ಕೂಡ ಸಿಗುವುದಿಲ್ಲ. ಹೀಗೆ ಮೇಘಸ್ಫೋಟವೆಂಬ ಪ್ರಕೃತಿಯ ಮುನಿಸಿಗೆ ಹಲವು ಕರಾಳ ಚಿತ್ರಗಳು ಅಂಟಿಕೊಂಡಿರುತ್ತವೆ.
ಚಳಿಗಾಲದಲ್ಲಿ ಮೈನಸ್ ತಾಪಮಾನದಲ್ಲಿ ಥರಗುಟ್ಟುವಂತೆ ಮಾಡುವ ಇಲ್ಲಿನ ವಾತಾವರಣ ಜುಲೈ ತಿಂಗಳಲ್ಲಿ ತನ್ನ ಚಹರೆ ಬದಲಾಸಿಬಿಡುತ್ತದೆ. ಇಲ್ಲೀಗ ಅತೀವ ಬೆವರುವಿಕೆ. ನೆಲದ ಮೇಲಿನ ತಂಗಾಳಿ ಈ ಕಾಲದಲ್ಲಿ ಆಕಾಶಕ್ಕೆ ಏಣಿ ಏರಿ ನಿಲ್ಲುತ್ತವೆ, ಮೋಡಗಳಾಗುತ್ತವೆ. ಘನೀಕರಿಸುವ ಆಕಾಶದ ನೀರನ್ನು ಕೆಳಬರದಂತೆ ಭೂಮಿಯ ಒಣ ಹವೆ ಬಹಳ ಹೊತ್ತಿನವರೆಗೆ ತಡೆದು ನಿಲ್ಲಿಸುತ್ತದೆ. ಇದರಿಂದಾಗಿ ಮೇಲೆ ನೀರಿನ ಸಾಂದ್ರತೆ ಹೆಚ್ಚಾಗುತ್ತ ಹೋಗುತ್ತದೆ. ಬಿಸಿನೀರ ಆವಿ ತಂಪಾದ ನೀರ ಕಣಗಳೊಂದಿಗೆ ಸಮಾಗಮಗೊಂಡು ಏಕಾಏಕಿ ಮಳೆ ಸುರಿಯುತ್ತದೆ.
ಮೋಡಗಳ ಸೃಷ್ಟಿ, ಘನೀಕರಣ ಮತ್ತು ಮಳೆಯಾಗಿ ಸ್ಫೋಟಿಸುವ ಈ ಎಲ್ಲ ಕ್ರಿಯೆಗಳು ಕಡಿಮೆ ಸಮಯದಲ್ಲೇ ನಡೆದುಹೋಗುತ್ತದೆ. ಹೀಗಾಗಿಯೇ ಅಂತರಿಕ್ಷದಲ್ಲಿನ ನಮ್ಮ ಸ್ಯಾಟಲೈಟುಗಳು ಮೇಘಸ್ಫೋಟವನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗುತ್ತವೆ. ಆಕಾಶದಲ್ಲಿ ಸುಮಾರು ಹದಿನೈದು ಕಿ. ಮೀ ವರೆಗೆ ವ್ಯಾಪಿಸಿಕೊಳ್ಳುವ ಈ ಮೋಡಗಳ ದಂಡು ಗಂಟೆಗೆ ಸುಮಾರು 100 ಮಿಲಿಮೀಟರ್ ಗಿಂತ ಹೆಚ್ಚು ಮಳೆ ಸುರಿಸಬಲ್ಲದು. ಇದುವೆ ಪ್ರಳಯಾಂತಕ ಮೇಘಸ್ಫೋಟ! ಮೋಡಗಳ ಅಣುಭೌತಶಾಸ್ತ್ರ ಮತ್ತು ವಾತಾವರಣದಲ್ಲಿನ ಬಿಸಿಯಾಗುವಿಕೆ ಹಾಗೂ ತಂಪಾಗುವಿಕೆಯ ಈ ಕ್ಷಿಪ್ರ ಪ್ರಕ್ರಿಯೆ ಹವಾಮಾನ ಇಲಾಖೆಯ ಕೆಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳುತ್ತದೆ. ಮೇಘಸ್ಫೋಟದ ಮುನ್ಸೂಚನೆ ಸಿಗದ ಕಾರಣ ಹಿಮಾಚಲ ಎಂಬ ಮೋಹಕ ಭೂಮಿಯಲ್ಲಿ ರೌದ್ರನರ್ತನ ನಡೆಯುತ್ತದೆ. ಕೇವಲ 20 ರಿಂದ 30 ಕಿ. ಮೀ ವ್ಯಾಪ್ತಿ ಪ್ರದೇಶದಲ್ಲಿ ನಡೆವ ಸೀಮಿತ ಮತ್ತು ಅಲ್ಪಾವಧಿಯ ಈ ನೈಸರ್ಗಿಕ ಪ್ರಕ್ರಿಯೆ ಮನೆ, ಜನ ಜಾನುವಾರುಗಳನ್ನು ಇರುವೆಗಳಂತೆ ಸವರಿ ಹೊಯ್ಯುತ್ತದೆ.
ದಿಢೀರ್ ಪ್ರವಾಹ, ಭೂ ಕುಸಿತ ಮಣ್ಣಿನ ಹರಿವು ಮತ್ತು ಭೂ ಗುಹೆ ನಿರ್ಮಾಣಗೊಂಡು ಈ ಸಲದ ಮುಂಗಾರು ದೇವ ಭೂಮಿಯಲ್ಲಿ ನರಕವನ್ನೇ ಇಳಿಸಿದೆ. ಮೇಘಸ್ಫೋಟಕ್ಕೆ 78 ಜನ ಬಲಿಯಾಗಿದ್ದಾರೆ. ರಾಜ್ಯದ ಸುಮಾರು 400 ಕೋಟಿ ರೂಪಾಯಿಗಳ ಆಸ್ತಿ ಪಾಸ್ತಿ ಹಾನಿಯಾಗಿರುವ ಅಂದಾಜಿದೆ. ನಟಿ, ಸಂಸದೆ ಕಂಗನಾ ರನಾವತ್ ಪ್ರತಿನಿಧಿಸುವ ಮಂಡಿ ಜಿಲ್ಲೆಯೊಂದರಲ್ಲೇ 15 ಜನ ಸಾವನ್ನಪ್ಪಿದ್ದಾರೆ. 'ನಮಗೆ 2014 ರಲ್ಲಿ ಸ್ವಾತಂತ್ರ್ಯ ಸಿಕ್ಕಿದೆ' ಎಂದೊಮ್ಮೆ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಕಂಗನಾ ಈಗ ಕಷ್ಟ ನಷ್ಟಗಳ ಎದುರು ಕೈಚಲ್ಲಿ ಕುಳಿತಿದ್ದಾರೆ. ಸಂಸತ್ತಿನಲ್ಲಿ ಪರಿಹಾರ ನಿಧಿಗಾಗಿ ದನಿ ಎತ್ತದಿರುವುದಕ್ಕೆ ಹಿಮಾಚಲದ ಜನತೆ ಮಣಿಕರ್ಣಿಕ ದ 'ಕ್ವಿನ್ ಆಫ್ ಝಾನ್ಸಿ' ಮೇಲೆ ಮುನಿಸಿಕೊಂಡಿದ್ದಾರೆ.
ಹಿಮಾಚಲ ಪ್ರದೇಶ ನಮ್ಮ ದೇಶದ ಅತಿ ದೊಡ್ಡ ಪ್ರವಾಸಿ ತಾಣ. ಪ್ರವಾಸೋದ್ಯಮ ಇಲ್ಲಿನ ಪ್ರಮುಖ ಆದಾಯ ಮೂಲ. ಮುಗಿಲು ಮುಟ್ಟುವ ಹಸಿರು ಗಿರಿ ಸಾಲುಗಳು, ಮಹಾ ನದಿಗಳು, ಮೋಡ, ತಂಪು ಮತ್ತು ಹಿಮಚ್ಚಾದಿದ ಭೂ ಪ್ರದೇಶ ಅಪಾರ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸಿಸುತ್ತವೆ. ಆದರೆ ಮಳೆಗಾಲ ಹಿಮಾಚಲಕ್ಕೆ ಅತಿ ದೊಡ್ಡ ಶತ್ರು. ಶಿಮ್ಲಾದಿಂದಿಡಿದು ಉತ್ತರದ ಮನಾಲಿ ವರೆಗೆ ಜನ ಈಗ ತತ್ತರಿಸಿದ್ದಾರೆ. ರಾಜ್ಯದಲ್ಲಿ ಈವರೆಗೆ 19 ಮೇಘಸ್ಫೋಟಗಳು ಸಂಭವಿಸಿರುವುದಾಗಿ ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲೂ ಮಳೆಯ ಅವಾಂತರಗಳು ನಡೆಯಬಹುದೆಂಬ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮನಾಲಿಯ ಮೋಹಕತೆ ಕಳೆಗುಂದಿದೆ. ಶಿಮ್ಲಾದ ಶೀತಲ ವಾತಾವರಣ ಹದಗೆಟ್ಟಿದೆ. ನಮ್ಮ ಕಡೆ ಪ್ರವಾಸ ಕೈಗೊಳ್ಳುವ ಸಮಯ ಇದಲ್ಲ!
ಹಿಂದಿನ್ಕೇರಿ ಕಾಶೀನಾಥ್